ನಮ್ಮ ಮನೆ ತುಂಬಿದ ಕುಟುಂಬ, ಸುಮಾರು ಇಪ್ಪತ್ತು ಜನ ಗಿಜಿಗಿಜಿನೆ ಮಾತನಾಡಿಕೊಂಡು ಇರೋರು. ಹಾಗೆಯೇ ಮನೆಗೆಲಸ, ಗದ್ದೆ ಹೊಲದ ಕೆಲಸವನ್ನು ಕೂಡಾ ಹಂಚಿಕೊಂಡು ಮಾಡೋವು.ಒಬ್ರು ಹೊಲದ ಕಡೆ ಹೋದ್ರೆ ಮತ್ತೊಬ್ರು ದನ,ಕುರಿ,ಮೇಕೆಗಳ ಮೇಸೋಕೆ ಹೋಗೋರು. ಕೆಲವರು ಮನೆಯಲ್ಲಿ ಮೊಸರು ಕಡೆಯೋರು, ತೋಟ-ತುಡಿಕೆಗಳಲ್ಲಿ ಬೇಲಿ ಕಟ್ಟೋಕೆ ಹೋಗೋರು, ಗೊಬ್ಬರ ಗೋಡು,ಉಳುಮೆ,ಕಳೆ ಕೀಳೋದು,ಬಿತ್ತೋದು ಎಲ್ಲ ವ್ಯವಸಾಯದ ಕೆಲಸಗಳಿಗೆ ನಾವೇ ಆಳುಗಳು. ಒಂದು ಪದಾರ್ಥವನ್ನು ಕೊಂಡು ತಿನ್ನಬಾರದೆಂದು ಅಜ್ಜನ ಪ್ರತಿಜ್ಞೆ. ಅದರಂತೆಯೆ ಮನೆಗೆ ಬೇಕಾದ ತರಕಾರಿ, ಸೊಪ್ಪು, ಕಾಳುಕಡ್ಡಿ, ರಾಗಿ, ಬತ್ತ, ಜೋಳ, ಹುಚ್ಚೇಳ್ಳು, ಎಳ್ಳು, ಮಾವು,ಹಲಸು,ಹರಳು,ಹುಣಸೆಹಣ್ಣು ಇತ್ಯಾದಿ ಮನೆಗೆ ಬೇಕಾದ ಪದಾರ್ಥಗಳ ಹೊರಗೆ ಸಂತೆಯಿಂದ ಕೊಂಡು ತರುತಿರಲಿಲ್ಲ. ಸಾಂಬಾರಿಗೆ ಬೇಕಾದ ಜೀರಿಗೆ,ಲವಂಗ,ಚಕ್ಕೆ ಇತ್ಯಾದಿ ನಮ್ಮ ಕಡೆ ಬೆಳೆಯುತಿರಲಿಲ್ಲ ಆದ್ದರಿಂದ ಸಂತೆಯಿಂದ ಕೊಂಡು ತರಬೇಕಿತ್ತು. ಕರಿಮೆಣಸನ್ನು ನಮ್ಮ ತೋಟದಲ್ಲಿಯೆ ಹಾಕಿದ್ದರಿಂದ ಕೊಂಡುತಿರಲಿಲ್ಲ!
ಮನೆತುಂಬಾ ಮಾತುಗಳು ಮಕ್ಕಳ ಕಿತ್ತಾಟ,ಅತ್ತೆ ಸೊಸೆಯ ಬೀದಿ ಗುದ್ದಾಟ, ಅಪ್ಪ ಮಕ್ಕಳ ವ್ಯಾಜ್ಯ, ಅಜ್ಜ ಅಜ್ಜಿಯರ ಕುಟ್ಟಾಣಿ ಮತ್ತು ಉಗುಳು ಉಗಿಯುವ ಕಂಚಿನ ಬಟ್ಟಲು, ಪ್ರತಿದಿನ ಹತ್ತಾರು ಲೀಟರ್ ಹಾಲು ಕರೆದು ಮೊಸರು,ಮಜ್ಜಿಗೆ ,ಬೆಣ್ಣೆ,ತುಪ್ಪ ಮಾಡುವ ಕಾರ್ಯದಲ್ಲಿಯೇ ಕಾಲ ಕಳೆದುಹೋಗಿರೋದು. ಮನೆಯಲ್ಲಿ ಅಜ್ಜನ ತಂದೆ ತಾಯಿ ಹಾಗೂ ಆರು ಜನ ಮಕ್ಕಳು ಅವರಿಗೆ ಹದಿನೈದು ಜನ ಮಕ್ಕಳು, ಅಜ್ಜನ ಅಕ್ಕ ಮತ್ತು ಅವರ ಮಕ್ಕಳು ಹೀಗೆ ಮನೆತುಂಬಾ ಮಕ್ಕಳೆ ತುಂಬಿರೋದು!
ವಾಡೆ,ಮಡಿಕೆ ಗೂಡೆಯಲ್ಲಿಯೂ ಕೂಡಾ ಅಡುಗೆ ಮಾಡಿ ಇಟ್ಟಿದ್ರೂ ಹುಡ್ಕಿ ತಿಂದುಬಿಡುತಿದ್ವಿ! ಕೈ ತುಂಬಾ ಬೆಣ್ಣೆ ತಿಂದುಕೊಂಡೆ ನಾನು ಬೆಳೆದಿದ್ದು! ಅಜ್ಜಿಗೆ ಎಲ್ಲ ಮೊಮ್ಮಕ್ಕಳಿಗಿಂತಲೂ ನನ್ನನ್ನು ಪ್ರೀತಿಯಿಂದ ಆಗಾಗ ಮುದ್ದಿಸಿ, ಚೇಷ್ಟೆ ಮಾಡಿದಾಗ ಹೊಡೆದು ಬಡಿದು ನಾನು ಅಳುವಾಗ ಅವರೂ ಅತ್ತು ಕರೆದು ಸುಮ್ಮನಾಗಿಸೋರು! ಇಷ್ಟೆಲ್ಲಾ ಜನರಿದ್ದ ಮೇಲೆ ಜಗಳ ಬರಲಿಲ್ವಾ ಅಂತಾ ಕೇಳಿದ್ರೆ ? ಹೌದು ಬಂದಿತ್ತು ಕಿತ್ತಾಡೋರು ಆದ್ರೆ ಕೆಲವು ಕ್ಷಣದ ಹೊತ್ತಿಗೆ ಹೊಂದಾಗೋರು, ಜೊತೆಯೆಲ್ಲಿಯೇ ಎಲ್ಲರೂ ಊಟ ಮಾಡಿ ಎಲೆಯಡಿಕೆ ಹಾಕಿಕೊಂಡು ಮಾತನಾಡುತ್ತಾ ಪ್ರತಿರಾತ್ರಿ ಕಳೆಯುತಿದ್ವಿ! ಅಜ್ಜಿಮನೆಯ ಕಡೆಯವರು ಸುಮಾರು ಜನ ನೆಂಟರು, ಅಜ್ಜನ ಮನೆಯ ಕಡೆಯವರು ಒಂದಷ್ಟು ಜನರು, ಮಕ್ಕಳ ಮದುವೆ ಮಾಡಿದ ಮೇಲೆ ಬೀಗರು ಒಂದಷ್ಟು ಜನ! ಅಯ್ಯಪ್ಪಾ! ಹತ್ತು ಮೇಕೆ ಹೊಡೆದ್ರು ಸಾಕಾಗುತ್ತಾ ಇರಲಿಲ್ಲ ಮಾಂಸಕ್ಕೆ ಕಿತ್ತಾಡೋರು.ಆಗಾ ಸೇಂದಿ,ಪ್ಯಾಕೆಟ್ ಸಾರಾಯಿ, ಕಳ್ಳಭಟ್ಟಿ ಸಾರಾಯಿ ಎಲ್ಲಾ ಸಿಗೋದು,ಗ್ಯಾನವೇ ಇಲ್ಲದಂತೆ ಕುಡಿಯೋರು ಹೆಂಡತಿಯರಿಗೂ ಕೂಡಾ ಹೊಡೆಯೋರು ಅವರು ಇವರಿಗೂ ಛೀಮಾರಿ ಹಾಕೋರು! ನಮ್ಮ ಕುಟುಂಬ ಮಾತೃಪ್ರಧಾನ ಕುಟುಂಬ ಆಗಿದ್ದರಿಂದ ಅಜ್ಜಿಯ ಮಾತು ನಡೆಯುತಿತ್ತು! ಒಂದೊಂದು ಸಲ ಊರಿನಜನ ಅಜ್ಜನಿಗೆ ‘ ನೀನ್ ಷಂಡ ಕಣೋ, ಹೆಂಗಸಿಗೆ ಸಂಸಾರ ಬಿಟ್ಟು ಓಡಾಡಿಕೊಂಡು ಇದ್ಯಾ’ ಅಂದಾಗಲೋ ಕುಡಿದಾಗ ಮಾತಿಗೆ ಮಾತು ಬೆರೆತಾಗಲೋ ಅಜ್ಜಿಗೂ ಒದೆ ಬೀಳೋವು! ಆದರೆ ಬೆಳ್ಗೆ ಏಳೋವತ್ತಿಗೆ ಅವರವರ ಮುಖಗಳು ನಗೋವು! ಮಾವಂದಿರು, ಅತ್ತೆಯಂದಿರು,ಚಿಕ್ಕಮ್ಮ ದೊಡ್ಡಮ್ಮ ಅವರ ಗಂಡಂದಿರೆಲ್ಲ ಬಂದಾಗ ಮನೆಯಲ್ಲಿ ಖುಷಿಯೋ ಖುಷಿ.
ಬಡತನಕ್ಕಿಂತಲೂ ಪ್ರೀತಿಗೆ ಕೊರತೆಯಿರಲಿಲ್ಲ,ದ್ವೇಷ ಮಾಡಲು ನಮಗೆ ಸಮಯವೇ ಇರಲಿಲ್ಲ ಅವರವರ ಕೆಲಸಗಳ ಹಂಚಿಕೊಂಡು ನಿರ್ವಹಿಸುತ್ತಿದ್ದರು! ಅಜ್ಜಿ ಅಡುಗೆಮನೆ ಡಿಪಾರ್ಟ್ ಮೆಂಟಿಗೆ ಪ್ರಿನ್ಸಿಪಾಲ್ ಇವರು ಹೇಳಿದಂತೆ ಸೊಸೆಯರು ಕೆಲಸ ನಿರ್ವಹಿಸಬೇಕಿತ್ತು! ಆವಾಗಲೇ ಅಜ್ಜಿಯ ಇಬ್ಬರೂ ಗಂಡುಮಕ್ಕಳು ಅಂತರ್ಜಾತಿ ವಿವಾಹವನ್ನು ಮಾಡಿಕೊಂಡಿದ್ದರು. ಇವರನ್ನು ಮನೆ ತುಂಬಿಸಿಕೊಳ್ಳುವಾಗ ಏನೆಲ್ಲ ಸಮಾಜ ಮತ್ತು ಕುಟುಂಬ ಮಾಡಿದ್ದಂತಹ ಕೃತ್ಯಗಳ ನೆನೆಸಿಕೊಂಡರೆ ಒಂದು ದೊಡ್ಡ ಕತೆಯೇ ಬರೆಯಬಹುದು. ಕಾಲಕ್ರಮೇಣ ಅಜ್ಜಿಯ ಹೆಣ್ಣು ಮಕ್ಕಳಾದ ಆರು ಜನರು ಸತ್ತು ಹೋದರು, ಮತ್ತೆ ಮೂರು ನಾಕು ಮೊಮ್ಮಕ್ಕಳು ಕೂಡಾ ಅನಾರೋಗ್ಯದಿಂದ ಸತ್ತರು! ಅದರಲ್ಲಿ ಮೂರು ಹೆಣ್ಣುಮಕ್ಕಳಿಗೆ ಅವರ ಗಂಡಂದಿರೆ ಕೊಂದಿದ್ದರು ಇದಕ್ಕೆ ಕೋರ್ಟು ಕಚೇರಿ ಹತ್ತಿ ಸುಸ್ತಾಗಿ ಸುಮ್ಮನಾದರು. ಕೊನೆಗೆ ಉಳಿದವರು ಮನೆಯಲ್ಲಿ ಹನ್ನೆರಡು ಜನ. ಅಜ್ಜನ ತಮ್ಮ ಮನೆ ಬೇರೆ ಮಾಡಿಕೊಂಡು ಹೋದಾಗ ನಮ್ಮ ಹಳೆಯ ಮಾಳಿಗೆಮನೆಯ ಭಾಗ ಮಾಡಿ ಹೊಸದಾದ ಮನೆಯ ಕಟ್ಟಿಕೊಂಡೆವು!
ನಾನು ಬೆಳೆದು ಹೋದಂತೆಲ್ಲ ಕಷ್ಟ,ನೋವು,ನಲಿವು ಇವುಗಳೆಲ್ಲವನ್ನು ಕಂಡಿದ್ದೆ! ದೊಡ್ಡಮ್ಮ ,ಚಿಕ್ಕಮ್ಮಂದಿರ ಹೆಣಕ್ಕೆ ನಾನೇ ಅಗ್ನಿ ಸ್ಪರ್ಶ ಮಾಡಿದ್ದೆ! ಮುಂದೆ ನನ್ನಕ್ಕ ಸತ್ತಳು, ಆಮೇಲೆ ಎಲ್ಲ ಅತ್ತೆಯರು ಸತ್ತು ಹೋದರು. ಈಗ ಉಳಿದುಕೊಂಡವರು ಅಜ್ಜಿ ಅಜ್ಜ ಮಾತ್ರ. ನನ್ನ ಶಾಲೆಯ ದಿನಗಳು, ತೋಟ,ಗದ್ದೆ,ಹೊಲಗಳಲ್ಲಿ ಆಟ,ಜೀವನದ ಪಾಠ ಕಲಿತ ಸಂದರ್ಭಗಳು ಈಗಲೂ ಕಾಡುತ್ತಲೇ ಇರುತ್ತವೆ! ಹಳ್ಳಿರಾಜಕೀಯ ಎಂಬುದು ಈ ಪಟ್ಟಣದ ರಾಜಕೀಯಕ್ಕಿಂತಲೂ ಕ್ರೂರವಾಗಿರುತ್ತೆ! ಏನು ತಿಳಿಯದ ಮುಗ್ಧತೆ, ಕ್ರೌರ್ಯತೆಯನ್ನು ಕೂಡ ನೋಡಬಹುದು.
ಅಜ್ಜಿ ಯಾವಾಗಲೂ ರಾಗಿಮುದ್ದೆ ಸೊಪ್ಸಾರು,ಉಪ್ಸಾರು ಮಾಡೋರು ನಂಗೆ ಅದೇ ತಿಂದು ತಿಂದು ನಾಲಿಗೆ ಮರಗಟ್ಟಿ ಹೋಗೋದು, ವಾರದ ಒಂದುದಿನ ಶನಿವಾರ ದೇವರಿಗೆ ನೈವೇದ್ಯಮಾಡಿ ಅನ್ನ ಮಾಡೋರು ಆವಾಗ ನಾನು ಅಚ್ಚೇರು ಅಕ್ಕಿ ಊಟ ಮಾಡ್ತಾ ಇದ್ದನಂತೆ ಅದಕ್ಕೆ ಎಲ್ಲರೂ ನನ್ನನ್ನು ‘ ಅಚ್ಚೇರು ಅಕ್ಕಿ ಗಂಡ’ ಅಂತ ಅಣಕಿಸೋರು. ಉಪ್ಸಾರಿಗೆ ತುಪ್ಪ ಹಾಕಿಕೊಂಡು ತಿಂತಾ ಇದ್ರೆ ಹತ್ತು ಮದ್ದೆ, ಅಚ್ಚೇರು ಅಕ್ಕಿ ಅನ್ನ ಉಣ್ಣಬಹುದಿತ್ತು! ಅಜ್ಜ ಭೀಮನಂತೆ ಇದ್ದ.
ಈಗಾ ಕಾಲ ಬದಲಾಗಿದೆ ಅಥವಾ ನಾವೇ ಬದಲಾಗಿದ್ದೇವೆ! ನೆಂಟರು ಸಂಬಂಧಿಕರು ಎಲ್ಲರು ದೂರದೂರ, ದುಡ್ಡು ಮುಖ್ಯವಾಗಿದೆ ಜೀವನವಲ್ಲ! ಮೆಣಸಿನಕಾಯಿಕಡ್ಡಿಗಳ ಸುಟ್ಟು ಕರಿ ಹೊಡೆದು, ಸಗಣಿಮನೆ ನಮ್ದು, ಪಡಸಾಲೆ,ಕೊಟ್ಟಿಗೆ ,ಮನೆ ಮುಂದೆ ಕೀರೆಮಡಿ, ತೆಂಗಿನಮರಗಳು, ದುಂಡುಮಲ್ಲಿಗೆಯ ಬಳ್ಳಿ, ನುಗ್ಗೆಮರ ಇತ್ಯಾದಿ ವನಗಳೆ ಇದ್ದವು! ನನ್ನ ಅಕ್ಕಂದಿರು ದುಂಡುಮಲ್ಲಿಗೆಯ ಮುಡಿದುಕೊಂಡು, ಕೈ ತುಂಬಾ ಗೋರಂಟಿಯ ಹಚ್ಚಿಕೊಂಡು ಹತ್ತರಿಂದ ಹನ್ನೆರಡು ಕಿಲೋಮೀಟರ್ ಹೈಸ್ಕೂಲ್ಗೆ ನಡೆದುಕೊಂಡು ಹೋಗ್ತಾ ಇದ್ವಿ! ದನ,ಕುರಿ,ಮೇಕೆ,ಎಮ್ಮೆ,ಕೋಳಿ,ಹಂದಿಗಳ ಜೊತೆ ಆಟವಾಡಿಕೊಂಡು ಪೋಷ್ಠಿಕ ಆಹಾರ ತಿನ್ನುತ್ತಾ ಇದ್ವಿ!