ನಾನು ಅವನಲ್ಲ ಅವಳು ಪುಸ್ತಕದ ಬಗ್ಗೆ ಪ್ರೀತಿಸಾನ್ವಿ ಅವರು ಬರೆದ ವಿಮರ್ಶೆ

ಪುಸ್ತಕ-ನಾನು ಅವನಲ್ಲ ಅವಳು(ಅನುವಾದಿತ)
ಅನುವಾದಿತ ಲೇಖಕಿ- ಡಾ.ತಮಿಳ್ ಸೆಲ್ವಿ
ಮೂಲ ಲೇಖಕಿ-ಲಿವಿಂಗ್ ಸ್ಮೈಲ್ ವಿದ್ಯಾ
ಪ್ರಗತಿ ಗ್ರಾಫಿಕ್ಸ್ ಬೆಂಗಳೂರು

ನಾನು ಈ ಪುಸ್ತಕ ಓದುವ ಮುಂಚೆ ನೋಡುವ ದೃಷ್ಟಿಕೋನವೇ ಬೇರೆ ಇತ್ತು.ವಿದ್ಯಾವಂತಳಾಗಿ ಕೂಡ, ನಾನು ಅವರನ್ನು ಮನುಷ್ಯರಿಗಿಂತ ನಿಕೃಷ್ಠವಾಗಿ ಕಂಡಿದ್ದೆ, ಅವರು ನಮ್ಮಂತೆ ಮನುಷ್ಯರು, ಅವರಲ್ಲಿಯೂ ಕೆಂಪು ರಕ್ತವೇ ಹರಿಯುವುದು, ಅವರಿಗೂ ಮನಸ್ಸು ಇದೆ ಎಂದು ಯೋಚಿಸಿಯೇ ಇರಲಿಲ್ಲ, ಈ ಪುಸ್ತಕ ಓದುತ್ತಾ ಅವರಲ್ಲೆ ನಡೆಯುವ ಮಾನಸಿಕ ತಾಕಲಾಟ, ತಳಮಳ, ಹೆಣ್ಣಿನ ಭಾವನೆಗಳನ್ನು ಹೊತ್ತ ಗಂಡು ಜೀವ. ಹೊದ್ದಾಡುವ ತೊಯ್ದಟ, ತನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಕುಟುಂಬವೇ ತಾನು ಹೆಣ್ಣು ಎಂದಾಗ ವಿರುದ್ಧವಾಗಿದ್ದು, ಇಡೀ ಸಮಾಜವೇ ಪ್ರಾಣಿಗಳಿಗಿಂತ ನಿಷ್ಠುರ, ನಿಕೃಷ್ಠವಾಗಿ ಕಂಡಿದ್ದು. ಗೇಲಿ ಮಾಡಿದ್ದೂ,ಅವರಿಗೆ ಸಿಕ್ಕಿದ್ದು ಅಪಮಾನ, ಅವಮಾನ, ವಿತಂಡ ತಮಾಷೆಗಳಿಂದ ನೊಂದು ಬೆಂದು ತಲ್ಲಣಿಸಿ ಹೋದರು.

ಕೊನೆಗೆ ಅವರಿಗೆ ಉಳಿದಿರೋ ದಾರಿಗಳೇ ಎರಡು
1. ಭಿಕ್ಷೆ ಬೇಡುವುದು
2. ಲೈಂಗಿಕ ಕಾರ್ಯಕ್ಕಿಳಿಯುವುದು

ಎರಡನೇ ದಾರಿಗೆ ಹೋಗಲು ಮನಸ್ಸಾಕ್ಷಿ ಒಪ್ಪದೇ ಚಪ್ಪಾಳೆ ತಟ್ಟಿ ತಟ್ಟಿ ಭಿಕ್ಷೆ ಬೇಡುವರು. ಅವರಿಗೆ ಬೇರೆ ಆಯ್ಕೆಗಳೇ ಇಲ್ಲ. ಕೆಲಸ ಮಾಡಲು ಕೆಲಸ ಕೊಡುವವರು ಯಾರು?? ವ್ಯಾಪಾರ ಮಾಡಿದರೆ ಅವರಿಂದ ವಸ್ತುಗಳನ್ನು ಕೊಳ್ಳಲು ಸಹ ಮುಂದೆ ಬರದ ಜನಗಳ ಮದ್ಯೆ ಬದುಕು ಬಲು ದುಸ್ತರ.

ಬಡತನದ ಬೇಗುದಿಯಲ್ಲಿರುವ ಕುಟುಂಬದಲ್ಲಿ ತಂದೆ ತಾಯಿ ಬಹುಅಪೇಕ್ಷಯಂತೆ ಗಂಡು ಮಗು ಜನಿಸಿದಾಗ ಮೂಡುವ ಸಂಭ್ರಮವ ಹೇಳತೀರದು. ಒಂದು ಹುಲ್ಲುಕಡ್ಡಿಯೂ ಎತ್ತಿ ಹಿಡಿಯದಂತೆ ಬೆಳೆದ ನಮ್ಮ ಶರವಣ. ಅಕ್ಕಂದಿರ ಮುದ್ದಿನ ತಮ್ಮ, ಅಪ್ಪ ಅಮ್ಮನ ಮುದ್ದಿನ ಮಗನಾಗಿ ಬೆಳೆದ ಶರವಣ . ಅಪ್ಪನಿಗೆ ಸ್ವಂತ ಉದ್ಯೋಗ ಮಾಡಿ ಜೀವನದಲ್ಲಿ ಮುಂದೆ ಬರಬೇಕೆಂಬ ಹಂಬಲ, ಆದರೆ ಬಡತನದ ಬೇಗುದಿಯಿಂದ, ಸರ್ಕಾರಿ ಡಿ ದರ್ಜೆ ಕಸಗುಡಿಸುವ ನೌಕರನಾದ, ತನ್ನ ಮಗನನ್ನು ಚೆನ್ನಾಗಿ ಓದಿಸಿ ಜಿಲ್ಲೆಗೆ ಮುಖ್ಯಸ್ಥನಾದ ಡಿಸಿ ಮಾಡಬೇಕೆಂಬ ಹಂಬಲ. ತನ್ನ ಮನದಿಚ್ಚೆಯನ್ನು ಮಗನ ಮೇಲೆ ಹೇರಲು ಶುರುಮಾಡಿದ, ಶರವಣನನ್ನು ಆಡಲು ಬಿಡುತ್ತಿರಲಿಲ್ಲ, ಕುಂತರು ನಿಂತರು ಓದುವ ಶಿಕ್ಷೆ, ಮೊದಲನೇ rank ಬರಲೇಬೇಕು ಬರದೇ 2nd rank ಬಂದರೂ ಘನ ಘೋರ ಶಿಕ್ಷೆ ಕಟ್ಟಿಟ್ಟ ಬುತ್ತಿ.

ಶರವಣನಿಗೆ ಅಪ್ಪನ ಭಯದ ಮುದ್ರೆ, ಅಕ್ಕ ಅಮ್ಮರ ಪ್ರೀತಿಯ ಮಡಿಲಲ್ಲಿ ಬೆಳೆಯುತ್ತ ಹೋದ ಶರವಣ. ತನ್ನಲ್ಲೇ ಆಗುತ್ತಿರುವ ಬದಲಾವಣೆಯನ್ನು ಅರಿಯದಾದ, ಹೊರಗೆ ಗಂಡು ದೇಹ ಒಳಗೆ ಹೆಣ್ಣು ಮನಸ್ಸು, ಹೆಣ್ಣಿನಂತೆ ಬಳುಕುತ್ತ ನಡೆಯುವ, ಅಲಂಕಾರ, ಹೆಣ್ಣಿನ ಬಟ್ಟೆಯ ಧರಿಸಿಕೊಂಡು ಯಾರು ಇಲ್ಲದ ಕತ್ತಲ ಕೋಣೆಯಲ್ಲಿ ಸುಖಿಸುತ್ತಿದ್ದ. ಮೊದಮೊದಲು ಹುಡುಗುಬುದ್ದಿ ಎಂದು ಆಲಕ್ಷಿಸಿದರು, ಮತ್ತೆ ಮತ್ತೆ ಸಿಕ್ಕು ಬಿದ್ದಾಗ ಬೈದು ಬುದ್ಧಿ ಹೇಳಿದರೇ ಹೊರತು ಅವನ ಮನಸ್ಸಿನಲ್ಲಿ ಆಗುತ್ತಿರುವ ತಲ್ಲಣಗಳನ್ನು ಯಾರು ಅರಿಯಲಿಲ್ಲ.

ಶಾಲೆಯಲ್ಲೂ ಗೇಲಿಗೆ ಒಳಗಾಗುತ್ತಿದ್ದ, ತನ್ನ ಸ್ತ್ರೀ ನಡವಳಿಕೆಗಳಿಂದ, ಅಪಹಾಸ್ಯಕ್ಕೆ ಒಳಗಾಗುತ್ತಿದ್ದ. ಮಮ್ಮುಲ ಮರುಗತ್ತಿದ್ದ. ಒಬ್ಬನೇ ರೋಧಿಸುತ್ತಿದ್ದ

ಹಾಗೆ ಸಾಗುತಿತ್ತು ಮುಚ್ಚುಮರೆಯಲ್ಲಿ ಸಾಹಿತ್ಯ ವಿಭಾಗದಲ್ಲಿ MA ಮಾಡಿದ ಅಪ್ಪನ ಮಾತು ದಿಕ್ಕರಿಸಿ, ನಾಟಕಗಳಲ್ಲಿ ಸ್ತ್ರೀ ವೇಷಧರಿಸಿ ಖುಷಿ ಪಡುತಿದ್ದ,ಹೊರಗೆ ಗಂಡು ವೇಷ ಧರಿಸಿ ಒಳಗೆ ಸ್ತ್ರೀ ಸಂವೇಧಿತನದಿಂದ ರೋಸಿ ಹೋಗಿ, ಕೊನೆಗೆ ಕುಟುಂಬದಿಂದ ಹೇಳದೆ ಕೇಳದೆ ದೂರ ಹೋಗಿ ಹಿಜಡಾಗಳ ಲೋಕವನ್ನು ಪ್ರವೇಶಿಸುವನು.

ಅಲ್ಲಿ ಬೇರೆಯದೇ ಪ್ರಪಂಚ, ತನ್ನಂತೆ ಇರುವ ಜನ, ತನ್ನ ಇಷ್ಟದ ಸ್ತ್ರೀ ವೇಷ ಧರಿಸುತ್ತಿದ್ದರು.ಮನಸೋಚ್ಚೆ ಬದುಕುತ್ತಿದ್ದರು, ಕುಟುಂಬ ಮತ್ತು ಸಮಾಜದಿಂದ ದೂರವಾಗಿ, ತಮ್ಮದೇ ಲೋಕದಲ್ಲಿ ಬದುಕುತ್ತಿರುವರು,ಅಲ್ಲಿ ಅಜ್ಜಿ ವರಸೆಯವರಿಗೆ ನಾನಿ ಎಂದು ಮೊಮ್ಮಗಳಿಗೆ ನಾತಿಚೆಲಾ, ಮಗಳ ವರಸೆಯವಳಿಗೆ ಚೇಲಾ ಎಂದು ಕರೆಯುತ್ತಿದ್ದರು. ಭಿಕ್ಷೆ ಕೇಳುವುದನ್ನು ಅಂಗಡಿ ಕೇಳುವುದು, ಟ್ರೈನ್ ಅಲ್ಲಿ ಭಿಕ್ಷೆ ಕೇಳಿದರೆ ಟ್ರೈನ್ ಕೇಳುವುದು ಎನ್ನುವರು. ಅವರಿಗೆ ಅವರದೇ ಅದ ಪದ್ಧತಿ, ನಿಬಂಧನೆ, ಸಂಪ್ರದಾಯ ಹಾಕಿಕೊಂಡಿರುವರು. ಹಿರಿಯರಿಗೆ ಗೌರವ ಕೊಡಲೇಬೇಕು, ಅವರು ಹೇಳಿದಂತೆ ಕೇಳಬೇಕು.

ವಿದ್ಯಾವಂತನಾದ ಶರವಣನಿಗೆ ಭಿಕ್ಷೆ ಕೇಳುವುದು ನೈತಿಕತೆ ಒಪ್ಪಲಿಲ್ಲ ಮೊದಮೊದಲು, ನಿರ್ವಾಣ ಮಾಡಿಸಿಕೊಂಡು, ತನ್ನದು ಅಲ್ಲದ ವಸ್ತುವನ್ನು ಕಿತ್ತೆಸೆಯಬೇಕೆಂಬ ಅಮಲು ತೆಲೆಗೇರಿ ಹುಚ್ಚನಂತೆ ಭಿಕ್ಷೆ ಬೇಡಿ ಹಣ ಕೂಡಿಟ್ಟ ಶರವಣ.

ನಿರ್ವಾಣ ಎಂಬ ಯಮಯಾತನೆ, ಆಸ್ಪತ್ರೆಯಲ್ಲಿ ಹರಕಲು ಕೋಣೆ ಮುರುಕಲು ಮಂಚ,ಕಿಂಚಿತ್ತೂ, ಕನಿಷ್ಠ ಸೌಲಭ್ಯವಿಲ್ಲದೆ ಪ್ರಾಣವನ್ನೇ ಪಣಕಿಟ್ಟು, ತನ್ನದಲ್ಲದ ಜನನೆಂದ್ರಿಯವನ್ನೇ ಕಿತ್ತೆಸೆಯುವ ದೊಡ್ಡ ಆಪರೇಷನ್ಗೆ ಕನಿಷ್ಟ ಸೌಲಭ್ಯವಿಲ್ಲದೆ ಮಾಡುವುದು ಮತ್ತು ಯಾವ ಸೂಕ್ತ ದಾಖಲೆಗಳಿಲ್ಲದೆ ಗುಪ್ತವಾಗಿ ಮಾಡುವುದು ದುರ್ದೈವ.ಸರ್ಕಾರಗಳು ಕಣ್ಣು ಮುಚ್ಚಿವೆ. ಮೂಲಭೂತ ಹಕ್ಕುಗಳಿಗಾಗಿ ಹೊರಡುವುದು ನಮ್ಮ ದುಸ್ಥಿತಿ.

ನಿರ್ವಾಣ ಮುಗಿದು, ಶರಾವಣನು ವಿದ್ಯಾಳಾಗಿ ಪೂರ್ತಿಯಾಗಿ ಬದಲಾಗಿದ್ದ ಆದರೆ ಅದಕ್ಕೆ ಸೂಕ್ತ ದಾಖಲೆ ಇಲ್ಲ,ವಿದ್ಯಾವಂತಳಾದ ವಿದ್ಯಾಳಿಗೆ ಭಿಕ್ಷೆ ಬೇಡುವುದು ಹೇಸಿಗೆಯೆನಿಸಿತು. ಅಲ್ಲಿಂದ ಹೇಳದೆ ಕೇಳದೆ ಕಾಲ್ಕಿತ್ತನು,ಸ್ವಂತ ಉದ್ಯೋಗ ಮಾಡಲು ಪ್ರಯತ್ನಿಸಿದರು, ಸಮಾಜ ಸಾಥ್ ನೀಡಬೇಕಲ್ಲ. ಸರ್ಕಾರಿ ಉದ್ಯೋಗ ಪಡೆಯುವುದು ಅಸಾಧ್ಯ.ಖಾಸಗಿ ಕೆಲಸ ಪಡೆಯಲು ತನ್ನ ಗೆಳೆಯರ ಸಹಾಯದಿಂದ ಹರಾಸಾಹಸವೇ ಮಾಡತೊಡಗಿದ.ಸ್ವಯಂ ಸೇವಾ ಸಂಸ್ಥೆಯಲ್ಲಿ ಕೆಲಸವನ್ನು ಗಿಟ್ಟಿಸಿದ.ತನ್ನ ಕುಟುಂಬ, ಸಮಾಜವೇ ವಿರುದ್ಧವಾದರು ಆದರೆ ತಾನು ಕಲಿತಿದ್ದ ವಿಧ್ಯೆ ಮಾತ್ರ ಅವನ ಕೈ ಬಿಡಲಿಲ್ಲ.

ಶರವಣನು ಲಿವಿಂಗ್ ಸ್ಮೈಲ್ ವಿದ್ಯಾಳಾಗಿ ಹೆಸರನ್ನು ಬದಲಾಯಿಸಲು ದೊಡ್ಡ ಹೋರಾಟವನ್ನೇ ಮಾಡಬೇಕಾಯಿತು. ಬ್ಲಾಗ್ ಮೂಲಕ ತನ್ನ ಮನಸ್ಸಿನ ತಳಲಾಟ, ತಳಮಳವನ್ನು ಬರೆಯತೊಡಗಿದಳು. ಸುಶಿಕ್ಷಿತ ಜನರು ಓದಿ ಸ್ಪಂದಿಸ ತೊಡಗಿದರು.ಇಂದು ವಿದ್ಯಾ ತಮಿಳು ಸಿನಿಮಾಗೆ ಸಹ ನಿರ್ದೇಶಕಿಯಾಗಿ, ಬರಹಗಾರ್ತಿಯಾಗಿ ಮೆಚ್ಚುಗೆ ಗಳಿಸಿರುವಳು.

ವಿದ್ಯಾಳು ತನಗಾಗಿ ಮಾತ್ರ ಹೊರಡಲಿಲ್ಲ, ತನ್ನಂತೆ ಇರುವ ಅಲ್ಪ ಸಂಖ್ಯಾತರಲ್ಲೇ ಅಲ್ಪ ಸಂಖ್ಯೆಯಲ್ಲಿರುವ ತಮ್ಮಂಥವರಿಗಾಗಿ , ತಮಗೆ ಸಾಮಾಜಿಕ ಭದ್ರತೆ, ಮೀಸಲಾತಿ, ತಮ್ಮ ಮೂಲಭೂತ ಹಕ್ಕುಗಳಿಗಾಗಿ ಹೋರಾಡಿದಳು.

ತನಗೆ ಸ್ವರ್ಗ ಬೇಕೆಂದೇನು ನಾನು ಕೇಳುತ್ತಿಲ್ಲ
ನರಕ ಬೇಡ ಎಂದಷ್ಟೇ ನಾನು ಒದ್ದಾಡುತ್ತಿರುವುದು
ನನ್ನಂತೆಯೇ ಇರುವ ಇತರರ ಒಳಿತುಗಳಿಗಾಗಿಯೂ….!’

ನಾನು ಈ ಪುಸ್ತಕ ಓದುವ ಮುಂಚೆ ಇದ್ದ ಹಿಜಡಾಗಳನ್ನು ನೋಡುವ ದೃಷ್ಟಿಯನ್ನೇ ಬದಲಾಯಿಸಿದೆ. ಓದುತ್ತಾ ಓದುತ್ತಾ ಅವರ ಲೋಕದಲ್ಲೇ ಸಂಚಾರಿಸಿದ ಭಾವ, ಅವರ ತಲ್ಲಣ, ದುಃಖ ನನಗೂ ಸಂಚಾರವಾಯಿತು.ಅವರು ನಮ್ಮಂತೆ ಮನುಷ್ಯರಲ್ಲವೇ ಪಾಪಾ.ಎಷ್ಟೊಂದು ಹೀನಾಯವಾಗಿ ನೋಡುತ್ತಿದ್ದೆ ಎಂದು ನನಗೆ ಅರಿವಾಯಿತು.

ನಾನು ಅವನಲ್ಲ ಅವಳು ಆತ್ಮ ಕಥೆಯಾದಾರಿತ ಸಿನಿಮಾ ತಯಾರಾಗಿ, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿತು, ಸಂಚಾರಿ ವಿಜಯ್ ಅವರು ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಗೆ ಭಾಜನಾರಾದರು. ಆದರೆ ವಿಧಿ ಸಂಕಲ್ಪ ಬೇರೆಯೇ ಇತ್ತು. ವಿಜಯ್ ಅವರು ಆಕ್ಸಿಡೆಂಟ್ ದುರ್ಘಟಣೆಯಲ್ಲಿ ಮರಣ ಅಪ್ಪಿದರು. ಈ ಸಿನಿಮಾ ಜನರಲ್ಲಿ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಿತು.

ಇಷ್ಟು ದಿನ ಕಣ್ಣು ಮುಚ್ಚಿ ಕುಳಿತಿದ್ದ ಸರ್ಕಾರ ಇವಾಗ ಸ್ವಲ್ಪ ಕಣ್ಣು ತೆರೆದಿದೆ, ಇಷ್ಟು ದಿನ ಲಿಂಗ ಎನ್ನುವ ಕಾಲಂ ಅಲ್ಲಿ ಪುಲಿಂಗ ಮತ್ತು ಸ್ತ್ರೀಲಿಂಗ ಜೊತೆಗೆ ತೃತೀಯ ಲಿಂಗ ಎನ್ನುವ ಕಲಂ ಸೇರಿಸಿದೆ.

ಇತೀಚೆಗೆ ನಡೆದ ನಮ್ಮ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ತೃತಿಯ ಲಿಂಗಿಗಳಿಗೆ 1% ಮೀಸಲಾತಿ ನೀಡಿದ್ದರು.3 ಜನ ತೃತಿಯ ಲಿಂಗಿಗಳು ಶಿಕ್ಷಕರಾಗಿ ಆಯ್ಕೆಯಾಗಿರುವುದು. ಲಿವಿಂಗ್ ಸ್ಮೈಲ್ ವಿದ್ಯಾರಂತವರ ಹೋರಾಟವು ಕಾರಣ.

ಇತರ ಜೀವಿಗಳಂತೆ ನಮ್ಮನ್ನು ನೋಡಿ ಸಾಕು, ನಿಮ್ಮವರೊಳಗೆ ಒಬ್ಬರಾಗಿ ಬದುಕಲು ಬಿಡಿ,ನಿಮ್ಮ ಅನುಕಂಪ ಬೇಡ ನಮಗೆ ಎನ್ನುವುದು ವಿದ್ಯಾರಂತವರ ವಾದ.

ಬರೀ ವಿಮರ್ಶೆ ಓದಿದರೆ ಸಾಲದು, ಎಲ್ಲರೂ ಸಾಧ್ಯ ವಾದರೆ “ನಾನು ಅವನಲ್ಲ ಅವಳು” ಪುಸ್ತಕವ ಓದಿ.ತೃತಿಯ ಲಿಂಗಿಗಳ ಬದುಕಿನ ಭವಣೆಗಳನ್ನು ಅರಿಯಿರಿ.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop