‘ಮನದೊಳಗಿನ ತಲ್ಲಣಗಳೇ ಕಾವ್ಯವಾಗಿದೆ’ – ನಾರಾಯಣಸ್ವಾಮಿ .ವಿ ಕೋಲಾರ

 

ಕೃತಿ: ನಾವಿಬ್ಬರೇ ಗುಬ್ಬಿ
ಲೇಖಕರು: ವಿಕ್ರಮ ಬಿ ಕೆ
ಪ್ರಕಾಶಕರು :ತ್ರಿಲೋಕ ಬರಹ
ಬೆಲೆ:ನೂರು ರೂಪಾಯಿಗಳು

ಕವಿತೆ ಎಲ್ಲರೂ ಬರೆಯಬಹುದು
ಕವಿತೆ ಕಟ್ಟಬಹುದು ಕವಿತೆ ಕಟ್ಟಬಹುದು
ಆದರೆ ಕವಿತೆ ಮನವನು ತಾಕಬೇಕು
ಈ ಸಮಾಜದ ಅಂಕುಡೊಂಕುಗಳನ್ನು ತಿದ್ದಬೇಕು.

ಹಾಗೆ ಬರೆದಾಗ ಮಾತ್ರ ಕವಿತೆಗೆ ಒಂದು ಶಕ್ತಿ ಇದೆ ಎಂದು ತಿಳಿಯಬಹುದು. ವಿಕ್ರಮ ಬಿ ಕೆ ರವರು ಬರೆದಿರುವ ನಾವಿಬ್ಬರೇ ಗುಬ್ಬಿ ಕವನಸಂಕಲನದಲ್ಲಿ ಇಂತಹ ಕವಿತೆಗಳನ್ನು ನಾವು ಕಾಣಬಹುದಾಗಿದೆ.

ಇತ್ತೀಚಿನ ದಿನಮಾನಗಳಲ್ಲಿ ಕವಿತೆ ಕಥೆ ಕಾದಂಬರಿಗಳನ್ನು ಬರೆಯುವಂತಹ ಬಹಳಷ್ಟು ಜನರಿದ್ದರೂ ಕೂಡ, ಕನ್ನಡ ಸಾಹಿತ್ಯ ಲೋಕದಲ್ಲಿ ಓದುಗನ ಮನಸ್ಸನ್ನು ಸೆಳೆಯುವ ಕಾಡುವ ಬರಹಗಳನ್ನು ಬರೆಯುವವರು ವಿರಳ. ಎಲ್ಲರೂ ಸಾಹಿತ್ಯವನ್ನು ಬರೆಯಬಹುದು ಆದರೆ ಸಾಹಿತ್ಯ ಲೋಕ ಮತ್ತು ಕನ್ನಡ ಓದುಗರು ಬಯಸುವುದು ಗಟ್ಟಿಯಾದ ಸಾಹಿತ್ಯವನ್ನೆ ಅಂತಹ ಸಾಹಿತ್ಯವನ್ನು ಯಾರೇ ಬರೆದರು ಕೂಡ ಅವರನ್ನು ಓದುಗ ಮನಸುಗಳು ಅಪ್ಪಿಕೊಳ್ಳುತ್ತವೆ ಗೌರವಿಸುತ್ತವೆ. ಕನ್ನಡ ಸಾಹಿತ್ಯದಲ್ಲಿ ಪ್ರಚಲಿತದಲ್ಲಿರುವ ಇತ್ತೀಚಿನ ಯುವ ಕವಿಗಳಲ್ಲಿ ವಿಕ್ರಮ ಬಿ ಕೆ ಕೂಡ ಒಬ್ಬರಾಗಿ ಬೆಳಕಿಗೆ ಬರುತ್ತಿದ್ದಾರೆ.

ವಿಕ್ರಮ್ ಬಿ ಕೆ ಇವರು ಕವಿತೆಗಳನ್ನು ಓದುವುದರ ಮೂಲಕವೇ ತನ್ನನ್ನು ಗುರುತಿಸಿಕೊಂಡವರು. ಕವಿತೆ ಬರೆಯುವ ಕವಿಗಳೆಲ್ಲಾ ಕವಿತೆಯನ್ನು ಓದಲು ಸಾಧ್ಯವಿಲ್ಲ ಓದುವ ಕಲೆಗಾರಿಕೆ ಬೇಕು, ಕೇಳುಗರು ಕಿವಿಯಾಗಿಸಿಕೊಂಡು ಕೇಳಬೇಕು. ಇಂತಹ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಕವಿತೆ ಓದುವ ಕಲೆಯನ್ನು ಕರಗತ ಮಾಡಿಕೊಂಡು ಅಪಾರ ಅಭಿಮಾನಿಗಳನ್ನು ಹೊಂದಿರುವ ಯುವಕವಿ ಎಂದರೆ ಅವರು ವಿಕ್ರಮ ಬಿ ಕೆ.

ನನಗೆ ಇವರು ಪರಿಚಯವಾಗುವುದಕ್ಕೂ ಮುಂಚೆ ನಾನು ಮುಖಪುಟದಲ್ಲಿ ಇವರು ಕವಿತೆ ಓದಿದ್ದನು ಗಮನಿಸಿದ್ದೆ. ಅವರು ವಾಚನ ಮಾಡುವ ಶೈಲಿಯನ್ನು ಕಂಡು ನಾನು ಕೂಡ ಅವರ ಅಭಿಮಾನಿಯಾದೆ. ನನ್ನ ಬಿಡುವಿನ ಸಮಯದಲ್ಲಿ ಅವರ ಯೂಟ್ಯೂಬ್ ಚಾನಲ್ ಹುಡುಕಿ ಕವಿತೆಗಳನ್ನು ಕೇಳುತ್ತಿದ್ದೆ. ಮಂಗಳೂರು ಕಡೆಯ ಖ್ಯಾತ ಕವಿ ವಿಲ್ಸನ್ ಕಟೀಲ್ ರವರ ಕವಿತೆಗಳನ್ನು ವಿಕ್ರಮ್ ರವರ ಓದಿನಲ್ಲಿ ಕೇಳುವುದೇ ಒಂದು ರೋಮಾಂಚಕ. ಅವರ ಹಲವಾರು ಕವಿತೆಗಳನ್ನು ಅನೇಕ ಬಾರಿ ಕೇಳಿದ್ದೇನೆ.

ಅವ್ವ ಪುಸ್ತಕಲಾಯದ ಒಂದು ಕಾರ್ಯಕ್ರಮದಲ್ಲಿ ಅವರ ಜೊತೆಯಲ್ಲಿ ಕವಿತೆ ಓದುವಾ ಅವಕಾಶ ಕೂಡ ಸಿಕ್ಕಿತ್ತು ಈ ಕಾರ್ಯಕ್ರಮದಲ್ಲಿ ಇವರ ಪರಿಚಯವಾಯಿತು. ವೃತ್ತಿಯಲ್ಲಿ ಇಂಜಿನಿಯರ್ ಅದರೂ ಕನ್ನಡ ಸಾಹಿತ್ಯದ ಅಭಿಮಾನದಿಂದ ಕನ್ನಡವನ್ನು ಕಟ್ಟುವ ಬೆಳೆಸುವ ಕಾಯ೯ದಲ್ಲಿ ತೊಡಗಿರುವುದು ಖುಷಿಯ ವಿಚಾರ. ನಾನು ಬಹಳಷ್ಟು ಸಾರಿ ಯೋಚಿಸುತ್ತೇನೆ. ಅಧ್ಯಾಪಕರೋ ಪ್ರಾಧ್ಯಾಪಕರೋ ಶಿಕ್ಷಕರೋ ಸಾಹಿತ್ಯ ಬರೆಯುವುದು ನನಗರ ಅತಿಶಯೋಕ್ತಿಯಾಗಲಾರದು. ಕಾರಣ ಇವರು ಪ್ರತಿದಿನ ಬೋಧಿಸುವ ಕಲಿಸುವ ಕಲಿಯುವಲ್ಲಿ ತೊಡಗಿರುತ್ತಾರೆ. ಒಬ್ಬ ಇಂಜಿನಿಯರ್ ಒಬ್ಬ ವಕೀಲ ಒಬ್ಬ ತಾಂತ್ರಿಕ ಸಲಹೇಗಾರ ಒಬ್ಬ ವೈದ್ಯ ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡು ಬರವಣಿಗೆ ಸಮಯವನ್ನು ಹೊಂದಿಸಿಕೊಂಡು ಸಾಹಿತ್ಯ ಕೃಷಿಯನ್ನು ಮಾಡುವ ವಿಷಯ ಬಹಳ ಸಂತೋಷ ತರಿಸುತ್ತದೆ.

ವಿಕ್ರಮ ಬಿ ಕೆ ರವರು ಡ್ಯಾನ್ಸರ್ ಆಗಿ ಕವಿತೆಗಳನ್ನು ಓದುವ ಯೂಟ್ಯೂಬ್ ಚಾನಲ್ ನ್ನು ಪ್ರಾರಂಭಿಸಿ ಅಪಾರ ಅಭಿಮಾನಗಳನ್ನು ಹೊಂದಿದ್ದಾರೆ. ಕೇಳು ಮನಸೇ ಯೆಂಬ ಕಥೆ ಕವನ ಓದುವ ಪ್ರದರ್ಶನ ಕಾರ್ಯಕ್ರಮವನ್ನು ಕೂಡ ಆರಂಭಿಸಿ ಸಾಕಷ್ಟು ಸಹೃದಯ ಮನಸ್ಸಗಳನ್ನು ತನ್ನಡೆಗೆ ಸೆಳೆದುಕೊಂಡಿದ್ದಾರೆ. ಅಖಿಲೇಶ್ ದಯಾನಂದರವರು ಇವರ ಎರಡು ಕವನಗಳನ್ನು ಕೊರಿಯೋಗ್ರಾಫಿಯಲ್ಲಿ ಬಳಸಿಕೊಂಡಿದ್ದಾರೆ ಇವರ ಕವನ ತಾಳ ತಮಟೆ ಎನ್ನುವ ಕವಿತೆಯನ್ನು ಡ್ಯಾನ್ಸ್ ಪ್ರೊಡಕ್ಷನ್ ನಲ್ಲಿ, ಕಣ್ಣಾ ಮುಚ್ಚೆ ಕಾಡೇ ಗೋಡೆ ಎಂಬ ಕವಿತೆಯನ್ನು ದ ವಾಲ್ ಯೆಂಬ ವಿಡಿಯೋದಲ್ಲಿ ಬಳಸಿದ್ದಾರೆ. ಅನಿ ರವರು ನಿಟ್ಟುಸಿರು ಕವನವನ್ನ ಸನ್ಪರ್.ಎನ್ನುವ ಡ್ಯಾನ್ಸ್ ಪ್ರೊಡಕ್ಷನ್ ನಲ್ಲಿ ಬಳಕೆಯಾಗಿದೆ.

ನಾರಾಯಣಸ್ವಾಮಿ .ವಿ ಕೋಲಾರ

ತಮ್ಮ ಲೇಖಕರ ನುಡಿಯಲ್ಲಿ ವಿಕ್ರಮ ಬಿ ಕೆ ರವರು ಹೀಗೆ ಹೇಳುತ್ತಾರೆ ಸಾಹಿತ್ಯ ಮತ್ತು ನೃತ್ಯ ನನ್ನ ಹಿಂದಿನ ಕಾಲದ ಪುಣ್ಯದ ಫಲವೆ ಸರಿ ನೆನೆಸಿಕೊಳ್ಳುತ್ತಾರೆ. ವಿಕ್ರಮ ಬಿ ಕೆ ರವರ ನಾವು ನಾವಿಬ್ಬರೇ ಗುಬ್ಬಿ ಕವನ ಸಂಕಲನದ ಒಳಪುಟಗಳನ್ನು ತಿರುವಿದಾಗ ನಮಗೆ ಮೊದಲ ಅಚ್ಚರಿ ಎಂದರೆ ಈ ಪುಸ್ತಕದಲ್ಲಿ ಯಾರದೇ ಮುನ್ನುಡಿಯಿಲ್ಲ ಮುತ್ತು ಅವರ ಫೋಟೋ ಕೂಡ ಪುಸ್ತಕದಲ್ಲಿ ಹಾಕಿಕೊಂಡಿಲ್ಲ.

ದೊಡ್ಡ ದೊಡ್ಡ ಲೇಖಕರನ್ನ ಇನ್ಯಾರಿಂದಲೋ ಪರಿಚಯ ಮಾಡಿ ಕೊಂಡು ಅವರನ್ನು ಕಾಡಿಬೇಡಿ ಮುನ್ನುಡಿ ಬರೆದು ಕೊಡಿ ಅಂತ ಅವರ ಹೆಗಲ ಬಿದ್ದು, ಅವರ ಮುನ್ನುಡಿಗಾಗಿ ಹಲವಾರು ತಿಂಗಳು ಕಾದು, ಮುನ್ನುಡಿಯನ್ನು ಹಾಕಿ ಪುಸ್ತಕವನ್ನು ಪ್ರಕಟಿಸುವ ನಮ್ಮಂತಹ ಬರಹಗಾರರು ಇರುವಾಗ, ಮುನ್ನುಡಿ ಇಲ್ಲದೆ ಕೂಡ ಪುಸ್ತಕವನ್ನ ಪ್ರಕಟಿಸಬಹುದು ಅನ್ನುವ ಅವರ ಯೋಚನೆ ಲಹರಿಯನ್ನು ಮೆಚ್ಚಲೇಬೇಕು.ಪುಸ್ತಕ ಪ್ರಕಟನೆಗೆ ಮುನ್ನುಡಿ ಬೇಕೆಬೇಕು ಎನ್ನುವ ಪದ್ಧತಿಗೆ ತಿಲಾಂಜಲಿ ಇಟ್ಟಿದ್ದಾರೆ ಎಂಬುದು ನನ್ನ ವೈಯಕ್ತಿಕ ಭಾವನೆ.

ಹೊಸದಾಗಿ ಪುಸ್ತಕ ಪ್ರಕಟಿಸುವ ಲೇಖಕರಿಗೆ ಈ ಪುಸ್ತಕದಲ್ಲಿ ಬಹಳಷ್ಟು ವಿಷಯಗಳಿವೆ ಅವುಗಳು ಅನುಸರಿಸಿ ಪುಸ್ತಕ ಹೊರತರಬಹುದು. ಇನ್ನೂ ಪುಸ್ತಕದ ವಿಷಯಕ್ಕೆ ಬಂದರೆ ವಿಕ್ರಮ ಬಿ ಕೆ ಅವರು ಹೊರತಂದಿರುವ ನಾವಿಬ್ಬರಿಗೂ ಕವನ ಸಂಕಲನದಲ್ಲಿ ಮೂವತ್ತಕ್ಕೂ ಹೆಚ್ಚು ಕವಿತೆಗಳಿಗೆ. ಈ ಕವಿತೆಗಳು ಬಹಳ ವಿಶಿಷ್ಟವಾಗಿ ಮೂಡಿ ಬಂದಿವೆ.

ತನ್ನ ಎದೆಯೊಳಗಿನ ತಲ್ಣಗಳನ್ನು ಸಾಲುಗಳಾಗಿ ಹಂಚಿಕೊಂಡ ರೀತಿ ಬಹು ಸೊಗಸಾಗಿದೆ. ಈ ಕವನಸಂಕಲನದ ಎಲ್ಲಾ ಕವಿತೆಗಳನ್ನು ಓದುವಾಗ ಸಾಮಾಜಿಕ ಸ್ಥಿತಿಗತಿಯಲ್ಲಿ ಹಿಂದಿನ ಕಾಲದ ದಲಿತರ ಬಡವರ ಶೋಷಣೆ ಪ್ರೇಮ ಪ್ರೀತಿ ವಿರಹವು ಕವಿತೆಗಳಲ್ಲಿ ಇದೆ. ಜೋಗತಿ ಮಂಜಮ್ಮನವರ ಬಗ್ಗೆಯೂ ಕೂಡ ಈ ಕವನ ಸಂಕಲನದಲ್ಲಿ ಕವಿತೆಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕೆಲವು ಕವಿತೆಗಳನ್ನು ಮಾತ್ರ ನಾನು ಪರಿಚಯ ಮಾಡಲು ಪ್ರಯತ್ನಪಟ್ಟಿದ್ದೇನೆ.

ಶೀರ್ಷಿಕೆ ತಮಟೆ

ಸತ್ತ ದೇಹವ ಸಾಗಿಸಲು
ನನ್ನ ಆತ೯ನಾದ ಬೇಕು
ಗೆಜ್ಜೆ ಕಟ್ಟದೇ ಲಜ್ಜೆ ಇಲ್ಲದೆ
ಹೆಜ್ಜೆ ಹಾಕಲು ನನ್ನ ತಾಳ ಬೇಕು
ಕರಗದ ವೈಭವಕ್ಕೆ ಕರಗದ
ದೇವರ ಒಲಿಸಲು ನನ್ನ ದನಿ ಬೇಕು.
ನಿಮ್ಮ ಸುದ್ದಿಯ ಊರ ತಲುಪಿಸಲು
ನನ್ನ ಚರ್ಮ ಬೇಕು
ನನ್ನ ಮನದ ದನಿಯ
ಕೇಳದಿರುವುದೇಕೆ?
ನನ್ನ ಭಾವಕ್ಕೆ ಬೆಲೆಯಿಲ್ಲವೇನು?
ನನ್ನ ನುಡಿಸುವನು ಕಲೆಗಾರನಲ್ಲವೇನು?
ನನ್ನ ಬಯಕೆ ಅಷ್ಟೊಂದು ಭಾರವೇನು?
ತಮಟೆ ಕೀಳು ಮೇಲೆ ಬರಲಾರದ
ತಮಟೆ

ಈ ರೀತಿಯ ಬಗ್ಗೆ ತನ್ನೊಳಗಿರು ಒಳಬೇಗುದಿಯನ್ನು ಹೊರಹಾಕಿದ್ದಾರೆ. ತಮಟೆ ಪದವನ್ನ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ನಮ್ಮ ಕೋಲಾರದ ಕಡೆ ತಮಟೆ ಎಂಬ ಶಬ್ದಕ್ಕೆ ಬದಲಾಗಿ ಹಲಗೆ ಎಂದು ಕರೆಯುತ್ತಾರೆ.ಈ ತಮಟೆಯ ಶಬ್ದಕ್ಕೆ ತಲೆತೂಗದವರೇ ಇಲ್ಲವೇನೋ ಈ ಭೂಮಿಯ ಮೇಲೆ. ಈ ತಮಟೆಗೆ ನಾದಕ್ಕೆ ಹಿರಿಯರೇ ಅಲ್ಲ ಹಾಲುಗಲ್ಲದ ಹಸುಳೆಯೂ ಕೂಡ ತನಗೆ ಅರಿವಿಲ್ಲದೆ ಕುಣಿಯುತ್ತದೆ. ತಮಟೆಯ ನಾದಕ್ಕೆ ಒಂದು ಮಾಂತ್ರಿಕವಾದ ಶಕ್ತಿ ಇದೆ ಈ ಮೇಲಿನ ಸಾಲುಗಳನ್ನು ಬಹಳಷ್ಟು ಯೋಚಿಸಿ ತಮಟೆಯನ್ನು ನುಡಿಸುವವರ ಮತ್ತು ತಮಟೆಯ ಬಗ್ಗೆ ಜನರಲ್ಲಿ ಇರುವ ನಿರ್ಲಕ್ಷತೆಯನ್ನ ಪದಗಳ ಸಾಲುಗಳಲ್ಲಿ ಜೀವ ತುಂಬಿದ್ದಾರೆ.

ಹಿಂದಿನ ಕಾಲದಲ್ಲಿ ತಮಟೆಯನ್ನಾ ಸತ್ತ ಧನಕರುಗಳು ಎಮ್ಮೆ ಕೋಣಗಳ ಚಮ೯ದಿಂದ ತಮಟೆಯನ್ನು ತಯಾರಿಸುತ್ತಿದ್ದರು. ತಮಟೆಯನ್ನು ಬಡಿಯುವ ಕೆಲಸ ಕೆಲವು ವಗ೯ದವರಿಗೆ ಮಾತ್ರ ಮೀಸಲಾಗಿತ್ತು. ಬಹಳಷ್ಟು ಕಾರ್ಯಕ್ರಮಗಳಿಗೆ ತಮಟೆಯನ್ನು ಉಪಯೋಗಿಸುತ್ತಿದ್ದರು. ತಮಟೆಯನ್ನು ಬಡಿಯುವ ಮುಂಚೆ ಬೆಂಕಿಗೆ ಕಾಯಿಸಿ ನಂತರ ಅದನ್ನು ಬಡಿಯಲು ಪ್ರಾರಂಭಿಸಿದರೇ ಅಕ್ಕಪಕ್ಕದ ನಾಲ್ಕೈದು ಹಳ್ಳಿಗಳಿಗೆ ಅದರ ಶಬ್ದ ಕೇಳಿಸುತ್ತಿತ್ತು ಆದರೆ ಈಗ ಆ ತಮಟೆಯ ನಾದ ಅವನತಿಯತ್ತ ಸಾಗುತಿದೆ ಅಂತಹ ಒಂದು ಸನ್ನಿವೇಶವನ್ನು ಕವಿಗಳು ಉಹಿಸಿಕೊಂಡು ಈ ಮೇಲಿನ ಕವಿತೆಯನ್ನು ಬಹಳಷ್ಟು ಮಾಮಿ೯ಕವಾಗಿ ಬರೆದಿದ್ದಾರೆ. ಹಾಗೆಯೇ ಭಾರತ ದೇಶದಲ್ಲಿ ಸಾಮಾಜಿಕ ವ್ಯವಸ್ಥೆಯಲ್ಲಿ ದಲಿತ ಎನಿಸಿಕೊಂಡವರನ್ನ ಅವರ ಜೀವನದಲ್ಲಿ ಶ್ರೀಮಂತರೆನಿಕೊಂಡು ಉನ್ನತ ಜಾತಿಯವರೆಂದು ಕರೆಸಿಕೊಳ್ಳುವ ಜನರು ಅವರಿಗೆ ಅನ್ಯಾಯ ಮಾಡುತ್ತಾ ಅವರ ಬದುಕಿನ ಜೊತೆಯಲ್ಲಿ ಆಟವಾಡುತ್ತಾರೆ. ಅವರಿಗೆ ವಿದ್ಯೆಯನ್ನ ನೀಡದೆ ವಂಚಿಸಿದಿರಿ. ಅವರು ಸದಾ ಕಾಲವು ನಿಮ್ಮ ಮುಂದೆ ಅವರು ಕೈಕಟ್ಟಿ ನಿಲ್ಲಬೇಕು ಎಂಬುದಾಗಿ ಈ ಕೆಳಗಿನ ಸಾಲುಗಳಲ್ಲಿ ಸಾಮಾಜಿಕ ವ್ಯವಸ್ಥೆಯ ಒಂದು ಒಳನೋಟವನ್ನು ಕವಿಗಳು ತೆರೆದಿಟ್ಟಿದ್ದಾರೆ.

ನಮ್ಮ ಹೈಕ್ಳು ನಿಮ್ಗ ತಪ್ಪೇನು ಮಾಡ್ಯಾವೆ?
ಅವಕ್ಯಾಕ ಬೇಕಿಲ್ಲ ವಿದ್ಯ?
ನಾವು ನಿಮ್ಮುಂದೆ ಕೈಕಟ್ಟಿ ನಿಲ್ತೀವಿ
ಇದಾ ಇರಬೇಕು ನಮ್ಮ ದೌರ್ಬಲ್ಯ

ಮುಂದುವರಿಸಿ ಈ ಕವಿತೆಯ ಕೊನೆಯ ಸಾಲುಗಳಲ್ಲಿ ದಲಿತರ ಜೀವಕ್ಕೆ ಬೆಲೆ ಹೇಗೆ ಬರುತ್ತದೆ ಅಂತ ಕೂಡ ಹೇಳಿದ್ದಾರೆ.

ಕೈ ಕಟ್ಟಾದಬೇಡ ಬಿಟ್ಟು ತಲೆ ಎತ್ತಿ ನಿಂತ್ರ
ಸಿಕ್ಕಾತೋ ನಮ್ಮ ಜೀವಕ್ಕ ಮೌಲ್ಯ.

ಈ ಕವನಸಂಕಲನದಲ್ಲಿ ಬರೀ ನೋವು ಅವೇಶ ಪೂರಿತ ಸಾಲುಗಳೇ ಇದೆ ಅಂತ ಓದುಗರು ಭಾವಿಸಬೇಕಾಗಿಲ್ಲ. ಇವರ ಕವಿತೆಗಳಲ್ಲಿ ಪ್ರೀತಿ ಪ್ರೇಮ ವಿರಹದ ಸಾಲುಗಳು ಕೂಡ ಇವೆ. ಆ ಸಾಲುಗಳನ್ನು ಓದಿದಾಗ ಮನಸ್ಸು ಮತ್ತೊಂದು ಕವಿತೆಯನ್ನು ಓದಲು ಪ್ರೇರೇಪಿಸುತ್ತದೆ.

ದೂರ ಸರಿ ನನ್ನಿಂದ
ನೆನೆದಷ್ಟು ನೋವು
ಬಾರದಿರು ಸನಿಹ
ಬಾಡುವುದು ಎದೆಯ ಹೂವು

ಒಬ್ಬ ಪ್ರೇಮಿಗೆ ಪ್ರಿಯತಮೆಯ ಪ್ರೀತಿಯು ಸಿಗದಾಗ ದಕ್ಕದಿದ್ದಾಗ ಅವಳ ನೆನಪುಗಳನ್ನ ಆ ಪ್ರೀತಿಯನ್ನು ಮರೆಯಲು ದೂರ ಹೋಗು ನನ್ನಿಂದ ನಿನ್ನ ಪ್ರೀತಿಯ ಜೊತೆಯಾಗಿದ್ದ ನೆನಪುಗಳು ಈಗ ನೋವುಗಳಾಗಿ ನನ್ನನ್ನು ಕಾಡುತಿವೆ. ನನ್ನ ಹತ್ತಿರ ಬರುವ ಮನಸ್ಸು ಮಾಡದಿರು. ನನ್ನ ಸನಿಹ ನೀನು ಬಂದಿದ್ದೆ ಆದರೆ ನೀನು ನನ್ನೆದೆಯಲ್ಲಿ ಅರಳಿ ನಿಂತಿರುವ ಆ ಪ್ರೀತಿಯ ಹೂವು ಬಾಡಿ ಹೋಗುವುದು. ನನ್ನ ಹೃದಯದಲ್ಲಿರುವ ನಿನ್ನ ನೆನಪುಗಳು ಮೂಡಿದಾಗ ನಿನ್ನ ಹುಡುಕುವ ಪ್ರಯತ್ನ ಮಾಡುತ್ತೇನೆ ಆದರೆ ನೀನು ನನಗೆ ಸಿಗಬೇಡ. ನೀನು ನನಗೆ ಮತ್ತೆ ಸಿಕ್ಕರೆ ನನ್ನ ಜೀವವೇ ಕಳೆದು ಹೋಗಬಹುದು. ನನ್ನ ನೆನಪುಗಳಿಂದ ನನ್ನಿಂದ ದೂರ ಸರಿ. ಅಂತ ಬಹು ಸೊಗಸಾಗಿ ವಿರಹದ ವೇದನೆಯ ಸಾಲುಗಳನ್ನು ಬರೆದು ಯಶಸ್ವಿಯಾಗಿದ್ದಾರೆ. ಪದ್ಮಶ್ರೀ ಪುರಸ್ಕೃತ ಜೋಗತಿ ಮಂಜಮ್ಮನವರ ಬಗ್ಗೆಯೂ ಕೂಡ ಈ ಕವನಸಂಕಲನದಲ್ಲಿ ಕವಿತೆಗಳನ್ನು ಬರೆದಿದ್ದಾರೆ.

ಮಾಂಸ ಎಲಬುಗಳ
ದೇಹಕ್ಕೆ
ಭೇದ ತೋರದ ಮಣ್ಣ

ಹೀಗೆ ಹಲವಾರು ಕವಿತೆಗಳು ಈ ಕವನಸಂಕಲನದಲ್ಲಿ ಇವೆ ಪ್ರೀತಿಯೇ ಹಾಗೆ, ಸಾಲಗಾರ, ಅವ್ವ’ ಹೀಗೆ ಪ್ರತಿಯೊಂದು ಕವಿತೆಯನ್ನು ಕೂಡ ಓದುಗರಿಗೆ ಇಷ್ಟವಾಗುತ್ತದೆ.ಈ ಕವನಸಂಕಲನ ಎಲ್ಲಾ ಕವಿತೆಗಳನ್ನು ವಿವರಿಸುತ್ತಾ ಹೋದಲ್ಲಿ ಓದುಗ ಮನದಲ್ಲಿ ಕುತೂಹಲ ಕಳೆದು ಹೋಗಬಹುದು ಅದರಿಂದ ಕೆಲವೊಂದು ಸಾಲುಗಳನ್ನು ಅಷ್ಟೇ ಪರಿಚಯಿಸಿದೆ ದಯವಿಟ್ಟು ಎಲ್ಲಾರೂ ಈ ಕವನಸಂಕಲನವನ್ನು ಕೊಂಡು ಓದಿ ಯುವ ಕವಿಗೆ ಪ್ರೋತ್ಸಾಹ ಮಾಡುವಿರೆಂದು ಬಯಸುವೆ.

ಆತ್ಮೀಯವಾಗಿ ಪುಸ್ತಕವನ್ನು ಕಳಿಸಿಕೊಟ್ಟು , ನಿಮ್ಮ ಕೃತಿಯನ್ನು ಓದುವ ಭಾಗ್ಯ ನನ್ನದಾಗಿಸಿದಕ್ಕೆ ಧನ್ಯವಾದಗಳು ಕವಿಗಳೇ. ನಿಮ್ಮಿಂದ ಇನ್ನೂ ಹತ್ತಾರು ಕೃತಿಗಳು ಕನ್ನಡಮ್ಮನ ಮಡಿಲನ್ನು ಸೇರಲಿ. ಈ ಕೃತಿಯಿಂದ ನಿಮಗೆ ಗೌರವಧಾರಗಳು ಲಭಿಸಲಿ ಎಂದು ಹಾರೈಸುವೆ

ನಾರಾಯಣಸ್ವಾಮಿ .ವಿ
ವಕೀಲರು ಮತ್ತು ಸಾಹಿತಿಗಳು
ಮಾಸ್ತಿ ಮಾಲೂರು ಕೋಲಾರ ಜಿಲ್ಲೆ

0
    0
    Your Cart
    Your cart is emptyReturn to Shop