ಮೊಟ್ಟೆಕೋಳಿಯೇ ಬೇಕೆಂದ ಅಳಿಯರು! – ಸೂರ್ಯಕೀರ್ತಿ

ಶ್ರಾವಣದ ಮಳೆ ಕೈಬಿಡದೆ ಸುರಿಯುತ್ತಲೇ ಇತ್ತು,ಮನೆಯ ಅಂಗಳವೆಲ್ಲ ಕೆಸರಾಗಿ;ಕೈಗೆ ಬಾಯಿಗೆ ಏನಾದರೂ ಖಾರದ ಪದಾರ್ಥಗಳು ಸಿಕ್ಕರೆ ಸಾಕು ಎನ್ನುವ ಮನೋಭಾವನೆಗೆ ತಂದುನಿಲ್ಲಿಸಿತ್ತು. ಆಷಾಢಕ್ಕೆ ಬಂದ ಆರುಜನ ಚಿಕ್ಕಮ್ಮಂದಿರು ಮನೆಯೊಳಗೆ ‘ ನೀನು ತಾಟಗಿತ್ತಿ, ನೀನು ತಟ್ವಣಿಗಿತ್ತಿ’ ಎಂದೆಲ್ಲ ಕಿತ್ತಾಡಲು ಶುರುಮಾಡಿದ್ದರು. ಅಜ್ಜಿ ಬಿತ್ತನೆ ಬತ್ತವ ನೀರಿನಲ್ಲಿ ಒಂದು ರಾತ್ರಿ ನೆನಸಿ ಒಂದು ಗೋಣಿಚೀಲದಲ್ಲಿ ಸುರಿದು ಅದರ ಬಾಯಿಯನ್ನು ಭದ್ರವಾಗಿ ಕಟ್ಟಿ, ‘ ಇದರ ಬಾಯಿ ಕಟ್ರೂ ಇವರ ಬಾಯಿ ಕಟ್ಟೋಕೆ ಆಗಲಿಲ್ವಲ್ಲ ಸಿವ್ನೆ’ ಎಂದು ಪಡಸಾಲೆಯ ಮೇಲೆ ಕುಳಿತುಕೊಂಡಳು. ಮಳೆ  ಸುರಿಯುತ್ತಲೇ ಇತ್ತು ದನಕುರಿ ಮೇಕೆಗಳ ಮೇಯಲು ಬಿಡದಂತೆ ಹುಯ್ಯುತ್ತಲೇ ಇತ್ತು. ಏಕಾದಶಿಗೆ ಮಾಡಿದ್ದ ಒಂದು ಕಂಡುಗ ಕಜ್ಜಾಯ, ಹತ್ತು ಸೇರು ಚಕ್ಕಳಿ,ಕೋಡುಬಳೆ,ಅಕ್ಕಿ ಸ್ಯಾವಿಗೆಯೆಲ್ಲ ಖಾಲಿಯಾಗುವ ಮಟ್ಟಕ್ಕೆ  ಬಂದರೂ ಯಾರಿಗೂ ಹೊಟ್ಟೆಯ ಹಸಿವು ಸುಮ್ಮನಿರಲಿಲ್ಲ, ಬರುವ ಮಳೆಯ ಜೊತೆಗೆ ಏನಾದರೂ ತಿನ್ನಬೇಕೆಂಬ ಹಂಬಲ ಇನ್ನು ಹೆಚ್ಚಾಗುತ್ತಲೇ ಇತ್ತು. ಎಲ್ಲವನ್ನು ತಿಂದು ಖಾಲಿ ಮಾಡಿದರೆ ಬೀಗರಮನೆಗೆ ಏನು ಕೊಡೋದು ಎಂದೆಲ್ಲ ಯೋಚಿಸಿ ಒಂದಷ್ಚು ತಿಂಡಿಗಳ ದೊಡ್ಡದಾದ ಬಾನಗಳಿಗೆ ತುಂಬಿ ಅಟ್ಟದ ಮೇಲೆ ಯಾರಿಗೂ ಕಾಣದಂತೆ ಇಟ್ಟಿದ್ದಳು. ಅಜ್ಜಿಗೆ ಸಂಬಂಧಗಳು ಹೆಚ್ಚಿದಂತೆಲ್ಲ ಕಜ್ಜಾಯ ಪಾಕ ತೆಗೆಯುವುದು ಬೇಯಿಸುವುದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇತ್ತು. ಅಳಿಯರು ಬಂದ್ರೆ ಅವರಿಗೂ ಒಂದಿಷ್ಟು ಕೊಡಬೇಕು ಅದು ಅಲ್ಲದೆ ಮಗ ಸೊಸೆ ಮೊಮ್ಮಕ್ಕಳಿಗೂ ಕೊಡಬೇಕು,ಮಳೆಗಾಲ ಬೇರೆ ನಮ್ಮ ಬಾಯಿಗಳು ತಟತಟನೆ ಮಾತನಾಡುತ್ತವೆ ‘ ಏನಾದರೂ ಕೊಡು, ತಿನ್ನಬೇಕೆಂದು’ ಇದೆಲ್ಲ ಯೋಚಿಸಿಕೊಂಡು ಬಾನ,ವಾಡೆ,ಮಡಿಕೆ ಕುಡಿಕೆಗಳ ಬಳಿ ಯಾರನ್ನು ಬಿಡದೆ ಅವಳೊಬ್ಬಳೆ ನಿಭಾಯಿಸುತಿದ್ದಳು. ಚಿಕ್ಕಮ್ಮಂದಿರು ನಮ್ಮ ಗಂಡನ ಮನೆಗೆ ಅಷ್ಚು ಕೊಡಲೆಬೇಕು, ಕೊಡದಿದ್ದರೆ ‘ ಎಂತಾ ಜಿಪುಣರ ಮನೆಯೇ ನಿಮ್ದು’ ಎಂದೆಲ್ಲ ಆಡಿಕೊಂಡು ನಗುತ್ತಾರೆ ಅಮ್ಮ ಎಂದೆಲ್ಲ ಅಜ್ಜಿಗೆ ಮೊದಲೇ ಹೇಳಿದ್ದರು. ಆದರೆ ಮನೆಯೊಳಗೆ ಶ್ರಾವಣದ ಪುಷ್ಯಮಳೆಯಂತೆ ಇವರ ಬಾಯಿಗಳು ಕೂಡ ಬಿಡುವಿಲ್ಲದೆ ಮಾತನಾಡಲು ಶುರುಮಾಡಿದ್ದವು.

ಅಜ್ಜಿಗೆ ಏಳುಜನ ಹೆಣ್ಣುಮಕ್ಕಳು ,ಇಬ್ಬರು ಗಂಡುಮಕ್ಳಾಗಿದ್ದರೂ  ಏನು ಪ್ರಯೋಜನವಿಲ್ಲವೆಂದು ಅವಳೆ ಗೊಣಗುತಿದ್ದಳು. ಆಷಾಢಕ್ಕೆ ಬಂದ ಮಕ್ಕಳ ನೋಡಿ ಖುಷಿಯಿಂದ ಅವರಿಗೆ ಏನು ಬೇಕೋ ಅದನೆಲ್ಲ ಮಾಡುವುದರಲ್ಲಿಯೇ ಏನೋ ಖುಷಿ ಅವಳಿಗೆ. ಅಷ್ಟೆಲ್ಲ ಕಜ್ಜಾಯ ಮಾಡಿದ್ದರೂ ಒಂದನ್ನು ತಿನ್ನುವುದಕ್ಕೂ ಆಗದೆ ಮಕ್ಕಳ ಆಗುಹೋಗುಗಳ ಬಗ್ಗೆ ರಾತ್ರಿಯಿಡಿ ಮಾತನಾಡುತ್ತಾ.  ಒಬ್ಬೊಬ್ಬರಾಗಿ ನಂಗೆ ಸೀರೆ ಬೇಕು,ಕಾಸಿನ ಸರ ಮಾಡ್ಸು,ಕಿವಿಗೆ ಬೆಂಡೋಲೆ ಕೊಡ್ಸು, ನೋಡಮ್ಮ ನನ್ನ ಕಾಲಿಗೆ ಚೈನು ಇಲ್ಲ, ಕೈಗೆ ಬಳೆಗಳು ಇಲ್ಲ, ಮೂಗಿಗೆ ಮೂಗ್ಬಟ್ಟು ಇಲ್ಲ ಎಂದೆಲ್ಲ ಹೇಳಲು ಶುರುಮಾಡಿದ ಮೇಲೆ ಅಜ್ಜಿಗೆ ನಿದ್ದೆಯೇ ಬರುತಿರಲಿಲ್ಲ! ಕುರಿಕಂಬಳಿಯ ಹೊದ್ದುಕೊಂಡು ಅತ್ತಿಂದಿತ್ತ ಒದ್ದಾಡಿ ರಾತ್ರಿಯೆಲ್ಲ ಕಣ್ಣೀರಿನಿಂದಲೇ ಕೈತೊಳೆದು ಬೆಳ್ಗೆ  ಅಟ್ಟಿ ಬಾಕ್ಲ ತೊಳೆದು ರಂಗೋಲೆಯಿಟ್ಟು, ಕೊಟ್ಟಿಗೆಯ ಸಗಣಿ ಬಾಚಿ ಹಸುಗಳಿಂದ ಹಾಲು ಕರೆಯಲು ಶುರುಮಾಡುವಾಗಲೇ ಯಾರೋ ಬಂದಂತೆ ಭಾಸವಾಯಿತು ನೋಡಿದರೆ ಅಳಿಯರು ಪಟ್ಟೆಯಂಚಿನ ಪಂಚೆ ಉಟ್ಟುಕೊಂಡು ಹೆಗಲ ಮೇಲೆ ಮೈಸೂರಿನ ಮಿರಿಮಿರಿಯ ಟವಲ್ ಹಾಕಿಕೊಂಡು. ತಮ್ಮತಮ್ಮ ಹೆಂಡತಿಯ ಬಳಿ ಹೋಗಲು ನಿರತರಾದರು. ‘ ಲೇಯ್ ಚಿಕ್ಕಮಿ,ದೊಡ್ಡಮಿ,ಸಾಕಿ, ಚೆನ್ನಿ,ಚೌಡಿ,ಬೋರಿ ಬಂದ್ರೆ ಇಲ್ಲಿ’ ಎಂದು  ಕರೆದಾಗ ಹೊರಗೆ ನಿಂತಿದ್ದ ಗಂಡನನ್ನು ನೋಡಿ ಮಳೆಯಂತೆ ಕರಗಿ ಹೋದರು. ‘ ಈ ಮಳೇಲಿ ಬಂದಿದ್ರಲಾ ಹಂಗ್ಯಪಾ ಬಂದ್ರಿ? ಎತ್ತಿನಗಾಡಿ ಗಿಡಿ ಕಳ್ಸಿ ಅಂದಿದ್ರೆ ನಿಮ್ಮ ಮಾವ ಬರೋರು, ಆರುಜನನೂ ಮಾತನಾಡಿಕೊಂಡೆ ಬಂದ್ರಾ? ಮನೆಯಲ್ಲಿ ಬೀಗರು ಹೆಂಗ್ ಅವ್ರೆ?” ಎಂದೆಲ್ಲ ಮಾತನಾಡಿಸುವಲ್ಲಿ ಸೂರ್ಯ ನೆತ್ತಿ ಕಡೆ ಓಡುತ್ತಲೇ ಇದ್ದ. ಆಗ ತಾನೇ ಕರೆದು ನೊರೆ ಹಾಲನ್ನು ಅಡುಗೆಮನೆಗೆ ತರುವಾಗಲೇ ‘ ಅತ್ತೆ ನಮ್ಗೆ ಕಾಯಿಸಿದ ಗಿಯಿಸಿದ ಹಾಲು ಬ್ಯಾಡ್ರಿ ಹಂಗೆಯ ಕೊಟ್ಟುಬುಡಿ, ನಮ್ಮ ಮನೆಯಲೂ ಕೂಡ ಹಿಂಗೆ ಕುಡಿಯೋದು’ ಎಂದರು ಕೈಯಲ್ಲಿದ್ದ ಒಂದು ಕಬ್ಬಿಣದ ಬಾಕೆಟ್ಟು ಹಾಲನ್ನು ಎಲ್ಲರೂ ಸೇರಿ ಕುಡಿದ ಮೇಲೆ ‘ ಕೆರೆಕಡೆ ಹೋಗಿಬರ್ತಿವೆ ಕಣ್ರೆ, ತಿನ್ನೋಕೆ ಏನಾದ್ರೂ ರುಚಿರುಚಿಯಾಗೆ ಮಾಡ್ರೆ’ ಎಂದು ಹೊರಟಾಗ ಒಬ್ಬೊಬ್ಬರು ತನ್ನ ಗಂಡನಿಗೆ ಅದು ಮಾಡಬೇಕು ಇದು ಮಾಡಬೇಕು ಮನೆಯಲ್ಲಿ ಅದು ಇಲ್ಲ ಇದು ಇಲ್ಲ ಎಂತಾ ಮನೆಯಿದು ಎಂದೆಲ್ಲ ಜಗಳ,ಪಾತ್ರೆಗಳ ಕುಕ್ಕುವಿಕೆಯೊಂದಿಗೆ ಮುನಿಸುಗಳು ಹುಟ್ಟುತಿದ್ದವು.

*ಕವಿ ಸೂರ್ಯಕೀರ್ತಿ*

ಅಜ್ಜ ಮೊಳಕೆ ಬತ್ತವ ಎತ್ತಿನಗಾಡಿಗೆ ಹಾಕಿಕೊಂಡು ವಟ್ಲು ಹಾಕಲು ಹೊರಟ. ಅಜ್ಜಿ ಕೈಸನ್ನೆ ಮಾಡಿ ‘ಅಳಿಯಂದ್ರೂ ಬಂದವ್ರೆ ಇವತ್ತಾರು ಇರ್ರಿ’ ಎಂದರು ಕೇಳದೆ   ಅದೇನು ಮಾಡಬೇಕು ಮಾಡ್ಕೋ ಎಂದು ಗದ್ದೆಯ ಕಡೆ ಹೊರಟೆಬಿಟ್ಟ. ಇಬ್ಬರು ಬಾಣಂತನಕ್ಕೆ ಬಂದಿದ್ದರು ಅವರ ಹಸುಗೂಸುಗಳು ಕೈಬಿಡದೆ ರಚ್ಚೆ ಹಿಡಿಯುತಿದ್ದವು , ಅಜ್ಜಿ ಕೂಸುಗಳಿಗೆ ಎಣ್ಣೆ ಸ್ನಾನ ಮಾಡ್ಸಿ ಮೈ ಕೈಯಿ ನೀವಿ,ತಟ್ಟಿ ಬಿಸಿನೀರಿನ ಸ್ನಾನಕ್ಕೆ ತೊಟ್ಟಿಲಿಗೆ ಹಾಕಿದಾಗ ಒಂದೆರಡು ಗಂಟೆ ನಿಶ್ಯಬ್ದವಾಗಿ ಕೂಸುಗಳು ಮಲಗಿಬಿಡುತಿದ್ದವು. ಇನ್ನು ಬಾಣಂತಿಯರಿಗೆ ಊಟ,ಸ್ನಾನ ಕೇಳಬೇಕೆ? ಅವರಿಗೂ ಕೂಸುಗಳಂತೆ ಉಪಚರಿಸಿ ತಣ್ನೀರು ಮುಟ್ಟಲು ಬಿಡದೆ ಕೂಸುಗಳ ಬಟ್ಟೆ ಒಗ್ದು, ಬಂದ ಅಳಿಯರನ್ನು ಮಾತನಾಡಿಸಲು ಸಮಯ ಸಿಗದೆ ಅಡುಗೆಮನೆಯಲ್ಲಿ  ಉಪ್ಸಾರು ಮುದ್ದೆಯ ಮಾಡಲು ಸಿದ್ಧಳಾದಳು. ನನ್ನ ಗಂಡನಿಗೆ ಅದು ಇಷ್ಟವಿಲ್ಲ ಇದನ್ನೆ ಮಾಡಬೇಕಂತೆ ಇದು ಇಷ್ಟವಿಲ್ಲ ಅದು ಮಾಡಿದ್ರೆ ಹೆಂಗೆ ಇರುತ್ತೆ ಎಂದೆಲ್ಲ ಚಿಕ್ಕಮ್ಮಂದಿರು ಹೇಳುತ್ತಲೇ ಇದ್ದರು. ಅಜ್ಜಿ ನಿಧಾನವಾಗಿ ” ತಾಯಿ ,ಏಯ್ ತಾಯಿ ನಿಮ್ ಗಂಡಂದಿರಿಗೆ ಏನು ಬೇಕೋ ಅದನ್ನು ಮಾಡಿ ಕೊಡ್ರೆ ನಾನೇನು ಬ್ಯಾಡ ಅಂದಿದ್ದೇನೆ? ಬನ್ರೆ ಬೇಯ್ಸಿ ಹಾಕ್ರಿ ‘ ಎಂದಳು. ಆದರೆ ಈ ಮಾತು ಬೇರೆ ಕಡೆಯೆ ತಿರುಗಿಕೊಂಡು ‘ ಅಲ್ಲೂ ಮಾಡಬೇಕು ಇಲ್ಲೂ ಬಂದ್ರೂ ಕೆಲ್ಸ ಮಾಡಬೇಕು ನಮ್ಗೆ ವಿಶ್ರಾಂತಿಯೇ ಇಲ್ಲ ‘ ಎಂದೆಲ್ಲ ಗೊಣಗಲು ಶುರು ಮಾಡಿದರು.  ಮುದ್ದೆ ತಿರುಗುವಾಗಲೇ ಹಿಟ್ಟಿನ ಮಡಿಕೆ ‘ಪಟಾರನೇ’ ಒಡೆದು ಹೋಯ್ತು, ಸಾರಿನ ಮಡಿಕೆಗೆ ಲಡಬಡನೆ ಸೌಟು ಹಾಕಿ ತಿರುಗುವಾಗಲೇ ಮಡಿಕೆಯ ಅಂಡು ತೂತಾಯಿತು.

‘ಈ ಮುದ್ಕಿ ಇನ್ನು ಹಳೆ ಕಾಲದಲ್ಲೆ ಆಯ್ತೆ, ಒಂದು ಸ್ಟೀಲ್,ಸಿಲ್ವರ್ ಪಾತ್ರೆಗಳು ಇಲ್ಲ ಈ ಮುಡ್ಕು ಮಡ್ಕೆ, ಈ ತೂತು ಮನೆಯಲ್ಲಿಯೇ ಸಾಯ್ಬೇಕು’ ಎಂದೆಲ್ಲ ಕೊಸರಾಡಿದರು.

ಅಜ್ಜಿ ತಂಗಳ್ಮುದ್ದೆ,ಗಟ್ಟಿಮೊಸರು ಹಾಕಿ ಗದ್ದೆ ಕಡೆ ಹೋಗುವವರು ಯಾರಾದರೂ ಸಿಕ್ಕರೆ ‘ನಮ್ಮವರಿಗೆ’ ಈ ಗಂಟು ಕೊಟ್ಟುಬುಡಿ ಅಂತ ದಾರಿಯಲ್ಲಿ ಹೋಗುವವರ ಕೂಗಿ ಕೂಗಿ ಕೇಳಿ ಎಮ್ಮೆ ಮೇಯಿಸಲು ಹೋಗುತಿದ್ದ ಮೂಗರ ತಾಯವ್ವ ಸಿಕ್ಕಿ ಅವಳಿಗೆ ಬುತ್ತಿಯ ಕೊಟ್ಟು ‘ ಅಳಿಯಂದ್ರೂ’ ಬಂದವರೆ ಬೇಗ ಬಂದ್ಬುಡೋಕೆ ಹೇಳು ತಾಯವ್ವ ನಮ್ಮವರಿಗೆ ಎಂದು ಮನೆಯೊಳಗೆ ಬರುವವರಷ್ಟರಲ್ಲಿಯೇ ‘ ಈ ಇಪ್ಸಾರು ಮುದ್ದೆ ಗತಿಯಿಲ್ದೆ ನಾವು ಬಂದಿದ್ವೆ? ನಿಮ್ಮವ್ವ ಮುದ್ದೆ ಉಪ್ಸಾರು ಮಾಡಿದ್ರೆ ಯಾರು ಉಂಡಾರು, ನಂಗೆ ಬ್ಯಾಡ ಕಣೆ,ನಂಗೂ ಬ್ಯಾಡ ನಂಗೂ ಬ್ಯಾಡ ‘ ಎಂದು ಎಲ್ಲರೂ ಗೋಡೆ ಕಡೆ ಮುಖ ಮಾಡಿಕೊಂಡಾಗ.

‘ ಯಪ್ಪಾ ನಿಮ್ಮ ಮಾವ ಗದ್ದೆ ಕಡೆ ಹೋಗವ್ನೆ ಕಣ್ರೋ ಈಗ ಒಂದಿಷ್ಟು ಮುದ್ದೆ ಉಣ್ಣಿ ಅವ್ರು ಬಂದು ಕೂಡಲೆ ಸಂತೆಗೆ ಕಳ್ಸಿ ಕೋಳಿ ತರಿಸ್ತೀನಿ ಕಣ್ರೋ’ ಎಂದರೂ ಕೇಳದೆ ‘ ನೀವು ನಿಮ್ ಮಕ್ಕಳು ಉಣ್ಕೊಳ್ಳಿ , ಮಾವನಿಗೆ ನಾವ್ ಬತೀವಿಯಂದ್ರೂ ತಿಳಿಯದೆ ಹೋದ್ನ ? ಅಷ್ಟು ಇಸಡ್ಡೆಯಾದ್ವ? ಬರಬಾರದಿತ್ತು ಬಂದ್ಬಿಟ್ವಿ ಕೆರ,ಕೆರ ತಗೊಂಡು ನಾವೇ ಹೊಡೆದುಕೊಳ್ಳಬೇಕು’ ಎಂದಾಗ ಅಜ್ಜಿಯ ಕಣ್ಣಲ್ಲಿ ಇದ್ದ ಒಂದಷ್ಟು ನೀರು  ಹೊರಬಂದವು.

ಅಟ್ಟಿ ಮುಂದೆ ಮೇಯೋ ಕೋಳಿಗಳ ನೋಡಿ ‘ ಯಾರವು ಈ ಕೋಳಿಗಳು ‘ ಎಂದ ಚಿಕ್ಕಮಿಯ ಗಂಡ. ‘ನಮ್ಮವೇ ಕಣ್ರಿ ಯಾರವು ಯಾಕ್ ಆಯ್ತವೆ? ‘ ಎಂದಳು. ಹಂಗರೆ ಇವ್ನೆ ಕೊಯಿದ್ಬುಟ್ಟು ಸಂತೆ ಕೋಳಿ ತಂದು ಕೂಯ್ದಿರಾ? ಎಂದಿದ್ದನ್ನು ಕಂಡ ಮಿಕ್ಕಿದ್ದವರು ಹೌದೌದು ಮನೆಕೋಳಿಯೇ ಬೇಕು. ಕೂಯ್ಯೋಂಗಿದ್ರೆ ಈ ಕೋಳಿಗಳ ಕೂಯ್ದು ಅಡುಗೆ ಮಾಡಿ ಇಲ್ಲಂದ್ರೆ ನಮ್ಗೆ ಏನು ಬ್ಯಾಡ ನಮ್ಮ ಹೆಂಗ್ಸರ ಜೊತೆ ಹೋಗ್ತಾ ಇರ್ತಿವಿ ಎಂದಿದ್ದನ್ನು ಕೇಳಿ ಅಜ್ಜ ಇನ್ನು ಬರದಿದ್ದನ್ನು ಕಂಡು ಬೀದಿ ಬಾಗಿಲಗಳ ಕಡೆ ನೋಡುತ್ತಲೇ ಇದ್ದಳು ಅಜ್ಜಿ. ಮೈಯೆಲ್ಲ ಗದ್ದೆಯ ಕೆಸರು ಬಳಿದುಕೊಂಡು ನೇಗಿಲು,ನಗ,ಸರಪ್ಣಿ,ದನಗಳು ಎಲ್ಲರೂ ಗಬುಡ ಮೆತ್ತಿಕೊಂಡು ಮಣ್ಣೆನ್ನೆ ವತ್ತುಕೊಂಡು ಬಂದ ಅಜ್ಜನಿಗೆ ನೀರೊಲೆಗೆ ಒಂದೆರಡು ಸೌದೆಯ ಹಾಕಿ ನೀರು ಕಾಯಿಸಿ ಸ್ನಾನ ಮಾಡಿದ ಮೇಲೆ ಸಂತೆಯ ಕಡೆ ಹೋಗಲು ಸಿದ್ಧನಾದ. ಮೊದಲೆ ಮನೆಯಲ್ಲಿರುವ ಮೊಟ್ಟೆಕೋಳಿಗಳೆಷ್ಟು ಇನ್ನು ಯಾಟೆ,ಹುಂಜಗಳೆಷ್ಟು ಎಂದೆಲ್ಲ ಲೆಕ್ಕ ಹಾಕಿದ್ದ ಅಳಿಯರ ಮುಂದೆ ಅಜ್ಜನ ಲೆಕ್ಕ ತಪ್ಪಿಹೋಗಿತ್ತು. ಅಜ್ಜಿ ಮತ್ತೆ ಬಾಯಿ ಸನ್ನೆ ಮಾಡಿ ‘ ಎಲ್ರೂ ಮೊಟ್ಟೆಕೋಳಿ ಕೂಯ್ಯಿ ಅಂತಾವ್ರೆ’ ಎಂದಳು.

ಅಜ್ಜ ‘ ಯಾಕಂತೆ , ಮನೆಯಲ್ಲಿ ಇಬ್ರೂ ಬಾಣಂತಿಯರು ಬ್ಯಾರೆ ಇದ್ದಾರೆ ಮನೆಗೆ ಮೊಟ್ಟೆ ಬೇಕು ಅಂತ ಕೋಳಿ ಬಿಟ್ಟುಕೊಂಡಿದ್ರೆ, ಅವ್ನೆ ಕೇಳ್ತಾ ಇದ್ದಾರೆಯೇ? ಏನ್ರಪಾ ಸಂತೆಗೆ ಹೋಗಿ ಕೋಳಿ ತರ್ತೀನ್ರೋ ‘ ಎಂದಿದ್ದನ್ನು ಕೇಳಿಸಿಕೊಂಡವರು ತಮ್ಮ ಹೆಂಡತಿಯರ ಮೀಟಲು ಶುರುಮಾಡಿದರು. ‘ ಮಾಡಿದ್ರೆ ಮೇಕೆ ಬಾಡು ,ಇಲ್ಲಂದ್ರೆ ನಾಟಿಕೋಳಿ ಸಾರು, ಅದೂ ಇಲ್ಲವೆ ನಡೀತಾ ಇರು ನಮ್ಮ ಮನೆಗೆ ಹೋಗೋಣ’ ಎಂದು ಅವರವರೆ ಗೊಣಗುವುದನ್ನು ಕಂಡ ಅಜ್ಜಿ ‘ ಹೋಗ್ಲಿ ಬಿಡ್ರೀ, ಎರಡು ಕೋಳಿ ಕೂಯ್ದುಕೊಳೋಣ’ ಎಂದಾಗ ‘ ಏನು ಎರಡು ಕೋಳಿ ಸಾಕಾಗುತ್ತದೆಯೇ? ಇರೋ ಹತ್ತು ಕೋಳಿಯ ಜೊತೆಗೆ ಯಾಟೆ,ಪಾಟೆಗಳೆಲ್ಲ ಕೊಯ್ದು ಹಾಕಿದ್ರೂ ಸಾಕಾಗಲ್ಲ.

‘ ಏನೇ ನಿಮ್ಮವ್ವ ಅಳಿಯಂದ್ರ ನೋಡೋ ಹುಟ್ಟೇನೆ ಇದು, ಇದೊಂದು ಬಾಳಾಟ ಅಂತ ನಾನು ಅಂದುಕೊಂಡಿರಲಿಲ್ಲ, ಅಕ್ಕಪಕ್ಕದವರೆಲ್ಲ ಎಷ್ಟು ಚೆಂದವಾಗಿ ಅಳಿಯರನ್ನು ಕರ್ದು ಕಳಿಸ್ತಾರೆ ಅನ್ನೋದ್ನ ನೋಡಿ ಕಲಿಬೇಕು’ ಎಂದೆಲ್ಲ ಅಂದಿದ್ದನ್ನು ನೋಡಿ. ಮೇಯಲು ಹೋದ ಕೋಳಿಗಳ ಬಿಡದೆ ಅಟ್ಟಾಡಿಸಿಕೊಂಡು ಹಿಡಿದು ಕೊಯ್ದು ತಿಂದು ತಮ್ಮ ಹೆಂಡತಿಯರ ಜೊತೆ ಹೊರಟು ನಿಂತರು. ಅಜ್ಜಿ ಮಕ್ಕಳ ಖುಷಿಯ ನೋಡಿ ತನ್ನೆರಡು ಕೈಗಳ ಎತ್ತಿ ಆಶೀರ್ವಾದದ ಜೊತೆ ಒಂದಿಷ್ಟು ಕಣ್ಣೀರು ಹಾಕಿದಳು. ಎಲ್ಲರಿಗೂ ತಿಂಡಿ ತಿನಸುಗಳ ಕಟ್ಟಿ ‘ ಜೋಪಾನ’ ಎಂದು ಹೇಳಿದಳು. ರಾತ್ರಿಯ ತೊಟ್ಟಿಕ್ಕುವ ಮಳೆಗೆ ತನ್ನೆಲ್ಲ ನೋವುಗಳ ಹೇಳಿಕೊಳ್ಳಲು ಶುರುಮಾಡಿದಳು ಈ ಮಳೆಯೋ ತನ್ನ  ಮಕ್ಕಳಂತೆ ಏನು ಕೇಳಿಸಿಕೊಳ್ಳುತಿರಲಿಲ್ಲ.

ಮಳೆ ಸುರಿಯುತ್ತಲೇ ಇತ್ತು ಅಜ್ಜಿ ಮಕ್ಕಳು ಹೋದ ದಾರಿಯನ್ನೆ ನೋಡಿ  ಅವರು ಆಟವಾಡಿದ,ಜಗಳವಾಡಿದ ಮನೆಯೆಲ್ಲವನ್ನು ಗಮನಿಸುತ್ತಾ ತುಸು ನಿದ್ದೆಗೆ ಜಾರಿದಳು!

0
    0
    Your Cart
    Your cart is emptyReturn to Shop