ಅಂದಿನ ಆ ಸಮಾರಂಭದಲ್ಲಿ ರಾಮರಾಯರನ್ನು ಗೌರವಿಸಿ ಸುಂದರ ಸ್ಮರಣಫಲಕ ಒಂದನ್ನು ನೀಡಿದ್ದರು. ಆ ಸ್ಮರಣಫಲಕದಲ್ಲಿ ಒಂದು ಪಕ್ಷಿಯ ಅದ್ಬುತ ಶಿಲ್ಪವಿತ್ತು, ರಾಮರಾಯರು ಅಳಿವಿನಂಚಿನಲ್ಲಿರುವ ಪಕ್ಷಿಗಳ ಸಂರಕ್ಷಣೆಯಲ್ಲಿ ವಿಶೇಷ ಸಾಧನೆ ಮಾಡಿದ್ದರು. ಆ ಕಾರಣವಾಗಿ ಪ್ರಖ್ಯಾತ ಸಂಘಟನೆಯೊಂದು ಅದ್ದೂರಿ ಸಮಾರಂಭ ಏರ್ಪಡಿಸಿ ಅವರನ್ನು ಗೌರವಿಸಿ ಸುಂದರ ಪಕ್ಷಿಶಿಲ್ಪ ಒಳಗೊಂಡಿದ್ದ ಸ್ಮರಣಿಕೆಯನ್ನು ನೀಡಿತ್ತು. ತಂದೆಗೆ ನೀಡಿದ ಆ ಪಕ್ಷಿಶಿಲ್ಪ ರಾಮರಾಯರ ಮಗ ರಾಜುವಿನ ಮನಸಿನೊಳಗೆ ಅಪಾರ ಕುತೂಹಲಕ್ಕೆ ಕಾರಣವಾಗಿತ್ತು. ರಾಮರಾಯರು ಆ ಸ್ಮರಣಫಲಕವನ್ನು ಮನೆಯ ಗಾಜಿನ ಕಪಾಟಿನಲ್ಲಿಟ್ಟಿದ್ದರು. ಸ್ಮರಣಿಕೆಯಲ್ಲಿರುವ ಪಕ್ಷಿಶಿಲ್ಪದ ಮೇಲೆ ರಾಜುವಿಗೆ ಏನೋ ಒಂದು ವಿಶೇಷ ಆಕರ್ಷಣೆ ಉಂಟಾಗಿತ್ತು.
ರಾಜು ಈದೀಗ ತಾನೇ ಒಂದನೇ ಕ್ಲಾಸಿಗೆ ದಾಖಲಾಗಿ ವಿದ್ಯಾರಂಭ ಮಾಡಿದ್ದ. ದಿನಾಲೂ ಸ್ಕೂಲಿಗೆ ಹೋಗುವ ಮೊದಲು ಹಾಗೂ ಸ್ಕೂಲಿನಿಂದ ಬಂದ ನಂತರ ರಾಜು ಆ ಪಕ್ಷಿಶಿಲ್ಪವನ್ನು ಕಣ್ತುಂಬಿಕೊಳ್ಳದೇ ಇರುತ್ತಿರಲಿಲ್ಲ. ಶುಭ್ರ ಬಿಳಿ ಸ್ಫಟಿಕದ ಆ ಪಕ್ಷಿಶಿಲ್ಪವನ್ನು ತನ್ನ ಪುಟ್ಟ ಕೈಗಳಲ್ಲಿ ತೆಗೆದುಕೊಂಡು ಅದರ ಜೊತೆ ಆಟವಾಡಬೇಕೆನ್ನುವ ಹಂಬಲವಿತ್ತು ಅವನಿಗೆ. ಆದರೆ ತನಗಿಂತ ಎರಡ್ಮೂರು ಅಡಿ ಎತ್ತರವಿರುವ ಗಾಜಿನ ಕಪಾಟಿನಲ್ಲಿದ್ದ ಪಕ್ಷಿಶಿಲ್ಪವನ್ನು ತನ್ನ ಕೈಯಾರೆ ತೆಗೆದುಕೊಳ್ಳಲು ಆತ ಅಸಮರ್ಥನಾಗಿದ್ದ.
“ಅದು ತುಂಬಾ ಸೂಕ್ಷ್ಮ ಹಾಗೂ ಬೆಲೆಯುಳ್ಳದ್ದು,ಅದನ್ನು ಆಟ ಆಡಲು ತೆಗೆದುಕೊಳ್ಳಬಾರದು” ಎಂಬ ಅಮ್ಮನ ಮೌಖಿಕ ನಿಷೇದಾಜ್ಞೆ ಬೇರೆ, ರಾಜುವಿನ ಆಸೆಗೆ ತಡೆಯೊಡ್ಡಿತ್ತು.
ಅದೊಂದು ದಿನ ಸ್ಕೂಲಿಗೆ ರಜೆ ಇತ್ತು.ರಾಜುವಿನ ಪಕ್ಕದ ಮನೆ ಒಡನಾಡಿ ರಮ್ಯ ಆಟವಾಡಲು ರಾಜುವಿನ ಮನೆಗೆ ಬಂದಳು.ರಾಜು ರಮ್ಯ ಇಬ್ಬರೂ ಒಟ್ಟಿಗೆ ಆಟವಾಡುತ್ತಿದ್ದರು. “ಗಲಾಟೆ ಮಾಡದೇ ಆಟ ಆಡಕೊಂಡಿರಿ, ನಾನೊಂದು ಫಂಕ್ಷನ್ ಗೆ ಹೋಗ್ತಿದ್ದೀನಿ,ಬೇಗ ಬರ್ತೀನಿ” ಎಂದು ಹೇಳಿ, ರಾಜುವಿನ ಅಮ್ಮ ಯಾವುದೋ ಮಹಿಳಾ ಸಂಘದ ಕಾರ್ಯಕ್ರಮಕ್ಕೆ ಹೊರಟು ಹೋದರು.ಯಾವುದೋ ಕೆಲಸದ ಮೇಲೆ ತಂದೆ ರಾಮರಾಯರು ಬೆಳಿಗ್ಗೆಯೇ ದೂರದ ಊರಿಗೆ ಹೋಗಿದ್ದರು.
ಯಾರೂ ಇಲ್ಲದ ಮನೆಯಲ್ಲಿ ಆಟವಾಡುತ್ತಿದ್ದ ರಾಜುವಿಗೆ,ಒಮ್ಮೆಲೇ ಪಕ್ಷಿಶಿಲ್ಪವನ್ನು ತೆಗೆದುಕೊಂಡು, ಅದರ ಜೊತೆ ಆಟವಾಡಿ ಆನಂದಿಸಬೇಕೆಂಬ ಬಹು ದಿನದ ಆಸೆ ಜಾಗೃತವಾಯಿತು. ಆ ಪಕ್ಷಿಶಿಲ್ಪದ ಬಗ್ಗೆ ಮತ್ತು ತನ್ನ ಬಹುದಿನದ ಆಸೆಯ ಬಗ್ಗೆ ರಾಜು ರಮ್ಯಳಿಗೆ ಹೇಳಿದ.ಪಕ್ಷಿಶಿಲ್ಪವನ್ನು ಗಾಜಿನ ಕಪಾಟಿನಿಂದ ತೆಗೆದುಕೊಳ್ಳಲು ರಮ್ಯಳ ಸಹಾಯ ಬೇಡಿದ.
ಮನೆಯ ಮೂಲೆಯೊಂದರಲ್ಲಿದ್ದ ಕಟ್ಟಿಗೆಯ ಟೇಬಲನ್ನು ನಿಧಾನವಾಗಿ ಗಾಜಿನ ಕಪಾಟಿನೆಡೆಗೆ ರಮ್ಯ ಮತ್ತು ರಾಜು ಇಬ್ಬರೂ ಸೇರಿ ಎಳೆತಂದರು.ಗಾಜಿನ ಕಪಾಟಿನ ಕೆಳಗಿನ ಗೋಡೆಗೆ ತಾಗಿಸಿ ಟೇಬಲನ್ನು ಇಟ್ಟರು. ಟೇಬಲ್ಲಿನ ಮುಂಬಾಗದಲ್ಲಿ ಟೇಬಲ್ಲಿಗೆ ಅಂಟಿಕೊಂಡಂತೆ ಪ್ಲಾಸ್ಟಿಕ್ ಕುರ್ಚಿಯೊಂದನ್ನು ನಿಲ್ಲಿಸಿದರು.ಈಗ ರಾಜು ನಿಧಾನವಾಗಿ ಕುರ್ಚಿ ಮೇಲೆ ಹತ್ತಿ, ಕುರ್ಚಿ ಮೇಲಿನಿಂದ ಟೇಬಲ್ ಮೇಲೆ ಹತ್ತಿ ನಿಲ್ಲಲು ರಮ್ಯಾ ಸಹಾಯ ಮಾಡಿದಳು.
ರಾಜು ಈಗ ಗಾಜಿನ ಕಪಾಟಿನ ಮುಂದೆ ನಿಂತಿದ್ದ.ಕಪಾಟಿನೊಳಗಿನ ಪಕ್ಷಿಶಿಲ್ಪ ಈಗ ಆತನ ಕಣ್ಣಮುಂದೆಯೇ ಇದೆ.” ಬಾ ನನ್ನನ್ನು ಎತ್ತಿಕೋ,ನಿನ್ನ ಕೈಗಳಲ್ಲಿ ಹಿಡಿದುಕೋ”ಎಂದು ರಾಜುವಿಗೆ ಅದು ಸಂಜ್ಞೆ ಮಾಡಿದಂತೆನಿಸಿತು. ರಾಜುವಿಗೆ ಅಪಾರ ಆನಂದವಾಗಿತ್ತು.ತನ್ನ ಬಹು ದಿನದ ಆಸೆ ಈಡೇರಿತೆಂಬ ಖುಷಿಯಿಂದ,ಆತನ ಸಂತೋಷ ಇಮ್ಮಡಿಯಾಯಿತು.
ರಾಜು ನಿಧಾನವಾಗಿ ಆ ಗಾಜಿನ ಕಪಾಟಿನ ಬಾಗಿಲನು ಪಕ್ಕಕ್ಕೆ ಸರಿಸಿದನು. ಸಂತಸದಿಂದ ಆ ಪಕ್ಷಿಶಿಲ್ಪದ ಫಲಕವನ್ನು ಕೈಯಲ್ಲಿ ತೆಗೆದುಕೊಂಡನು.ಹಲವು ದಿನಗಳಿಂದ ಹಂಬಲಿಸಿದ ತನ್ನ ಮನದ ಆಸೆಯನ್ನು ಆ ಪಕ್ಷಿಶಿಲ್ಪವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ತೀರಿಸಿಕೊಂಡನು.ಬಹು ದಿನದ ಕನಸೊಂದು ನನಸಾದಷ್ಟು ಖುಷಿಯನ್ನು ರಾಜು ಆ ಕ್ಷಣ ಅನುಭವಿಸಿದನು.ರಮ್ಯ ಕೂಡಾ ಪುಳಕಗೊಂಡು ರಾಜುವಿನ ಸಂತಸದ ಕ್ಷಣದಲ್ಲಿ ಭಾಗಿಯಾದಳು.
ನಿಧಾನವಾಗಿ ಟೇಬಲ್ಲಿನಿಂದ ಕೆಳಗಿಳಿದ ರಾಜು,ಆ ಪಕ್ಷಿಶಿಲ್ಪವನ್ನು ಬೆರಗುಗಣ್ಣಿನಿಂದ ನೋಡುತ್ತಾ ಅದರ ಸೌಂದರ್ಯಕ್ಕೆ ಮಾರುಹೋಗಿ ಅರೆಕ್ಷಣ ಸ್ತಂಭೀಭೂತನಾಗಿ ನಿಂತುಬಿಟ್ಟನು. ಆ ಫಲಕದಲ್ಲಿನ ಪುಟ್ಟಪಕ್ಷಿಯ ಚಿಕ್ಕ ಕಣ್ಣು,ಚೂಪಾದ ಚಿಕ್ಕ ಕೊಕ್ಕು,ನಯವಾದ ರೆಕ್ಕೆಗಳು,ಸಪೂರವಾದ ಅದರ ಮೈಮಾಟ ಕಂಡು ರಾಜು ಬೆರಗಾದನು.ಆ ಪಕ್ಷಿ ಯಾವುದೆಂದು ಅವನಿಗೆ ತಿಳಿಯದು,ಆದರೆ ಅದರ ಶಿಲ್ಪ ಸೌಂದರ್ಯಕ್ಕೆ ಆತ ಮಾರುಹೋಗಿದ್ದನು.
ರಮ್ಯಳು ಕೂಡಾ ಆ ಶಿಲ್ಪವನ್ನು ಮುಟ್ಟಿ ಅದರ ಸೌಂದರ್ಯವನ್ನು ನೋಡಿ ಆನಂದಿಸಿದಳು. ನಂತರ ರಾಜು ರಮ್ಯಳ ಜೊತೆಗೂಡಿ ಆ ಪಕ್ಷಿಶಿಲ್ಪವನ್ನು ತನ್ನ ಪುಟ್ಟ ಕೈಗಳಲ್ಲಿ ಹಿಡಿದುಕೊಂಡು,ಮನೆಯ ಮೇಲ್ಮಹಡಿಯ ವಿಶ್ರಾಂತಿಗೃಹಕ್ಕೆ ಬಂದನು. ವಿಶ್ರಾಂತಿಗೃಹದ ನುಣುಪು ಕಲ್ಲಿನ ನೆಲದ ಮೇಲೆ ರಾಜು ಪಕ್ಷಿಶಿಲ್ಪವನ್ನಿಟ್ಟನು. ತದೇಕಚಿತ್ತದಿಂದ ಶಿಲ್ಪದೊಳಗಿನ ಪಕ್ಷಿಯನ್ನು ನೋಡುತ್ತಿದ್ದಂತೆ,
“ಇಷ್ಟೊಂದು ಸುಂದರ ಪಕ್ಷಿ ಈಗ ಇರುವುದೆ? ಇದ್ದರೆ ಎಲ್ಲಿರುವುದು? ಇದರ ಹೆಸರೇನು?” ಎಂಬ ಹಲವು ಪ್ರಶ್ನೆಗಳು ರಾಜುವಿನ ಮನದಲ್ಲಿ ಸುಳಿದವು.ರಮ್ಯಳನ್ನು ಕೇಳಿದ,ಅವಳಿಗೂ ಇದರ ಕುರಿತು ಏನೂ ತಿಳಿಯದು.ರಾಜುವಿನ ತಂದೆ ತಾಯಿ ಪಕ್ಷಿಶಿಲ್ಪದ ಸೌಂದರ್ಯ ವರ್ಣಿಸಿದ್ದರೇ ವಿನಹ ಅದರೊಳಗಿನ ಪಕ್ಷಿ ಯಾವುದೆಂದು ಮಾತ್ರ ಹೇಳಿರಲಿಲ್ಲ.
ನೆಲದ ಮೇಲಿಟ್ಟ ಪಕ್ಷಿಶಿಲ್ಪ ನೋಡುತ್ತ ರಾಜು ವಿಚಾರಮಗ್ನನಾಗಿರಲು,ಒಂದು ಅದ್ಭುತ ಘಟನೆಗೆ ನಾಂದಿಯಾಯಿತು. ಒಮ್ಮಿಂದೊಮ್ಮೆಲೆ ಪಕ್ಷಿಶಿಲ್ಪದೊಳಗಿನ ಆ ಪಕ್ಷಿ,ತನ್ನ ಕಣ್ಣು ಮಿಟುಕಿಸಿತು,ಕತ್ತನ್ನು ಆಚೀಚೆ ಹೊರಳಿಸಿತು.ರಾಜು ಮತ್ತು ರಮ್ಯಳಿಗೆ ದಿಗ್ಭ್ರಮೆಯ ಜೊತೆಗೆ ತುಂಬಾ ಭಯವಾಯಿತು. ಇದು ನಿಜವೋ ಸುಳ್ಳೋ ಎಂದು ಅರಿಯುವಷ್ಟರಲ್ಲಿಯೇ,ಆ ಪಕ್ಷಿ ತನ್ನ ರೆಕ್ಕೆ ಬಡಿಯುತ್ತಾ ಮೇಲೆ ಹಾರಿ ರಾಜುವಿನ ಹೆಗಲ ಮೇಲೆ ಬಂದು ಕುಳಿತಿತು.ರಾಜುವಿಗೆ ಭಯವಾಗಿ ಚಿಟ್ಟನೇ ಚೀರಿದನು.
“ಹೆದರಬೇಡ ಗೆಳೆಯಾ,ನಾನು ನಿನ್ನ ಸ್ನೇಹಿತ”,ಎಂದು ಆ ಪಕ್ಷಿ ಮನುಷ್ಯರಂತೆ! ಮಾತನಾಡಿತು.ಈಗ ರಾಜು ಮತ್ತು ರಮ್ಯಳಿಗೆ ಭಯ ಮಾಯವಾಗಿ ಆನಂದವಾಯಿತು. ಯಾವುದರ ಜೊತೆ ಅವರು ಆಟವಾಡಬೇಕೆಂದಿದ್ದರೋ, ಅದರ ನಿಜರೂಪವೇ ಈಗ ಅವರ ಕಣ್ಣಮುಂದಿತ್ತು.
ರಾಜು ನಿಧಾನವಾಗಿ ಆ ಪಕ್ಷಿಯನ್ನು ತನ್ನ ಪುಟ್ಟ ಕೈಗಳಲ್ಲಿ ಹಿಡಿಯಲು ಅಪೇಕ್ಷಿಸುತ್ತಿದ್ದಂತೆ,ಆ ಪಕ್ಷಿ ಸಂತಸದಿಂದ ಹಾರಿ,ರಾಜುವಿನ ಅಂಗೈ ಮೇಲೆ ಬಂದು ಕುಳಿತಿತು.ರಾಜು ಪಕ್ಷಿಯ ಮೈದಡವಿದ,ಅದ್ಭುತ ಸ್ಪರ್ಶಸುಖ ದೊರಕಿತವನಿಗೆ.ಮೆತ್ತನೆ ಹತ್ತಿಯಂತಹ ಅದರ ಮೈ ಸ್ಪರ್ಶ ರಾಜುವಿಗೆ ರೋಮಾಂಚನವನ್ನುಂಟು ಮಾಡಿತು.ರಮ್ಯಳು ಕೂಡಾ ಆ ಪಕ್ಷಿಯ ಮೈಸ್ಪರ್ಶದ ಖುಷಿ ಅನುಭವಿಸಿದಳು.
ಆಗ ಪಕ್ಷಿ ಮತ್ತೆ ಮಾತನಾಡಿತು,”ಏನು ಗೆಳೆಯರೇ,ನನ್ನ ಜೊತೆ ಆಟ ಆಡುವ ಹಂಬಲವೇ? ಬನ್ನಿ ಆಟ ಆಡೋಣ”ಎಂದಿತು.ರಾಜು ಮತ್ತು ರಮ್ಯಳಿಗೆ ತುಂಬಾ ಸಂತಸವಾಯಿತು.ಪಕ್ಷಿಯನ್ನು ಕೈಯಲ್ಲಿಡಿದು ಮನಸಾರೆ ಮುದ್ದಿಸಿದರು.ಪಕ್ಷಿಯೂ ಕೂಡ ತನ್ನ ಪುಟ್ಟ ಕೊಕ್ಕಿನಿಂದ ಆ ಚಿಣ್ಣರಿಗೆ ಕಚಗುಳಿಯಿಟ್ಟಿತು. ಆಗ ರಾಜುವಿಗೆ ತನ್ನ ಮನದ ಸಂದೇಹಗಳು ಜಾಗೃತವಾದವು.”ಗೆಳೆಯನೇ ನೀನು ಯಾರು? ನಿನ್ನ ಹೆಸರೇನು?ಶಿಲ್ಪವಾಗಿದ್ದ ನೀನು ಅದ್ಹೇಗೆ ಜೀವ ತಳೆದೆ?” ಎಂದನು.
“ನನ್ನ ಬಗೆಗೆ ಆಮೇಲೆ ಹೇಳುವೆ ಗೆಳೆಯಾ,ನನ್ನೊಡನೆ ಆಟವಾಡಬೇಕೆಂಬ ನಿನ್ನ ಪ್ರೀತಿ,ಹಂಬಲದ ಹಸಿವು ನೀಗಲು,ಆ ದೇವರು ನನಗೆ ಜೀವ ತುಂಬಿ, ವಿಶೇಷ ಮಾಂತ್ರಿಕ ಶಕ್ತಿ ನೀಡಿ,ನನ್ನನ್ನು ನಿನ್ನ ಹತ್ತಿರ ಕಳಿಸಿದ್ದಾನೆ. ‘ದೇವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ’ ಗೆಳೆಯಾ”.ಎಂದು ಪಕ್ಷಿ ಮಾತನಾಡಿತು.
ರಾಜು ಮತ್ತು ರಮ್ಯಳಿಗೆ ಹೇಳಲಾಗದಷ್ಟು ಆನಂದವಾಯಿತು.ಈಗ ಅವರ ಮದ್ಯೆ ಕುತೂಹಲ ಮತ್ತು ಆನಂದಗಳಿಗೆ ಪಾರವೇ ಇಲ್ಲದಂತಾಯಿತು. ಆಗ ಪಕ್ಷಿಯು ಮೊದಲು ರಾಜು,ರಮ್ಯಳ ಪರಿಚಯ ಮಾಡಿಕೊಂಡಿತು. ನಂತರ ತನ್ನ ಪರಿಚಯ ಆರಂಭಿಸಿತು.
“ನನ್ನ ಹೆಸರು ‘ಗುಬ್ಬಿ’ ಅಂತಾ. ಗುಬ್ಬಚ್ಚಿ,ಗುಬ್ಬಕ್ಕ ಅಂತಾನೂ ಕರಿತಾರೆ.ನಾನು ಚಿಂವ್ ಚಿಂವ್ ಅಂತ ಕೂಗೋದ್ರಿಂದ ನನ್ನ ಚಿಂವ್ ಚಿಂವ್ ಗುಬ್ಬೀ ಅಂತಾರೆ”. ತಮ್ಮ ಶಾಲೆಯಲ್ಲಿ ಹಾಡಿಸುವ ಹಾಡಿನಲ್ಲಿರುವ ಗುಬ್ಬಕ್ಕ ಇದೆಂದು ತಿಳಿದ ರಾಜು ಮತ್ತು ರಮ್ಯ ಹರುಷದಿಂದ ಕುಣಿದಾಡಿಬಿಟ್ಟರು.ಗುಬ್ಬಚ್ಚಿ ಕೂಡಾ ಚಿಂವ್ ಚಿಂವ್ ಅಂತ ಕೂಗಿ ಅವರ ಖುಷಿಗೆ ಸಾಥ್ ನೀಡಿತು. ಆಗ ರಾಜು,”ಹೌದಾ ಗುಬ್ಬಕ್ಕ, ಮತ್ತೆ ನೀನು ಎಲ್ಲೂ ಕಾಣೋದೆ ಇಲ್ವಲ್ಲಾ? ಕಾಗೆ,ಕೋಳಿ, ನವಿಲು ಎಲ್ಲಾ ನಾವ್ ನೋಡಿದ್ದೀವಿ.ನೀ ಮಾತ್ರ ಕಾಣೋದೆ ಇಲ್ವಲ್ಲಾ? ಎಲ್ಲಿದ್ದೀ ನೀನು, ಹೀಗೇಕೆ ಶಿಲ್ಪವಾಗಿ ಕುಳಿತಿದ್ದೀ? ಏನು ನಿನ್ನ ಕಥೆ?” ಎಂದು ಕೇಳಿದನು.
“ಅಯ್ಯೋ, ಗೆಳೆಯ ರಾಜು ನಂದೊಂದ ದೊಡ್ಡಕಥೆ. ನಾನು ಮುಂಚೆ ನಿಮ್ಮತರಾನೇ ಜೀವಂತ ಇದ್ದೆ.ನಿಮ್ಮಜ್ಜನ ಮನೆಯಂಗಳದ ಚಪ್ಪರದ ಮೇಲೆ ಗೂಡು ಕಟ್ಟಿ ನಾನು,ನಮ್ಮಪ್ಪ, ಅಮ್ಮ ವಾಸ ಮಾಡ್ತಿದ್ವಿ.ಸುತ್ತಮುತ್ತಲಿನ ಹೊಲ,ತೋಟ,ಗದ್ದೆಗಳಲ್ಲಿ ಕಾಳು ಕಡಿ ತಿಂದ್ಕೊಂಡು, ಕೆರೆ ಹಳ್ಳದ ನೀರು ಕುಡ್ಕೊಂಡು ಆರಾಮಾಗಿದ್ವಿ. ನಿಮ್ಮಜ್ಜ ತೀರಿ ಹೋದ ಮೇಲೆ, ನಿಮ್ಮಪ್ಪ ನಾವು ಗೂಡು ಕಟ್ಟಿದ್ದ ಹಳೇ ಮನೆ ಕೆಡವಿದರು.ಹೊಸ ಸಿಮೆಂಟಿನ ಮನೆ ಕಟ್ಟಿದರು. ಆಗ ನಮಗೆ ಸಿಮೆಂಟ ಗೋಡೆ ಮೇಲೆ ಗೂಡು ಕಟ್ಟೋಕೆ ಜಾಗ ಸಿಗಲಿಲ್ಲ.ಊರಲ್ಲಿರೋ ಮರಗಳ ಮೇಲೆ ಗೂಡು ಕಟ್ಕೊಂಡು ಆರಾಮಾಗಿ ಬದುಕ್ತಿದ್ವಿ.
ನಾವು ಎಷ್ಟೊಂದು ಚೆನ್ನಾಗಿದ್ವಿ ಅಂತಿರಾ..,ನಮ್ಮ ಬಂಧು ಬಳಗ ಎಲ್ಲಾ ಒಟ್ಟಿಗೆ ತಂತಿ ಮೇಲೆ,ಕಂಬದ ಮೇಲೆ,ಮರದ ಮೇಲೆ ಸಾಲಾಗಿ ಕುಳಿತು ಮಜಾ ಮಾಡ್ತಿದ್ವಿ. ನಮ್ಮ ಬಳಗ ಎಲ್ಲಾ ಒಟ್ಟಿಗೇ ರೆಕ್ಕೆ ಬಿಚ್ಚಿ ಹಾರೋದಂತೂ ನೋಡೋಕೆ ಕಣ್ಣಿಗೆ ಹಬ್ಬ.ನಿಮ್ಮಪ್ಪ ಅಮ್ಮನ ವಯಸ್ಸಿನವರು ತಾವು ಚಿಕ್ಕವರಿದ್ದಾಗ ನಮ್ಮನ್ನೆಲ್ಲಾ ತುಂಬಾ ಗೋಳು ಹೋಯ್ಕಂಡ್ರು. ನಮಗೆ ಕಲ್ಲೆಸೆದ್ರು, ಕಟ್ಟಿಗೆಯಿಂದ ಹೊಡೆದು ನಮ್ಮ ಗೂಡು ಹಾಳು ಮಾಡಿದ್ರು. ಮೋಜಿಗಾಗಿ ನಮ್ಮ ಮೊಟ್ಟೆ ಒಡೆದು ಹಾಕಿದ್ರು.ನಾವು ಮಾತ್ರ ಯಾರಿಗೂ ತೊಂದರೆ ಕೊಡದೇ ಎಲ್ಲಾ ಸಹಿಸ್ಕೊಂಡು ಇರ್ತಿದ್ವಿ.
ನಮ್ಮ ಸಂಸಾರ ಎಷ್ಟು ಚಂದ ಅಂತ ನಿಮಗ ಗೊತ್ತಾ? ಗಂಡ.ಹೆಂಡತಿ.ಮಕ್ಕಳು ಒಗ್ಗೂಡಿ ಸಂಸಾರ ಮಾಡೋದ್ರಲ್ಲಿ ನಾವು ಮನುಷ್ಯರಿಗೇ ಮಾದರಿಯಾಗಿದ್ವಿ.ನಮ್ಮ ಸಂಸಾರದ ಬಗ್ಗೆ ಹಲವಾರು ಕಥೆಗಳೇ ಇವೆ.ನಿಮ್ಮ ಶಾಲೆಯಲ್ಲಿ ಕೇಳಿ ತಿಳ್ಕೊಳ್ಳಿ. ಹೀಗಿರುವಾಗ ನಿಮ್ಮಪ್ಪನ ಕಾಲದ ಜನರೆಲ್ಲಾ ಆಧುನಿಕತೆ ಅನ್ನೋ ಹೊಸ(ವಿಷ) ಬದುಕಿಗೆ ಮಾರುಹೋಗಿ,ಅಭಿವೃದ್ದಿ ಅನ್ನೋ ನೆಪದಲ್ಲಿ ನಾವು ಗೂಡು ಕಟ್ಟಿ ವಾಸ ಮಾಡೋ ಮರಗಳನ್ನೆಲ್ಲಾ ಕಡಿದುಬಿಟ್ರು. ನಮ್ಮನ್ನು ಅತಂತ್ರರನ್ನಾಗಿಸಿಬಿಟ್ರು.
ಆಗ್ಲೂ ನಾವು ಎದೆಗುಂದಲಿಲ್ಲ.
ಎಲ್ಲೋ ಎತ್ತರದ ಕಟ್ಟಡದ ಮೇಲೋ,ದೂರದ ಅಡವೀಲೋ ಗೂಡು ಕಟ್ಕೊಂಡು ತೆಪ್ಪಗೆ ಜೀವನ ಮಾಡ್ತಿದ್ವಿ. ಆಗ ಬಂತು ನೋಡು,ನಮ್ಮ ಬದುಕನ್ನೇ ನಾಶ ಮಾಡೋ ಮಾರಿ ಹಾಗೆ ಒಂದು ಹೊಸ ಶತ್ರು. ಯಾರು? ಅನ್ಕೊಂಡ್ರಾ.ಅದೇ ನೀವೆಲ್ಲಾ ಈಗ ಬಳಸ್ತಿರೋ ಮೋಬೈಲ್ ಎನ್ನೋ ಮಹಾಶತ್ರು.ಅದರ ಪ್ರಭಾವದಿಂದ ನಮ್ಮ ಸಂತತಿ ಎಲ್ಲಾ ನಾಶವಾಗಿ ಹೋಯ್ತು.ನಮ್ಮ ಬಳಗದ ಪ್ರಪಂಚವೇ ಮುಳುಗಿಹೋಯ್ತು. ಈಗ ನೋಡಿ ನಮ್ಮನ್ನು ಶಿಲ್ಪದಲ್ಲಿ,ಚಿತ್ರದಲ್ಲಿ ಕಾಣ್ತಿದ್ದಾರೆ. ಏನೋ ನಿಮ್ಮಪ್ಪನಂತೋರು ಕೆಲವಷ್ಟು ಜನ ನಮ್ಮ ಸಂತತಿ ಉಳಿಸುವ ಬಗ್ಗೆ ಒಂದೆರಡು ಒಳ್ಳೆಯ ಕೆಲಸ ಮಾಡಿದ್ರು. ಅದೂ ನಿಜವಾಗ್ಲೂ ನಮ್ಮನ್ನು ಉಳಿಸೋದಕ್ಕಲ್ಲಾ.ತಮ್ಮ ಹೆಸರು ಗಳಿಸೋದಕ್ಕೆ ಗೊತ್ತಾ ನಿಮ್ಗೆ?
ನಿಮ್ಮಪ್ಪನ ಕಾಲದ ಜನರೆಲ್ಲಾ ಬಹಳ ದುಷ್ಟರು, ದುರಾಚಾರಿಗಳು, ಕಪಟರು, ಸ್ವಾರ್ಥಿಗಳು. ಪ್ರಾಣಿ, ಪಕ್ಷಿ, ಪರಿಸರದ ಉಳಿವಿನ ಬಗ್ಗೆ ಅರಿವಿಲ್ಲದ ಅವಿವೇಕಿಗಳು.ಆಧುನಿಕತೆಯ ದಾಸರು. ಆದರೆ ನೀವು ಮಾತ್ರ ಅವರಂತೆ ಆಧುನಿಕ ಬದುಕಿಗೆ ಮಾರುಹೋಗಬೇಡಿ.ಅಂದು ನಾವು ನಾಶವಾದ್ವಿ.ಇಂದು ಬೇರೊಬ್ಬರು. ಮುಂದೆ ನೀವೂ ನಾಶವಾಗಬಾರದು ಅಂತ ನನ್ನ ಕಳಕಳಿ. ನಿಮ್ಮ ಜೊತೆ ಆಟ ಆಡೋಕೆ ನನಗೆ ತುಂಬಾ ಇಷ್ಟ.ನಿಮ್ಮಂತ ಗೆಳೆಯರು ಸಿಕ್ಕಿದ್ದು ನನ್ನ ಅದೃಷ್ಟ. ನಿಮಗೆ ಬೇಕೆನಿಸಿದಾಗ ನನ್ನನ್ನು ಕರೆಯಿರಿ.ಕಣ್ಣು ಮುಚ್ಚಿ, ‘ಗುಬ್ಬಚ್ಚಿ ಗುಬ್ಬಚ್ಚಿ ಬಾ’ ಅಂದ್ರೆ ಸಾಕು ನಾನು ಬಂದುಬಿಡ್ತೀನಿ.ನಿಮ್ಮ ಜೊತೆ ಆಟ ಆಡ್ತಿನಿ. ಹಾಂ, ನನಗೆ ದೇವರು ಮಾಂತ್ರಿಕ ಶಕ್ತಿ ಕೊಟ್ಟಿದ್ದಾನೆ.ನಿಮಗೆ ಏನೇ ಕಷ್ಟ ಬಂದರೂ ನನ್ನನ್ನು ಕೂಗಿ.” ಅಂತಾ ಹೇಳಿ ರಾಜು,ರಮ್ಯಳ ಕೆನ್ನೆಗೊಂದೊಂದು ಮುತ್ತು ಕೊಟ್ಟು ಗುಬ್ಬಿ ಮತ್ತೆ ಶಿಲ್ಪವಾಗಿ ಫಲಕದ ಮೇಲೆ ಕುಳಿತಿತು.
ತೂಗುವ ತೊಟ್ಟಿಲು ನಿಂತಂತೆ ಭಾಸವಾಯಿತು ಆ ಎಳೆ ಮನಸುಗಳಿಗೆ.ಅಷ್ಟೊತ್ತಿನವರೆಗೂ ತಮ್ಮ ಜೊತೆ ಆಟ ಆಡಿ,ಚೇಷ್ಟೆ ಮಾಡಿ, ತನ್ನ ಜೀವನದ ಬಗೆಗೆ ಹೇಳಿಕೊಂಡ ಗುಬ್ಬಚ್ಚಿ ಮೇಲೆ ರಾಜು ಮತ್ತು ರಮ್ಯಳಿಗೆ ಕನಿಕರ ಬಂತು.ಬೇರೊಬ್ಬರ ಜೀವಕ್ಕೆ,ಬದುಕಿಗೆ, ಮಾರಕ ಆಗೋ ಆಧುನಿಕತೆ ನಮಗೆ ಬೇಕಾ? ಅನಿಸ್ತು ಆ ಪುಟ್ಟ ಜೀವಗಳಿಗೆ.
ಸಮಯ ಸರಿಯುತ್ತಿದ್ದುದು ಅರಿವಿಗೆ ಬರುತ್ತಲೇ ರಾಜುವಿಗೆ ಅಮ್ಮನ ನೆನಪಾಯ್ತು.ಇನ್ನೇನು ಅಮ್ಮ ಬರುವ ಸಮಯವಾಯಿತೆಂದುಕೊಂಡು ಲಗುಬಗೆಯಿಂದ ರಮ್ಯಳ ಜೊತೆಗೆ ಮಹಡಿಯಿಂದ ಕೆಳಗೆ ಬಂದನು. ಈಗ ಪಕ್ಷಿಶಿಲ್ಪವನ್ನು ಅದರ ಸ್ವಸ್ಥಾನಕ್ಕೆ ಮರಳಿ ಇಡಲು ಅಣಿಯಾದನು.
ಮೊದಲಿನಂತೆ ಕುರ್ಚಿಯ ಮೇಲೆ ಕಾಲಿಟ್ಟು,ಟೇಬಲ್ಲಿನ ಮೇಲೇರುತ್ತಿದ್ದ ರಾಜುವಿನ ಕೈ ಜಾರಿ ಪಕ್ಷಿಶಿಲ್ಪ ಕೆಳಗೆ ಬಿದ್ದು ಒಡೆದು ಚೂರಾಗಿಬಿಟ್ಟಿತು ! ಆ ಎಳೆ ಜೀವಗಳ ಎದೆ ಝಲ್ಲೆಂದಿತು, ಅವರು ಭಯಗೊಂಡರು. “ಅಮ್ಮ ಬರುವ ವೇಳೆಯಾಗಿದೆ,ಷಕ್ಷಿಶಿಲ್ಪ ಒಡೆದು ಹೋಗಿದೆ,ಅಮ್ಮ ಏನು ಮಾಡುವಳೋ” ಎಂದು ರಾಜು ಆತಂಕಗೊಂಡನು.
ಆಗ ರಮ್ಯಳು,”ರಾಜು ಇದೀಗ ತಾನೆ ಗುಬ್ಬಚ್ಚಿ, ‘ಏನೇ ಕಷ್ಟ ಬಂದರೂ ನನ್ನನ್ನು ಕರೆಯಿರಿ’ ಎಂದಿತ್ತು ಅಲ್ವಾ? ಗುಬ್ಬಚ್ಚಿಯನ್ನು ಕರೆ ನೋಡೋಣ.ಸಹಾಯ ಮಾಡಬಹುದು.”ಎಂದಳು.
“ಅರೆ ಹೌದಲ್ವಾ,ಗುಬ್ಬಚ್ಚಿಗೆ ಮಾಂತ್ರಿಕ ಶಕ್ತಿ ಬೇರೆ ಇದೆ ಅಂತ ಹೇಳಿತ್ತು.ಈಗಲೇ ಗುಬ್ಬಚ್ಚಿಯನ್ನು ಕರೆಯುತ್ತೆನೆ.”ಎಂದು ರಾಜು,ಕಣ್ಣುಮುಚ್ಚಿ “ಗುಬ್ಬಚ್ಚಿ ಗುಬ್ಬಚ್ಚಿ ಬಾ…”ಎಂದು ಕೂಗಿದನು.
ಕ್ಷಣಮಾತ್ರದಲ್ಲಿಯೇ ಚೀಂವ್ ಚೀಂವ್ ಎಂದು ಹಾರಿ ಬಂದ ಗುಬ್ಬಚ್ಚಿ,ರಾಜುವಿನ ಅವಾಂತರ ನೋಡಿ ಪರಿಸ್ತಿತಿಯನ್ನು ಅರಿತುಕೊಂಡಿತು. “ಚಿಂತಿಸಬೇಡ ಗೆಳೆಯ” ಎಂದು ರಾಜುವಿನ ಕೆನ್ನೆ ಸವರಿ,ಒಡೆದು ಹೋದ ಪಕ್ಷಿಶಿಲ್ಪದ ಸುತ್ತ ಮೂರು ಸುತ್ತು ಹಾಕಿ,ಕಣ್ ರೆಪ್ಪೆ ಬಡಿಯುವುದರಲ್ಲೇ ತನ್ನ ಮಾಂತ್ರಿಕ ಶಕ್ತಿಯಿಂದ ಪಕ್ಷಿಶಿಲ್ಪವನ್ನು ಮೊದಲಿನಂತೆ ಮಾಡಿ,ತಾನೇ ಆ ಪಕ್ಷಿಶಿಲ್ಪವನ್ನು ಗಾಜಿನ ಕಪಾಟಿನಲ್ಲಿ ಕೂರುವಂತೆ ಮಾಡಿತು.
ಗುಬ್ಬಚ್ಚಿಯ ಚಮತ್ಕಾರ ಕಂಡು ರಾಜು ಮತ್ತು ರಮ್ಯ ಸಂತೋಷದಿಂದ ಹೋ.. ಎಂದು ಕುಣಿದರು. “ನೋಡಿ ಗೆಳೆಯರೇ,ಯಾವುದಕ್ಕೂ ಅವಸರ ಮಾಡಬಾರದು,ತಾಳಬೇಕು, ತಿಳಿದು ಬಾಳಬೇಕು.”ಎಂದು ಕಿವಿಮಾತು ಹೇಳಿ ಗುಬ್ಬಚ್ಚಿ ಮತ್ತೆ ಮಾಯವಾಯಿತು.
ರಮ್ಯ ಮತ್ತು ರಾಜು ನಡೆದಿದ್ದನ್ನು ಸಂತಸದಿಂದ ನೆನೆಸಿಕೊಂಡರು.ಇನ್ನು ಮೇಲೆ “ನಮ್ಮ ಜೀವದ ಉಸಿರು ಇರೋವರೆಗೂ,ಪಕ್ಷಿ,ಪ್ರಾಣಿ,ಪರಿಸರವನ್ನು ಸಂರಕ್ಷಣೆ ಮಾಡುವುದಕ್ಕೆ ನಮ್ಮ ಜೀವನವನ್ನು ಮೀಸಲಿಡುತ್ತೇವೆ” ಎಂದು ಪ್ರತಿಜ್ಞೆ ಮಾಡಿದರು. ಆ ಎಳೆ ಜೀವಗಳು ತದೇಕಚಿತ್ತದಿಂದ ಗಾಜಿನ ಕಪಾಟಿನಲ್ಲಿನ ಪಕ್ಷಿಶಿಲ್ಪವನ್ನು ನೋಡುತ್ತಿರುವಾಗಲೇ, ಹೊರಹೋಗಿದ್ದ ರಾಜುವಿನ ಅಮ್ಮ ಬಾಗಿಲು ತೆರೆದು ಒಳಬಂದರು.