ಆಕಾಶದಲ್ಲಿ ಯಾರೋ ಬಣ್ಣದೋಕುಳಿ ಆಡುತ್ತಿರುವಂತೆ ಭಾಸವಾಗುತ್ತಿತ್ತು. ಸೂರ್ಯ ತನ್ನನ್ನು ತಾನು ರಕ್ಷಿಸಲೆಂದು ನಿಧಾನವಾಗಿ ಮುಳುಗಲು ಅಣಿಯಾಗುತ್ತಿದ್ದರೂ ಕೆಂಬಣ್ಣದಿಂದ ಯಾರೋ ಅವನ ಮೂತಿ ಕೂಡಾ ರಂಗಾಗಿಸಿದ್ದರು. ಹಕ್ಕಿಗಳ ಕೇಕೇ, ಗಾಳಿಯ ಉನ್ಮಾದತೆ, ಪ್ರಕೃತಿಯ ಶಾಂತತೆ ಹಬ್ಬದ ವಾತಾವರಣ ಸೃಷ್ಟಿಸಿತ್ತು. ಇತ್ತ ಇವತ್ತು ಹೋಳಿಯಾದ್ದರಿಂದ ಓಣಿಯ ಮಕ್ಕಳೆಲ್ಲಾ ಓಡುತ್ತಾ, ನಲಿಯುತ್ತಾ, ಒಬ್ಬರಿಗೊಬ್ಬರು ಬಣ್ಣ ಎರಚುತ್ತಾ ಆಡುತ್ತಿರುವುದನ್ನು ಮನೆಯ ಟೆರೇಸ್ ನಿಂದ ನೋಡುತ್ತಿದ್ದೆ. ಅವರ ಆಟದಲ್ಲಿ ನಾನು ಪುಟ್ಟ ಮಗುವಾಗಿ ಆ ಸಂಭ್ರಮವನ್ನು ದೂರದಿಂದಲೇ ಆಸ್ವಾದಿಸಿದೆ. ತಕ್ಷಣ ಕೈಲಿದ್ದ ಮೊಬೈಲನ್ನು ಎತ್ತಿ ವಾಟ್ಸಾಪ್ ನಲ್ಲಿ ಸ್ಟೇಟಸ್ ನೋಡುವ ಕೆಲಸ ಪ್ರಾರಂಭಿಸಿದೆ. ಸ್ಟೇಟಸ್ ಗಳ ಜಾತ್ರೆ ನೋಡುತ್ತಿರುವಾಗಲೇ ಗೆಳತಿ ಶ್ರೇಯಾ ” ಹ್ಯಾಪಿ ಮ್ಯಾರೀಡ್ ಲೈಫ್” ಅಂತ ಶುಭಾಶಯ ಕೋರಿದ ಸ್ಟೇಟಸ್ ಬಂದಾಗ ಹಾಗೆಯೇ ಬೆರಳನ್ನು ಒತ್ತಿ ಹಿಡಿದು ಆ ಚಿತ್ರವನ್ನು ಪದೇ ಪದೇ ನೋಡಲಾರಂಭಿಸಿದೆ. ವಧು ವರರ ವಿವಿಧ ಪೋಸ್ ಗಳು, ಮದುವೆಯ ಮಧುರ ಕ್ಷಣಗಳು, ಗಂಡ ಹೆಂಡಿರ ನಡುವಿನ ಆತ್ಮೀಯತೆ, ನಗುವಿನ ಭಾವಗಳು ನೇರವಾಗಿ ಕಣ್ಣೆದುರಿಗೆ ಬಂದು, ಬೂದಿ ಮುಚ್ಚಿದ ಕೆಂಡದಂತಿದ್ದ ನನ್ನ ಭಾವನೆಗಳನ್ನು ಮತ್ತೊಮ್ಮೆ ಬಡಿದೆಬ್ಬಿಸಿತು. ಗೊತ್ತಾಗದೆ ಕಣ್ಣಂಚಿನಿಂದ ಧಾರಕಾರವಾಗಿ ಕಣ್ಣೀರು ಕೆನ್ನೆಯ ಮುಖಾಂತರ ಜಲಪಾತವಾಗಿ ಧುಮ್ಮಿಕ್ಕಲು ಪ್ರಾರಂಭಿಸಿತು. ತಾನು ಅಖಿಲ್ ನೊಂದಿಗೆ ಕಳೆದ ಮಧುರ ಕ್ಷಣಗಳು ಆಗಲೇ ನೆನಪಾಗಿ ಮನಸ್ಸು ಭಾರವಾಯಿತು.
ಅದು ನನ್ನ ಪ್ರಥಮ ವರ್ಷದ ಡಿಗ್ರಿಯ ಅತ್ಯಂತ ರೋಚಕ ದಿನಗಳು. ಅವತ್ತು ಕೂಡ ಇದೇ ರೀತಿ ಕಾಲೇಜನಲ್ಲಿ ಹೋಳಿ ಸಂಭ್ರಮಾಚರಣೆ. ನನ್ನ ಗೆಳತಿಯರು ಕೂಡಾ ಕಪಿಗಳಂತೆ ಒಬ್ಬರಿಗೊಬ್ಬರು ಬಣ್ಣ ಹಾಕುತ್ತಾ ಲಂಗು ಲಗಾಮಿಲ್ಲದೆ ನಗುತ್ತಾ ನಲಿಯುತ್ತಾ ಇದ್ದರು. ನನಗೆ ಈ ರೀತಿ ಬಣ್ಣಗಳ ಜೊತೆ ಆಡುವುದು ಮೊದಲಿನಿಂದಲೂ ಇಷ್ಟವಿರಲಿಲ್ಲ. ಶಾಸ್ತ್ರಕ್ಕೆ ಅಂತ ಒಂದೆರಡು ಬಣ್ಣದ ಗೀಟು ಮುಖಕ್ಕೆ ಸವರಿದ್ದರು.ನಾನು ಕೂಡ ಯಾರ ತಂಟೆಗೂ ಹೋಗದೆ ದೂರ ಒಬ್ಬಳೆ ಕೂತಿದ್ದೆ.
ಆಗಲೇ ಯಾರೋ ಹಿಂದೆಯಿಂದ ಬಂದು ಮುಖಕ್ಕೆ ಬಣ್ಣವನ್ನು ಮೆತ್ತಿ ಬಣ್ಣದ ನೀರಿನಿಂದ ನನ್ನನ್ನು ಪೂರ್ತಿ ಒದ್ದೆ ಮಾಡಿ ಮನಸ್ಸೋ ಇಚ್ಛೆ ಬಣ್ಣ ಎರಚಲು ಪ್ರಾರಂಭಿಸಿದರು. ಯಾರು ನನ್ನ ಈ ಸ್ಥಿತಿಗೆ ಕಾರಣ ಅಂತ ನೋಡಿದಾಗ ಮುಖವೀಡಿ ಬಣ್ಣ ಮೆತ್ತಿಕೊಂಡು, ಕೆದರಿದ ಕೂದಲು, ಅಸ್ತವ್ಯಸ್ಥಗೊಂಡಿದ್ದ ಬಟ್ಟೆ ಹಾಕಿಕೊಂಡಿದ್ದ ಒಬ್ಬ ಹುಡುಗ ನಿಂತಿದ್ದ. ಅವನ ಹಿಂದೆ ಮೂರ್ನಾಲ್ಕು ಜನ ಹುಡುಗರ ದಂಡು ಬೇರೆ ಇತ್ತು. ನನ್ನ ಕೋಪದ ಕಟ್ಟೆ ಆಗಲೇ ಒಡೆದು ಹೋಗಿತ್ತು. ಅವನನ್ನು ನೋಡಿದ ಕೂಡಲೇ ‘ ಹಲೋ… ನಿಂಗೆ ಮ್ಯಾನರ್ಸ್ ಇಲ್ವ? ಅಲ್ಲ, ಈ ರೀತಿ ಬೇರೆಯವರ ಮೇಲೆ ಬಣ್ಣ ಹಚ್ಚುವ ಮೊದಲು ಅವರನ್ನು ಕೇಳಬೇಕು ಎನ್ನುವ ಪರಿಜ್ಞಾನ ಇಲ್ಲವ? ನಿಂಗೆ ಹುಡುಗಿಯನ್ನು ಮುಟ್ಟುವ ರೈಟ್ಸ್ ಯಾರು ಕೊಟ್ಟದ್ದು?’ ಅಂತ ಒಂದೇ ಸಮನೆ ಅವನನ್ನು ಬೈದು ಬಿಟ್ಟೆ. ಆಗ ಅವನು ಅಷ್ಟೇ ಶಾಂತ ವಾಗಿ ‘ನಿಂಗೆ ಅಷ್ಟೊಂದು ಪ್ರಾಬ್ಲಂ ಇದ್ರೆ ಮನೆಯಲ್ಲೇ ಇರಬೇಕಿತ್ತು. ಕಾಲೇಜ್ ಗೆ ಬಂದ ಮೇಲೆ ಇದೆಲ್ಲ ಮಾಮೂಲಿ. ಹೋಳಿ ಆಡುವಾಗ ಹುಡುಗ ಹುಡುಗಿ ಅಂತ ಲೆಕ್ಕಕ್ಕೆ ಬರುವುದಿಲ್ಲ. ಗೊತ್ತಾಯ್ತ…’ ಅಂತ ಬಾಕಿ ಉಳಿದಿದ್ದ ಬಣ್ಣವನ್ನು ಮತ್ತೆ ನನಗೆ ಎರಚಿ ವಿಚಿತ್ರವಾಗಿ ನಗುತ್ತಾ ಅಲ್ಲಿಂದ ಓಡಿದ. ನಾನು ಅವನ ಈ ನಡವಳಿಕೆಯಿಂದ ಮತ್ತೆ ಕೋಪಗೊಂಡು ಅಲ್ಲಿಂದ ಸಿದಾ ಈ ಅವತಾರದಲ್ಲೇ ಮನೆಗೆ ಹೊರಟು ಬಿಟ್ಟೆ. ನನ್ನ ಅವಸ್ಥೆಯನ್ನು ಕಂಡು ಮನೆಯಲ್ಲಿ’ದಿವ್ಯ ಯಾರೇ ನಿಂಗೆ ಈ ರೀತಿ ಮಾಡಿದ್ದು?’ ಅಂತ ಬಿದ್ದು ಬಿದ್ದು ನಗಲಾರಂಭಿಸಿದರು. ಇದು ಉರಿಯುವ ಬೆಂಕಿಗೆ ಮತ್ತೆ ಪೆಟ್ರೋಲ್ ಸುರಿದಂತೆ ನನ್ನ ಕೆರಳಿಸಿತು. ಎಷ್ಟು ಮುಖ ತೊಳೆದು ಸ್ನಾನ ಮಾಡಿದರೂ ಮುಖದ ಬಣ್ಣ ಹೋಗುತ್ತಾನೆ ಇರಲಿಲ್ಲ. ಮತ್ತೆ ಏನೇನೋ ಟ್ರೈ ಮಾಡಿದ ಮೇಲೆ ಮುಖ ಮೊದಲಿನಂತಾದಾಗ ಚೂರು ನೆಮ್ಮದಿ ಆಯಿತು ಮತ್ತು ನನ್ನ ಈ ಸ್ಥಿತಿಗೆ ಕಾರಣನಾದವನನ್ನು ಕೊಚ್ಚಿ ಕೊಲ್ಲುವಷ್ಟು ಕೋಪ ಬಂತು.
*ಕತೆಗಾರ ರಕ್ಷಿತ್. ಬಿ. ಕರ್ಕೆರ*
ಈ ಹೋಳಿ ಮಹಾತ್ಮೆಯ ಗುಂಗು ಮರುದಿನ ಕಾಲೇಜ್ ನಲ್ಲಿ ಏನು ಇರಲಿಲ್ಲ. ಎಲ್ಲಾ ಮೊದಲಿನಂತೆ ಪ್ರಶಾಂತವಾಗಿತ್ತು. ನಾನು ಕ್ಲಾಸ್ ಮುಗಿಸಿ ಮಧ್ಯಾಹ್ನಕ್ಕೆ ಕ್ಯಾಂಟೀನ್ ಕಡೆ ಹೋಗುತ್ತಿರುವಾಗ ನನ್ನ ದಾರಿಗೆ ಅಡ್ಡಲಾಗಿ ಒಬ್ಬ ಬಂದ. ಹಾಲಲ್ಲೆ ಮಿಂದಂಥ ಮೈಬಣ್ಣ, ಕುರುಚಲು ಗಡ್ಡ, ಚಿಗುರು ಮೀಸೆ, ಕಟ್ಟುಮಸ್ತಾದ ದೇಹ, ಸುಸಂಸ್ಕೃತನಂತೆ ನೋಡಲು ಸ್ಪುರದ್ರುಪಿಯಾಗಿ,ಕೈಯಲ್ಲೊಂದು ವಿಷ್ಣುವರ್ಧನ್ ಹಾಕುವ ಕಡಗ ಧರಿಸಿದ್ದ. ಹೋಳಿ ದಿನ ನನ್ನ ಅವಸ್ಥೆಗೆ ಕಾರಣ ಇವನೇ ಅಂತ ಆ ಕಡೆಗೆ ನೋಡಿ ಕಂಡುಹಿಡಿದೆ. ಆತನ ಹೆಸರು ಅಖಿಲ್ ಅಂತನೂ ನನ್ನ ಸೀನಿಯರ್ ಅಂತನೂ ಬಲ್ಲ ಮೂಲಗಳಿಂದ ನನಗೆ ಮೊದಲೇ ಮಾಹಿತಿ ಸಿಕ್ಕಿತ್ತು. ‘ರೀ… ನಿನ್ನೆ ನಡೆದ ವಿಷಯಕ್ಕೆ ಸಾರಿ ಹೇಳೋಕೆ ಬಂದೆ. ಹಬ್ಬದ ದಿನ ನೀವೋಬ್ಬರೆ ಕೂತಿದ್ರಿ. ಅದಕ್ಕೆ ಬಣ್ಣ ಹಾಕಿದೆ ತಪ್ಪು ತಿಳ್ಕೋಬೇಡಿ’ ಅಂತ ಪೆದ್ದು ಮುಖ ಮಾಡಿ ಕ್ಷಮೆ ಕೇಳಿದಾಗ ಒಳಗೊಳಗೆ ನಗು ಬಂದರೂ ಗಂಭೀರ ಮುಖ ಮಾಡಿ ಅವನನ್ನು ಲೆಕ್ಕಿಸದೆ ಅಲ್ಲಿಂದ ಹೋದೆ. ನನ್ನ ಈ ವರ್ತನೆ ಅವನನ್ನು ವಿಚಲಿತ ಮಾಡಿದ್ದು ಸುಳ್ಳಲ್ಲ. ಹೀಗೆ ಕೆಲವು ಸಲ ಕಾಲೇಜ್ ನಲ್ಲಿ ಎದುರು ಬದುರಾದರೂ ಅವನಿಗೆ ಯಾವ ಸೊಪ್ಪು ಹಾಕದೆ ಇದ್ದಾಗ ಅವನ ಸಪ್ಪೆ ಮುಖ ನೋಡಿ ನನಗೆ ಹಾಲು ಕುಡಿದಷ್ಟೇ ಸಂತೋಷವಾಗುತ್ತಿತ್ತು.
ಒಂದು ಸಲ ನಾನು ಕಾಲೇಜಿಂದ ಮನೆಗೆ ಅಂತ ಸ್ಕೂಟಿಯಲ್ಲಿ ವಾಪಸ್ಸಾಗುತ್ತಿದ್ದಾಗ ನನ್ನ ಅಚಾತುರ್ಯದಿಂದ ಸಣ್ಣ ಅಪಘಾತವೊಂದು ಸಂಭವಿಸಿತು. ಆಕ್ಸಿಡೆಂಟ್ ಆದವನಿಗೆ ಚೂರು ಪೆಟ್ಟು ಮತ್ತು ಅವನ ಗಾಡಿಗೆ ಚೂರು ತಾಗಿತ್ತು. ಶುರು ಮಾಡಿದ ಬೈಲಿಕ್ಕೆ. ಅಯ್ಯೋ ಆ ಸಂಜೆಯ ತಂಪಲ್ಲೂ ಅವನ ಬೆದರಿಕೆ, ಕಿರುಚಾಟಕ್ಕೆ ನಾನು ಪೂರ್ತಿ ಬೆವತು ಹೋಗಿದ್ದೆ. ಸುತ್ತ ಸೇರಿದ್ದ ಜನಜಂಗುಳಿ ನಾನು ಯಾರದ್ದೋ ಕೊಲೆ ಮಾಡಿದಂತೆ ನನ್ನನ್ನೇ ವಿಚಿತ್ರವಾಗಿ ನೋಡುತ್ತಿತ್ತು. ಆ ಅಸಾಮಿ ಪೋಲಿಸ್ ಕಂಪ್ಲೈಂಟ್ ಮಾಡುತ್ತೇನೆ ಎಂದಾಗ ನಂಗೆ ಲೈಟಾಗಿ ತಲೆ ತಿರುಗಿದಂತೆ ಭಾಸವಾಯಿತು. ಯಾರನ್ನಾದರೂ ಸಹಾಯಕ್ಕೆ ಕರೆಯೋಣವೆಂದರೆ ನನ್ನ ಹಾಳಾದ ಮೊಬೈಲ್ ಬೇರೆ ಸ್ವಿಚ್ ಆಫ್ ಆಗಿತ್ತು. ಈ ತ್ರಿಶಂಕು ಸಮಯಕ್ಕೆ ದೇವರಂತೆ ಅಖಿಲ್ ಅಲ್ಲಿಗೆ ಬಂದ. ಪರಿಸ್ಥಿತಿಯನ್ನು ಅರಿತ ಆತ ಆ ವ್ಯಕ್ತಿಯನ್ನು ಸೈಡಿಗೆ ಕರೆದುಕೊಂಡು ಹೋಗಿ ಮಾತನಾಡಲು ಪ್ರಾರಂಭಿಸಿದ. ಸುಧೀರ್ಘ ಮಾತುಕತೆಯ ನಂತರ ಒಮ್ಮತದ ನಿರ್ಧಾರದೊಂದಿಗೆ ಇಬ್ಬರೂ ನನ್ನ ಬಳಿಗೆ ಬಂದು ‘ನೋಡಮ್ಮ ಈ ಹುಡುಗ ಎಲ್ಲಾ ಮಾತನಾಡಿದ್ದಾನೆ. ಮತ್ತೆ ಏನು ಮಾಡಬೇಕಂತ ಅವನಲ್ಲಿ ಹೇಳಿದ್ದೇನೆ. ಇನ್ನಾದರೂ ಸರಿಯಾಗಿ ಗಾಡಿ ಓಡಿಸಮ್ಮ’ ಅಂತ ಹೇಳಿ ಅವನು ಬಿದ್ದ ಗಾಡಿಯನ್ನು ಸ್ಟಾರ್ಟ್ ಮಾಡಿ ಅಲ್ಲಿಂದ ಹೊರಟು ಹೋದ. ಸೇರಿದ್ದ ಜನ ತನ್ನಿಂದ ತಾನೆ ಚದುರಿದಾಗ ಅಖಿಲ್ ನನ್ನು ನೋಡಿ ಮನಸ್ಸೊಳಗೆ ಅದುಮಿಟ್ಟ ಹೆದರಿಕೆಯನ್ನು ಅಳುವಿನ ಮೂಲಕ ಹೊರಹಾಕಿದೆ. ಅಖಿಲ್ ಏನು ಆಗಿಲ್ಲವೆಂದು ಧೈರ್ಯ ಹೇಳಿ ಸಮಾಧಾನ ಪಡಿಸಿ ನನ್ನ ಗಾಡಿಯಲ್ಲೇ ಮನೆತನಕ ಬಿಟ್ಟು ಮನೆಯವರಲ್ಲೂ ನಡೆದ ಸಂಗತಿಯನ್ನು ವಿವರಿಸಿ ಹಿಂತಿರುಗಿದ.
ಅಖಿಲ್ ನ ಈ ಸಮಯ ಪ್ರಜ್ಞೆ, ಸಹಾಯದ ಗುಣ ನನ್ನಲ್ಲಿ ಅವನ ಮೇಲೆ ಪ್ರೀತಿಯ ಸಣ್ಣ ಕಿಡಿ ಹೊತ್ತಿಸಿತು. ಮರುದಿನ ಕಾಲೇಜ್ ಗೆ ಹೋದವಳೇ ಮೊದಲು ಅವನನ್ನು ಭೇಟಿಮಾಡಿ ನನ್ನನ್ನು ಆಕ್ಸಿಡೆಂಟ್ ಇನ್ಸಿಡೆಂಟ್ ನಿಂದ ಬಚಾವ್ ಮಾಡಿದಕ್ಕೆ ಧನ್ಯವಾದ ಹೇಳಿದೆ. ಮುಂದೆ ನಂಬರ್ ಎಕ್ಸ್ ಚೆಂಜ್ ಆಗಿ ಚಾಟಿಂಗ್, ಮೀಟಿಂಗ್ ಅಂತ ಮುಂದುವರಿದು ಸ್ನೇಹ ಪ್ರೀತಿಗೆ ತಿರುಗಿದ್ದು ಗೊತ್ತೆ ಆಗಲಿಲ್ಲ. ನಮ್ಮ ಪ್ರೀತಿಯ ಜನಪ್ರಿಯತೆ ಇಡೀ ಕಾಲೇಜಿನ ಸ್ಟೂಡೆಂಟ್ಸ್ ನಿಂದ ಹಿಡಿದು, ಟೀಚರ್ಸ್ ಎಲ್ಲರಿಗೂ ಗೊತ್ತಾಗಿತ್ತು. ಸಮಯವೆಂಬುವುದು ಕಾಲಿಗೆ ಚಕ್ರ ಕಟ್ಟಿಕೊಂಡು ಓಡುತ್ತಿತ್ತು. ನಮ್ಮ ಪ್ರೀತಿಯ ಜನನವಾಗಿ ಆಗಲೇ ನಾಲ್ಕು ವರ್ಷವಾಗಿತ್ತು. ಮುಂದೆ ಈ ಪ್ರೀತಿ ಶಾಶ್ವತವಾಗಿ ಮದುವೆಯ ಬಂಧದೊಳಗೆ ಬೆಸೆಯುವ ನಿರ್ಧಾರ ಮೂಡಿತು. ಇಬ್ಬರಿಗೂ ತಾವೇನಿಸಿದ್ದ ಕೆಲಸ ಆಗಲೇ ಸಿಕ್ಕಿತ್ತು. ಮನೆಯವರಿಗೆ ಮೊದಲೇ ನಮ್ಮ ಪ್ರೀತಿ ವಿಷಯ ಗೊತ್ತಿದ್ದರಿಂದ ಹೆಚ್ಚು ಪರಿಶ್ರಮ ಬೇಕಾಗಿರಲಿಲ್ಲ.
ಆವತ್ತು ಎರಡು ಮನೆಯವರು ಮದುವೆಯ ದಿನಾಂಕ ಗೊತ್ತುಪಡಿಸಲು ಮತ್ತು ನಮ್ಮಿಬ್ಬರ ಜಾತಕ ತೊರಿಸಲೆಂದು ಊರಿನ ಪ್ರತಿಷ್ಠಿತ ಜ್ಯೋತಿಷಿಯ ಬಳಿ ತೆರಳಿದೆವು. ಜ್ಯೋತಿಷಿಗಳು ನಮ್ಮಿಬ್ಬರ ಜಾತಕವನ್ನು ನೋಡಿ ಕೈಯಲ್ಲಿ ಏನೋ ಲೆಕ್ಕಮಾಡಿ ಮತ್ತೊಮ್ಮೆ ನಮ್ಮ ಮುಖ ನೋಡಿ ವಿಷಾದದಿಂದ ತಲೆಯಾಡಿಸುತ್ತಾ ಜೋರಾಗಿ ನಿಟ್ಟುಸಿರು ಬಿಡುತ್ತಾ ‘ ನೋಡಿ… ಜಾತಕದಲ್ಲಿ ಮದುಮಗನಿಗೆ ಕಂಟಕ ಕಾಣುತ್ತಾ ಇದೆ. ಒಂದು ವೇಳೆ ಈ ಮದುವೆಯಾದರೆ ಒಂದು ತಿಂಗಳ ಒಳಗೆ ಹುಡುಗ ಮೃತಪಡುವ ಸಂಭವವಿದೆ. ಯಾವುದೇ ಪರಿಹಾರ ಇದಕ್ಕೆ ಇಲ್ಲ. ಆದರಿಂದ ಈ ಮದುವೆ ಮಾಡಿಸದೇ ಇರುವುದೇ ಒಳ್ಳೆಯದು. ಮತ್ತೆ ನಿಮ್ಮ ಇಷ್ಟ….’ ಎಂದು ಹೇಳಿದರು. ಒಂದು ಘಳಿಗೆ ನೀರವ ಮೌನ. ತಾನು ಕೇಳಿದ್ದು ತನಗೆ ನಂಬಲಿಕ್ಕೆ ಆಗದ ಅನುಭವ. ಎರಡು ಮನೆಯವರು ಏನು ಹೇಳದೆ ಅಲ್ಲಿಂದ ತಮ್ಮ ತಮ್ಮ ಮನೆಗೆ ಬಂದೆವು.
ಒಂದು ವಾರವಾದರೂ ಅವರ ಕಡೆಯಿಂದ ಯಾವ ಸಮಾಚಾರವಿರಲಿಲ್ಲ. ಅಖಿಲ್ ನದು ಯಾವ ಫೋನ್ ಇರಲಿಲ್ಲ. ನಮ್ಮ ಮನೆಯಲ್ಲಿ ಕೂಡ ಈ ಮದುವೆ ಬೇಡ ಎನ್ನುವಂತೆ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ನನಗೆ ಮನವರಿಕೆ ಮಾಡವ ಪ್ರಯತ್ನ ನಡೆಯುತ್ತಲೇ ಇತ್ತು. ಅದೊಂದು ದಿನ ನಾನೇ ದಿಟ್ಟ ನಿರ್ಧಾರ ಮಾಡಿ ಅಖಿಲ್ ಗೆ ಫೋನ್ ಮಾಡಿ ನಾವು ಯಾವಾಗಲು ಭೇಟಿಯಾಗುವ ಸ್ಥಳಕ್ಕೆ ಬರಲು ಹೇಳಿದೆ.
ಅಖಿಲ್ ಮೊದಲೇ ಬಂದು ನನಗಾಗಿ ಕಾಯುತ್ತಿದ್ದ. ಮೊದಲಾಗಿ ನಾನೇ ಮಾತು ಪ್ರಾರಂಭಿಸಿ ‘ ನೋಡು ಅಖಿಲ್… ಹೌದು ನಾವು ಈಗೀನ ಜನರೇಶನ್ ನವರು. ಈ ಜಾತಕ, ಭವಿಷ್ಯವೆಲ್ಲಾ ಸುಳ್ಳು ಅಂತ ಹೇಳಬಹುದು. ಆದರೂ ಈಗ ಆ ಭಯವೊಂದು ಮನಸ್ಸಿನಲ್ಲಿ ಕೂತಾಗಿದೆ. ಇನ್ನು ಗೊತ್ತಿದ್ದು ಗೊತ್ತಿದ್ದು ಭಂಡ ಧೈರ್ಯದಿಂದ ಮದುವೆಯಾಗಿ ಅದರಿಂದ ಮುಂದೆ ನಿನಗೇನಾದರೂ ಆದರೆ ಆ ಪಾಪಪ್ರಜ್ಞೆಯಲ್ಲಿ ನಾನು ಜೀವಂತ ಇರಲು ಸಾಧ್ಯವ…? ಮನೆಯವರ ಮನಸ್ಸಲ್ಲಿ ಇಷ್ಟು ಕಹಿ ಇಟ್ಟುಕೊಂಡು ನಾವು ಸುಖವಾಗಿರಲು ಸಾಧ್ಯವ…?. ನನಗೆ ಗೊತ್ತು ನಿನಗೆ ನನ್ನನ್ನು ಮರೆತು ಬೇರೆ ಮದುವೆ ಆಗುವುದು ಕಷ್ಟ ಅಂತ. ನನಗೂ ಹಾಗೆಯೇ.. ಆದ್ರೂ ನಿನಗಾಗಿ ಎಲ್ಲಕ್ಕಿಂತ ಹೆಚ್ಚಾಗಿ ನಮಗಾಗಿ, ನಮ್ಮ ಮನೆಯವರಿಗಾಗಿ ನೀನು ನನ್ನನ್ನು ಮರೆತು ಇನ್ನೊಂದು ಮದುವೆ ಆಗಲೇಬೇಕು. ನಮ್ಮ ಪ್ರೀತಿ ನಿಜವಾಗಲೂ ಪರಿಶುದ್ಧವಾಗಿದ್ದರೆ ನನ್ನ ಮಾತು ನಡೆಸಿ ಕೊಡ್ತೀಯ ಅಲ್ಲ… ‘ ಅಂತ ಅವನ ಕೈಯನ್ನು ನನ್ನ ತಲೆಯ ಮೇಲಿಟ್ಟು ಆಣೆ ಮಾಡಿಸಿದೆ. ನನ್ನ ಮಾತುಕೇಳಿ ಅಖಿಲ್ ಏನು ಮಾತನಾಡದೇ ಅಲ್ಲಿಯೇ ಕುಸಿದುಬಿದ್ದ. ಯಾಕೆ ಹೀಗೆ ಮಾಡಿದೆ ದಿವ್ಯ ಅಂತ ಒಂದೇ ಸಮನೆ ಅಳುತ್ತಾ ಗೊಗರೆದ. ಅವನಿಗೆ ಸಮಾಧಾನ ಮಾಡಲೆಂದು ಕುಳಿತಲ್ಲಿಯೇ ಕೊನೆಯದಾಗಿ ಅವನನ್ನು ಜೋರಾಗಿ ಅಪ್ಪಿ ಹಣೆಗೊಂದು ಮುತ್ತು ಕೊಟ್ಟು ಅಲ್ಲಿಂದ ಮತ್ತೆ ಹಿಂತಿರುಗಿ ಕೂಡ ನೋಡದೆ ಓಡೋಡಿ ಬಂದೆ. ದಿವ್ಯ ದಿವ್ಯ ಅಂತ ಅವನು ಕೂಗಿದರೂ ಕಿವುಡಿಯಂತೆ ಮನಸ್ಸು ಗಟ್ಟಿ ಮಾಡಿಕೊಂಡು ಅಲ್ಲಿಂದ ಬಂದೆ. ಮನೆಗೆ ಬಂದವಳೇ ರೂಮಿಗೆ ಬಾಗಿಲು ಹಾಕಿ ಮನಸ್ಸು ಹಗುರಾಗುವವರೆಗೂ ಅತ್ತೆ. ನಮ್ಮಿಬ್ಬರ ಪ್ರೀತಿಯ ಅದೆಷ್ಟೋ ಗ್ರೀಟಿಂಗ್ಸ್, ಗಿಫ್ಟ್ ಗಳನ್ನು ಎಲ್ಲಾ ಸುಟ್ಟಾಕಿದೆ. ಅವನ ನಂಬರ್ ಕೂಡ ಬ್ಲಾಕ್ ಮಾಡಿ ಹೊಸ ಸಿಮ್ ತೆಗೆದುಕೊಂಡೆ. ಈ ಪರಿಸ್ಥಿತಿಯಿಂದ ಹೊರಬರಲು ಊರಲ್ಲಿದ್ದ ಕೆಲಸ ಬಿಟ್ಟು ದೂರದ ಬೆಂಗಳೂರಿಗೆ ಹೋದೆ. ಅಲ್ಲಿ ಹೊಸ ಜನ, ಕೆಲಸದ ಒತ್ತಡದ ನಡುವೆ ಅಖಿಲ್ ನನ್ನು ಭಾಗಶಃ ಮರೆತುಬಿಟ್ಟೆ. ಇದೇ ಎರಡು ವರುಷದ ನಂತರ ೧೫ ದಿನದ ರಜೆಗಾಗಿ ಮನೆಗೆ ಬಂದಿದ್ದೆ.
‘ದಿವ್ಯ ದಿವ್ಯ ‘ ಎಂಬ ಅಮ್ಮನ ಕರೆಗೆ ನೆನಪುಗಳ ಲೋಕದಿಂದ ವಾಸ್ತವಕ್ಕೆ ಬಂದೆ. ‘ಕತ್ತಲೆ ತುಂಬಾ ಆಗಿದೆ ಒಳಗೆ ಬರುದಿಲ್ವ?’ ಎಂದು ಕರೆದಾಗ ‘ಹಾಂ… ಬಂದೆಯಮ್ಮ…’ ಅಂತ ಉತ್ತರಿಸಿದೆ. ನಕ್ಷತ್ರಗಳ ಜಾತ್ರೆಯಲ್ಲಿ ಚಂದ್ರ ರಾತ್ರಿಯ ರಥವೇರಿ ಪ್ರಕಾಶಿಸುತ್ತಿದ್ದ. ನನ್ನ ಬದುಕಲ್ಲಿ ವಿಧಿಯಾಡಿದ ಮೋಸಕ್ಕೆ ನಿರಪರಾಧಿಯಾದ ನಾನು ತಲೆಬಾಗಿಯಾಗಿತ್ತು. ಅಖಿಲ್ ಗಾಗಿ ಮನಸ್ಸು ಒಳ್ಳೆಯದನ್ನೇ ಹಾರೈಸುತ್ತಿದ್ದರೂ ಜೀವನ ಮುಂದೆ ಹೇಗೋ… ಎನ್ನುವ ಚಿಂತೆ ನನ್ನನ್ನು ಒಳಗೊಳಗೆ ಕೊಲ್ಲುತ್ತಿತ್ತು.