1
ಕೊನೆಯಿರದ ಪ್ರಶ್ನೆ
ಒಂದೊಮ್ಮೆ ಆಗಸದಿ
ಸರಿರಾತ್ರಿ ಬಾನಿನಲಿ
ಅರಳುತಿಹ ಬಾಲ್ಯದಲಿ
ಎಣೆಸುತ್ತ ಕೇಳಿದೆ ಚುಕ್ಕೆಗಳೆಷ್ಟೊ?
ಕಣ್ಣರಳಿಸಿ ಹುಬ್ಬೇರಿಸಿ
ಮೈದಡವಿ ಕೈಹಿಡಿದು
ಹೇಳಿದೆ ನೀನು ಲಕ್ಷ ಕೋಟಿ.
ಸೂರ್ಯನಡಿ ಶಾಖ ,
ಚಂದಿರನ ತಂಪು,
ಬಾನ ಕಡಲಿನ ಆಳ
ಕಾಡು-ಬೆಟ್ಟಗಳ ಬಣ್ಣ ಸಾಗಿದ್ದವು ಪ್ರಶ್ನೆಗಳು
ಜೊತೆಗಿದ್ದವು ನಿನ್ನುತ್ತರಗಳು.
ಕಾಲ ಸಾಗಿತು ಬಾಲ್ಯ ಸರಿಯಿತು
ಇಂದೂ ಇವೆ ಪ್ರಶ್ನೆಗಳು
ಚುಕ್ಕಿಯಂದದಿ ಲಕ್ಷಕೋಟಿ
ಆದರೆ ನೀನೇ ಇಲ್ಲ
ಅದಕುತ್ತರಗಳೂ ಇಲ್ಲ..
ಬದುಕಿನಾಟದ
ಸಹಪಯಣದಲಿ ಸಾಗಿ
ಹುಡುಕುತಿದೆ ಮನವಿಂದೂ
ಸ್ಪಂದಿಸುವ ಮನಕಾಗಿ.
ಸತ್ಯವದು ಪಯಣ ಸಾಗಿದೆ
ಗುರಿ ಇರದ ಬಾಳ ದಾರಿಗೆ
ಹೆಗಲೇರಿದ ಬದುಕ ಹೊತ್ತು
ತುಂಬುತಲಿ ಕರುಳ ಕುಡಿಗಳ ತುತ್ತು
ಕರ್ತವ್ಯದ ಕರೆ ಕೂಗಿ ಕೂಗಿ
ಹುಸಿನಗುವು ಮೊಗದಲಿ ತೂಗಿ
ದಣಿದ ದೇಹದ ನಡುವೂ ಬಾಗಿ
ಅದೇ ಭಾನು, ಅದೇ ಬಾನು,
ಶಶಿ ತಾರೆಗಳೆಲ್ಲ ಮಿನುಗುತಿರಲು
ಇಂದೂ ಇವೆ ಪ್ರಶ್ನೆಗಳು
ಜೊತೆಗೆ ನೀನೂ ಇಲ್ಲ
ಅದಕುತ್ತರಗಳೂ ಇಲ್ಲ..
ಹೊಸ ಮೊಳಕೆ ಗಿಡವಾಗಿ
ಗಿಡ ಬೆಳೆದು ಮರವಾಗಿ
ಹಸಿರೆಲೆಗಳ ನಡುವೆ ಹಣ್ಣೆಲೆಯು ಬಾಗಿ
ಟೊಂಗೆಗಳು ಹರಡಿ ಹಲವು
ಆಳದಲಿ ಗಟ್ಟಿ ಬೇರಿನ ಒಲವು
ಗಾಳಿ,ಮಳೆ,ಬಿಸಿಲೆನ್ನದೆ
ಕಾಯ್ದು ಕಾಪಾಡಿದ ಬನದಿ
ಒಂದೊಂದು ಹೂ ನಕ್ಕು ಕರೆಯುತಿರಲು
ಕಾಡಿದ ನೆನಪು ಕತ್ತಲ ದೀಪ
ಸಾರ್ಥಕ ಬಾಳಿಗೊಂದು ನೆಪ
ಸಾಗಿದೆ ಇರುಳಿನೆಡೆ ಬದುಕು
ಎಲ್ಲವೂ ಮಸುಕು ಮಸುಕು.
ಮಾಡಿದ ಕಾರ್ಯಗಳೆಷ್ಟು
ಕೊಡವಿಕೊಂಡೆದ್ದ ಬೆಳಗುಗಳೆಷ್ಟು
ಇಂದೂ ಇವೆ ಪ್ರಶ್ನೆಗಳು
ಜೊತೆಗೆ ನೀನಿಲ್ಲ…
ಪ್ರಶ್ನೆಗೆ ಕೊನೆಯಿಲ್ಲ..
2
ರಾಣಿವಾಸದಾಣೆ
ನಿನ್ನೊಲುಮೆ ಅರಮನೆಯ
ರಾಣಿಯಾಗಲೊಲ್ಲೆ
ನಿನ್ನೊಂದು ಹೆಜ್ಜೆಯಡಿ
ಧೂಳಾಗಿ ಜೊತೆ- ಸಾಗಿ
ತೂರಿಬಂದ ಗಾಳಿಗೆ
ಹಾರಿಹೋಗದೆ ನಿನಗಂಟಿ
ಕಳೆಯಾದೆ, ಕೊಳೆಯಾದೆ,
ಕ್ಷಮೆಯಿರಲಿ…
ನನ್ನಿನಿಯ ನಿನ್ನಂತರಂಗದ
ಪಿಸುಮಾತಿಗೆ ಕಿವಿಯಾಗಿ
ಮೌನಕ್ಕೆ ಧ್ವನಿಯಾಗಿ
ಕರಿನೆರಳ ಕತ್ತಲೆಗಂಜಿ
ನಿನ್ನ ಕಣ್ಬೆಳಕ ವಿದ್ಯುಲ್ಲತೆಯಾಗಿ
ಹೊರಹೊಮ್ಮುವಾಗ ನಾ
ಸ್ವಾರ್ಥಿಯಾದೆ ಕ್ಷಮೆಯಿರಲಿ..
ನಿನ್ನೊಲುಮೆ ಸಾಗರದಿ
ಜೋಡಿ ತೆರೆಯಾಗಿ ಜೊತೆ ಸಾಗಿ
ಆವಿಯಾಗುವ ಭಯದಿ
ನಿನ್ನ ಬೆವರ ಪಸೆಯಾಗಿ
ಮೈಮನವೆಲ್ಲ ಹರಡಿ
ನಿನ್ನನಲ್ಲ..ನಿನ್ನಾತ್ಮವ ಬಯಸಿ
ನಾ ಸ್ವಾರ್ಥಿಯಾದೆ.
ಕ್ಷಮೆಯಿರಲಿ..