ಸೂರ್ಯಕೀರ್ತಿ (Suryakeerthy)

ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯ ಸಂಪಾದಕರಾದ ಸೂರ್ಯಕೀರ್ತಿ ಅವರು ತುಮಕೂರಿನ ನೆಲಮೂಲದ ಕವಿ. ಇವರ ಕವಿತೆಗಳು ಚೈನೀಸ್, ಬೆಂಗಾಲಿ,ಹಿಂದಿ, ತುರ್ಕಿ, ಇಂಗ್ಲೀಶ್, ತೆಲುಗು ಮುಂತಾದ ಭಾಷೆಗಳಿಗೆ ಅನುವಾದಗೊಂಡಿವೆ. ಇವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೊಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಜನಿಸಿದವರು, ಗ್ರಾಮೀಣ ಬದುಕಿನ ವಿಸ್ತಾರಗಳು ಇವರ ಬರಹದ ಮೂಲಕ ಕಾಣಬಹುದು. ಬೆಂಗಳೂರು ವಿಶ್ವವಿದ್ಯಾಲಯದಿಂದ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು (ಎಂ.ಕಾಂ) ಉನ್ನತ ಶ್ರೇಣಿಯಲ್ಲಿ ಮುಗಿಸಿಕೊಂಡು, ಕನ್ನಡ ರತ್ನ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಮೊದಲ ರ್ಯಾಂಕ್ ಗಳಿಸಿದ ಸೂರ್ಯಕೀರ್ತಿ ಅವರು ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಂಗಳೂರಿನಲ್ಲಿ ಕನ್ನಡ ಎಂ.ಎ ಯನ್ನು ಆಸಕ್ತಿಯಿಂದ ಅಧ್ಯಯನ ಮಾಡಿ, ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿ, ಈಗ ಸಂತ ಫ್ರಾನ್ಸಿಸ್ ಕಾಲೇಜು, ಕೋರಮಂಗಲ, ಬೆಂಗಳೂರು ಇಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಕೇಂದ್ರ ಸಾಹಿತ್ಯ ಪರಿಷತ್ತು ನಡೆಸುವ ‘ಶಾಸನ ಶಾಸ್ತ್ರ’ದಲ್ಲಿ ಡಿಪ್ಲೋಮಾ ಹಾಗೂ ಬಿ ಎಂ ಶ್ರೀ ಪ್ರತಿಷ್ಠಾನ ನಡೆಸುವ ‘ ಹಳಗನ್ನಡ ಮತ್ತು ಶಾಸನ ಶಾಸ್ತ್ರ’ದಲ್ಲಿ ಡಿಪ್ಲೋಮಾ ಅಧ್ಯಯನ ಮಾಡಿದ್ದಾರೆ.

ಇವರ ಕವಿತೆಗಳನ್ನು ಫೇಸ್ಬುಕ್ನಲ್ಲಿ ಓದಿದಂತ ಡಾ. ಟ್ಜೆಮಿನ್ ಇಶನ್ ಅವರು ಚೈನೀಸ್ ಭಾಷೆಗೆ ಅನುವಾದಿಸಿದ್ದಾರೆ, ಹಾಗೂ ತೈವಾನ್ ಮತ್ತು ಚೀನಾ ಸಾಹಿತ್ಯ ಆಸಕ್ತರು ಓದಿರುವುದು ಹೆಮ್ಮೆಯ ಸಂಗತಿಯಾಗಿದೆ. ಬೆಂಗಾಲಿ ಭಾಷೆಗೆ ಸೂರಜ್ ಅವರು ಅನುವಾದಿಸಿದ್ದಾರೆ. ಹಿಂದಿಗೆ ಡಾ. ರಾಜೇಂದ್ರ ಪರದೇಸಿ ಅವರು ಅನುವಾದಿಸಿ ‘ ಹಿಂದಿ ಕವಿತಾ ಕೆ ಸಾತ್ ಸ್ವರ್ ‘ ಎಂಬ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಇವರು ೨೦೨೨ ರಲ್ಲಿ ನಡೆದ ವಿಶ್ವ ವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಚೀನಾದ ಗಾಲಾ ವಸಂತ ಕಾವ್ಯ ಹಬ್ಬ 2023ರಲ್ಲಿ ಸೂರ್ಯಕೀರ್ತಿಯವರು ಭಾಗಿಯಾಗಿದ್ದಾರೆ. ಮತ್ತು ಚೈನೀಸ್ ಸ್ಪ್ರಿಂಗ್ ಫೆಸ್ಟಿವಲ್ ಗಾಲಾ ಆಫ್ ಪೊಯಟ್ರಿ 2023,ಈ ಕಾರ್ಯಕ್ರಮದಲ್ಲಿ ಕೊಡಮಾಡುವ ‘ಅಂತರಾಷ್ಟ್ರೀಯ ಕವಿ’ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ರಾಷ್ಟ್ರಮಟ್ಟದ ‘ಸಂಗಂ ಸಾಹಿತ್ಯ ಪುರಸ್ಕಾರ’ಕ್ಕೆ ಹಾಗೂ ‘ಸು ರಂ ಎಕ್ಕುಂಡಿ ಕಾವ್ಯ ಪ್ರಶಸ್ತಿಗೆ’ ಇವರ ‘ಮೀನು ಕುಡಿದ ಕಡಲು’ ಪುಸ್ತಕ ಕೊನೆಯ ಹಂತಕ್ಕೆ ಆಯ್ಕೆಯಾಗಿದೆ. ತುಮಕೂರಿನ ರಾಜ್ಯ ಮಟ್ಟದ ಕವಿತೆ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. 2017ನೇ ಸಾಲಿನಲ್ಲಿ ಕರ್ನಾಟಕ ಸರಕಾರ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ” ಚೈತ್ರಾಕ್ಷಿ” ಎಂಬ ಕವಿತಾ ಸಂಕಲನ ಧನ ಸಹಾಯ ಪಡೆದುಕೊಂಡು ಲೋಕಾರ್ಪಣೆಯಾಗಿದೆ. ಈ ಪುಸ್ತಕವು 2018ನೇ ಸಾಲಿನ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ “ಸುಮನ್ ಸೋಮಶೇಖರ ಸೋಮವಾರ ಪೇಟೆ” ದತ್ತಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇವರ ‘ಮೀನು ಕುಡಿದ ಕಡಲು’ ಹಸ್ತಪ್ರತಿಯು ‘ಅಲ್ಲಮ ಕಾವ್ಯ ಪುರಸ್ಕಾರ’ ಪಡೆದುಕೊಂಡಿದೆ. ಹಾಗೆ ಉತ್ತರ ಪ್ರದೇಶದಲ್ಲಿ ನೀಡುವ ‘ತಥಾಗತ ಸೃಜನ್ ಸಮ್ಮಾನ’ ಪ್ರಶಸ್ತಿ ಮುಂತಾದ ಪುರಸ್ಕಾರಗಳನ್ನು ಇವರು ಪಡೆದುಕೊಂಡಿದ್ದಾರೆ.

ಇವರ ಕವಿತೆಯು ಕನ್ನಡ ಸಾಹಿತ್ಯ ಅಕಾಡೆಮಿ ಸಂಗ್ರಹಿಸುವ ಕವಿತಾ ಸಂಕಲನ–22 ಸಂಪಾದಿತ ಕೃತಿಗೆ ಆಯ್ಕೆಯಾಗಿದೆ. ಕಾಜಾಣ ಕಾವ್ಯ ಕಮ್ಮಟ, ಎಚ್ ಎ ಎಲ್ ಕಾವ್ಯ ಸಂಭ್ರಮ, ವಿಜಯ ಕರ್ನಾಟಕ ಪತ್ರಿಕೆಯ ವಸಂತ ಕಾವ್ಯ ಸಂಭ್ರಮ, ಪ್ರಜಾವಾಣಿ ಪತ್ರಿಕೆಯ ಕವಿಗೋಷ್ಠಿ , ಅಹೋರಾತ್ರಿ ನಡೆಯುವ ಕಾಡುವ ಕಿರಂ, ಬಹುತ್ವ ಭಾರತ, ಕಾವ್ಯ ಸಂಜೆ ಇತ್ಯಾದಿ ಕಾವ್ಯ ಹಬ್ಬಗಳಲ್ಲಿ ಕವಿಯಾಗಿ ಭಾಗವಹಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾನಿಲಯದ ಮೂರು ಮತ್ತು ನಾಲ್ಕನೆಯ ಸೆಮಿಸ್ಟರ್ BVA&BFA ಪಠ್ಯ ಪುಸ್ತಕದ ಸಂಪಾದಕರಾಗಿ, ಕನ್ನಡ ಸ್ಪರ್ಧಾ ಕೌಶಲ, ಪದವಿ ನಾಲ್ಕನೆಯ ಸೆಮಿಸ್ಟರ್ ಕನ್ನಡ ಮುಕ್ತ ಆಯ್ಕೆ ಪತ್ರಿಕೆ -೯ ಪಠ್ಯ ಪುಸ್ತಕಕ್ಕೆ ಲೇಖಕರು ಹಾಗೂ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ನಿರ್ದೇಶನದ ಮೂರು ನಾಟಕಗಳು ಜಲಗಾರ, ಹೆಣದ ಬಟ್ಟೆ ಮತ್ತು ಅನಿಮಲ್ ಫಾರ್ಮ್ ರಂಗರೂಪ ಯಶಸ್ವಿಯಾಗಿ ಪ್ರದರ್ಶನಗೊಂಡಿವೆ. ಇವರು ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯಮಟ್ಟದಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಪಾಕಶಾಸ್ತ್ರ, ಸಂಸ್ಕೃತ ಕಾವ್ಯಗಳ ಓದು, ಬೌದ್ಧಸಾಹಿತ್ಯ, ಶಾಸನ ಮತ್ತು ಪುರಾತತ್ವ, ಹಳಗನ್ನಡ ಓದು ಮತ್ತು ವ್ಯಾಕರಣ, ರಂಗಭೂಮಿ ಮುಂತಾದ ಕ್ಷೇತ್ರಗಳಲ್ಲಿ ಇವರು ಆಸಕ್ತಿಯೊಂದಿದ್ದಾರೆ. ಇವರ ವಿಮರ್ಶೆ, ಕವಿತೆ, ಕಥೆ, ಮತ್ತು ಪ್ರಬಂಧಗಳು ಪ್ರಜಾವಾಣಿ, ವಿಜಯಕರ್ನಾಟಕ, ವಾರ್ತಾಭಾರತಿ, ಅವಧಿ, ಕೆಂಡಸಂಪಿಗೆ, ಬುಕ್ ಬ್ರಹ್ಮ, ತುಷಾರ ಮುಂತಾದ ಪತ್ರಿಕೆಗಳಲಿ ಪ್ರಕಟಣೆಗೊಂಡಿವೆ. 

ಇವರ ಪ್ರಮುಖ ಕೃತಿಗಳು:-

1. ಚೈತ್ರಾಕ್ಷಿ- ಕವನ ಸಂಕಲನ, ಮಿಂಚುಳ್ಳಿ ಪ್ರಕಾಶನ ಶಿವಮೊಗ್ಗ.
2. ಮೀನು ಕುಡಿದ ಕಡಲು- ಕವನ ಸಂಕಲನ, ಅಲ್ಲಮ ಪ್ರಕಾಶನ ಬೆಂಗಳೂರು.
3. ಪ್ರೇಮ ದೈವಿಕ ಪರಿಮಳ – ಕವಿತಾ ಸಂಕಲನ, ಮಿಂಚುಳ್ಳಿ ಪ್ರಕಾಶನ ಶಿವಮೊಗ್ಗ.
4. ಕಿರಂ ಹೊಸ ಕವಿತೆ ೨೦೨೩ – ಸಂಪಾದಿತ ಕೃತಿ, ಮಿಂಚುಳ್ಳಿ ಪ್ರಕಾಶನ ಶಿವಮೊಗ್ಗ.
5. Love is a divine fragrance- An Anthology of World Poetry on Gender issues – Editor,
Minchulli Publications, Shivamogga.
6. MULTILINGUALISM IN LANGUAGE AND LITERATURE – EDITOR-
ISBN – 9789354934636, Surana College Press, 2021.
7. 3RD Sem BVA & BFA TEXTBOOK – Editor, Published by Bengaluru University Prasaranga,
Jnanabharati, Bengaluru.
8. 4th Sem BVA & BFA TEXTBOOK – Editor, Published by Bengaluru University Prasaranga,
Jnanabharati, Bengaluru.
9. KANNADA SPARDHAA KOUSHALA – Open elective paper -9, Editor, Published by
Bengaluru University, Jnanabharati, Bengaluru.

ಮಿಂಚುಳ್ಳಿ ಸಾಹಿತ್ಯ ಪತ್ರಿಕೆ/ಪ್ರಕಾಶನದ ಕಳೆದ 8 ವರ್ಷಗಳಿಂದ ಇದುವರೆಗಿನ ಕನ್ನಡದ/ಸಾಹಿತ್ಯದ ಕಾರ್ಯಚಟುವಟಿಕೆಗಳು:-

೧. 2017ರಲ್ಲಿ ಚೈತ್ರಾಕ್ಷಿ ರಂಗಭೂಮಿ ತಂಡದ ಮೂಲಕ ಕುವೆಂಪು ಅವರ “ಜಲಗಾರ” ನಾಟಕ ಪ್ರದರ್ಶನ.

೨. 2018ರಲ್ಲಿ 114ನೇ ಕುವೆಂಪು ಜನ್ಮದಿನಾಚರಣೆಯ ಪ್ರಯುಕ್ತ ಕನ್ನಡ ಮನಸುಗಳ ಪ್ರತಿಷ್ಠಾನದೊಂದಿಗೆ ನಮ್ಮ “ಕಾವ್ಯಮರ” ಸಹಯೋಗದೊಂದಿಗೆ ಕವಿಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ವಿಮರ್ಶಕರಾದ ಡಾ. ಎಮ್.ಎಸ್. ಆಶಾದೇವಿಯವರು ವಹಿಸಿಕೊಂಡಿದ್ದರು. ಕೆ.ಎ.ಎಸ್. ಅಧಿಕಾರಿಗಳಾದ ಡಾ. ನೆಲ್ಲುಕುಂಟೆ ವೆಂಕಟೇಶ್ ಅವರು “ಯುವ ಸಮುದಾಯಕ್ಕೆ ಬೇಕಾದ ಕುವೆಂಪು” ವಿಷಯದ ಮೇಲೆ ಉಪನ್ಯಾಸವನ್ನು ನೀಡಿದ್ದರು.

೩. 2018ರಲ್ಲಿ ಹಿಂದಿಯ ಖ್ಯಾತ ಕಥೆಗಾರರಾದ ಪ್ರೇಮಚಂದರ ಕಥೆಯಾಧರಿತ “ಹೆಣದ ಬಟ್ಟೆ” ನಾಟಕ ಪ್ರದರ್ಶನ.

೪. 2018ರಲ್ಲಿ ಹಿರಿಯ ಕವಿ ‘ಗೋಪಾಲ ಕೃಷ್ಣ ಅಡಿಗ’ರಿಗೆ ನೂರು ವಸಂತಗಳು ತುಂಬಿದ ಸಂದರ್ಭದಲ್ಲಿ ಗೆಳೆಯರು ಸೇರಿ “ನೂರು ಅಡಿ ನೂರು ಮಡಿ” ಎಂಬ ಫೇಸ್‌ಬುಕ್‌ ಲೈವ್ ಕಾರ್ಯಕ್ರಮ ಏರ್ಪಡಿಸಿ ಒಂದೇ ಸಮಯದಲ್ಲಿ ನೂರು ಜನ ಯುವಕವಿಗಳು ಅಡಿಗರ ಕವಿತೆಗಳನ್ನು ವಾಚನ ಮಾಡಿ ಕಾವ್ಯ ನಮನ ಸಲ್ಲಿಸಿದ್ದಾರೆ.

೫. 2019ರಲ್ಲಿ ಜಾರ್ಜ್ ಆರ್ವೆಲ್ ಅವರ ‘ಅನಿಮಲ್ ಫಾರ್ಮ್’ ಕಾದಂಬರಿ ಆಧಾರಿತ ‘ಅನಿಮಲ್ ಫಾರ್ಮ್’ ನಾಟಕ ಪ್ರದರ್ಶನ.

೬. 2019ರಲ್ಲಿ ರಾಜ್ಯ ಮಟ್ಟದ ಮಿಂಚುಳ್ಳಿ ಕಾವ್ಯ ಪುರಸ್ಕಾರ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮೊದಲ ಬಹುಮಾನವನ್ನು ಡಾ. ಸತ್ಯಮಂಗಲ ಮಹಾದೇವ, ಎರಡನೆಯ ಬಹುಮಾನವನ್ನು ಗೀತಯೋಗಿ ಮತ್ತು ಮೂರನೆಯ ಬಹುಮಾನವನ್ನು ರಮೇಶ್ ನೆಲ್ಲಿಸರ ಅವರು ಪಡೆದುಕೊಂಡಿದ್ದರು. ಹಿರಿಯ ಸಾಹಿತಿಗಳಾದ ಎಲ್. ಎನ್. ಮುಕುಂದರಾಜ್, ಸವಿತಾ ನಾಗಭೂಷಣ ಮತ್ತು
ಎಚ್. ಎಸ್. ರೇಣುಕಾರಾಧ್ಯ ಅವರು ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

೭. 2020ರಲ್ಲಿ ‘ಕಾಡುವ ಕಿರಂ’ ಆನ್ಲೈನ್ ಕಾರ್ಯಕ್ರಮಕ್ಕೆ ತಾಂತ್ರಿಕ ಸಹಾಯ ನೀಡಲಾಗಿತ್ತು.

೮. 2020ರಲ್ಲಿ ನಿರಂತರ ಏಳು ದಿನಗಳ ‘ಬರಗೂರು ಕಾವ್ಯ ಸಪ್ತಾಹ’ ಕಾರ್ಯಕ್ರಮವನ್ನು ‘ಅರಸಿ ಸಾಂಸ್ಕೃತಿಕ ವೇದಿಕೆ (ರಿ)’ ಸಂಸ್ಥೆಯೊಂದಿಗೆ ಏರ್ಪಡಿಸಲಾಗಿತ್ತು.

೯. 2020ರಲ್ಲಿ “ಪಳಗನ್ನಡ ಓದು” ಆನ್ಲೈನ್ ಕಾರ್ಯಕ್ರಮದ ಮೂಲಕ ಹಿರಿಯ ವಿಮರ್ಶಕರಾದ ಡಾ. ಎಚ್.ಎಸ್. ಸತ್ಯನಾರಾಯಣ ಮತ್ತು ಡಾ. ಪ್ರಹ್ಲಾದ ರೆಡ್ಡಿ ಅವರು ರನ್ನನ “ಸಾಹಸ ಭೀಮ ವಿಜಯಂ” ಕೃತಿಯ ಆಯ್ದ ಪದ್ಯಗಳ ಬಗ್ಗೆ ವಿಶ್ಲೇಷಣೆಯನ್ನು ಮಾಡಿದ್ದರು.

೧೦. 2023ರಲ್ಲಿ ವೆಬ್ಸೈಟ್ ಮೂಲಕ https://minchulli.com ಮಿಂಚುಳ್ಳಿ ಸಾಹಿತ್ಯ ಪತ್ರಿಕೆ ಪ್ರಕಟ.

೧೧. 2023ರಲ್ಲಿ ‘ಕಾಡುವ ಕಿರಂ’ ರಾಜ್ಯಮಟ್ಟದ ಕಾರ್ಯಕ್ರಮಕ್ಕಾಗಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಒಟ್ಟು ನೂರು ಕವಿಗಳನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸೇರಿಸಲಾಗಿತ್ತು. ಒಟ್ಟಾರೆ ಕವಿಗೋಷ್ಠಿಯ ನಿರ್ವಹಣೆ ಮತ್ತು ಕವಿಗೋಷ್ಠಿಗಳ ಕವಿತೆ ಮತ್ತು ಆಯಾ ಗೋಷ್ಠಿಗಳ ವಿಮರ್ಶೆಯನ್ನು ಒಳಗೊಂಡಿರುವ ಪುಸ್ತಕ “ಕಿರಂ ಹೊಸ ಕವಿತೆ ೨೦೨೩” ಮಿಂಚುಳ್ಳಿ ಪ್ರಕಾಶನದಿಂದ ಪ್ರಕಟಿಸಲಾಗಿದೆ.

೧೨. 2023ರಲ್ಲಿ ಹಿರಿಯ ಸಾಹಿತಿಗಳಾದ ಸುಜಾತಾ ಹೆಚ್.ಆರ್. ಅವರ ಮನೆಯಲ್ಲಿ ‘ಕಥೆಗಿಣಿಚ’ ಇದು ಕಥೆಗಳ ಚಿಂತನ-ಮಂಥನ ಕಾರ್ಯಕ್ರಮದ ಮೂಲಕ ಸಮಕಾಲೀನ ಕಥೆಗಾರರ ಕಥೆಗಳ ಓದು ಮತ್ತು ವಿಮರ್ಶೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

೧೩. 2023ರಲ್ಲಿ ಲಿಂಗ ಸಮಾನತೆ (Gender Equality) ವಿಷಯದ ಮೇಲಿನ ಒಟ್ಟು 25 ದೇಶಗಳ ಸಮಕಾಲೀನ ಇಂಗ್ಲಿಷ್ ಕವಿಗಳ ಕವಿತೆಗಳನ್ನು ಒಳಗೊಂಡಿರುವ “Love is a Divine Fragrance” ಅಂತಾರಾಷ್ಟ್ರೀಯ ಸಂಪಾದನೆಯ ಇಂಗ್ಲಿಷ್ ಪುಸ್ತಕವನ್ನು ಪ್ರಕಟಿಸಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು.

೧೪. 2023ರಲ್ಲಿ ಎರಡು ದಿನಗಳ ಮಿಂಚುಳ್ಳಿ ಕಥಾ-ಕಾವ್ಯ ಕಮ್ಮಟವನ್ನು ಕುಪ್ಪಳಿಯಲ್ಲಿ ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಸಾಹಿತಿಗಳಾದ ಸವಿತಾ ನಾಗಭೂಷಣ, ಡಾ. ರಾಮಲಿಂಗಪ್ಪ ಟಿ . ಬೇಗೂರು, ಚನ್ನಪ್ಪ ಅಂಗಡಿ, ಡಾ. ಎಚ್.ಎಸ್. ಸತ್ಯನಾರಾಯಣ, ಸುಜಾತಾ ಎಚ್.ಆರ್. ಮತ್ತು ಡಾ. ಬೇಲೂರು ರಘುನಂದನ್ ಉಪನ್ಯಾಸ ನೀಡಿದ್ದರು. ನವಿಲುಕಲ್ಲು ಸೂರ್ಯೋದಯದ ಸಮನ್ವಯವನ್ನು ಡಾ. ಹಕೀಮ್ ಅವರು ನಿರ್ವಹಣೆ ಮಾಡಿದ್ದರು. ನಾಡಿನ ಬೇರೆ ಬೇರೆ ಭಾಗದ ಒಟ್ಟು 50 ಜನ ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿದ್ದರು.

೧೫. 2024ರಲ್ಲಿ ಮಿಂಚುಳ್ಳಿ ಪ್ರಕಾಶನದ ‘ಬಿದಿರ ತಡಿಕೆ’, ‘ಮಳೆ ಪ್ರಬಂಧಗಳು’ ಮತ್ತು ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯ ಚೊಚ್ಚಲ ಸಂಚಿಕೆಯ ಬಿಡುಗಡೆಯ ಕಾರ್ಯಕ್ರಮ ಮತ್ತು ಮಿಂಚುಳ್ಳಿ ಕವಿಗೋಷ್ಠಿಯನ್ನು ಬೆಂಗಳೂರಿನ ಕಲಾ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಎಮ್.ಆರ್. ಕಮಲ ಅವರು ವಹಿಸಿಕೊಂಡಿದ್ದರು.

೧೬. 2024ರಲ್ಲಿ ಸಪ್ನ ಬುಕ್ ಹೌಸ್ ನಡೆಸಿದ “ಸಪ್ನ ಯುಗಾದಿ ಕಥಾಸಂಗಮ” ಕಾರ್ಯಕ್ರಮದಲ್ಲಿ ಸಮಕಾಲೀನ ಹೊಸ ತಲೆಮಾರಿನ ಕಥೆಗಾರರ ಕಥೆಗಳ ಓದು ಮತ್ತು ಚರ್ಚೆಯನ್ನು ಕಥೆಗಾರರು ಮತ್ತು ಓದುಗರೊಂದಿಗೆ ನಡೆಸಲಾಗಿತ್ತು.

೧೭. 2024ರಲ್ಲಿ ಎರಡು ದಿನಗಳ ಮಿಂಚುಳ್ಳಿ ಕಥಾ-ಕಾವ್ಯ ಕಮ್ಮಟವನ್ನು ಕುಪ್ಪಳಿಯಲ್ಲಿ ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಎಲ್.ಎನ್. ಮುಕುಂದರಾಜ್,
ಡಾ. ಅಮರೇಶ ನುಗಡೋಣಿ, ಡಾ. ಕರೀಗೌಡ ಬೀಚನಹಳ್ಳಿ, ಡಾ. ರವಿಕುಮಾರ್ ಪಿ.ಜಿ., ಮತ್ತು ಡಾ. ಗುರುಸ್ವಾಮಿ ಸಿ. ಅನ್ನೇಹಾಳ್ ಉಪನ್ಯಾಸ ನೀಡಿದ್ದರು. ನವಿಲುಕಲ್ಲು ಸೂರ್ಯೋದಯದ ಸಮನ್ವಯವನ್ನು ಡಾ. ಹಕೀಮ್ ಅವರು ನಿರ್ವಹಣೆ ಮಾಡಿದ್ದರು. ನಾಡಿನ ಬೇರೆ ಬೇರೆ ಭಾಗದ ಒಟ್ಟು 50 ಜನ ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿದ್ದರು.

೧೮. 2024 ಜನವರಿ ತಿಂಗಳಿನಿಂದ ಮಿಂಚುಳ್ಳಿ ಕನ್ನಡ ಸಾಹಿತ್ಯ ಮಾಸಿಕವನ್ನು ಮುದ್ರಿಸಲು ಆರಂಭಿಸಿತು.

****

email: editor@minchulli.com
facebook: minchulli sahitya patrike
instagram: @minchullisahityapatrike
X: @minchullibooks

PDF: ಮಿಂಚುಳ್ಳಿ ಕಾರ್ಯಚಟುವಟಿಕೆಗಳು

ಕಳೆದ 8 ವರ್ಷಗಳಲ್ಲಿ ಮಿಂಚುಳ್ಳಿ ನಡೆಸಿದ ಕಾರ್ಯಕ್ರಮಗಳ ಫೋಟೋಗಳು:-

ಮಿಂಚುಳ್ಳಿ ಪ್ರಕಟಿತ ಪುಸ್ತಕಗಳು:-

ಮಿಂಚುಳ್ಳಿ ಸಾಹಿತ್ಯ ಮಾಸಿಕ ಸಂಚಿಕೆಗಳು

0
    0
    Your Cart
    Your cart is emptyReturn to Shop