ಕೃತಿ : #ಮೂರು_ತಲೆಮಾರು (ಭಾಗ – ೧೪ )
ಲೇಖಕ : #ಗಿರಿಮನೆ_ಶ್ಯಾಮರಾವ್
ಪ್ರಕಟಣೆ : #ಗಿರಿಮನೆ_ಪ್ರಕಾಶನ
ಬೆಲೆ : ₹ ೨೫೦/-
ಗಿರಿಮನೆ ಶ್ಯಾಮರಾವ್ ಅವರ #ಮೂರು_ತಲೆಮಾರು ನನಗೆ ಶ್ರೀಮತಿ ಗಾಯತ್ರಿ ಶಿವಕುಮಾರ್ ಅವರ ಪ್ರಾಯೋಜಕತ್ವದಲ್ಲಿ ಬಹುಮಾನವಾಗಿ ದೊರೆತ ಪುಸ್ತಕ. ಇದು ನನ್ನ ಕೈಸೇರಿ ಸುಮಾರು ಐದು ತಿಂಗಳು ಕಳೆದರೂ ಓದುವ ಸುಯೋಗ ಕೂಡಿ ಬಂದಿರಲಿಲ್ಲ. ಈ ಬಾರಿ ಸುಮಾರು ಮೂರು ದಿನಗಳ ಅವಧಿಯಲ್ಲಿ ಕಾದಂಬರಿಯನ್ನು ಓದಿ ಮುಗಿಸಿದೆ. ಹದಿನೈದು ಭಾಗದಲ್ಲಿ ಲೇಖಕರು ಬರೆದಿರುವ #ಮಲೆನಾಡ_ರೋಚಕ_ಕಥೆಗಳು ಸರಣಿಯಲ್ಲಿ ಇದು ೧೪ ನೇ ಭಾಗವಾಗಿದ್ದು ಪ್ರಮುಖವಾಗಿ #ಕಾವೇರಿ ಎಂಬ ಪಾತ್ರದ ಸುತ್ತ ಹೆಣೆದ ಕಥೆ. ಹಾಗಿದ್ದರೂ ಮೂರು ತಲೆಮಾರು ಎಂದಾಗ ಲೇಖಕರು ಆರಿಸುವ ಮೂರು ಸಂಸಾರಗಳು ಎಂದರೆ ಶ್ರೀಪಾದ ಭಟ್ಟರು, ಕಾವೇರಿ ಮತ್ತು ತನಿಯನ ಸಂಸಾರ. ಶ್ರೀಪಾದ ಭಟ್ಟರದು ಮುನ್ನೂರು ಒಕ್ಕಲು ಎಂಬ ಹೆಗ್ಗಳಿಕೆ ಹೊತ್ತ ಶ್ರೀಮಂತ ಬ್ರಾಹ್ಮಣ ಕುಟುಂಬ. ಕಾವೇರಿಯದು ಅತೀ ಬಡತನದ ಬ್ರಾಹ್ಮಣ ಕುಟುಂಬ. ತನಿಯನದು ಹೊಲೆಯರ ಕುಟುಂಬ. ಮೂರು ಸಂಸಾರಗಳೂ ತುಳು ನಾಡಿನದು . ಕಾವೇರಿ , ಭಟ್ಟರ ಮತ್ತು ತನಿಯನ ಕುಟುಂಬಗಳಲ್ಲಿ ಕೊಂಡಿಯಾಗಿ ನಿಂತಿರುವುದು ಇವಳ ವಿಶೇಷತೆ. ಇವಳ ಎಂಬತ್ತಕ್ಕೂ ಹೆಚ್ಚು ಹರೆಯದಲ್ಲಿ ಭಟ್ಟರ ಕುಟುಂಬ, ತನ್ನ ಕುಟುಂಬ ಮತ್ತು ಸ್ವಲ್ಪ.ಮಾತ್ರವೇ ತನಿಯನ ಕುಟುಂಬ ವಿಶ್ಲೇಷಿಸುತ್ತಾ ಹೋಗುತ್ತಾಳೆ.
ಕಾದಂಬರಿಯ ಆರಂಭವೇ ಇಂದಿರಾ ಗಾಂಧಿ ಯವರ ಸಮಯದಲ್ಲಿ ಜಾರಿಗೆ ಬಂದ #ಉಳುವವನಿಗೆ_ಭೂಮಿ ಕಾಯಿದೆ. ಈ ಕಾಯಿದೆ ಭಟ್ಟರಂತ ಅನೇಕ ಕುಟುಂಬಗಳನ್ನು ನಿರ್ಗತಿಕರನ್ನಾಗಿ ಮಾಡುತ್ತದೆ. ಮುನ್ನೂರೊಕ್ಕಲು ಎಂಬ ಹೆಗ್ಗಳಿಕೆ ಕುಸಿದು ಬೀಳುತ್ತದೆ. ಹೇಳಲು ಒಂದು ಎಕರೆ ಕೂಡ ಸಿಗದಂತೆ ಆಗುತ್ತದೆ. ದುರಾದೃಷ್ಟದಿಂದ ಭಟ್ಟರು ಹಿಂದಿನಿಂದ ಜತನದಿಂದ ಕಾಪಿಟ್ಟುಕೊಂಡು ಬಂದಿದ್ದ ಚಿನ್ನಾಭರಣಗಳೂ ಕಳ್ಳತನವಾಗಿ , ಭಟ್ಟರು ಅಕ್ಷರಶಃ ನಿರ್ಗತಿರಾಗುತ್ತಾರೆ. ತನಿಯ ತಂದೆಯಿಂದ ಆಸ್ತಿ ಸಿಗದ ಕಾರಣಕ್ಕೆ ಊರು ಬಿಟ್ಟು ಕಾಫಿ ಎಸ್ಟೇಟ್ ಕೆಲಸಗಾರನಾಗು ತ್ತಾನೆ . ಭಟ್ಟರ ಮನೆಯ ಅಡುಗೆ ಕೆಲಸದ ಕಾವೇರಿ ಅವರ ಮಗಳು ಶಾರದೆಯ ಮನೆ ಸೇರುತ್ತಾಳೆ. ಇದು ಒಂದು ಪೀಳಿಗೆಯ ಅಥವಾ ತಲೆಮಾರಿನ ಕಥೆ.
ನಂತರ ಭಟ್ಟರ ಮಗ ವಾಮನ, ಕಾವೇರಿಯ ಮಗ ಶಂಕರ ಮತ್ತು ತನಿಯನ ಮಕ್ಕಳು ಮಂಕ್ರ ಮತ್ತು ಪೋಡಿಯ ಕಥೆ. ತಂದೆ ಕಳೆದುಕೊಂಡದ್ದನ್ನು ಹಿಂತಿರುಗಿ ಪಡೆಯ ಬೇಕೆಂಬ ಜಿದ್ದಿನಲ್ಲಿ ವಾಮನ ಹೋಟೆಲ್ ಉದ್ಯಮ ಕಂಡುಕೊಂಡು ಯಶಸ್ಸನ್ನು ಪಡೆದರೆ, ದುಡ್ಡಿಗಾಗಿ ಪರದಾಡುತ್ತಿದ್ದ ತಾಯನ್ನು ಕಂಡಿದ್ದ ಕಾವೇರಿಯ ಮಗ ಶಂಕರ ದುಡ್ಡು ಸಂಪಾದನೆಯ ಜಿದ್ಧಿನಲ್ಲಿ ಅದರ ಬೆನ್ನು ಹತ್ತಿ, ತನ್ನ ಸಂಸಾರದ ಆಗುಹೋಗುಗಳನ್ನು ಕಡೆಗಣಿಸಿ ಹಣ ಸಂಪಾದಿಸುತ್ತಾನೆ, ಆದರೆ ಪತ್ನಿ ಲಕ್ಷ್ಮಿಯ ಕುತಂತ್ರದಿಂದ ತಾಯನ್ನ ಕಳೆದುಕೊಳ್ಳುತ್ತಾನೆ. ತನಿಯ.ಮಗ ಪೊಡಿಯ ಹಣಕ್ಕಾಗಿ ತನ್ನ ಧರ್ಮ ಬಿಟ್ಟು ಕ್ರಿಶ್ಚಿಯನ್ ಧರ್ಮ ಅನುಸರಿಸುತ್ತಾನೆ. ಆದರೆ ದೊಡ್ಡ ಮಗ ಮಾಂಕ್ರ ಮಾತ್ರ ದುಡ್ಡಿನಾಸೆಗಾಗಿ ಧರ್ಮ ಬಿಡದೆ ಹಿಂದೂ ವಾಗಿಯೆ ಉಳಿಯುತ್ತಾನೆ. ಇದು ಎರಡನೇ ಪೀಳಿಗೆ ಅಥವಾ ತಲೆಮಾರಿನ ಕಥೆ. ಇಲ್ಲಿ ಹಣದ ಮಹಿಮೆ ಅಥವಾ ಆಟ ಕಾಣಬಹುದು.
ಶಂಕರನ ಮಗಳು ಚೈತ್ರ, ವಾಮನನ ಮಗ ಶರಶ್ಚಂದ್ರ, ಪೋಡಿಯ ಮಗಳು ಈಗಿನ ತಲೆ ಮಾರಿನವರು. ಚೈತ್ರ ತಾನು ಸಂಪ್ರಾದಯ ವಿರೋಧಿ ಎಂಬ ಗುಂಗಿನಲ್ಲಿ ಮುಸಲ್ಮಾನ ಯುವಕನನ್ನು ಮದುವೆಯಾಗಿ, ಕೊನೆಗೆ ಸಂಪ್ರದಾಯಕ್ಕೆ ತಲೆಬಾಗ ಬೇಕಾದಾಗ, ಮುಸಲ್ಮಾನ ಧರ್ಮ ಒಪ್ಪದೇ ಗಂಡನಿಂದ ವಿಚ್ಛೇದನ ಪಡೆದು ಬಂದವಳು. ವಾಮನನ ಮಗ ಶರತ್ ಸಂಬಂಧದಲ್ಲಿ ವಿವಾಹವಾದರೂ ತನ್ನ ಹೆಂಡತಿಯ ತಾಯಿಯ ದಬ್ಬಾಳಿಕೆಗೆ ತಲೆಬಾಗದೆ ಹೆಂಡತಿಯಿಂದ ವಿಚ್ಛೇದನೆ ಪಡೆದವನು. ಪೋಡಿಯ ಮಗಳು ಇಲ್ಲಿ ಕೇವಲ ಸಾಂಕೇತಿಕವಾಗಿ ಬಂದವಳು. ಮೊದಲನೇ ತಲೆಮಾರು ಮತ್ತು ಎರಡನೇ ತಲೆಮಾರಿಗೆ ಹಣ ಕಳೆದುಕೊಳ್ಳುವುದು, ಮತ್ತು ಕಳೆದುಕೊಂಡ ಹಣ ಮತ್ತೆ ಸಂಪಾದಿಸುವುದೆ ಪ್ರಮುಖ ಗುರಿಯಾಗಿ ಹಣ ಎರಡೂ ತಲೆಮಾರನ್ನು ಆಳುತ್ತದೆ ಎಂದೇ ಹೇಳಬಹುದು. ಆದರೆ ಮೂರನೇ ತಲೆಮಾರಿಗೆ ಈ ಹಣ ಎಲ್ಲರ ಬಳಿ ಯಥೇಚ್ಛ ವಾಗಿದ್ದು ಗೌಣವಾಗುತ್ತದೆ ಎಂಬುದು ಮತ್ತೊಂದು ವಿಶೇಷ. ಎಲ್ಲರಿಗೂ ಈಗ ಹಣಕ್ಕಿಂತ ಬೇಕಾಗುವಿರುವುದು ಸುಖ ಮತ್ತು ನೆಮ್ಮದಿ. ಚೈತ್ರಾಳ ಬಾಳಿನ ದುರಂತ, ಶರತ್ ಬಾಳಿನ ದುರಂತ ಅವರಿಗೆ ಮಾತ್ರ ಸೀಮಿತ ವಾಗದೆ ಅವರ ತಂದೆ ತಾಯಿಗಳ ನೆಮ್ಮದಿ, ಶಾಂತಿಗೆ ಕೂಡ ಭಂಗ ತರುತ್ತದೆ. ಈ ಮೂರನೇ ತಲೆಮಾರಿನ ಮಕ್ಕಳಿಗೆ ಮೊದಲ ತಲೆಮಾರಿನ ಕಾವೇರಿ ಕೊಂಡಿಯಾಗಿ ಅವಳೂ ದುಃಖದಲ್ಲಿ ಭಾಗಿಯಾಗುತ್ತಾಳೆ. ಆದರೆ ಅದಕ್ಕಿಂತ ಹೆಚ್ಚಾಗಿ ವಿವೇಕದಿಂದ ವರ್ತಿಸಿ ಈ ಪೀಳಿಗೆಯಲ್ಲಿ ಶಾಂತಿ , ನೆಮ್ಮದಿ ತರುವ ಸರಪಳಿ ಆಗುತ್ತಾಳೆ. ಮೂರನೇ ಸಂಸಾರ ತನಿಯನ ಮೊಮ್ಮಗಳ ಮದುವೆಗೆ ಕೂಡ ಒಂದು ಬಗೆಯ ಸಲಹೆ ಕೊಟ್ಟು , ಕೌಟುಂಬಿಕ ಕಲಹಕ್ಕೆ ನಾಂದಿ ಹಾಡುತ್ತಾಳೆ. ಹೀಗೆ ಕಾವೇರಿ ಮೂರೂ ತಲೆಮಾರಿಗೆ ಬೆಸುಗೆ ಹಾಕುವುದು ಈ ಕಾದಂಬರಿಯ ವಿಶೇಷತೆ.
ಈ ಕಾದಂಬರಿ ನನ್ನ ಮನಸ್ಸಿಗೆ ಕಾವೇರಿ ನದಿಯ ಉಗಮ, ಜಲಪಾತವಾಗಿ ಧುಮ್ಮಿಕ್ಕಿ ನಂತರ ಸಾವಕಾಶವಾಗಿ ನಲಿಯುತ್ತಾ ಹರಿದು ಸಾಗರವನ್ನು ಸೇರುವ ಬಗೆಯನ್ನು ಅನುಭವಕ್ಕೆ ತಂದಿತು. ಭಟ್ಟರ ಮನೆಯಲ್ಲಿ ಹುಟ್ಟಿದ ಈ ಪಾತ್ರ , ಅವರ ಮಗಳು ಶಾರದೆಯ ಮನೆಗೆ ಬಂದಾಗ ರಭಸದಿಂದ ಧುಮ್ಮಿಕ್ಕುವ ಜಲಪಾತದ ರೂಪ ತಾಳಿ , ಮೂರನೇ ತಲೆಮಾರು ಮಂದ ಗತಿಯಲ್ಲಿ ಸಾಗುತ್ತದೆ. ತಾನು ದಾರಿಯಲ್ಲಿ ಹೊತ್ತು ಬಂದದ್ದನ್ನೆಲ್ಲಾ ಇಲ್ಲಿ ಜಮಾಯಿಸಿ ಮಂದಗತಿಯಲ್ಲಿ ಸಾಗುತ್ತದೆ. ಕೇವಲ ನಾಲ್ಕು ವರ್ಷಗಳಲ್ಲಿ ABCD ಕಲಿಯುವ ಕಾವೇರಿ ಇಂಗ್ಲೀಷ್ನಲ್ಲಿ ಸಂವಾದ ಮಾಡುವಷ್ಟು, ಆಂಗ್ಲ ಪುಸ್ತಕಗಳನ್ನು ಓದುವಷ್ಟು, ಪ್ರಪಂಚದ ತತ್ವಗಳನ್ನೆಲ್ಲಾ ಅರಿಯುವಷ್ಟು , ಎಲ್ಲಾ ಅನುಭವಗಳನ್ನು ಪಡೆದು ಪ್ರಬುದ್ಧಳಾಗುವಷ್ಟು ವೇಗದಲ್ಲಿ ಸಾಗುತ್ತಾಳೆ. ಆದರೆ ಇಳಿ ವಯಸ್ಸಿನಲ್ಲಿ ಮೊಮ್ಮಗಳು ಚೈತ್ರಳನ್ನು ಕೂಡಿದಾಗ ಅವಳು ಶಾಂತವಾಗಿ ಹರಿಯುವ ನದಿಯಾಗಿ ತನ್ನೆಲ್ಲಾ ಅನುಭವಗಳನ್ನು ಮೊಮ್ಮಗಳಿಗೆ ಧಾರೆ ಎರೆದುಕೊಟ್ಟು ತಾನು ನೇಪಥ್ಯಕ್ಕೆ ಸರಿಯುತ್ತಾಳೆ.
ಕಾವೇರಿಯ ಕಥೆ ಹೆಣೆಯುವಲ್ಲಿ ಲೇಖಕರೂ ಪ್ರಪಂಚದ ಆಗು ಹೋಗುಗಳನ್ನೆಲ್ಲಾ ಈ ಒಂದೇ ಕಥೆಯಲ್ಲಿ ಹೇಳಿದಂತೆ ತೋರುತ್ತದೆ. ಮೊದಲನೆಯದಾಗಿ ಸರ್ಕಾರದ ಅರ್ಥವಿಲ್ಲದ ಕಾನೂನು. ನೂರಾರು ಎಕರೆ ಜಮೀನು ದಾರರಿಗಿಂತ ಹೆಚ್ಚು ಹಾನಿಗೆ ಈ ಕಾಯಿದೆ ಒಳಗಾಗುವಂತೆ ಮಾಡಿದ್ದು ಒಂದೆರಡು ಎಕರೆ ಹೊಂದಿದ್ದು ಅದನ್ನು ಗೇಣಿಗೆ ಕೊಟ್ಟವರನ್ನು. ಅದನ್ನು ಕಳೆದುಕೊಂಡು ಅನೇಕ ಸಂಸಾರಗಳು ಬೀದಿಗೆ ಬಿದ್ದದ್ದೂ ಸತ್ಯವೇ. ಘಟ್ಟದ ಇನ್ನೊಂದು ಭಾಗದವರು ಮಾತ್ರ ಬುದ್ಧಿವಂತರ ಘಾಗೆ ಕಾಯ್ದೆ ಜಾರಿಗೆ ಬರುವ ಮುನ್ನವೇ ಗೇಣಿದಾರರನ್ನು ಬಿಡಿಸಿ , ತಾವೇ ಕಾಫಿ ಪ್ಲಾಂಟೇಶನ್ ಮಾಡಲು ನಿಂತು ಭೂಮಿ ಕಾಣಿ ಉಳಿಸಿಕೊಂಡವರು.
ಹೀಗೆಯೇ ಜಾತಿ ವ್ಯವಸ್ಥೆ, ಸ್ತ್ರೀ ಶಿಕ್ಷಣ, ಮಠದ ಸ್ವಾಮಿಗಳ ಢಂಬಾಚಾರ , ಮಠಗಳಲ್ಲಿ ನಡೆಯುವ ಸ್ತ್ರೀ ಶೋಷಣೆ, ಅಂತರ್ಧರ್ಮ ವಿವಾಹ ಮತ್ತು ಸೋಲುಗಳು, ದೇವರುಗಳ ಜನಿಸುವಿಕೆ, ಮೂಢ ಸಂಪ್ರದಾಯಗಳು ಮತ್ತು ನಂಬಿಕೆಗಳು,ಸ್ತ್ರೀ ಮೇಲಿನ ದೌರ್ಜನ್ಯ, ಪೋಷಕರು ಮಕ್ಕಳನ್ನು ಬೆಳೆಸುವಿಕೆ – ತಮ್ಮ ಆಶೋತ್ತರಗಳ ಒತ್ತಾಯ ಮಕ್ಕಳ ಮೇಲೆ ಹೇರುವಿಕೆ, ಸಾರಾಯಿಯ ಅನಾಹುತಗಳು, ಧರ್ಮಾಂತರಗಳು – ಅದಕ್ಕೆ ಹಣ ಮತ್ತು ಜಾತೀಯತೆಯ ಹಿನ್ನೆಲೆ, ವೇದಗಳಲ್ಲಿ ಜಾತಿಯ ಬಗೆಗಿನ, ದೇವರ ಬಗೆಗಿನ ಉಲ್ಲೇಖಗಳು , ಇಂದಿನ ವಿದ್ಯೆಯ ಬೇಜವಾಬ್ದಾರಿ ತನ…… …ಹೀಗೆ ಅನೇಕ ವಿಷಯಗಳನ್ನು ಎರಡು ಪಾತ್ರಗಳು ಚರ್ಚಿಸುವಂತೆ ತಂದಿರುವುದು ಕೆಲವೊಮ್ಮೆ ಓದುಗನಿಗೆ ಜೀರ್ಣ ಆಗಲೂ ಕಷ್ಟವೇನೋ ಎನಿಸುತ್ತದೆ. ಇದರ ಬಗ್ಗೆ ಚರ್ಚಿಸುತ್ತಾ ಕಾವೇರಿ ತರುವ ಪಾತ್ರವೇ ಶಾರದೆಯ ಗಂಡ ಕೃಷ್ಣ ಭಟ್ಟ. ಕಥೆಯೊಳಗಿದ್ದೂ ಇರದ ಪಾತ್ರ. ಶಾರದೆ ಯಾವುದನ್ನು ಅರ್ಥ ಮಾಡಿಕೊಳ್ಳದೆ ಅವಳ ಗಂಡ ಹೇಳಿದ್ದನ್ನೆಲ್ಲಾ ತಾನು ಅರ್ಥೈಸಿಕೊಂಡು ಎನ್ನುವ ಕಾವೇರಿ ಹಮ್ಮಿ ನವಳಾಗಿ ಕಾಣುತ್ತಾಳೆ. ಹಳ್ಳಿಯಲ್ಲಿ ಹುಟ್ಟಿ , ಬಡತನದಲ್ಲಿ ಬೆಳೆದು, ಬಡತನದಲ್ಲೇ ಜೀವ ಸಾಗಿಸುವ ಕಾವೇರಿಯ ಪಾತ್ರಕ್ಕೆ ಇರಬೇಕಾದ ಸರಳತೆ ಇಲ್ಲವೇನೋ ಎನಿಸುತ್ತದೆ. ಕಾದಂಬರಿಯ ಕೊನೆ ಇನ್ನೂರು ಪುಟಗಳು ಬಹಳ ಮಂದಗತಿಯಲ್ಲಿ ಸಾಗಿ, ಎರಡು ಪಾತ್ರಗಳ ನಡುವೆ ನಡೆಯುವ ಸಂಭಾಷಣೆ ಓದುಗನ ಸಹನೆ ಪರೀಕ್ಷಿಸುತ್ತದೆ ಎನಿಸುತ್ತದೆ. ಕಾವೇರಿ ಅಜ್ಜಿಯನ್ನು ಪ್ರಶ್ನಿಸುವ ಚೈತ್ರ , ಮೂವತ್ತರ ಪ್ರೌಢ ಯುವತಿಯಾಗಿ ಕಾಣದೆ , ಆಗ ತಾನೇ ಯೌವ್ವನಕ್ಕೆ ಕಾಲಿಡುತ್ತಿರುವ, ಪ್ರತಿಯೊಂದನ್ನೂ ತಿಳಿಯುವ ಕುತೂಹಲ ಇರುವ ಅಮಾಯಕ teen age ಹುಡುಗಿಯಂತೆ ಕಾಣುತ್ತಾಳೆ. ಪ್ರತಿ ಬಾರಿ ಕಾವೇರಿ ‘ ನಿನ್ನನ್ನು ನಿಮ್ಮಮ್ಮ rank ನ ಹಿಂದೆ ತಳ್ಳಿ ಪ್ರಪಂಚಕ್ಕೆ ತೆರೆದಿಡಲಿಲ್ಲ ‘ ಎಂಬ ಮೂದಲಿಕೆ ಪದೇ ಪದೇ ಮೇಲೇಳುವುದು , ಚೆನ್ನಾಗಿ ಓದಲು ಒತ್ತಾಯಿಸುವ ತಾಯಿ ಲಕ್ಷ್ಮಿಯನ್ನು ಅಪರಾಧಿಯಾಗಿ ನಿಲ್ಲಿಸುವುದು ಬೇಡವಿತ್ತೇನೋ ಎನಿಸುತ್ತದೆ. ಇದು ಇಂದಿನ ಪೋಷಕರ ಮತ್ತು ಮಕ್ಕಳ ಸ್ಥಿತಿ ನಿಜ. ಆದರೆ ಒಂದು ಹಂತದ ವರೆಗೆ ಈ ಬಗೆಯ ಬಂಧನ ಇಂದಿನ ಸ್ಪರ್ಧಾತ್ಮಕ ಸಮಾಜದಲ್ಲಿ ಬೇಕು ಎಂಬುದೂ ನಿಜ. ಹಾಗೆಂದು ಓದುವುದೇ ಮುಖ್ಯವಾಗದೆ ಹಿರಿಯರೊಡನೆ , ಇತರರೊಡನೆ ಕಲೆಯಲು ಬಂದವರೆಲ್ಲಾ ಬದುಕಿನಲ್ಲಿ ಎಲ್ಲಾ ಬಗೆಯ ಪಾಠ ಕಲಿತಿರುತ್ತಾರೆ ಎಂಬುದು ಕೂಡ ಅನೇಕ ಬಾರಿ ಸುಳ್ಳಾದೀತು. ಅವರವರ ಜೀವನಾನುಭವ ಅವರವರಿಗೆ ಪಾಠ ಕಲಿಸುವುದು ಸುಳ್ಳಲ್ಲ. ಈ ಕಾದಂಬರಿ ಅನೇಕ ವಿಶ್ಲೇಷಣೆಗಳನ್ನು ಹೊತ್ತ ವಿಚಾರವಾದಿ ಕಾದಂಬರಿ ಎಂದರೆ ತಪ್ಪಲ್ಲ ಅಂತೆಯೇ #ರೋಚಕ_ಕಥೆಗಳು ಎಂಬ ಹೇಳಿಕೆ ನನ್ನನ್ನು ದಾರಿ ತಪ್ಪಿಸಿದ್ದೂ ಸುಳ್ಳಲ್ಲ. ಕಾರಣ ಕಾದಂಬರಿಯಲ್ಲಿ ರೋಚಕತೆ ಹುಡುಕಿ ಸೋತೆ. ಅಲ್ಲದೆ #ಮಲೆನಾಡು ಎಂಬ ಉಪಸರ್ಗ ಕೂಡ ಇತ್ತು. ಮಲೆನಾಡ ರಮಣೀಯ ಸೌಂದರ್ಯದ ವರ್ಣನೆಯ ನಿರೀಕ್ಷೆ ಕೂಡ ಇತ್ತು. ಕಥೆಯ ಹೆಚ್ಚಿನ ಭಾಗ ನಗರದಲ್ಲಿ ನಡೆದು, ಮಲೆನಾಡಿಗೆ ಕಾಲಿಟ್ಟಾಗ ಅಜ್ಜಿ – ಮೊಮ್ಮಗಳ ಸಂವಾದವೆ ಹೆಚ್ಚಾಗಿ ಮಲೆನಾಡ ಸೌಂದರ್ಯ ಕಾಣಲಿಲ್ಲ ಎನ್ನಬಹುದು. ಅದು ಏನೇ ಇರಲಿ ಕಾವೇರಿ ಪಾತ್ರದ ಮೂಲಕ ಆಧುನಿಕ ವಿಚಾರಧಾರೆ ಮಂಡಿಸುವಲ್ಲಿ, ಸುತ್ತ ಮುತ್ತಲಿನ ಆಗು ಹೋಗುಗಳನ್ನು ಪರಿಚಯಿಸುವಲ್ಲಿ ಲೇಖಕರು ಗೆದ್ದಿದ್ದಾರೆ.