ಉತ್ತರ ಕರ್ನಾಟಕದಲ್ಲಿ ಕನ್ನಡ ರಂಗಭೂಮಿಗೆ ಗೌರವ ಸ್ಥಾನ ತಂದುಕೊಟ್ಟ ಮೊದಲಿಗ “ಶಿರಹಟ್ಟಿ ವೆಂಕೋಬರಾಯರು” – ಉದಂತ ಶಿವಕುಮಾರ್

“ಎಲ್ಲಿ ನೋಡಲು ಮರಾಠಿ ನಾಟಕಮಯಂ ತಾನಾಯ್ತು ಕರ್ನಾಟಕಂ” ಎಂದು ಧಾರವಾಡದ ಶಾಂತಕವಿ ಉದ್ಗರಿಸಿದರು. ಇದು ಕಳೆದ ಶತಮಾನದ ಅಂತ್ಯ ಭಾಗದಲ್ಲಿ ಉತ್ತರ ಕರ್ನಾಟಕದ ಪರಿಸ್ಥಿತಿ. ಅಂಥ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ರಂಗಭೂಮಿಯ ಸಾರ್ವಭೌಮತ್ವವನ್ನು ಎದುರಿಸಿ ಕನ್ನಡ ನಾಟಕ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಸಾಹಸಿ, ಶಿರಹಟ್ಟಿ ವೆಂಕೋಬರಾಯರು.

ಹೈದರಾಬಾದ್ ಸಂಸ್ಥಾನಕ್ಕೆ ಸೇರಿದ್ದ ಕೊಪ್ಪಳದಲ್ಲಿನ ಸುಪ್ರಸಿದ್ಧ ವಕೀಲ ಹಣಮಂತರಾಯರ ಪುತ್ರ ವೆಂಕೋಬರಾವ್ ಜನಿಸಿದ್ದು 1885ರಲ್ಲಿ. ತಾಯಿ ಕೃಷ್ಣವೇಣಿ ಬಾಯಿ. ಸಾಂಗಲಿ ಸಂಸ್ಥಾನದ ಶಿರಹಟ್ಟಿಯಲ್ಲಿ ಪ್ರಸಿದ್ಧ ನರಗುಂದ ನಾಯಕರ ಮನೆತನದವರು. 12 ನೇ ವರ್ಷ ವಯಸ್ಸಿನಲ್ಲೇ ವೆಂಕೋಬರಾವ್ ತಂದೆಯನ್ನು ಕಳೆದುಕೊಂಡರು. ತಾಯಿಯು ಮಗನೊಂದಿಗೆ ತವರಿಗೆ ಬಂದು ಶಿರಹಟ್ಟಿಯಲ್ಲಿ ಸೋದರ ತಮ್ಮಣ್ಣನಾಯಕ ನೊಡನೆ ವಾಸಿಸತೊಡಗಿದರು ತಮ್ಮಣ್ಣ ನಾಯಕರಿಗೆ ಬಾಲಕ ವೆಂಕೋಬನ ಮೇಲೆ ಅಪಾರ ವಾತ್ಸಲ್ಯ. ಮುಂದೆ ವೆಂಕೋಬರಾವ್ ನಾಟಕ ಕಂಪನಿ ಪ್ರಾರಂಭಿಸುವಾಗ ಹಳೆಯ ಪೀಳಿಗೆಯ ಜನರಲ್ಲಿ ತಮ್ಮಣ್ಣನಾಯಕರೇ ಬೆಂಬಲದ ರಕ್ಷೆ ನೀಡಿದವರು. ಅವರು ವೆಂಕೋಬರಾಯ ರ ಕಂಪನಿಯು ನಾಟಕ ಆಡುವುದಕ್ಕೆ ಊರ ಮಧ್ಯದಲ್ಲಿ ಒಂದು ಚಿಕ್ಕ ನಾಟಕ ಗೃಹ ಕಟ್ಟಿಸಿಕೊಟ್ಟರು. ಮಹಾಲಕ್ಷ್ಮಿ ಥಿಯೇಟರ್ ಎಂಬ ಹೆಸರಿನ ಆ ಮಂದಿರ ಈಗಲೂ ಇದೆ. ತಮ್ಮಣ್ಣ ನಾಯಕರು ವೆಂಕೋಬರಾಯರಿಗೆ ಚಿಕ್ಕ ವಯಸ್ಸಿನಲ್ಲಿಯೇ ರಾಯಚೂರು ಜಿಲ್ಲೆಯ ಮುದುಗಲ್ಲದ ಜಮೀನುದಾರ ಗೋಪಾಲ ಫಡ್ನವೀಸ್ ರ ಮಗಳು ಲಕ್ಷ್ಮೀಬಾಯಿಯೊಡನೆ ವೈಭವದಿಂದ ವಿವಾಹ ಮಾಡಿಸಿದರು. ವೆಂಕೋಬರಾಯರಿಗೆ 1900ರಲ್ಲಿ ಒಬ್ಬ ಹೆಣ್ಣುಮಗಳು ಸುಂದರಾ ಮತ್ತು 1904ರಲ್ಲಿ ಒಬ್ಬ ಗಂಡು ಮಗ ತಮ್ಮಯ್ಯ ಜನಿಸಿದರು.

ವೆಂಕೋಬರಾಯರ ಪ್ರಾಥಮಿಕ ಶಿಕ್ಷಣ ಕೊಪ್ಪಳ, ಶಿರಹಟ್ಟಿಗಳಲ್ಲಿ. ಕೊಪ್ಪಳದಲ್ಲಿ ಉರ್ದು ಪ್ರಭಾವ; ಶಿರಹಟ್ಟಿಯಲ್ಲಿ ಮರಾಠಿ ಪ್ರಭಾವ; ಆದ ಕಾರಣ ಕನ್ನಡದ ಜೊತೆಯಲ್ಲಿ ಉರ್ದು, ಮರಾಠಿ ಜ್ಞಾನವಿದ್ದಿತ್ತು. ಪ್ರಾಥಮಿಕ ಶಾಲೆಯಲ್ಲಿಯೇ ಅವರು ನಾಟಕ ಪ್ರಹಸನಗಳಲ್ಲಿ ಪಾತ್ರ ವಹಿಸುತ್ತಿದ್ದರು. ಸಂಗೀತ, ಅಭಿನಯ ಮತ್ತು ಮಾತುಗಾರಿಕೆಗಳಲ್ಲಿ ಅವರ ಪ್ರತಿಭೆ ವ್ಯಕ್ತವಾಗಿತ್ತು. ಆಗ ಆ ಪ್ರದೇಶದಲ್ಲಿ ಕಿರ್ಲೋಸ್ಕರ್ ಕಂಪನಿ, ರಾಜಪುರ ಕಂಪನಿ, ಶಾಹು ನಗರವಾಸಿ ಕಂಪನಿ ಮೊದಲಾದ ಮರಾಠಿ ನಾಟಕ ಸಂಸ್ಥೆಗಳ ನಾಟಕಗಳು ಜನಪ್ರಿಯವಾಗಿದ್ದು. ಕನ್ನಡ ಕಂಪನಿಗಳು ಆ ಮಟ್ಟಕ್ಕೆ ಬರಲಾರವು ಎಂದು ಸಾಮಾನ್ಯರ ನಂಬಿಕೆ. ಅಲ್ಲದೇ ನಾಟಕರಂಗವು ಪೋಲಿ ವೃತ್ತಿ ಎಂಬ ಭಾವನೆ. ವೆಂಕೋಬರಾಯರಿಗೆ ಕನ್ನಡ ನಾಟಕ ಕಂಪನಿಯನ್ನು ಕಟ್ಟಿ ನಡೆಸಬೇಕೆಂಬ ಗೀಳು. ಶಿರಹಟ್ಟಿ ಆಸುಪಾಸಿನ ಯುವಕರಿಗೆ ಆದರ್ಶವನ್ನು ಬೋಧಿಸಿ ಅವರನ್ನು ಸೇರಿಸಿಕೊಂಡು “ಮಹಾಲಕ್ಷ್ಮಿ ಪ್ರಸಾದಿತ ಸಂಗೀತ ನಾಟಕ ಮಂಡಲಿ”ಯನ್ನು ಪ್ರಾರಂಭಿಸಿಯೇ ಬಿಟ್ಟರು. 1903 ರಲ್ಲಿ ಈ ಮಂಡಲಿಯ ಪ್ರಥಮ ನಾಟಕ “ಶ್ರೀನಿವಾಸ ಕಲ್ಯಾಣ” ಅಥವಾ “ಪದ್ಮಾವತಿ ಪರಿಣಯ” ಯಶಸ್ವಿಯಾಯಿತು. ಅದನ್ನು ಬರೆದ ಶಿರಹಟ್ಟಿಯ ಇಬ್ಬರು ಶಾಲಾ ಶಿಕ್ಷಕರಿಗೆ ವೆಂಕೋಬರಾಯರು ಜರಿಯ ರುಮಾಲು ಉಡುಗೊರೆ ನೀಡಿದರು. ಅವರ ನಾಟಕ ಕಂಪನಿ ಸಂಚಾರ ಹೊರಟದ್ದು 1909ರಲ್ಲಿ. ಗದುಗಿನಲ್ಲಿ ಮೊದಲನೆಯ ಕ್ಯಾಂಪ್ ಅಲ್ಲಿ “ಪದ್ಮಾವತಿ ಪರಿಣಯ”, “ಶಾಕುಂತಲಾ”, “ಶ್ರೀರಾಮ ಪಾದುಕಾಪಟ್ಟಾಭಿಷೇಕ” ಪ್ರದರ್ಶನಗಳಾದವು. ಮುಂದೆ ಮೂರು ದಶಕ ಕಾಲ ಕರ್ನಾಟಕದ ಮೂಲೆಮೂಲೆಗಳಲ್ಲಿ ಮಾತ್ರವಲ್ಲದೆ, ಮದರಾಸು, ಕೇರಳ, ಮಹಾರಾಷ್ಟ್ರಗಳ ಕೆಲವು ಭಾಗಗಳಲ್ಲೂ ಶಿರಹಟ್ಟಿ ನಾಟಕ ಕಂಪನಿ ಸಂಚರಿಸಿತು.ಅದರ ಹೆಸರು ಮನೆ ಮಾತಾಯಿತು.

“ಪದ್ಮಾವತಿ ಪರಿಣಯ”ದಲ್ಲಿ ಶ್ರೀನಿವಾಸ, “ಭೋಜ ಪ್ರಬಂಧ” ದಲ್ಲಿ ಭಟ್ಟನಾಯಕ, “ವಿವೇಕ ವಿಜಯ”ದ ನಾಯಕ ಮನೋರಾಯ, ಮೊದಲಾದ ಪಾತ್ರಗಳ ನಟನಾಗಿ ವೆಂಕೋಬರಾಯರು ಜನಪ್ರಿಯರಾದರು. ಗಂಡು ಅಭಿನಯಕ್ಕೆ ಹೆಸರಾದ ಅವರು ಮುಂದೆ ಹೆಚ್ಚು ಕಾಲ ನಟನಾಗಿ ಉಳಿಯದೆ ಕಂಪನಿಯ ಆಡಳಿತ ನಿರ್ವಹಣೆಗೆ ಅಧಿಕ ಗಮನ ಕೊಟ್ಟರು. ಮೈಸೂರಿನ ಆಸ್ಥಾನ ವಿದ್ವಾನ್ ತಿರುಮಲೆ ವೆಂಕಟಾಚಾರ್ಯ, ಬೆಳ್ಳಾವೆ ನರಹರಿಶಾಸ್ತ್ರಿಗಳು ಮೊದಲಾಗಿ ಕರ್ನಾಟಕದ ಬೇರೆ ಬೇರೆ ಭಾಗಗಳ ಪಂಡಿತರಿಂದ ತಮ್ಮ ಕಂಪನಿಗಾಗಿ ನಾಟಕಗಳನ್ನು ಬರೆಸಿ ಪ್ರದರ್ಶಿಸಿದರು. ನಾಟಕ ಶಿಕ್ಷಕರಿಂದ ನಟರಿಗೆ ತರಬೇತಿ ಕೊಡಿಸುತ್ತಿದ್ದರು. ತಿರುಮಲೆ ವೆಂಕಟಾಚಾರ್ಯ ಮತ್ತು ಬ್ಯಾಡಗಿಯ ಪಂಡಿತ ಕವಲಿ ಮಾಸ್ತರರು ನಾಟಕ ಶಿಕ್ಷಕರಾಗಿ ಅವರ ಕಂಪನಿಯಲ್ಲಿದ್ದರು. ಕೆಲವು ಕಾಲ ಗುರುರಾವ್ ದೇಶಪಾಂಡೆಯವರು ನಟರಿಗೆ ಸಂಗೀತ ಹೇಳಿಕೊಟ್ಟರು. ಮುಂಬೈಯಲ್ಲಿ ಜರತಾರಿ ಕೆಲಸದ ಶಿಕ್ಷಣ ಪಡೆದಿದ್ದ ಒಬ್ಬರನ್ನು ಕಂಪನಿಯಲ್ಲಿ ಉಡುಪು ನಿರ್ಮಾಣಕ್ಕೂ, ಮೂವರು ವರ್ಣಚಿತ್ರಕಾರರನ್ನು ದೃಶ್ಯ ಪರದೆ ನಿರ್ಮಾಣಕ್ಕೂ ನೇಮಿಸಿಕೊಂಡಿದ್ದರು.

ಶಿರಹಟ್ಟಿ ಕಂಪನಿಯಲ್ಲಿ ನಟರಾಗಿ ಹೆಸರು ಗಳಿಸಿದ ವಾಮನರಾವ್ ಮಾಸ್ತರರು ಗಾಯಕರೂ ಲೇಖಕರೂ ಆಗಿದ್ದರು. ವೆಂಕೋಬರಾಯರು ಹೋದ ಊರುಗಳಲ್ಲಿ ಉತ್ತಮ ನಟರ ಪ್ರತಿಭೆಯನ್ನು ಗುರುತಿಸಿ ಕಂಪನಿಗೆ ಸೇರಿಸಿಕೊಳ್ಳುತ್ತಿದ್ದರು. ಉತ್ತಮ ಗಾಯಕರಾದ ವಾಸುದೇವರಾವ್, ನಿಜಾಮ ಕರ್ನಾಟಕ ಭಾಗದ ಹೆಸರಾಂತ ಸ್ತ್ರೀ ಪಾತ್ರಧಾರಿ ಮಾಸ್ಟರ್ ಅಂಬಾದಾಸ. ಉತ್ತರ ಕರ್ನಾಟಕದ ಹಾಸ್ಯಪಟು ಲಕ್ಷ್ಮಣರಾವ್ ಪುರಿ, ಶಿರಹಟ್ಟಿ ಕಂಪನಿಯಲ್ಲಿ ಹೆಸರು ಹೊಂದಿದವರಾಗಿದ್ದರು. “ರಾಮಾಂಜನೇಯ ಯುದ್ಧ”ದಲ್ಲಿ ಆಂಜನೇಯ ಪಾತ್ರಧಾರಿಯಾದ ನಂಜುಂಡಯ್ಯ ‘ಕಲಿಯುಗದ ಆಂಜನೇಯ’ ಎಂದು ಕರ್ನಾಟಕದಾದ್ಯಂತ ಪ್ರಸಿದ್ಧರಾಗಿದ್ದರು. ವೆಂಕೋಬರಾಯರು ಮೈಸೂರು ಮಹಾರಾಜರಿಂದಲೂ ಉತ್ತರ ಕರ್ನಾಟಕದ ಹಲವು ಸಂಸ್ಥಾನಿಕರಿಂದಲೂ ಬಹುಮಾನಿತರಾದರು. ಸ್ವದೇಶೀ ಚಳುವಳಿಗೆ ಹಣ ಕೂಡಿಸಲು ಅವರು ಸಹಾಯಾರ್ಥ ಪ್ರದರ್ಶನಗಳನ್ನಿತ್ತರು. ಮಿತ್ರರಾದ ಡಾ. ಎನ್.ಎಸ್. ಹರ್ಡಿಕರರ ಭಾರತ ಸೇವಾದಳದ ಸಹಾಯಕ್ಕಾಗಿಯೂ ಪ್ರದರ್ಶನಗಳನ್ನು ನೀಡಿದರು. ರಾಷ್ಟ್ರೀಯ ನಾಯಕರಾದ ತಿಲಕ, ಜವಾಹರಲಾಲ ನೆಹರೂ ಮೊದಲಾದವರು ಅವರ ನಾಟಕಗಳನ್ನು ನೋಡಿ ಪ್ರಶಂಶಿಸಿದ್ದರು.

ವೆಂಕೋಬರಾಯರು ಇರೋ 1914ರಲ್ಲಿ ತಮ್ಮ ಮಗಳ ಮದುವೆ ಮಾಡಿದರು. ಇಂಟರ್ ಮಿಡಿಯಟ್ ತನಕ ವಿದ್ಯಾಭ್ಯಾಸ ಮಾಡಿದ ಮಗ ತಮ್ಮಯ್ಯನನ್ನು ಕಂಪನಿಯ ಆಡಳಿತ ನಿರ್ವಹಣೆ ನೋಡಿಕೊಳ್ಳಲು ಸೇರಿಸಿಕೊಂಡರು. ತಮ್ಮಯ್ಯನವರೂ ಒಳ್ಳೆಯ ಕಲಾವಿದರಾಗಿದ್ದು. “ಕಿತ್ತೂರು ಚೆನ್ನಮ್ಮ”ದಲ್ಲಿ ಥ್ಯಾಕರೆ “ಮಿಸ್ ಮಾಧುರಿ”ಯಲ್ಲಿ ನಾಯಕನಾದ ಮನೋರಾಯ ಪಾತ್ರಗಳನ್ನು ನಿರ್ವಹಿಸಿ ಹೆಸರು ಗಳಿಸಿದರು. ವೆಂಕೋಬರಾಯರ ಜೀವನ 1915 ರಿಂದ 1930ರ ಅವಧಿಯಲ್ಲಿ ಅತ್ಯಂತ ಸುಖಮಯವಾಗಿತ್ತು. 1934ರಲ್ಲಿ ಅವರು ಅಸ್ವಸ್ಥರಾಗಿ ಹಾಸಿಗೆ ಹಿಡಿದರು. ಮುಂದೆ ಆರ್ಥಿಕ ದುರ್ದೆಸೆಯಿಂದ ಮಹಾರಾಷ್ಟ್ರ, ಕರ್ನಾಟಕಗಳಲ್ಲಿ ಅನೇಕ ನಾಟಕ ಕಂಪನಿಗಳು ನಿಂತು ಹೋದವು. 1936ರಲ್ಲಿ ಶಿರಹಟ್ಟಿ ಕಂಪನಿಯನ್ನೂ ನಿಲ್ಲಿಸಬೇಕಾಯಿತು. ಅದೇ ವರ್ಷ ವೆಂಕೋಬರಾಯರಿಗೆ ಮಾತೃ ವಿಯೋಗವಾಯಿತು. ಅಸ್ವಸ್ಥತೆ ಮತ್ತು ಆರ್ಥಿಕ ತೊಂದರೆಗಳಿಂದ ಬಳಲಿದ ವೆಂಕೋಬರಾಯರು 1938 ರ ಜುಲೈ 15ರಂದು ನಿಧನರಾದರು.

ತಮ್ಮಯ್ಯನವರು 1939ರಲ್ಲಿ ಶಿರಹಟ್ಟಿ ಕಂಪನಿಯನ್ನು ಸಣ್ಣ ಪ್ರಮಾಣದಲ್ಲಿ ಪುನರಾರಂಭಿಸಿದರು. ತಾವೇ ಒಂದು ನಾಟಕ ಬರೆದು ಪ್ರದರ್ಶಿಸಿದರು.ಆದರೆ ಕಂಪನಿ ಮತ್ತೆ ಉಚ್ಛ್ರಾಯ ಹೊಂದದೆ ಒಂದೆರಡು ವರ್ಷಗಳಲ್ಲಿ ನಿಂತೇಹೋಯಿತು. ತಮ್ಮಯ್ಯನವರು ಅನಂತರ ಸಾಂಗಲಿ ಸಂಸ್ಥಾನದಲ್ಲಿ ಸರ್ಕಾರಿ ಉದ್ಯೋಗಕ್ಕೆ ಸೇರಿ 1960ರಲ್ಲಿ ನಿವೃತ್ತರಾದರು. ವೆಂಕೋಬರಾಯರ ಪತ್ನಿ ಲಕ್ಷ್ಮಿಬಾಯಿ 1952 ರಲ್ಲಿ ನಿಧನರಾದರು.

ಕರ್ತೃತ್ವಶಾಲಿ ಹಾಗೂ ಸಾಹಸಿಯಾದ ವೆಂಕೋಬರಾಯರು ಕಂಪನಿಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿಸುತ್ತಿದ್ದರು. ಸಂಚಾರ ಕಾಲದಲ್ಲಿ ನಾಟಕ ಯಶಸ್ವಿಯಾಗಲು ಆಯಾ ಪ್ರದೇಶಕ್ಕೆ ತಕ್ಕಂತೆ ತಕ್ಕ ಬದಲಾವಣೆಗಳನ್ನು ಮಾಡುತ್ತಿದ್ದರು. ಶಿರಹಟ್ಟಿ ಕಂಪನಿ 35 ವರ್ಷ ಕಾಲ ನಾಟಕ ರಂಗಕ್ಕೆ ಸೇವೆ ಸಲ್ಲಿಸಿತು. ಉತ್ತರ ಕರ್ನಾಟಕದಲ್ಲಿ ಕನ್ನಡ ರಂಗಭೂಮಿ ಮತ್ತು ವೃತ್ತಿ ನಾಟಕ ಸಂಸ್ಥೆಗಳಿಗೆ ಗೌರವ ಸ್ಥಾನ ದೊರಕಿಸಿಕೊಟ್ಟ ಹಿರಿಯರಲ್ಲಿ ವೆಂಕೋಬರಾಯರು ಮೊದಲಿಗರು.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop