ಜಯಪ್ರಕಾಶ ಹಬ್ಬು ಶಿರಸಿ ಅವರು ಬರೆದ ಕವಿತೆ ‘ಕಲ್ಲು ಮಾತಾಡಿತು’

ಮಳೆಗಾಳಿ ಚಳಿಯೆನ್ನದೇ
ಹಾಸುಲ್ಲಾಗಿ ಪವಡಿಸಿದ್ದೆ ನಾನು
ಸಹ್ಯಾದ್ರಿಬೆಟ್ಟದಲಿ ಬೆಚ್ಚನೆಯ
ತಾಣದಲಿ ಹುದುಗಿಕೊಂಡಿದ್ದೆ ಸುತ್ತೆಲ್ಲ ಕಾನು
ಅನಾಮಿಕ ಶಿಲ್ಪಿಯೋರ್ವ ಬಂದನಲ್ಲಿ
ಮುಟ್ಟಿ ಮುಟ್ಟಿ ನೋಡಿದ ನನ್ನ ಮೇಲ್ಮೈಯನ್ನು
ಪ್ರಕೃತಿಯ ಪ್ರವೃತ್ತಿಗೆ ಅಂಜದೇ ಅಳುಕದೆ
ಆಕಾಶದತ್ತಲೇ ದಿಟ್ಟಿಸಿ ಧ್ಯಾನದಲ್ಲಿದ್ದೆ
ಶಿಲ್ಪಿಯ ಸ್ಪರ್ಶದಿಂದಲೋ ಏನೋ
ಮನದೊಳಗೆ ಅಂಜಿಕೆಯು ಸಣ್ಣ ಕಂಪನದ ತೆರದಿ
ಕೆದರಿದ ಕೂದಲಿನ ಹೊಳೆವ ಕಣ್ಣಿನ ಶಿಲ್ಪಿ
ಹಿಡಿದಿದ್ದ ಚಾಣವನು ಒರಟು ಕೈಯಲಿ
ಕುಶಲದಿಂದಲೆ ಕೆತ್ತುತಲಿ ನನ್ನ ಮೈಬದಲಿಸಿದ
ಅವನ ಹೊಡೆತ ನನ್ನ ಸಹನೆ ಒಂದು ಕವನ
ಸಿದ್ಧನಾದೆನು ಕಂಡು ಮಾನ ಸಮ್ಮಾನ
ಏಕಚಿತ್ತದ ಗುರಿ ಕಲೆಯ ಉತ್ತುಂಗದ ಗರಿ
ಭಕ್ತಿಯಲಿ ಅರಳಿತು ದಿವ್ಯಭಂಗಿಯ ಮೂರ್ತಿ
ನನ್ನೊಳಗಿದ್ದಿತೇ ಆ ದೇವ ಭವ್ಯತೇಜ ಧರ್ತಿ

ಸಾವಿರ ಸಾವಿರ ವರುಷದ ತಪದಲೂ
ಕಾಣದ ಅನನ್ಯ ರೂಪದ ಹೊನಲು
ಶಿಲ್ಪಿಯ ಮನಸ್ಸಿನಲಿ ದೇವನಿದ್ದನೋ?
ನನ್ನೊಳಡಗಿದ್ದವನನ್ನು ದೇವತೆಯಂತೆ ಕಂಡನೋ?
ಪಾದದಡಿಯಲಿ ಸೇವೆಯಲ್ಲಿದ್ದ ನಾನು
ಕರ ಕಮಲದಿಂದರಳಿದ ಸಂಜಾತನಾದೆನು
ಆಹಾ! ಎಂಥಾ ಅದ್ಭುತ ದೇವನಾಗಿಸಿಬಿಟ್ಟ ಶಿಲ್ಪಿ
ದಿವ್ಯ ದರುಶನದ ಪ್ರಭಾವಳಿ ಪ್ರಜ್ವಲಿಸಿದನಿಲ್ಲಿ
ಬೇಲೂರೋ ಹಳೆಬೀಡೋ ಬನವಾಸಿಯೋ
ಎಲ್ಲಿಟ್ಟರೊ, ನಾನು ಆಲಯದೊಳಗೆ ಸ್ಥಿತನಾದೆ
ಬಯಲಲ್ಲಿದ್ದೆ ನಿರ್ಜೀವ ಬಂಡೆಯಂತೆ
ಶ್ರೀರಾಮ ಬರುವವರೆಗೂ ಅಹಲ್ಯೆಯಂತೆ
ಅಮೃತ ಹಸ್ತವು ನನ್ನ ಚಿರಂಜೀವಗೋಳಿಸಿತೇ?
ನಟರಾಜನೋ ಗಣರಾಜನೋ ವೃಷಕಪಿಯೋ
ಅಪ್ರತಿಮ ದೇವತೆಯ ಕಲ್ಪಿಸಿತೇ?
ವಿರಾಗಿಗಳು ವಿರಾಜ್ಯಮಾನ್ಯರು ಸಾಮಾನ್ಯರು
ಸರ್ವಮಾನ್ಯನೆನ್ನಿಸಿದರು ನನ್ನ ವಿಶ್ವಕರ್ಮರು
ಇದು ಕಲೆಯ ಕೌಶಲವೋ! ವಿಸ್ಮಯವಲ್ಲವೋ!
ಕಲ್ಲಾಗಿ ಮಾತಾಡಿದೆ ನನ್ನ ಹೃದಯವರಳಿ
ಗೆಲುವಾಯಿತು ತನುವು ಹರಿದು ಭವಾವಳಿ

ಚಂದಾದಾರರಾಗಿ
ವಿಭಾಗ
2 ಪ್ರತಿಕ್ರಿಯೆಗಳು
Inline Feedbacks
View all comments
ಬಾಲಕೃಷ್ಣ ಕಾರಂತ
12 July 2023 09:30

ಉತ್ತಮ ಭಾವನಾತ್ಮಕ ಕವನ. ಲೇಖಕರಿಗೆ ಅಭಿನಂದನೆಗಳು.

ಚಿದಾನಂದ ಮಾಯಾಚಾರಿ
11 July 2023 19:31

Nice

0
    0
    Your Cart
    Your cart is emptyReturn to Shop