ಚಂದ್ರಗೌಡ ಕುಲಕರ್ಣಿ ಅವರು ಬರೆದ ಮಕ್ಕಳ ಕವಿತೆ ‘ಪಂಚ ತಂತ್ರದ ಪ್ರಶ್ನೆ’

 

ಗಾಳಿ ಬಂದರೆ ಮಣ್ಣಿನ ಹೆಂಟೆ
ತರಗೆಲೆ ಮೇಲೆ ಕುಳಿತು !
ಜೀವದ ಗೆಳೆಯನ ರಕ್ಷಿಸುತಿದ್ದಿತು
ಅನುಪಮ ಪ್ರೀತಿಗೆ ಸೋತು !

ಮಳೆಯು ಸುರಿದರೆ ಗಿಡದ ತರಗೆಲೆ
ಮಣ್ಣಿನ ಹೆಂಟಿಗೆ ಮುಚ್ಚಿ !
ಆಪ್ತ ಮಿತ್ರನ ಸಲಹುತಿದ್ದಿತು
ನಿರ್ಮಲ ಗುಣವನು ಮೆಚ್ಚಿ !

ಹೇಳುವ ಕತೆಯಲಿ ಗುರುಗಳ ಮಾತು
ಮುಗಿದಿರಲಿಲ್ಲ ಇನ್ನು !
ಮೂವರು ರಾಜ ಕುವರರು ಆಗಲೆ
ಕೇಳಲು ಪ್ರಶ್ನೆಯನ್ನು !

ನಿಮ್ಮಯ ಕಲಿಕೆಯು ಇಂದಿಗೆ ಮುಗಿಯಿತು
ಮರಳಿರಿ ರಾಜ್ಯಕೆ ಬೇಗ !
ರಾಜ್ಯವನಾಳುವ ಯೋಗ್ಯತೆ ಪಡೆದಿರಿ
ಆರೇ ತಿಂಗಳದಾಗ !

ಹೇಗೆ ಇತ್ತು ನೋಡಿ ತಿಳಿಯಿರಿ
ಅಂದಿನ ಪರೀಕ್ಷೆ ರೀತಿ !
ಉತ್ತರ ಬರೆಯುವುದಲ್ಲ ಬೇಕು
ಪ್ರಶ್ನೆ ಕೇಳುವ ಛಾತಿ !

ಕುವರರು ಏನನು ಕೇಳಿರಬಹುದು
ಎಂಬುದು ಇಲ್ಲಿಯ ಗುಟ್ಟು !
ಪ್ರತಿ ಉತ್ಪನ್ನ ಮತಿಗೆ ಹೊಳೆವುದು
ಬಿಡಿಸಲಾರದ ಒಗಟು !

“ಮಳೆಯು ಗಾಳಿಯು ಏಕಕಾಲಕೆ
ಬಂದರೆ ಹೇಗೆ ಗುರುವೆ ” !
ಮೂವರು ಒಮ್ಮೆಲೆ ಎದ್ದು ನಿಲ್ಲುತ
ಕೇಳಿದ ಪ್ರಶ್ನೆ ಇದುವೆ !

ಪ್ರಶ್ನೆ ಮನದಲಿ ಮೂಡಿ ಬರದಿರೆ
ಉತ್ರಕೆ ಜಾಗ ಎಲ್ಲಿ !
ಅರಿಯಲು ನಿಜವನು ಪ್ರಶ್ನೆಯೆ ಬೀಜ
ಎಂಬುದು ಅಡಗಿದೆ ಇಲ್ಲಿ !

ಆಚೆ ಈಚೆಗೆ ಅಂಚನು ಸಿಗಿಸಿ
ಹೆಂಟೆಗೆ ಹೊದಿಕೆ ಹಾಕಿ !
ತಾನೂ ಗಾಳಿಗೆ ಹಾರದೆ ಉಳಿವುದು
ತರಗೆಲೆ ಪಕ್ಕಾ ಬೆರಿಕಿ !

ಪಂಚತಂತ್ರದ ಅಂತಿಮ ಕತೆಯಿದು
ಗುಡಿಯ ಗೋಪುರ ಕಳಸ !
ಪ್ರಶ್ನೆ ಎಂಬುದು ವಿದ್ಯೆ ಶರೀರದ
ಉಸಿರಿನ ಶ್ವಾಸೋಚ್ಛ್ವಾಸ !

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop