ಸುಮಾವೀಣಾ ಅವರು ಬರೆದ ಲೇಖನ ‘ಚಂದ್ರಯಾನಾನಂತರ ರವಿಯಾನ’

ಅಮೆರಿಕಾ,ರಷ್ಯಾದಂತ ದೈತ್ಯರನ್ನು ಹಿಂದಿಕ್ಕಿ ಯಶಸ್ವಿ ಚಂದ್ರಯಾನವನ್ನು ಭಾರತೀಯ ಬಾಹ್ಯಾಕಾಶ ಸಮಸ್ಥೆ ಇಸ್ರೋ ಮಾಡಿ ಮುಗಿಸಿದೆ. ಪ್ರತ್ಯಕ್ಷವಾಗಿ ಪರೋಕ್ಷವಾಗಿ ದುಡಿದ ಎಲ್ಲಾ ಮಹನೀಯರಿಗೆ ಅಭಿನಂದನೆಗಳು. ಓಡು ಮೋಡಗಳ ಹಿಂದೆ ಮರೆಯಾಗಿ ಮತ್ತೆ ಕಣ್ಣುಗಳಲ್ಲಿ ಸೆರೆಯಾಗುತ್ತಿದ್ದ ಚಂದಿರ ಈ ಬಾರಿ ಭಾರತೀಯ ತಂತ್ರಜ್ಞಾನಿಗರ ಕೈಗೆ ಸೆರೆ ಸಿಕ್ಕಿದ್ದಾನೆ. ವಿಕ್ರಮ್ ಲ್ಯಾಂಡರ್ ಇಳಿದ ಜಾಗವನ್ನು ‘ಶಿವಶಕ್ತಿ’ ಕೇಂದ್ರವೆಂದು ನಾಮಕರಣ ಮಾಡಲಾಗಿದೆ ಚಂದ್ರನಲ್ಲಿ ‘ಶಿವಶಕ್ತಿ’ ಎಂಬ ಹೆಸರು ಕೇಳಿದ ಕೂಡಲೆ ನೆನಪಿಗೆ ಬಂದದ್ದು “ಚಂದ್ರಚೂಡ ಶಿವಶಂಕರ” ಎಂಬ ಪುರಂದರದಾಸರ ಕೀರ್ತನೆ. ಅಂತೂ ಚಂದಿರನ ಅಂಗಳಕ್ಕೆ ಉಪಗ್ರಹವನ್ನು ಹಾರಿಬಿಟ್ಟು “ಮೂನ್ ತಕ್ ಜಾನ” ಅಂದಿದ್ದು ಜಾ..ಮೂನ್ ಮೆದ್ದಷ್ಟೆ ಸಂತಸ ನೀಡಿದೆ.

ತಂತ್ರಜ್ಞಾನದಲ್ಲಿ ಮುಂದುವರೆದ ರಾಷ್ಟ್ರಗಳು ಒಂದು ಕಾಲದಲ್ಲಿ ಭಾರತೀಯರು ಉಡಾವಣಾ ವಾಹನವನ್ನು ಎತ್ತಿನ ಗಾಡಿಯಲ್ಲಿ ಸಾಗಿಸಿದ್ದಕ್ಕೆ ಗೇಲಿ ಮಾಡಿದ್ದರು. ಆದರೆ ಇಂದು ಗೇಲಿಯೇ ಗೆಲುವಾಗಿದೆ. ಚಂದ್ರಯಾನದ ಯಶಸ್ಸಿನ ಘಳಿಗೆ ಸಂಭ್ರಮಿಸುತ್ತಿದ್ದಂತೆ ವಿಜ್ಞಾನಿಗಳು ಏನನ್ನೋ ಕೇಳಿಕೊಳ್ಳುವಂತೆ ಕೈಕೈ ಹಿಸುಕಿಕೊಳ್ಳುವಂತೆ ಫಿಂಗರ್ ಕ್ರಾಸ್ ಮಾಡಿ ಹಿಡಿದವರಂತೆ ಕಾಣುತ್ತಿದ್ದರು . ಚಂದ್ರಯಾನ ಎರಡರ ವಿಫಲತೆ ಮತ್ತು ಮೊನ್ನೆ ಮೊನ್ನೆ ರಷ್ಯಾದವರ ಚಂದ್ರಯಾನದ ಭಗ್ನವಾಗಿದ್ದರಿಂದ ಅವರಲ್ಲಿ ಹೆಚ್ಚಿನ ಆತಂಕ ಅವರ ಮನದಲ್ಲಿ ಮನೆ ಮಾಡಿದ್ದಿರಬಹುದು.ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿ ಅಡಿ ಇಡುತ್ತಿದ್ದಂತೆ ತಾಯಿಯೊಬ್ಬಳು ತನ್ನೆಲ್ಲಾ ಪ್ರಸವ ವೇದನೆಯನ್ನು ಮರೆತು ಶಿಶುವನ್ನು ಆಲಂಗಿಸುವಂತೆ ವಿಜ್ಞಾನಿಗಳೆಲ್ಲರು ತುಂಬು ಸಂತಸ ಪಡುತ್ತಿದ್ದ ದೃಶ್ಯ ಎಂಥವರನ್ನೂ ಭಾವುಕರನ್ನಾಗಿಸಿದವು. ನಮ್ಮ ಕೆಲಸ ನಾವು ಮಾಡುತ್ತಾ ಇರಬೇಕು ಅದರ ಫಲಿತದ ಮೊತ್ತ ನಮ್ಮ ಖಾತೆಗೆ ಜಮೆಯಾಗುತ್ತಿರುತ್ತದೆ ಎಂಬ ಮಾತು ಇಲ್ಲಿ ಸತ್ಯವಾಯಿತು. ಸತತ ಐದು ವರ್ಷ ಏಕಾಂಗಿಯಾಗಿ ಸುತ್ತುತ್ತಿದ್ದ ಚಂದ್ರಯಾನ 2 ಚಂದ್ರಯಾನ ಮೂರಕ್ಕೆ ‘ಎಸ್ ಬಡ್ಡಿ’ ಎಂದು ಸಂದೇಶ ನೀಡಿರುವುದೇ ಸಾಕ್ಷಿ.

ನಾಗವರ್ಮನ ‘ಕರ್ನಾಟಕ ಕಾದಂಬರಿ’ಯಲ್ಲಿ ‘ಹೈಮಾಚಲ ಅಂಬೋರೂಪದಿಂ ಪರಿಣಮಿಸಿದಂತಲ್ತು’ ಎಂದು ಹುಣ್ಣಿಮೆಯ ಚಂದ್ರನಬಿಂಬ ಅಚ್ಛೋದ ಸರವರದಲ್ಲಿ ಕಂಡಾಗ ಹೇಳಿದೆ. ‘ಹಿಮಾಚಲ’ ಎಂದರೆ ‘ಚಳಿ’ಯ ಅನ್ವರ್ಥವಲ್ಲವೆ. ಹಿರಿಯರೂ ಚಂದಿರನೆಂದರೆ ತಂಪು ಎಂದೇ ಹೇಳಿರುವುದು.ಅದನ್ನೆ ಈಗ ಇಸ್ರೋ ವಿಜ್ಞಾನಿಗಳು ರಾತ್ರಿಯಲ್ಲಿ ದಕ್ಷಿಣ ಧ್ರುವದಲ್ಲಿ – 230 ಡಿಗ್ರಿಯಲ್ಲಿ ಇರುತ್ತದೆ ಎಂದಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ನಿಂತು ಹೇಳಬೇಕೆಂದರೆ ಪ್ರಗ್ಯಾನ್ ರೋವರ್ ಚಂದ್ರನ ತಾಪಮಾನವನ್ನು ಅರ್ಥಮಾಡಿಕೊಳ್ಳಲು ಮೂರು ಇಂಚುಗಳಷ್ಟು ಮೇಲ್ಪದರವನ್ನು ಕೊರೆದು ಅವನ ತಾಪಮಾನ – ಹತ್ತು ಡಿಗ್ರಿ ಸೆಲ್ಸಿಯಸ್ ಎಂದು ಟರ್ಮಲ್ ಪ್ರೋಬ್ನಲ್ಲಿ ದಾಖಲಿಸಿದೆ.

ಭರತ ಚಕ್ರವರ್ತಿ ಎಲ್ಲಾ ರಾಜರ ಮೇಲೆ ದಿಗ್ವಿಜಯ ಸಾಧಿಸಿ ವೃಷಭಾದ್ರಿಯಲ್ಲಿ ಹೋಗಿ ತನ್ನ ಹೆಸರಿನಲ್ಲಿ ಮೊದಲು ಶಾಸನ ಬರೆಸಬೇಕೆಂದಿದ್ದ ಆದರೆ ‘ಆತ್ಮ ತತ್ವ ಮುಟ್ಟಿ ಬರೆದಿರ್ದ ಲಿಪಿ’ ಮೊದಲೆ ದಾಖಲಾಗಿತ್ತು ಎಂದು ಕವಿ ರತ್ನಾಕರವರ್ಣಿ ತನ್ನ ‘ಭರತೇಶ ವೈಭವ’ದ ‘ನೃಪಾಲನ ಗರ್ವ ಸೋರಿದುದು’ ಎಂಬ ಭಾಗದಲ್ಲಿ ಉಲ್ಲೇಖಿಸಿದ್ದಾನೆ ಅಂದರೆ ದಿಗ್ವಿಜಯಶಾಲಿಗಳು ತಮ್ಮ ಹೆಸರಿನಲ್ಲಿ ಶಾಸನಗಳನ್ನು ಕೆತ್ತಿಸುತ್ತಿದ್ದರು ಎಂಬುದು ಸರ್ವವಿದಿತ, ಹಾಗೆ ನಮ್ಮ ಪ್ರಗ್ಯಾನ್ ರೋವರ್ ಕೂಡ ಮೊದಲ ಹೆಜ್ಜೆ ಇರಿಸುವಾಗ ನಮ್ಮ ರಾಷ್ಟ್ರಲಾಂಛನದೊಂದಿಗೆ ಇಸ್ರೋ ಚಂದ್ರನ ಮೇಲೆ ತನ್ನ ಹೆಸರನ್ನು ಒಡಮೂಡಿಸಿದೆ. ಇದು ಇತಿಹಾಸ ಸೃಷ್ಡಿಯೇ ಅಲ್ಲವೆ. “ಚಂದಿರನೇತಕೆ ಓಡುವನಮ್ಮ” ಎಂಬ ಮಾತಿಗೆ ಬದಲಾಗಿ ಮಕ್ಕಳಿಗೆ “ಚಂದಿರನಲ್ಲಿ ಇಳಿದೆವಮ್ಮ” ಎಂದು ಇನ್ನು ಮುಂದೆ ಹೇಳಬೇಕು.

“ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯಾ ಚಂದ್ರ ಕುಂದೆ ಕುಂದುವುದಯ್ಯಾ …” ಬಸವಣ್ಣರ ವಚನದ ಈ ಸಾಲು ಇಲ್ಲಿ ಚಂದ್ರೋದಯಕ್ಕೆ ಪ್ರಗ್ಯಾನ್ ಶೋಧಿಸುವುದಯ್ಯಾ ಚಂದ್ರ ಕುಂದೆ ಕುಂದುವುದಯ್ಯಾ ಎಂಬುದಾಗಿ ಅನ್ವಯವಾಗಬಹುದು.( ಚಂದ್ರನಲ್ಲಿ ಹಗಲಿರುವ ತನಕ ಪ್ರಗ್ಯಾನ್ ಕೆಲಸ ನಿರ್ವಹಿಸುತ್ತದೆ ಕತ್ತಲಾದಾಗಿನ ಪರಿಸ್ಥಿತಿಯನ್ನು ಕೇವಲ ಧನಾತ್ಮಕ ಇಲ್ಲವೆ ಋಣಾತ್ಮಕವಾಗಿ ಇಂದಿಗೆ ಹೇಳಲಾಗದು)

‘ರಜನಿಕಾಂತಿ’ ಎಂದರೆ ‘ರಾತ್ರಿಯಲ್ಲಿ ಕಾಣುವ ಬೆಳಕು’ ಅರ್ಥಾತ್ ‘ಚಂದಿರನ ಬೆಳಕು’ ಎಂದೇ ಪ್ರಸ್ತುತ ಭಾರತೀಯರ ಮುಖದಲ್ಲಿ ಚಂದಿರಯಾನದ ಯಶಸ್ಸಿನ ಬೆಳಕು ನಳನಳಿಸುತ್ತಿದೆ. ಶಶಿ- ಮಂಗಳರನ್ನು ಯಶಸ್ವಿಯಾಗಿ ತಲುಪಿ ಸಂಶೋಧನೆ ನಡೆಸುತ್ತಿರುವ ಇಸ್ರೋ ರವಿ- ಶುಕ್ರರನ್ನು ಯಶಸ್ವಿಯಾಗಿ ತಲುಪಲಿ ಸಂಶೋಧನೆಯ ಮೂಲಕ ಇನ್ನಷ್ಟು ಪ್ರಕಾಶಿಸಲಿ ಎಂಬುದೆ ಎಲ್ಲಾ ಭಾರತೀಯರ ಆಶಯ.

‘ಹೂವು ಹೊರಳುವವು ಸೂರ್ಯನ ಕಡೆಗೆ ನಮ್ಮ ದಾರಿ ಬರೆ ಚಂದ್ರನವರೆಗೆ’ ಎಂದ ಕಣವಿಯವರ ಸಾಲು ಈಗ ಬದಲಾಗುವಂತಿದೆ ಇಸ್ರೋ ಇದೇ ಸೆಪ್ಟೆಂಬರ್ 2 ರಂದು ಸೂರ್ಯ ಹಾದಿಯನ್ನು ಹುಡುಕಿ ಹೊರಟಿದೆ ಅರ್ಥಾತ್ ಸೂರ್ಯನ ಹೊರ ವಾತಾವರಣದ ಅಧ್ಯಯನ ಶಿಕಾರಿಗೆ ಸಜ್ಜಾಗಿದೆ.

“ತಿಂಗು ತಿಂಗುಳಿಗೂ ತಿಂಗಳು ಮಾವನ ಪೂಜೆ” ಎಂಬ ಜಾನಪದದ ಸಾಲಿನಂತೆ ತಿಂಗು ತಿಂಗಳಿಗೂ ನಮ್ಮ ಇಸ್ರೋದ ಯಶಸ್ವಿಯಾನ ಮುಂದುವರೆಯಲಿ ಅಲ್ವೆ!

ಚಂದಾದಾರರಾಗಿ
ವಿಭಾಗ
4 ಪ್ರತಿಕ್ರಿಯೆಗಳು
Inline Feedbacks
View all comments
Avinash MB
23 August 2024 19:20

Milestone of every Indian proud very nicely explained madam thank you 😊

ಅತ್ತಿಹಳ್ಳಿ ದೇವರಾಜ್
3 September 2023 10:05

ಚಂದ್ರಯಾನ ಭಾರತೀಯ ವಿಜ್ಞಾನ ಲೋಕಕ್ಕೆ ಹೊಸ ಪುಟ ತೆರೆದಿದೆ.
ಲೇಖನ ತುಂಬಾ ಚೆನ್ನಾಗಿದೆ
ಶುಭಾಶಯಗಳು….!!!!

ಸುಶೀಲಾ ಸೋಮಶೇಖರ್
1 September 2023 10:15

ಸುಮಾ ಲೇಖನ ತುಂಬಾ ಚೆನ್ನಾಗಿ ಅರ್ಥಪೂರ್ಣವಾಗಿ ಬಂದಿದೆ. ಅಭಿನಂದನೆಗಳು ಕಣಪ್ಪ

ರಾಜೇಶ್ವರಿ ‌ ಹುಲ್ಲೇನಹಳ್ಳಿ.
30 August 2023 14:37

ಚಂದಿರನ ಅಂಗಳಕೆ ಬ ಕಾಲುಟ್ಟ ಭಾರತೀಯರ
ಇತಿಹಾಸ ಸಾಹಿತ್ಯ ಪುರಾಣದ ದಾಖಲೆಗಳೊಂದಿಗೆ ಜೋಡಿಸಿರುವ ಅತ್ಯಂತ ಉತ್ತಮ ಲೇಖನ ಸುಮಾ

0
    0
    Your Cart
    Your cart is emptyReturn to Shop