“ಬಂಗಾರಿ…ಈಗ ಬರ್ತೀನಿ ಕಣೇ… ಬಾಗಿಲು ಹಾಕಿಕೋ ” ಅಂದಾಗ ಮಗಳು ” ಮಮ್ಮಾ… ಎಷ್ಟು ಸರಿ ಹೇಳ್ತಿನಿ ನಿಂಗೆ …ನೀನು ಸಂತೆಗೆ ಯಾಕೆ ಹೋಗೋದು? ಪಕ್ಕದಲ್ಲೇ ಸೂಪರ್ ಮಾರ್ಕೆಟ್ ಇದೆ. ಅಲ್ಲಿ ಹೋಗಿ ಶಾಪಿಂಗ್ ಮಾಡು. ಅಪ್ಪ ಇಷ್ಟು ಹಣ ಕೊಡೋದು… ನೀನು ಸಂತೆಗೆ ಹೋಗಿ ಸಾಮಾನು ತಗೊಂಡು ಬಂದು ಮನೇಲಿ ಹರಡಿ… ” ಇಷ್ಟು ಹಣ ತಗೊಂಡು ಹೋದೆ, ಇಷ್ಟು ಉಳೀತು. ಸೂಪರ್ ಮಾರ್ಕೆಟ್ ಕಾಸ್ಟ್ಲಿ ” ಅಂತೆಲ್ಲ ಲೆಕ್ಕಾಚಾರ ಹಾಕೋದು. ಹೌ ಡಿಸ್ಗಸ್ಟಿಂಗ್… ಆ ಸಂತೆ ಗೌಜು…ಬನ್ನಿ ಬನ್ನಿ ಅಂತ ಕೂಗೋದು… ವಾಸನೆ …ಅಷ್ಟು ರಶ್… ” ಅಂತ ಇಂಗ್ಲಿಷಲ್ಲಿ ಹಳೇ ರಾಗ ತೆಗೆದಳು. ಕೆನ್ನೆಗೆ ಒಂದು ಬಾರಿಸಬೇಕು ಅನಿಸ್ತು. ಅವಳದ್ದು ಇದ್ದಿದ್ದೇ ಯಾವತ್ತೂ. ನಾನು ಕೂಡ ಹಾಗೆ ಅಲ್ವಾ… ಪಕ್ಕದಲ್ಲೇ ಸೂಪರ್ ಮಾರ್ಕೆಟ್ ಇದ್ರೂ, ಸಂತೆಗೆ ಹೋಗೋದು ನಂಗೆ ಇಷ್ಟ. ಅಲ್ಲಿಂದ ಬಂದು…ತಂದ ತರಕಾರಿ, ಹೂ ಹಣ್ಣು ಎಲ್ಲಾ ಹರಡಿ ಇಷ್ಟು ಇಷ್ಟು ಹಣ ಆಯ್ತು ಅಂತ ಲೆಕ್ಕ ಹಾಕೋದು ಕೂಡ ನಿಜ. ಅದು ಇವರಿಗೂ, ಮಗಳಿಗೂ ಆಗೋಲ್ಲ. ಕಂಜೂಸು… ಅಂತ ಅಲ್ಲ.ಯಾಕೆ ಬೇಕು ಅಷ್ಟು ದೂರ ಹೋಗೋದು ಅಂತ.
ಆದರೆ ನನಗೆ…? ಸಂತೆಗೆ ಹೋದರೆ ನೆಮ್ಮದಿ. ಅಲ್ಲಿ ನನ್ನವರು ಇದ್ದಾರೆ…ಅವರ ಹತ್ತಿರ ಚೌಕಾಶಿ ಮಾಡ್ತೀನಿ ಅಂತ ಅಲ್ಲ. ಅವರ ಹತ್ತಿರ ಸಾಮಾನು ತಗೊಳ್ತಾ , ಅವರ ಮಾತು ನನ್ನೊಳಗಿನ ಮಾತು ಕೂಡ ವಿನಿಮಯ ಆಗುತ್ತೆ.. ಬೆಲೆ ಕಟ್ಟಲಾಗದ ಮಾತು. ಸುಖ ದುಃಖದ ವ್ಯವಹಾರ.
ಹೌ ಡಿಸ್ಗಸ್ಟಿಂಗ್ …? ಅಂದ್ರೆ ಎಷ್ಟು ಅಸಹ್ಯಕರ…ಸಂತೆ ಅಂದ್ರೆ ಏನ್ ಅಂದುಕೊಂಡಿದ್ದಾಳೆ. ಸೂಪರ್ ಮಾರ್ಕೆಟ್ ಏನ್ ಅಷ್ಟು ಒಳ್ಳೇದು ಇರುತ್ತಾ. ನಾನು ನೋಡಿಲ್ವಾ? ಭಾವನೆ ಇಲ್ಲದ ವ್ಯಾಪಾರ. ಹೋಗುವ ಮೊದಲು ಸ್ಯಾನಿಟಸರ್, ಟೆಂಪ್ರೆಚೆರ್ ಚೆಕ್. ಅದು ಇರಲಿ…ಒಳ್ಳೇದು. ಆದರೆ… ನಾನು ತಗೊಂಡು ಹೋದ ಬ್ಯಾಗ್ ಹೊರಗಡೆ ಇಡಬೇಕು. ಮತ್ತೆ ಒಳಗೆ ತಳ್ಳೋ ಗಾಡಿ. ಬೇಡುವ ಹಾಗೆ ತಳ್ಳುತ್ತಾ ಹೋಗಿ ಅವರು ಈ ಮೊದಲೇ ಪ್ಯಾಕ್ ಮಾಡಿ ಶಿಸ್ತಲ್ಲಿ ಇಟ್ಟ ದಿನಸಿ ತಗೋ ಬೇಕು. ವಸ್ತು ಹೇಗೆ ಅಂತ ಮುಟ್ಟಿ ನೋಡೋ ಹಾಗಿಲ್ಲ…ಗಟ್ಟಿ ಮಾತಾಡೋಕು ಇಲ್ಲಾ. ಅದರ ಬೆಲೆ ಅದರ ಮೇಲೆ ಇರುತ್ತೆ. ಕಮ್ಮಿ ಆಗಲಿ ಜಾಸ್ತಿ ಆಗಲಿ. ಹಿಂದೆ ಮುಂದೆ ನಮ್ಮ ಮೇಲೆ ನಿಗಾ ಇಡೋ ಎರಡು ಕಣ್ಣುಗಳು. ನಾವೇನು ಕದಿಯೋಕೆ ಬರ್ತೀವಾ…? ಅದರ ಮೇಲೆ ಸಿ ಸಿ ಕ್ಯಾಮೆರಾ… ನಾನು ಎಲ್ಲಾ ಲಪಟಾಯಿಸಿ ಹೋದ್ರೆ ಅಂತ ಮೂರನೇ ಕಣ್ಣು.
ಒಂದೇ ಸೈಜ್ ನ ತರಕಾರಿ ಜೋಡಿಸಿ ಇಟ್ಟಿದ್ದು ನೋಡಿದ್ರೆ ತಗೋಳ್ಳೋದೇ ಬೇಡ ಅನಿಸುತ್ತೆ. ನಾನು ಎಷ್ಟು ಎತ್ತಿ ಹಾಕ್ತಿನೋ ಅಷ್ಟಕ್ಕೆ ಬಿಲ್ಲು. ಎಲ್ಲಾ ತಳ್ಳೋ ಗಾಡೀಲಿ ತಂದು ಬಿಲ್ಲಿಗೆ ಲೈನಲ್ಲಿ ನಿಲ್ಲಬೇಕು. ಅವಳೋ ಸಿಡುಕಿ… ಪಟ ಪಟ ಅಂತ ಕಂಪ್ಯೂಟರ್ ನಲ್ಲಿ ಒತ್ತಿ ಚೀಟಿ ಬಿಲ್ಲನ್ನು ಕೈಲಿ ಇಡ್ತಾಳೆ. ಹಣ ಕೊಡುವಾಗ ಒಂದು ನಗೂ ಕೂಡ ಮುಖದಲ್ಲಿ ನಾನು ಕಾಣೆ. ನೆಕ್ಸ್ಟ್ ಅಂತಾಳೆ.. ಮತ್ತೆ ನಾನು ಆಚೆ ಬಂದು ಅದೆಲ್ಲ ನನ್ನ ಬ್ಯಾಗಿಗೆ ತುಂಬೋದು. ನಗು, ಮಾತು ಇಲ್ಲದ ಪರಿಶುದ್ಧ ವ್ಯಾಪಾರ. ಶಾಪಿಂಗ್ ಅಂದರೆ ಆಪರೇಷನ್ ಥೀಯೇಟರಿಗೆ ಹೋಗಿ ಬಂದಷ್ಟೇ ನಿಟ್ಟುಸಿರು.
ಆದರೆ ನನ್ನ ಸಂತೆ ಹಾಗಲ್ಲ…ಯಾವತ್ತೂ ಗದ್ದಲ. ಸಂಭ್ರಮ. ಆ ಹೂ ಹಣ್ಣಿನ ತರಕಾರಿ ಘಮ ಎಲ್ಲಾ ಇಷ್ಟ ನನಗೆ. ಅಲ್ಲಿಗೆ ಹೋದೆ. ಆಗ ತಾನೇ ಗಾರ್ಮೆಂಟ್ಸ್ ಬಿಟ್ಟಿತು. ದಟ್ಟ ಜನಸಂದಣಿ. ಆಗ ತಾನೇ ಅರಳುವ ಮಲ್ಲಿಗೆ ಘಮ ಬಂತು. “ಹೆಂಗಮ್ಮ… ಮೊಳ ” ಅಂತ ಕೇಳಿದೆ ಚಂದ್ರಮ್ಮನ ಹತ್ತಿರ. ” ಓ.. ಏನ್ ಅಕ್ಕೋ.. ಹೋದ್ ವಾರ ಎಲ್ಲ್ ಹೋಗಿದ್ರಿ.. ನೀವು ಬಂದೆ ಇಲ್ಲಾ… ಮನೆ ಬಾಗ್ಲ್ ತಾವ ಹೂ ಕೊಂಡ್ರೆನೋ ಅಂದ್ಕಂಡೆ… ಒಳ್ಳೆ ಸಂಪಿಗೆ ಬಂದಿತ್ತು ಕಣವ್ವ…ನೀವೇ ಬಂದಿಲ್ಲ ” ಅಂದ್ಲು. ” ಹಾಂ ಸ್ವಲ್ಪ ಹುಷಾರು ಇರಲಿಲ್ಲ ” ಅಂತ ಹೇಳಿ ಮಾತು ಬದಲಿಸಿದೆ. ” ನಾಲ್ಕು ಮೊಳ ಕೊಡು ” ಅಂತ ಹೇಳಿ ಹಣ ಕೊಟ್ಟೆ. ” ಹಬ್ಬಕ್ಕೆ ನನ್ನ ಮಗಳ್ ಬರ್ತವ್ಳ್ ಕಣವ್ವ…ಮೂರು ತಿಂಗಳಂತೆ. ಊಟ ಸೇರೋಲ್ವಂತೆ … ಒಂದು ತಿಂಗ್ಳು ಇಲ್ಲೇ ಬಿಟ್ಟು ಹೋಗು ಅಂತ ಯೋಳಿದಿನಿ ಅವ್ಳು ಗಂಡನ ತಾವ… ” ಹಾಗೆ ಅವಳು ಅನ್ನುವಾಗ ಅವಳು ಕಟ್ಟುತ್ತಿದ್ದ ಹೂವಿಗಿಂತ ಅದೆಷ್ಟು ಸುಂದರವಾಗಿ ಅವಳ ಮುಖ ಅರಳಿತ್ತು.ಸಂಭ್ರಮದ ಸುವಾಸನೆ ಸುತ್ತ ಹಬ್ಬಿತ್ತು.
ಮುಂದೆ ಹೋದಾಗ ಲಕ್ಷ್ಮಿ ಗಾಡೀಲಿ ಎಲ್ಲಾ ತರಕಾರಿ ಹಾಕಿ ಕೂಗ್ತಾ ಇದ್ಲು.
“ಕೊಡಮ್ಮ ಮಾಮೂಲಿ ತರಕಾರಿ ಅರ್ಧರ್ಧ ಕೆ ಜಿ.” ಅಂದೆ.
‘ಕೊಡಕ್ಕ ಬ್ಯಾಗ್ ‘ ಅಂತ ತಗೊಂಡು ಎಲ್ಲಾ ಹಾಕಿದ್ಲು.
“ನೋಡಕ್ಕೋ… ಲಿಂಬೆ ಹಣ್ಣು ಕೇಳ್ತಾ ಇದ್ದೆ ಹೋದ್ ವಾರ ಬಂದಾಗ. ನಿನ್ ಅತ್ತೆಗೆ ಉಪ್ಪಿನಕಾಯಿಗೆ ಬೇಕು ಅಂದೆ ಅಲ್ವಾ… ಆರಿಸ್ಕೊ ಯೇಟ್ ಬೇಕು ಅಂತ”
ನಾನು ಗಾಡಿ ಆಚೆ ಅವಳ ಹತ್ತಿರ ಹೋದೆ ಆರಿಸೋಕೆ. ನೋಡಿದ್ರೆ ಅಲ್ಲಿ ಒಂಬತ್ತು ವರ್ಷದ ಮಗ ಬರೀತಾ ಇದ್ದಾನೆ. ” ಇದೇನ್ ಲಕ್ಷ್ಮಿ… ಇಲ್ಲಿ ಬರೀತಾ ಇದ್ದಾನೆ ” ಅಂದರೆ… ” ಏನ್ ಯೋಳೋದು.. ನನ್ ಗಂಡ ನೆಟ್ಟಗೆ ಇದ್ರೆ ಹಿಂಗ್ ನಾನು ದುಡಿದು ಸಾಯ್ಬೇಕು ಇತ್ತೇನಮ್ಮ ..? ಯಾವತ್ತೂ ನೋಡಿದ್ರ್ ಕುಡ್ಕೊಂಡು ಮನೇಲಿ ಬಿದ್ದು ಇರ್ತಾನೆ… ಈ ಇಸ್ಕೂಲ್ ಹೋಗೋ ಮಗಾಗೇ ಬಾಯಿಗೆ ಬಂದ್ ಹಾಗೆ ಬೈದು ಹೊಡೆಯೋಕೆ ಬತ್ತಾನೇ. ಪಾಪ… ಅದಕ್ಕೆ ಪರೀಕ್ಷೆ ಅಂತೆ. ಇಲ್ಲಿ ಬಂದ್ ಓದೋ ಕಷ್ಟ ಅದ್ಕೆ. ” ಸಿಟ್ಟಿಗೆ ಒಂದೇ ಉಸಿರಲ್ಲಿ ಎಲ್ಲಾ ಹೇಳಿ ಬಿಟ್ಲು. ಹೊಟ್ಟೆ ಚುರ್ರ್ ಅಂತು. ಈ ಬೆಂಗಳೂರಲ್ಲಿ ಇಬ್ಬರು ದುಡಿದ್ರು ಜೀವನ ಕಷ್ಟ, ಅದ್ರಲ್ಲಿ ಗಂಡ ಕುಡುಕ ಆದ್ರೆ ಆ ಸಂಸಾರದ ಅಧೋಗತಿ ಕಣ್ಣಿಗೆ ಕಾಣಿಸಿತು.
ರವಿಯಣ್ಣ ” ಟೋಮೋಟೋ… ಕೆಜಿಗೆ ಐದು ರೂಪಾಯಿ… ಐದು ರೂಪಾಯಿ… ” ಅಂತ ಕೂಗ್ತಾ ಇದ್ದ. ಅಲ್ಲಿ ಒಬ್ಬ ಹೆಂಗಸು ಬಂದು ‘ಅರ್ಧ ಕೆಜಿ’ ಕೊಡು ಅಂತ ಕೇಳ್ತಾ ಇತ್ತು. ‘ಆಗಲಮ್ಮ.. ಒಂದು ಕೆಜಿ ಇಸ್ಕೊ’ ಅಂತ ಸಿಡುಕಿದ. ಮತ್ತೆ ಅವಳು ಮುಂದೆ ಹೋದಳು. ನಾನು ಬೈದೆ… ” ಯಾಕಣ್ಣ …ಅರ್ಧ ಕೇಳಿದ್ರೆ ಕೊಡಬೇಕು ತಾನೇ? ” . ” ಅಲ್ಲ ಅಕ್ಕಾ ಐದು ರೂಪಾಯಿಗ್ ಏನ್ ಬತ್ತದೇ..? ಅರ್ಧ ಅಂದ್ಯೋಳಿ ಚಿಲ್ಲರೆನೂ ಕೊಡೋಲ್ಲ… ಐವತ್ತು ರೂಪಾಯಿಗೆ ನಾನೆಲ್ಲಿಂದ ಚಿಲ್ರೆ ತರ್ಲಿ ” ಅಂದ. ನಾನು ಅವನ ಹತ್ತಿರ ಟೊಮೇಟೊ ತಗೊಂಡು ಮುಂದೆ ಆ ಹೆಂಗಸು ನಿಂತ ಅಂಗಡಿಗೆ ಬಂದೆ. ಆ ಹೆಂಗಸು ಆ ಅಂಗಡಿಯಲ್ಲಿ ಆ ದಿನ ಸಂಜೆ ಅಡುಗೆಗೆ ಬೇಕಾದ ಸಾಮಾನು ತಗೊಳ್ತಿದ್ಲು. ಅಂಗಡಿಯವ ಸ್ವಲ್ಪ ಬೇಳೆ, ಸಾಂಬಾರಿನ ಪುಡಿ, ತೆಂಗಿನ ಕಾಯಿ ಚೂರು ಕಟ್ಟಿ ಕೊಡುತ್ತಿದ್ದ.ಅವಳು ಅದನ್ನು ನಾಲ್ಕು ಬೀನ್ಸ್, ಎರೆಡೆರಡು ಆಲೂಗಡ್ಡೆ, ಬದ್ನೇಕಾಯಿ, ಟೊಮೆಟೊ ಇರುವ ತನ್ನ ಚೀಲಕ್ಕೆ ಹಾಕಿಕೊಳ್ತಿದ್ಲು. ನನ್ನ ಮನಸಿಗೆ ತುಂಬಾ ತಳಮಳ ಆಯ್ತು. ರಾತ್ರಿಯ ಅಡುಗೆಗಷ್ಟೇ ಸಾಮಾನು ಕೊಳ್ಳುವ ಆ ಹೆಂಗಸಿನ ಬಡತನ ಎಷ್ಟಿರಬಹುದು.? ಒಂದು ಕಡೆ ರಾಶಿ ರಾಶಿ ಊಟವನ್ನು ಚರಂಡಿಗೆ ಎಸೆಯುವ ಜನ. ಒಂದು ಕಡೆ ಹೊತ್ತಿನ ತುತ್ತಿಗೂ ತತ್ವಾರ. ಏನಪ್ಪಾ ಮನುಷ್ಯನ ಬಾಳು ಅನಿಸಿತು.
ಮಗಳು ಕೇಕ್ ಟಿನ್ ಬೇಕು ಅಂದಿದ್ದಕ್ಕೆ ಹಮೀದ್ ಭಾಯ್ ಅಂಗಡಿಗೆ ಬಂದೆ.ಅವಳಿಗೆ ಬೇಕಾದ ತರಹದ ಟಿನ್ ಸಿಗಲಿಲ್ಲ. ” ನಾಳೆ ಸಿಟಿ ಕಡೆ ಹೋಗೋದೈತೆ… ಎರಡು ಮೂರು ಅದೇ ತರದ್ದು ತಂದ್ ಇಟ್ಟಿರ್ತೀನಿ. ನೀವು ಬಂದ್ ತಗೊಂಡು ಹೋಗ್ರಿ” ಅಂದ.ಅರವತ್ತೈದು ವರ್ಷ ಸಮೀಪದ ಹಮೀದ್ ಭಾಯ್ಗೆ ಒಬ್ಬತ್ತನೇ ಮಗ ಸಮೀರ್. ಉಳಿದೆಲ್ಲ ಮಕ್ಕಳು ಓದದೇ ಅಡ್ಡಾಡಿ ಸಣ್ಣ ಪುಟ್ಟ ಅಂಗಡಿ ಇಟ್ಟು ಹೆಂಡತಿ ಮಕ್ಕಳು ಅಂತ ಬೇರೆ ಬೇರೆ ಇದ್ದಾರೆ. ಸಮೀರ್ ಮಾತ್ರ ಚೆನ್ನಾಗಿ ಓದಿಕೊಂಡು ಕೆಲಸದ ಹುಡುಕಾಟದಲ್ಲಿ ಇದ್ದ.
ಕೇಳಿದೆ… ” ಕೆಲಸ ಸಿಕ್ಕಿತಾ ಸಮೀರ್ ಗೆ..? ”
“ಹೌದಮ್ಮ… ಯಾವ್ದೋ ಒಂದು ದೊಡ್ಡ ಕಂಪನಿಯಲ್ಲಿ ಲೆಕ್ಕ ಬರೆಯೋ ಕೆಲಸ ಸಿಕ್ಕಿದೆ. ಒಂದು ವರ್ಷ ಟ್ರೈನಿಂಗ್ ಅಂತ ಹೈದ್ರಾಬಾದ್ಗೆ ಕಳ್ಸವ್ರೇ… ಬರೋ ವರ್ಷ ಇಲ್ಗೆ ಬಂದ್ ಬಿಡ್ತಾನಂತೆ ಕಣಮ್ಮ… ನಂಗೂ ಅಂಗಡಿಲೀ ಕೂರೋಕೆ ಆಗೋಲ್ಲ. ಅವ್ನು ಬಂದ್ ಮೇಲೆ ಇದನ್ನು ಮಾರಿ… ಮನೇಲಿ ಇದ್ದ್ ಬಿಡ್ತೀನಿ. ನಮ್ಮ ಹೆಂಡ್ರಿಗೆ ಕೂಡ ಯಾವಾಗ್ಲೂ ಹುಷಾರು ತಪ್ಪುತ್ತೆ… ಅದೇ ಚಿಂತೆ ಆಗಿದೆ ನಂಗೆ… ”
” ಒಂದು ವರ್ಷ ತಾನೇ ಬೇಗ ಕಳೆದು ಹೋಗುತ್ತೆ.ಅವ್ನಿಗೆ ಮದ್ವೆ ಮಾಡಿದ್ರೆ ಮಕ್ಕಳು ಮೊಮ್ಮಕ್ಕಳು ಅಂತ ನೀವಿಬ್ರು ಮನೇಲಿ ಸುಖವಾಗಿ ಇರಬಹುದು ಅಂದೆ ” “ಹಾಂ… ಬೇಟಿ. ಅಲ್ಲಾ ಹತ್ರ ಅದನ್ನೇ ಬೇಡೋದು ” ಎಂದು ಕೈ ಮೇಲೆ ಎತ್ತಿ ಅಲ್ಲಾನಾ ಬೇಡಿದ ಹಮೀದ್ ಭಾಯ್.
ನನ್ನೆಲ್ಲಾ ಸಾಮಾನು ಚೀಲ ಮನೆಗೆ ಎತ್ತಿಕೊಂಡು ಬಂದೆ. ಮಗಳು ಹೇಳಿದ ಹಾಗೆ ಎಲ್ಲಾ ಜೋಡಿಸಿ ಹಣದ ಲೆಕ್ಕಾಚಾರ ಹಾಕಿ… ‘ ಓ ನನ್ನ ಸ್ವಂತ ಹಣನೇ ಇಷ್ಟ ಖರ್ಚು ಆಗಿದೆ… ಸಂಜೆ ಇವರ ಹತ್ತಿರ ಬಾಕಿ ತಗೊಳ್ಳಬೇಕು ‘ ಅಂತ… ಮನಸಲ್ಲಿ ಅಂದುಕೊಂಡೆ. ಒಂದು ಸಂತೆಯ ತಿರುಗಾಟ ಎಷ್ಟೆಲ್ಲ ಜನರ ಬದುಕಿನ ಒಳ ಹೊಕ್ಕು ಅವರ ನೋವು ನಲಿವುಗಳನ್ನು ನೋಡಿ ಬಂದೆ ಅನ್ನುವ ಸಣ್ಣ ಸಮಾಧಾನ ನನ್ನ ಮನಸಿಗೆ.
ಸಂತೆ ಬರೀ ಸಾಮಾನುಗಳ ವ್ಯಾಪಾರದ ಜಾಗವಲ್ಲ. ಪರಸ್ಪರ ಸುಖ ದುಃಖವನು ಹಂಚಿಕೊಳ್ಳುವ ಸುಮಧುರ ತಾಣ. ಅಲ್ಲಿ ಕೊಳೆತ ತರಕಾರಿ, ಹೂ ಹಣ್ಣುಗಳ ವಾಸನೆಯ ಜೊತೆ… ರಕ್ತ ಸಂಬಂಧವೇ ಇಲ್ಲದ ನನ್ನವರ ಪ್ರೀತಿ ವಿಶ್ವಾಸ ವಾತ್ಸಲ್ಯದ ಸಂಕೋಲೆಯ ಸೌಗಂಧವಿದೆ ಅನಿಸ್ತು.