ಹುಟ್ಟೊಂದು ಸುಯೋಗ,
ಬಾಲ್ಯದ ಆಟ ಪಾಠಗಳು ಸುಯೋಗ,
ವಯಸ್ಕರಿಗೆ ಸಹಜ,ರೋಗದಭಿಯೋಗ,
ರೋಗದ ತಡೆಗೆ,ಯೋಗದುಪಯೋಗ.
ರೋಗ ನಿರೋಧಕ ಶಕ್ತಿಗೆ, ದೈಹಿಕ ಯೋಗ,
ಮನಸು ಬುದ್ಧಿ ಸ್ಥಿಮಿತಕೆ ಧ್ಯಾನದ ಯೋಗ,
ದೇಹ,ಆತ್ಮದ ಶುದ್ಧಿಗೆ ಆಧ್ಯಾತ್ಮದುಪಯೋಗ,
ಯೋಗ್ಯ ಗುರು ದೊರೆಯಲು, ಸುಯೋಗ.
ಯೋಗ್ಯ ವೃತ್ತಿ ಲಭಿಸಲು ಸುಯೋಗ,
ಯೋಗ್ಯ ಹೆಂಡತಿ ಮಕ್ಕಳು,ವಿಧಿಯೋಗ,
ಯೋಗ್ಯ ಸ್ನೇಹಿತರು, ಸತ್ಸಂಗದ ಯೋಗ,
ಭಗವಂತನ ಅನುಗ್ರಹ,ಯೋಗ ಸುಯೋಗ.
ಯೋಗ್ಯ ವಿಜ್ಞಾನಿ,ಸೈನಿಕ,ನೇಗಿಲಯೋಗಿ,
ದೇಶದ ಪ್ರಜೆಗಳ ಅಭಿಯೋಗ, ಸುಯೋಗ,
ಯೋಗ್ಯರು ದೇಶದ ಚುಕ್ಕಾಣಿ ಹಿಡಿದರೆ,
ದೇಶದ ಉನ್ನತಿ ಸಹಜ,ಪ್ರಜೆಗಳ ಸುಯೋಗ.
ಹುಟ್ಟು ಸಾವಿನ ಮಧ್ಯೆ,ಬದುಕೇ ಸುಯೋಗ,
ಶುಧ್ಧ ತನು ಮನ,ಆಧ್ಯಾತ್ಮದ ಸಂಯೋಗ,
ಪರಿಶುಧ್ಧ ಪ್ರಕ್ರತಿ,ಮನಸು,ಅಲೋಚನೆಗಳನು,
ಅನವರತ ಕರುಣಿಸೋ ಖಾದರ ಲಿಂಗ.
ಕವಿ ಪರಿಚಯ:
ಶ್ರೀ ಖಾದರ್ ಮುಲ್ಲಾ,ನಿವ್ರತ್ತ ಚೀಫ್ ಜನರಲ್ ಮ್ಯಾನೇಜರ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್,ಮುಂಬೈ. ಹೊಸಪೇಟೆಯ ವಿಜಯನಗರ ಜಿಲ್ಲೆಯವರು. ಮೂಲತಃ ಇವರು ಭೂ ವಿಜ್ಞಾನಿಗಳು, ಜೊತೆಗೆ ಕನ್ನಡ ಸಾಹಿತ್ಯ,ಕಲೆ ಸಂಸ್ಕೃತಿ ಮೈಗೂಡಿಸಿಕೊಂಡು ಅನೇಕ ಕವನ, ಲೇಖನಗಳನ್ನು ಬರೆದಿರುತ್ತಾರೆ.
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡವೇ ಉಸಿರು ಎಂದು ಕನ್ನಡ ನಾಡು,ನುಡಿ ಬಗ್ಗೆ ಪ್ರೀತಿ ಹಾಗೂ ಅಗಾಧ ಗೌರವ ಉಳ್ಳವರಾಗಿರುತ್ತಾರೆ. ಇವರ ಪ್ರತಿ ಕವನಗಳು,ಕವಿ ಕಾವ್ಯ ನಾಮಾಂಕಿತ ಖಾದರ ಲಿಂಗ ಎಂದು ಉಲ್ಲೇಖಿಸುತ್ತಾರೆ. ಇವರ ಪೂರ್ಣ ಹೆಸರು ಅಬ್ದುಲ್ ಖಾದರ್ ಮುಲ್ಲಾ. ಇವರು ಅಂದಿನ ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗಾದಲ್ಲಿ ಎಂ.ಎಸ್ಸಿ. ಎಂ.ಫಿಲ್ ., ಅರ್ಥ ಭೂ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು,ಅನೇಕ ಸಂಶೋಧನಾ ಲೇಖನಗಳನ್ನು ರಾಷ್ಟ್ರೀಯ,ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಕನ್ನಡ ಸಾಹಿತ್ಯದ ಒಲವು,ನಾಡಿನ ನಿತ್ಯೋತ್ಸವ ಕವಿ ಡಾಕ್ಟರ್ ನಿಸಾರ್ ಅಹಮದ್ ಅವರಿಂದ ಪ್ರಭಾವಿತರಾಗಿ,ನಾಡಿನ ಶ್ರೇಷ್ಠ ಕವಿಗಳಾದ, ಕುವೆಂಪು,ಬೇಂದ್ರೆ, ನರಸಿಂಹಸ್ವಾಮಿ,ಗುಂಡಪ್ಪ, ಚನ್ನವೀರ ಕಣವಿ ಹೀಗೆ ಅನೇಕ ಮಹನೀಯ ಪ್ರಾತಃ ಸ್ಮರಣೀಯರು ಇವರ ಕನ್ನಡ ಸಾಹಿತ್ಯಕ್ಕೆ ಪ್ರೇರಣೆಯಾಗಿದ್ದಾರೆ. ಇವರ ಪ್ರತಿ ಕವನದಲ್ಲಿ ಸಾಮಾಜಿಕ ಪ್ರಜ್ಞೆ,ಕಾಳಜಿ ಹಾಗೂ ಆಧ್ಯಾತ್ಮ, ಜಾತ್ಯತೀತೆ ರಾಷ್ಟ್ರ ಪ್ರೇಮ ಎದ್ದು ಕಾಣುತ್ತದೆ.