ಗೋಡೆಯ ಮೇಲಿನ ದೇವರ ಚಿತ್ರ
ನಗುತಿದೆ ಎಂದಿನ ಹಾಗೇ ಇಂದು
ನಕ್ಕರೂ ನಗುವದು ಅತ್ತರೂ ನಗುವದು
ಅರಿಯೆನು ಏತಕೆ ಹೀಗಿದೆ ನಿರ್ಭಾವ
ನೋಡಿದ ಕೂಡಲೆ ಒಳಗಿನ ಮನವಿದು
ಬೇಡುತ ಇರುವದು ನೂರೊಂದು
ಕೊಟ್ಟರು ಬಿಟ್ಟರೂ ಕಡಿಮೆ ಆಗದು
ಕೇಳುವ ವ್ಯಾಧಿಯು ಎಂದೆಂದೂ
ತೃಪ್ತಿಯ ಭಾವದಿ ಮರತೆ ಬಿಡುವದು
ಗೋಡೆಯ ಮೇಲೆ ಪಟವೊಂದಿದೆ ಎಂದು
ದುಃಖವು ಮೂಡಲು ಹೇಳದೆ ಕಣ್ಣಿದು
ಅತ್ತಲೇ ನೋಡಲು ಕಲಿತಿದೆ ಏಕೆಂದು
ಎಷ್ಟೊಂದಿವೆ ಹಾಗೆ ಉಳಿದಿಹ ಪ್ರಶ್ನೆಗಳು
ಉತ್ತರ ಸಿಗದೆ ಆಲದಮರದ ಬಿಳಲಂತೆ
ಅಪ್ಪನು ಅಮ್ಮನು ನಂಬಿದ ಗುರುಗಳು,
ಕೊಟ್ಟಿಹ ಉತ್ತರ ಸುಳ್ಳಿನ ಸುಳಿಯಂತೆ !
ನಂಬಿಕೆ ಕರಗದು ಹಾಗೆ ಉಳಿಯದು
ಕರಗುವ ಮೊದಲು ಏನೋ ನಡೆವುದು
ಯತ್ನವು ನಾನೋ ಕಾರಣ ನೀನೊ
ಹೇಳದೇ ಪಟದಲಿ ದೇವ ನಗುತಿಹನೋ