ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಮೋಡ ಕಟ್ಟೀತು ಹೇಗೆ? ಮಳೆ ಸುರಿದೀತು ಹೇಗೆ? ನೆಲಕ್ಕೆ ಹಸಿರು ಮೂಡೀತು ಹೇಗೆ? ಬೆಳಕು ಹರಿದೀತು ಹೇಗೆ? ಗಾಳಿ ಬೀಸೀತು ಹೇಗೆ ? ನದಿ ಹರಿದೀತು ಹೇಗೆ? ಹೀಗೆ ಕವಿ ಜಿ.ಎಸ್ . ಶಿವರುದ್ರಪ್ಪನವರ ಅರ್ಥಪೂರ್ಣ ಕವಿತೆಗೆ ಸಾಲುಗಳನ್ನು ಸೇರಿಸುತ್ತಲೇ ಹೋಗಬಹುದು.ಅಂತಹ ಒಂದು ಅದ್ಭುತ ಕವಿತೆ ಪ್ರೀತಿ ಇಲ್ಲದ ಮೇಲೆ.
ಈ ಕವಿತೆಯ ಸಾಲುಗಳನ್ನು ಮೇಲುಕು ಹಾಕಿದಾಗಲೆಲ್ಲ ಅನ್ನಿಸೋದು ಪ್ರೀತಿ ಇಲ್ಲದೆ ಜಗವೇ ನಡೆಯದು.ಹೌದು ನವಮಾಸ ನೋವು ಸಹಿಸಿ ನಗುತ ಕಂದನ ಭಾರವ ಹೊರುವ ಮಾತೃ ಹೃದಯದಿ
ಇರುವುದು ತುಂಬು ಪ್ರೀತಿ. ಪ್ರೀತಿ ಇಲ್ಲದಿರೆ ಈ ಸೃಷ್ಟಿ ಕಾರ್ಯ ನಡೆಯುತ್ತಿರಲಿಲ್ಲ. ಪರಸ್ಪರ ಬಾಂಧವ್ಯಗಳು ಬೆಸೆಯಲು ಪ್ರೇಮ ಅತಿ ಮುಖ್ಯ.ತಂದೆ,ತಾಯಿ ಅಣ್ಣ ,ತಮ್ಮ ,ಅಕ್ಕ ತಂಗಿ,ಗಂಡ,ಗೆಳೆಯ,ಗೆಳತಿ ಹೀಗೆ ನಮ್ಮ ಸುತ್ತ ಸಾವಿರ ಸಂಬಂಧಗಳ ಹುಟ್ಟು ಹಾಕಿ ಬದುಕಿಗೆ ಒಂದು ಭದ್ರ ನೆಲೆಯನ್ನು ಒದಗಿಸುವುದು ಪ್ರೀತಿ.
ಹೀಗೆ ಪ್ರೀತಿ ನಮ್ಮ ಬಾಳಿನಲ್ಲಿ ಸಕಾರಾತ್ಮಕ ಮನೋಭಾವನೆಯನ್ನು ತುಂಬುತ್ತದೆ. ಸ್ಪೂರ್ತಿ ಚೈತನ್ಯವನ್ನು ಕೊಡುವುದು ಈ ಪ್ರೀತಿ. ಪ್ರೀತಿ ಇಲ್ಲದ ಕಡೆ ದ್ವೇಷ ಜನಿಸಿ ಅನಾಹುತಗಳಿಗೆ ಕಾರಣವಾಗುತ್ತದೆ.ಬದುಕು ಸುಂದರ ತೋಟವಾಗಬೇಕಾದರೆ ಅಲ್ಲಿ ಪ್ರೀತಿ ಎಂಬ ಹೂ ಅರಳಲೇಬೇಕು.ನಾವು ನಮ್ಮ ಮನದ ಬನದಲ್ಲಿ ಪ್ರೇಮಲತೆಯನ್ನು ಚಿಗುರಿಸದಿದ್ದರೆ ಬಾಳ ಬನ ಬೇಗುದಿಗೆ ಸಿಲುಕಿ ಮರುಭೂಮಿಯಂತಾಗುತ್ತದೆ.
ನನ್ನ ಹತ್ತಿರ ಹಣವಿದೆ. ಶ್ರೀಮಂತಿಕೆ ಇದೆ.ಅದರಿಂದ ಎಲ್ಲವನ್ನು ಕೊಂಡುಕೊಳ್ಳುತ್ತೇನೆ, ಎಂಬುದು ಬರಿ ನಮ್ಮ ಭ್ರಮೆ ಅಷ್ಟೇ.ವಾಸ್ತವದಲ್ಲಿ ಹಣಕ್ಕಿಂತ ಪ್ರೀತಿಗೆ ಬೆಲೆ ಜಾಸ್ತಿ .ಪ್ರಪಂಚ ಮುನ್ನಡೆಯಲು ಪ್ರೀತಿಯ ಒರತೆ ಎಲ್ಲೆಡೆ ಚಿಮ್ಮುತ್ತಿರಬೇಕು.ವಿಶ್ವವೇ ಕುಟುಂಬವಾಗಬೇಕಾದರೆ ಈ ಕುಟುಂಬದ ಮುನ್ನಡೆಗೆ ಬೇಕಾಗಿರುವ ಇಂಧನವೆಂದರೆ ಪ್ರೀತಿ.ಪ್ರೀತಿ ಎಂಬ ದಿವ್ಯೌಷಧಿಗೆ ಜಗದ ಭಯೋತ್ಪಾದನೆ,ದ್ವೇಷ, ವಂಚನೆ,ಗಲಭೆ ಅಶಾಂತಿಗಳನೆಲ್ಲ ಪರಿಹರಿಸುವ ಶಕ್ತಿ ಇದೆ.
ಇಂದು ಸಮಾಜದ ಎಲ್ಲ ಸ್ತರಗಳಲ್ಲಿ ಎದ್ದು ಕಾಣುವ ಕೊರತೆ ಪ್ರೀತಿ. ಊಟವಿಲ್ಲದೆ ಹಸಿದವರಿಗಿಂತ ಪ್ರೀತಿ ಇಲ್ಲದೆ ಪರದಾಡುತ್ತಿರುವವರ ಸಂಖ್ಯೆಯೇ ಹೆಚ್ಚುತ್ತಿದೆ.ಪರಸ್ಪರ ಪ್ರೀತಿ ಕಾಳಜಿ ಇಲ್ಲದೆ ಬಂಧಗಳ ನಡುವೆ ಬಿರುಕು ಮೂಡಿ ಸಂಬಂಧಗಳ ಕೊಂಡಿ ಕಳಚುತ್ತಿದೆ. *”ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆವು ನಮ್ಮೊಳಗೆ”- ಜಿ ಎಸ್ ಶಿವರುದ್ರಪ್ಪ* ನವರು ಹೇಳಿದಂತೆ ಇಂದು ನಾವು ಒಲವನ್ನು ಗುರುತಿಸುವಲ್ಲಿ ಸೋಲುತ್ತಿದ್ದೇವೆ. ಇದು ಸರಿ ಹೋಗಲು ಪ್ರೀತಿಯ ವರ್ಷಧಾರೆ ಎಲ್ಲೆಡೆ ಸುರಿಯಬೇಕು.
ಎನ್.ಎಸ್ ಲಕ್ಷ್ಮೀನಾರಾಯಣ ಭಟ್ ಅವರ ಕವಿತೆ ಹೀಗೆ ಹೇಳುತ್ತದೆ..
ಮಾನವನೆದೆಯಲಿ ಆರದೆ ಉರಿಯಲಿ ದೇವರು ಹಚ್ಚಿದ ದೀಪ.
ರೇಗುವ ದನಿಗೂ ರಾಗವು ಒಲಿಯಲಿ ಮೂಡಲಿ ಮಧುರಾಲಾಪ
ಒಲವ ಧಾರೆ ಜಿನುಗಿ ಜಗದೊಡಲ ತೋಯ್ದರೆ ಜಗವೇ ನಂದನವನ ಆಗುವುದು. ಅಂತಹ ಶಕ್ತಿಯುತವಾದ ಅಸ್ತ್ರ ಈ ಪ್ರೀತಿ.ಅದನ್ನು ಪ್ರಯೋಗಿಸಲು ಪ್ರತಿಯೊಬ್ಬರು ಕಲಿತಾಗ ಮಾತ್ರ ಹಿಂಸೆ,ಅಸೂಯೆ ಮುಂತಾದ ವೈರಿಗಳನ್ನು ಸುಲಭವಾಗಿ ಜೈಸಬಹುದು.ಆದರೆ ನಮ್ಮಲ್ಲಿರುವ ಸ್ವಾರ್ಥತನ ಅಹಂ ಭಾವ ಪ್ರೀತಿಗೆ ಅಡ್ಡಿಯಾಗಿದೆ. ಈ ಅಡ್ಡಿ ಆತಂಕಗಳನ್ನು ತೊರೆದು ವಿಶಾಲವಾದ ಮನೋಭಾವದಿಂದ ಧಾರಾಳವಾಗಿ ಪ್ರೀತಿಯನ್ನು ಹಂಚಿದಾಗ ಜಗದ ಮೈತ್ರಿ ಸಾಧ್ಯ.
ಮುನಿಸು,ಕೋಪ ಸಿಟ್ಟಿನಿಂದಾಗದ ಕಾರ್ಯ ಪ್ರೀತಿಯಿಂದ ಕ್ಷಣಾರ್ಧದಲ್ಲಿ ಮುಗಿದು ಹೋಗುತ್ತದೆ. ಅಂತಹ ಪ್ರೀತಿಯ ಕಾರಂಜಿ ನಮ್ಮ ಸುತ್ತ ಪುಟಿಯುತ್ತಿರಲಿ. ಬಾಂಧವ್ಯಗಳ ಕೊಂಡಿ ಕಳಚದೆ ಗಟ್ಟಿಯಾಗಲಿ.