ಮಂಜುಳಾ ಗೌಡ ಕಾರವಾರ ಅವರು ಬರೆದ ಕವಿತೆ ‘ಬಾಳಲಿ ಭರವಸೆಯಿಡು’

ಮತ್ತೆ ಮತ್ತೆ ನೀ ಅತ್ತು ಕೊರಗದಿರು
ಬಾಳಲಿ ಭರವಸೆಯಿಡು ಮನವೆ
ಬತ್ತಿದ ಕೆರೆಯಲು ನೀರು ತುಂಬುವುದು
ಎಂಬ ಸತ್ಯವ ನೀ ಅರಿ ಮನವೆ

ಬಿಸಿಲ ಬೇಗೆಯನು ಸಹಿಸುತ ಧರಣಿಯು
ಕಾಯದೆ ವರ್ಷಕೆ ಹಸಿರುಟ್ಟು ನಗಲು
ಶಿಶಿರದಿ ಎಲೆಯನು ಉದುರಿಸಿ ಮರಗಳು
ಚೈತ್ರಕೆ ಕಾಯದೆ ಮತ್ತೆ ಚಿಗುರಲು

ಇರುಳಲಿ ಭುವಿಗೆ ಕತ್ತಲು ಕವಿದರೆ
ಬೆಳಕು ಮೂಡದೆ ಹಗಲಿನಲಿ
ಬಂಜರು ಭೂಮಿಯು ಹಸನಾಗುವುದು
ಭರವಸೆಯ ಮಳೆ ಸುರಿದಾಗ

ಕಡಿದರೂ ಲತೆಯು ಮತ್ತೆ ಚಿಗುರುವುದು ಭವಿಷ್ಯದ ಫಲ ಕೊಡೊ ಹಂಬಲದಿ,
ಅಡೆತಡೆಗಳನ್ನು ದಿನವೂ ಭೇದಿಸುತ ಧರೆಯ ಸ್ಪರ್ಶಿಸದೆ ರವಿಕಿರಣ
ದಿನ್ನೆ ದಿಬ್ಬ ಕಲ್ಲು ಮುಳ್ಳಿನ ಹಾದಿಗೆ ಅಂಜಿ ನದಿ ಹರಿಯದೆ ನಿಲ್ಲುವುದೇ
ಗುರಿಯ ಸೇರುವ ತವಕದಿ ಛಲದಿ ಓಡಿ ಸೇರದೆ ಕಡಲನ್ನು

ದುಗುಡ ದುಮ್ಮಾನಗಳ ಅಡಗಿಸಿ ಕಾದು ಶಾಕುಂತಲೆ ಸೇರಿದಳು ಪ್ರಿಯತಮನನ್ನು
ಸಹನೆಯಿಂದ ನೋವೆಲ್ಲ ನುಂಗಿ ಮರಳಿ ಪಡೆದಿಲ್ಲವೇ ದುಷ್ಯಂತನನು

ಬದಲಾಗುತಲಿರುವುದು ಕಾಲಚಕ್ರವು
ನಿತ್ಯವು ದೇವರ ಲೀಲೆಯಲಿ
ದುಃಖವು ಕಳೆದು ಸುಖವು ಮರಳುವುದು
ಶಾಶ್ವತ ಏನಿದೆ ಧರೆಯಲ್ಲಿ

ಹಿಂದಿನ ಕಹಿಯನು ನೆನೆಯುತ ಚಿಂತಿಸಿ
ಇಂದಿನ ಭವಿಷ್ಯವ ಮರೆಯದಿರು
ನಿನ್ನೆ ನಾಳೆಗಳ ಯೋಚನೆ ತೊಲಗಿಸು
ಬಂದೇ ಬರುವುದು ಶುಭದಿನವು

0
0
Your Cart
Your cart is emptyReturn to Shop