ಭವ್ಯ ಟಿ.ಎಸ್. ಹೊಸನಗರ ಅವರು ಬರೆದ ಕವಿತೆ ‘ಕರುಣೆಯಿಲ್ಲದ ಕಾಂಚಾಣ’

ಕರುಣೆಯಿಲ್ಲದ ಕಾಂಚಾಣ
ಲೋಕವನಾಡಿಸುವುದೀ ಕಾಂಚಾಣ
ನಗಿಸಿ ಅಳಿಸುವುದು ಜನರನ್ನ
ದುಡಿಸಿ ದಂಡಿಸುವುದಿದರ ಗುಣ
ಬಡವ ಬಲ್ಲಿದ ಭೇದವ ಬಿತ್ತುತ
ಬಂಧಗಳಲಿ ಬಿರುಕು ಮೂಡಿಸುತ
ಮೆರೆವುದು ತನ್ನಿಚ್ಚೆಯಂತೆ ಕಾಂಚಾಣ

ಕರುಣೆ ಪ್ರೀತಿಯ ಮರೆಮಾಚಿ
ಸ್ವಾರ್ಥದ ಹಸ್ತವ ತಾ ಚಾಚಿ
ಯಾಂತ್ರಿಕಗೊಳಿಸಿದೆ ಜನಜೀವನ
ಬರಸೆಳೆದು ಬಂಧಿಸಿದೆ ಕಾಂಚಾಣ
ಲೋಭದ‌ ಸುಳಿಯಿದು ಜೋಪಾನ

ಮಹಲುಗಳಲಿ ತಾ ಪವಡಿಸುತ
ಜೋಪಡಿಗಳ ಅಣಕಿಸಿ ನಗುತ
ಕುಹಕವಾಡುತಿದೆ ನೋಡಿ ಕಾಂಚಾಣ
ಹಸಿದ ಹೊಟ್ಟೆ,ಹರಕು ಬಟ್ಟೆ ಕಾಣದು
ವೈಭವದೂರಲಿ ತಾ ರಾರಾಜಿಸುವುದು

ಹಿತವಚನವು ರುಚಿಸದು ಇದಕೆ
ದರ್ಪದಿ ದೀನರ ತುಳಿಯುತಲಿಹುದು
ದಾಹದ ಕೆನ್ನಾಲಿಗೆ ಚಾಚಿದೆ ಕಾಂಚಾಣ
ಮಾನವೀಯತೆಗೆ ಕುರುಡಾಗಿಹುದು
ಭ್ರಷ್ಟತೆಯ ಬೇರಾಗಿ ಹರಡಿಹುದು

ಕೈಯಲ್ಲಿ ಮಿಂಚಿ ಮಾಯೆಯ ಹೊಂಚಿ
ಬೆವರಿನ ದನಿಯ ಬರಡಾಗಿಸುವುದು
ವಂಚಿಸಿ ಲಾಸ್ಯವಾಡುವುದೀ ಕಾಂಚಾಣ
ಕರುಣೆಯಿಲ್ಲದ ಕಾಂಚಾಣ…

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop