ರಾಬರ್ಟ್ ಲೀ ಫ್ರಾಸ್ಟ್
ರಾಬರ್ಟ್ ಲೀ ಫ್ರಾಸ್ಟ್ ಚಿಕ್ಕಂದಿನಿಂದಲೇ ಪದ್ಯ ಬರೆಯುವ ಹುಚ್ಚು. ಹೈಸ್ಕೂಲಿನಲ್ಲಿದ್ದಾಗಲೇ ಅವನ ಪದ್ಯ ಶಾಲೆಯ ಪತ್ರಿಕೆಯಲ್ಲಿ ಪ್ರಕಟವಾಯಿತು. ಅದನ್ನು ಕಂಡು ಅವನಿಗೆ ಎಲ್ಲಿಲ್ಲದ ಸಂತೋಷ. ಉತ್ಸಾಹದಿಂದ ಹೆಚ್ಚು ಹೆಚ್ಚಾಗಿ ಪದ್ಯಗಳನ್ನು ಬರೆದು ಸಿಕ್ಕ ಸಿಕ್ಕ ಪತ್ರಿಕೆಗಳಿಗೆ ಕಳುಹಿಸುತ್ತಿದ್ದ. ಹಾಗೆ ಕಳುಹಿಸಿದ ಪದ್ಯಗಳೆಲ್ಲ ತಪ್ಪದೆ ಹಿಂದಕ್ಕೆ ಬರುತ್ತಿದ್ದವು.
ಹೊಟ್ಟೆ ಹೊರೆಯಲು ಫ್ರಾಸ್ಟ್ ಹೊಲದಲ್ಲಿ ಕೂಲಿ ಮಾಡಬೇಕಾಯಿತು. ಚಮ್ಮಾರನಾಗಿ, ನೆಯ್ಗೆಗೆ ದಾರ ಸುತ್ತುವ ಉರುಳೆಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ಸಹಾಯಕನಾಗಿ ದುಡಿಯಬೇಕಾಯಿತು. ಆದರೂ ಪದ್ಯಗಳನ್ನು ಬರೆಯುವ ಗೀಳು ಮಾತ್ರ ಅವನನ್ನು ಬಿಟ್ಟು ಹೋಗಲಿಲ್ಲ. ಪ್ರಾಸ್ಟ್ ನ ಮೊದಲ ಕವನಸಂಕಲನ ಪ್ರಕಟವಾದಾಗ ಅವನಿಗೆ 40 ವರ್ಷ. ಅನಂತರ ಸ್ವಲ್ಪ ಕಾಲದಲ್ಲೇ ಅವನು ಯೂರೊಪ್ ಅಮೆರಿಕಗಳಲ್ಲಿ ಪ್ರಸಿದ್ಧನಾದ. ಅವನ 75ನೇ ಮತ್ತು 85 ನೇ ಜನ್ಮದಿನೋತ್ಸವ ಸಂದರ್ಭದಲ್ಲಿ ಅಮೆರಿಕದ ಸಂಸತ್ತು ಅವನಿಗೆ ಗೌರವ ಸೂಚಿಸುವ ನಿರ್ಣಯಗಳನ್ನು ಅಂಗೀಕರಿಸಿತು. 1960 ರಲ್ಲಿ ಜಾನ್ ಕೆನಡಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಸಮಾರಂಭದಲ್ಲಿ ಕವಿತೆಗಳನ್ನು ಓದಲು ಫ್ರಾಸ್ಟ್ ಗೆ ಆಹ್ವಾನವೂ ಬಂತು.
ರಾಬರ್ಟ್ ಫ್ರಾಸ್ಟ್ ಸ್ಯಾನ್ ಫ್ರಾನ್ಸಿಸ್ಕೋದ ಪತ್ರಿಕೋದ್ಯಮಿಯೊಬ್ಬನ ಮಗ. ಹುಟ್ಟಿದ್ದು 1874ರ ಮಾರ್ಚ್ 26ರಂದು. ತಂದೆ ತೀರಿಕೊಂಡ ನಂತರ 11 ವರ್ಷದ ರಾಬರ್ಟ್ ತನ್ನ ತಾಯಿಯೊಡನೆ ನ್ಯೂ ಇಂಗ್ಲೆಂಡ್ ಪ್ರಾಂತದ ಹಳ್ಳಿಯೊಂದಕ್ಕೆ ಹೋಗಿ ಅಲ್ಲಿ ಇರತೊಡಗಿದರು. ತಾಯಿಯು ಶಾಲೆಯೊಂದರಲ್ಲಿ ಅಧ್ಯಾಪಕಿಯಾಗಿದ್ದಳು. ಮಗ ಅಲ್ಲಿಯೇ ವಿದ್ಯಾರ್ಥಿಯಾದ. ಅನಂತರ ಹೈಸ್ಕೂಲ್ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣನಾದ್ದರಿಂದ ಕಾಲೇಜು ವಿದ್ಯಾಭ್ಯಾಸ ಮುಂದುವರಿಸಲು ಅವನಿಗೆ ವಿದ್ಯಾರ್ಥಿವೇತನ ಸಿಕ್ಕಿತು. ಆದರೆ ಕಾಲೇಜಿನ ಕಟ್ಟುನಿಟ್ಟಾದ ದಿನಚರಿ ರಾಬರ್ಟ್ ಗೆ ಸರಿ ಹೋಗಲಿಲ್ಲ. ಕೆಲವು ತಿಂಗಳಲ್ಲೇ ಮನೆಗೆ ಹಿಂತಿರುಗಿದ. ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ. ಸಮಯ ಸಿಕ್ಕಾಗಲೆಲ್ಲ ಪುಟ್ಟ ಪುಟ್ಟ ಕವಿತೆಗಳನ್ನು ಬರೆಯುತ್ತಲೇ ಇದ್ದ. 1894ರಲ್ಲಿ ಸಣ್ಣ ವೃತ್ತ ಪತ್ರಿಕೆಯೊಂದು ಇವನ ಒಂದು ಕವಿತೆಯನ್ನು ಪ್ರಕಟಿಸಿತು.
ಉದಂತ ಶಿವಕುಮಾರ್
ಮಾರನೆಯ ವರ್ಷ ಇವನು ತನ್ನ ಹೈಸ್ಕೂಲಿನ ಸಹಪಾಠಿ ಎಲೀನರ್ ಳನ್ನು ಮದುವೆಯಾದ. ತಾಯಿ ಪ್ರಾರಂಭಿಸಿದ್ದ ಶಾಲೆಯಲ್ಲಿ ಇವರಿಬ್ಬರೂ ಪಾಠ ಹೇಳಲು ಆರಂಭಿಸಿದರು. ಕೆಲ ಕಾಲಾನಂತರ ಶಿಕ್ಷಕನಾಗಿ ತರಬೇತಿ ಪಡೆಯಲು ಫ್ರಾಸ್ಟ್, ಹಾರ್ವರ್ಡ್ ವಿಶ್ವವಿದ್ಯಾಲಯವನ್ನು ಸೇರಿದ. ಆದರೆ ಎರಡನೆಯ ವರ್ಷದ ತರಗತಿಯಲ್ಲಿ ಓದುತ್ತಿದ್ದಾಗ ಅನಾರೋಗ್ಯ ನಿಮಿತ್ತ ಅಭ್ಯಾಸ ನಿಲ್ಲಿಸಿ ಮನೆಗೆ ಹಿಂದಿರುಗಿದ. ಮತ್ತೆ ಶಾಲಾಶಿಕ್ಷಕನಾಗಿ ಕೆಲಸ ಆರಂಭಿಸಿದ.
ಹಳ್ಳಿಯ ವಾತಾವರಣದಲ್ಲಿ ಬೆಳೆದ ಫ್ರಾಸ್ಟ್ ನ ಕವನಗಳಲ್ಲಿ ಕಂಡುಬರುವ ವ್ಯಕ್ತಿಗಳೂ, ಘಟನೆಗಳೂ ಹಳ್ಳಿಯ ಜೀವನಕ್ಕೆ ಸಂಬಂಧಿಸಿದವೇ. ಸಾಮಾನ್ಯ ಜನರ ಜೀವನದ ಸನ್ನಿವೇಶಗಳನ್ನು ಆಡು ಭಾಷೆಯಲ್ಲಿ ಬರೆಯುವುದು ಫ್ರಾಸ್ಟ್ ನ ಪದ್ದತಿ. ಹಾಸ್ಯ, ವಿಡಂಬನೆಗಳು ಇದರಲ್ಲಿ ತುಂಬಿರುತ್ತವೆ. ಭಾವ ಪ್ರಧಾನವಾದ ಕಾವ್ಯ ರಚನೆ ಮುಖ್ಯವಾಗಿದ್ದ ಆ ಕಾಲದಲ್ಲಿ ಇವನ ಕವಿತೆಗಳು ಕವಿತೆಗಳೇ ಅಲ್ಲ ಎಂದವರೂ ಉಂಟು. ಫ್ರಾಸ್ಟ್ ನ “ಬಳಸದ ದಾರಿ” ಎಂಬ ಕವನದಲ್ಲಿ ಆತ ಹೊಚ್ಚ ಹೊಸ ಹಾದಿ ತುಳಿದ. ಗಣ್ಯರು ಯಾರೂ ಆಗ ಇವನ ಪ್ರತಿಭೆಯನ್ನು ಗುರುತಿಸಲಿಲ್ಲ
ರಾಬರ್ಟ್ ಫ್ರಾಸ್ಟ್ ಗೂ ಅವನ ಪತ್ನಿ ಎಲೀನರಿಗೂ ಪ್ರವಾಸದಲ್ಲಿ ವಿಶೇಷ ಆಸಕ್ತಿ. ಸ್ವಲ್ಪ ಕಾಲ ಬೇರೊಂದು ದೇಶಕ್ಕೆ ಹೋಗಿ ಇರೋಣ ಎಂದು ಅವರು ನಿರ್ಧರಿಸಿದರು. ಕೆನಡಾಕ್ಕೆ ಸೇರಿದ ವ್ಯಾನ್ ಕೂವರ್ ದ್ವೀಪಕ್ಕೆ ಹೋಗುವ ಹಂಬಲ ಫ್ರಾಸ್ಟ್ ನದು. ಇಂಗ್ಲೆಂಡಿಗೆ ಹೋಗಬೇಕೆಂದು ಹೆಂಡತಿಯ ಹಟ. ಎಲ್ಲಿಗೆ ಹೋಗುವುದೆಂದು ನಿರ್ಧರಿಸಲು ನಾಣ್ಯವನ್ನು ಮಿಡಿದರು. ನಾಣ್ಯ ಎಲೀನರ್ ಪರವಾಗಿ ಬಿತ್ತು. ಇದ್ದ ಹೊಲ ಮನೆಗಳನ್ನು ಮಾರಿ 1912ರಲ್ಲಿ ಇವರು ಇಂಗ್ಲೆಂಡನ್ನು ಸೇರಿದರು.
ಇಂಗ್ಲೆಂಡಿನಲ್ಲಿ ರಾಬರ್ಟ್ ಫ್ರಾಸ್ಟ್ ಕವನಗಳಿಗೆ ಪ್ರಕಾಶಕರು ಸಿಕ್ಕರು. ಪ್ರಕಟವಾದ ಪುಸ್ತಕಗಳು ಜನಪ್ರಿಯವಾದವು. ವಿಮರ್ಶಕರ ಹೊಗಳಿಕೆಯು ಲಭಿಸಿತು. ಗಣ್ಯ ಸಾಹಿತಿಗಳು ಫ್ರಾಸ್ಟ್ ನ ಗೆಳೆಯರಾದರು. 1915ರಲ್ಲಿ ಇವನು ಅಮೆರಿಕಕ್ಕೆ ಹಿಂದುರುಗಿದಾಗ ಭವ್ಯ ಸ್ವಾಗತ ದೊರಕಿತು. ಒಂದಾದ ಮೇಲೆ ಒಂದರಂತೆ ಫ್ರಾಸ್ಟ್ ಕವನಸಂಕಲನಗಳು ಹೊರ ಬಂದುವು. ಸಭೆ ಸಮಾರಂಭಗಳಲ್ಲಿ ತನ್ನ ಕವನಗಳನ್ನು ಓದಲು ಫ್ರಾಸ್ಟ್ ಗೆ ಕರೆಗಳು ಬಂದವು. ಹಲವು ವಿಶ್ವವಿದ್ಯಾಲಯಗಳಲ್ಲಿ ಈತ ಗೌರವ ಪ್ರಾಧ್ಯಾಪಕನಾದ. ಅಮೆರಿಕ ಮತ್ತು ಇಂಗ್ಲೆಂಡಿನ ಅನೇಕ ವಿಶ್ವವಿದ್ಯಾಲಯಗಳು ಇವನಿಗೆ ಗೌರವ ಪದವಿಗಳನ್ನು ಕೊಟ್ಟು ಪುರಸ್ಕರಿಸಿದವು. ಇವನ ಕವನ ಸಂಕಲನಗಳಿಗೆ ನಾಲ್ಕು ಬಾರಿ ಪುಲಿಟ್ಜರ್ ಸಾಹಿತ್ಯ ಬಹುಮಾನ ಬಂತು.
ಹೇಳಬೇಕಾದ ವಿಷಯಗಳನ್ನು ಆದಷ್ಟು ಕಡಿಮೆ ಮಾತುಗಳಲ್ಲಿ ಹೇಳುವುದು ಫ್ರಾಸ್ಟ್ ನ ವೈಶಿಷ್ಟ್ಯ. ಬರವಣಿಗೆಯಲ್ಲಿ ನಿಕೃಷ್ಟತೆ ಇರಬೇಕೆಂಬುದು ಅವನ ಖಚಿತ ಅಭಿಪ್ರಾಯ. ನಿಮಗೆ ಇಷ್ಟವಾದ ಸಾಹಿತ್ಯ ಪತ್ರಿಕೆ ಯಾವುದು ಎಂದು ಕೇಳಿದಾಗ “ಸೈಂಟಿಫಿಕ್ ಅಮೆರಿಕನ್” ಎಂದನಂತೆ. ಫ್ರಾಸ್ಟ್ ಹೇಳುವಂತೆ ಅವನ ಕವನಗಳು ಹರ್ಷ ಭಾವನೆಯಿಂದ ಆರಂಭವಾಗಿ ವಿವೇಕದಲ್ಲಿ ಕೊನೆಗಾಣುತ್ತವೆ. ಆಡು ಭಾಷೆಯಲ್ಲಿರುವ ಅವನ ಕವನಗಳನ್ನು ಓದಿದಾಗ ಕವಿ ನಮ್ಮೊಡನೆ ಮಾತನಾಡುತ್ತಿದ್ದಾನೆನೋ ಎನಿಸುತ್ತದೆ.
ರಾಬರ್ಟ್ ಲೀ ಫ್ರಾಸ್ಟ್ 1963ರ ಜನವರಿ 26ರಂದು ಬಾಸ್ಟನಿನಲ್ಲಿ ತೀರಿಕೊಂಡಾಗ ಅಮೆರಿಕದ ಜನತೆ ತನ್ನ ಆತ್ಮೀಯ ಬಂದು ಒಬ್ಬನನ್ನು ಕಳೆದುಕೊಂಡಂತೆ ಶೋಕಿಸಿತು. ಫ್ರಾಸ್ಟ್ ನ ಕವಿತೆಗಳಲ್ಲಿ ಜವಹರಲಾಲರಿಗೆ ಆಸಕ್ತಿ ಇತ್ತು ಜವಹಾರರು ದಿವಂಗತರಾದಾಗ ಅವರ ಮೇಜಿನ ಮೇಲೆ ಫ್ರಾಸ್ಟ್ ನ ಒಂದು ಕವಿತೆಯ ನಾಲ್ಕು ಸಾಲುಗಳಿದ್ದವು. ಜವಾಹರರು ತಾವೇ ಅದನ್ನು ಪ್ರತಿ ಮಾಡಿದ್ದರು ಎಂಬುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.