ಇನ್ನೂ ಮುಂಗಾರಿನ ಗುಡುಗಿಲ್ಲ, ಮಿಂಚು ಕಾಣಲೇ ಇಲ್ಲ. ಜೂನ್ ಹದಿನೈದು ಕಳೆದರೂ ಮಳೆರಾಯನ ಸುಳಿವಿಲ್ಲ, ಮುಂಗಾರಿನ ಆಗಮನ ಸರಿಯಾಗಿ ಆಗಲೇ ಇಲ್ಲ, ಅಲ್ಲೆಲ್ಲೋ ಚಂಡಮಾರುತದ ಹಾವಳಿ, ಬಿರುಗಾಳಿಯ ಆರ್ಭಟದ ವರದಿ ಆಗಾಗ ಕೇಳಿಸುತ್ತಿದೆ ಅಷ್ಟೇ.
ಆದರೆ ಮಲೆನಾಡಿನ ಸುತ್ತಮುತ್ತ ಈ ವರುಷ ಮುಂಗಾರು ಮಾಯವಾಗಿದೆ. ನೀಲನಭದಲ್ಲಿ ಹಾರುವ ಬಿಳಿ ಹತ್ತಿಯಂತಹ ಮೋಡಗಳು ತೇಲುತ್ತಾ ಇನ್ನೆಲ್ಲಿಗೋ ಹೊರಟಿದೆ, ಕೆರೆಕಟ್ಟೆಗಳು ಒಣಗಿ ಹೋಗಿದೆ, ಪ್ರಾಣಿ ಪಕ್ಷಿಗಳು ಬಾಯಾರಿವೆ. ನಮಗೂ ನೀರಿಲ್ಲದೇ ಬಾವಿಗಳು, ಅಂತರ್ಜಲಗಳು ತಳ ಸೇರಿ ಅಲ್ಪಸಲ್ಪ ನೀರು ಸಿಗುತ್ತಿದೆ… ಹೀಗೆ ಒಂದಷ್ಟು ದಿನ ಕಳೆದರೆ,ಮಲೆನಾಡಲ್ಲೂ ಬರಗಾಲ ಕಾಡಬಹುದು ಎನಿಸುತ್ತಿದೆ.
ಹೌದು ಮಳೆಯಲ್ಲಿ ಹೋಯಿತು? ಮನುಷ್ಯನ ಅಪರಿಮಿತವಾದ ಕೈವಾಡ ದಿಂದಾಗಿ ಕಾಡಿನ ನಾಶ, ಕೈಗಾರಿಕೀಕರಣ, ವ್ಯಾಪಾರ ಹಾಗೂ ರಿಯಲ್ ಎಸ್ಟೇಟ್ ಉದ್ಯಮದ ಅತಿಯಾದ ಪ್ರಭಾವದಿಂದಾಗಿ ದಿನ ಕಳೆದಂತೆ ಅರಣ್ಯ ನಾಶವಾಗಿ ಹಾಗೂ ಕಾಂಕ್ರೀಟ್ ಕಾಡು ಎಲ್ಲೆಲ್ಲೂ ಉಂಟಾಗಿ, ಭೂಮಿ ಮಳೆ ನೀರನ್ನು ಇಂಗಿಕೊಳ್ಳದೆ ಬರಗಾಲದ ಛಾಯೆ ಕಂಡುಬರುತ್ತಿದೆ. ಇದಕ್ಕೆಲ್ಲ ಖಂಡಿತವಾಗಿ ನಾವೇ ಕಾರಣ ಅಲ್ಲವೇ ? ಖಂಡಿತ ಅರ್ಧದಷ್ಟು ನಾವು ಹೌದು, ಇನ್ನೊಂದು ಅರ್ಧ ಪ್ರಕೃತಿ ಸಹಜ ಎನ್ನಿಸುವುದು, ಒಂದಷ್ಟು ವರ್ಷಗಳಲ್ಲಿ ಇಂಥ ಬದಲಾವಣೆಗಳು ಸಹಜ ಎಂದು ಹಿರಿಯರು ಹೇಳುತ್ತಿದ್ದರು, ನಾವು ಚಿಕ್ಕವರಿದ್ದಾಗ ಅಲ್ಲಲ್ಲಿ ಬರಗಾಲದ ವರದಿಯನ್ನು ಅತಿವೃಷ್ಟಿ ಅನಾವೃಷ್ಟಿಯನ್ನು ಕೇಳುತ್ತಿದ್ದೆವು. ನಂತರದ ವರ್ಷಗಳಲ್ಲಿ ಅಷ್ಟೊಂದು ಅತಿವೃಷ್ಟಿಯೂ, ಅನಾವೃಷ್ಟಿಯೂ ಆಗುತ್ತಿರಲಿಲ್ಲ.. ಮಳೆ ಬಂದು ನಾಲ್ಕಾರು ದಿನ ನೆರೆ ಬಂದು ಹೋಗುತ್ತಿತ್ತು ಅಷ್ಟೇ, ಆದರೆ ಇತ್ತೀಚಿಗೆ ಮತ್ತೆ ಅತಿಯಾದ ಮಳೆ ಹಾಗೂ ಅನಾವೃಷ್ಟಿ ಹೆಚ್ಚಾಗುತ್ತಿದೆ, ಹಿಂದಿನವರ ನಂಬಿಕೆಯ ಪ್ರಕಾರ ಒಂದಷ್ಟು ವರ್ಷ ಮಳೆ ಹೆಚ್ಚಾಗುತ್ತಾ ಹೋಗುತ್ತದೆ, ಇನ್ನೊಂದಷ್ಟು ವರ್ಷ ಮಳೆ ಕಡಿಮೆಯಾಗುತ್ತಾ ಬರುತ್ತದೆ ಎನ್ನುವುದು ಅವರ ವಾಡಿಕೆಯ, ನಂಬಿಕೆ, ಕೆಲವೊಮ್ಮೆ ಅದು ನಿಜವೇ ಎಂಬ ಅನುಮಾನ ಮೂಡುತ್ತದೆ.. ಏಕೆಂದರೆ ಈಗ ನಾಲ್ಕಾರು ವರ್ಷಗಳಿಂದ ಅತಿಯಾಗಿ ಮಳೆ ಸುರಿಯುತ್ತಿತ್ತು ಇದಕ್ಕೆಲ್ಲಾ ಕಾರಣ ಎಲ್ ನೈನೋ ಪ್ರಭಾವ ಎಂದು ಒಂದಷ್ಟು ವಾದಗಳು ಪತ್ರಿಕೆಯಲ್ಲಿ ಹಾಗೂ ಟಿವಿಯ ವಾರ್ತಾ ಚಾನೆಲ್ಗಳಲ್ಲಿ ಕೇಳಿ ಬರುತ್ತಿತ್ತು. ಎಲ್ ನೈನೋ ಪ್ರಭಾವದಿಂದಾಗಿ ನಾಲ್ಕಾರು ವರ್ಷಗಳು ಅತಿವೃಷ್ಟಿ ನಂತರದ ನಾಲ್ಕಾರು ವರ್ಷಗಳು ಅನಾವೃಷ್ಟಿಯಾಗಿ ನಂತರ ಸರಿಹೋಗುತ್ತದೆ ಎಂಬುದು ಒಂದು ವಾದವಾಗಿತ್ತು ನಾಲ್ಕಾರು ವರ್ಷಗಳ ಹಿಂದಿನ ಹಾಗೂ ಇಂದಿನ ಮಳೆಯ ಪ್ರಮಾಣವನ್ನು ನೋಡಿದರೆ ಅದು ಸತ್ಯವೆಂಬ ಭಾವನೆ ಮೂಡುವುದು ಸುಳ್ಳಲ್ಲ, ಹಾಗೆಯೇ ಹಿಂದೆಲ್ಲಾ ಮಳೆ ಬಂದರೆ ಮರದ ಸಂಕಗಳು, ಸಣ್ಣಪುಟ್ಟ ಮೋರಿಗಳು ಎಲ್ಲಾ ಮಳೆನೀರಿನಲ್ಲಿ ತೊಳೆದು ಹೋಗುತ್ತಿದ್ದವು. ಆಗ ಅದೇ ದೊಡ್ಡ ವಿಚಾರವಾಗುತ್ತಿತ್ತು , ಆದರೆ ಇಂದು ದೊಡ್ಡ ದೊಡ್ಡ ಸೇತುವೆಗಳು, ರಸ್ತೆಗಳೇ, ಕೊಚ್ಚಿ ಹೋಗುತ್ತಿದೆ ,ಅಲ್ಲಿ ಇಲ್ಲಿ ಸಣ್ಣಪುಟ್ಟ ಗುಡ್ಡ, ಇಲ್ಲವೇ ಜೌಗು ಮಣ್ಣು ಜಾರಿ ಬಿದ್ದು ಸುದ್ದಿ ಆಗುತ್ತಿತ್ತು, ಆದರೆ ಇತ್ತೀಚಿಗೆ ಅತಿಯಾದ ಜೆಸಿಬಿ ಯಂತ್ರಗಳ ಪ್ರಭಾವ ಗುಡ್ಡಕ್ಕೆ ಗುಡ್ಡವೇ ಮಗುಚಿ ಬೀಳುತ್ತಿದೆ ಹಾಗೆಯೇ ಕಾಡು ಕಮ್ಮಿಯಾಗಿ ಭೂ ಸವಕಳಿ ಉಂಟಾಗಿ ಹಾಗೆ ಕೃಷಿ ಭೂಮಿಯ ನಾಶದಿಂದಾಗಿ ಭೂಮಿ ತನ್ನ ದೃಢತೆಯನ್ನು ಕಳೆದುಕೊಳ್ಳುತ್ತಿದೆ, ಇದಕ್ಕೆಲ್ಲ ಮಾನವನೇ ನೇರವಾಗಿ ಕಾರಣ. ಮಾನವ ಮಾಡಿದ ಪಾಪಗಳು ಬರಿ ಅವನೊಬ್ಬನೇ ಅನುಭವಿಸದೇ ತನ್ನೊಂದಿಗೆ ಪರಿಸರದ ಇತರ ಜೀವಿಗಳಿಗೂ ಇದರ ಬಿಸಿ ತಟ್ಟುತ್ತಿದೆ. ನಮ್ಮಂತೆಯೇ ಪ್ರಾಣಿಗಳು ಪಕ್ಷಿಗಳು ಬರಗಾಲದಿಂದ ನೀರು, ಆಹಾರ ಸಿಗದೇ ಕಷ್ಟ ಪಡುತ್ತಿರುವುದು ಸುಳ್ಳಲ್ಲ. ಹಾಗೆಯೇ ಹಿಂದೆ ಮಳೆಗಾಲ ಎಂದರೆ ಒಂದಷ್ಟು ತಯಾರಿ ಮೊದಲೇ ನಡೆಯುತ್ತಿತ್ತು ಮನೆಗೆ ಬೇಕಾದ ಕಟ್ಟಿಗೆ,ಹಪ್ಪಳ, ಸಂಡಿಗೆ, ದಿನಸಿ, ಧಾನ್ಯಗಳನ್ನು ಚೆನ್ನಾಗಿ ಬಿಸಿಲು ಕಾಲದಲ್ಲಿ ಸಂಗ್ರಹ ಮಾಡಿ ಒಣಗಿಸಿಡಲಾಗುತ್ತಿತ್ತು ಆದರೆ ಇತ್ತೀಚಿಗೆ ಎಲ್ಲವನ್ನು ದುಡ್ಡು ಕೊಟ್ಟು ತರುವುದರಿಂದಾಗಿ, ಬೇಕಾದಷ್ಟೇ ತೆಗೆದುಕೊಂಡು ಬರುವ ಸಂಪ್ರದಾಯ ಶುರುವಾಗಿರುವುದರಿಂದ ಒಂದಷ್ಟು ಕಡೆ ಈ ಎಲ್ಲಾ ಕೆಲಸ ಕಾರ್ಯಗಳು ಕಂಡು ಬರುವುದಿಲ್ಲ.
ಹಾಗೆ ಹಿಂದೆಲ್ಲ ಮುಂಗಾರು ಶುರುವಾಗುತ್ತಿದ್ದಂತೆ ನಾಟಿ ಕೆಲಸಗಳು ಶುರುವಾಗಿ ರೈತರು ಎತ್ತು ಕೋಣಗಳನ್ನು ನೇಗಿಲ ಸಹಾಯದಿಂದ ಭೂಮಿಯನ್ನು ಉಳಲು ಪ್ರಾರಂಭ ಮಾಡುತ್ತಿದ್ದರು, ಹುರುಳಿ ಕಾಳನ್ನು ಬೇಯಿಸಿ ಹುರುಳಿಯನ್ನು ಎತ್ತು ಕೋಣಗಳಿಗೆ ಶಕ್ತಿ ಬರಲು ನೀಡುತ್ತಿದ್ದರು. ಹಾಗೆ ಹುರುಳಿ ಬೇಯಿಸಿದ ಕಟ್ಟು ನೀರನ್ನು ನಾವು ಸಾರು ಮಾಡಿ ಉಪಯೋಗಿಸುತ್ತಿದ್ದೆವು, ಮಳೆಗಾಲ ಅಂದರೆ ಹುರುಳಿ ಕಟ್ಟಿನ ಸಾರು ಹಾಗೆಯೇ ಕಳಲೆ ಹಾಗೂ ಹಲಸಿನ ಬೀಜ ಸೌತೆಕಾಯಿ ಉಪಯೋಗಿಸಿ ಮಾಡುವ ಸಾಂಬಾರ್ ಎಲ್ಲವೂ ಮಲೆನಾಡಿನಲ್ಲಿ ಪ್ರಸಿದ್ಧವಾಗಿತ್ತು. ಕೆಸುವಿನ ಎಲೆಯ ಚಟ್ನಿ ಎಲ್ಲರ ಮೆಚ್ಚಿನ ಮಳೆಗಾಲದ ಅಡುಗೆಯೂ ಆಗಿತ್ತು, ಆದರೆ ಈಗ ಅವೆಲ್ಲ ಬರೀ ಕನಸಿನ ಮಾತಾಗಿದೆ ಅಪರೂಪಕ್ಕೆ ಒಮ್ಮೊಮ್ಮೆ ರುಚಿ ನೋಡಲು ಸಿಗಬಹುದಷ್ಟೇ, ಜೊತೆಗೆ ಟ್ಯಾಕ್ಟರ್ ಟಿಲ್ಲರನ್ನು ಉಳಿಮೆ ಮಾಡಲು ಉಪಯೋಗಿಸುವುದರಿಂದ ಎಷ್ಟು ಕಡೆ ಎತ್ತನ್ನು ನೇಗಿಲಿನ ಮೂಲಕ ರೂಮಿ ಮಾಡುವುದನ್ನು ಕಾಣುವುದೇ ಅಸಾಧ್ಯವಾಗಿದೆ. ನಾವು ಚಿಕ್ಕವರಿದ್ದಾಗ ಜೋರಾಗಿ ಮಳೆ ಬರುವಾಗ ನಮಗೇನು ಛತ್ರಿ ಇರುತ್ತಿತ್ತೆ ?ಒಂದು ಬಣ್ಣದ ಪ್ಲಾಸ್ಟಿಕ್ ಕವರ್ ಒಳಗೆ ದೊಡ್ಡ ಬಟ್ಟೆ ಅಥವಾ ಸಣ್ಣ ಕಂಬಳಿಯನ್ನು ಜೋಡಿಸಿ ಅದನ್ನೇ ಮಳೆಗೆ ಸೂಡಿಕೊಳ್ಳಲು ಉಪಯೋಗಿಸಿಕೊಂಡು ಶಾಲೆಗೆ ಹೋಗಿ ಬರುತ್ತಿದ್ದೆವು. ಗಾಳಿಗೆ ಬರಿಯ ಪ್ಲಾಸ್ಟಿಕ್ ಕೊಪ್ಪೆಗಳು ಹಾರಿಹೋಗದಂತೆ ಬಿಗಿಯಾಗಿ ಹಿಡಿದುಕೊಂಡು ಹೋಗುವುದು ಒಂದು ಸಾಹಸವೇ ಆಗಿರುತ್ತಿತ್ತು, ಹಾಗೆ ಹಿಂದೆ ಅತಿಯಾಗಿ ಮಳೆ ಬಂದಾಗ ಶಾಲೆಗೆ ರಜೆ ಕೊಟ್ಟು, ಮನೆಯ ಕೆಂಡದ ಒಲೆಯ ಬೆಚ್ಚಗಿನ ಜಾಗದಲ್ಲಿ ಚಳಿ ಕಾಯಿಸುತ್ತಾ, ಕೆಂಡದಲ್ಲಿ ಹಲಸಿನ ಹಪ್ಪಳ, ಹಲಸಿನ ಬೀಜ ಹುಣಸೆ ಬೀಜ, ಗೇರು ಬೀಜ ಮುಂತಾದವನ್ನು ಸುಟ್ಟು ತಿನ್ನುತ್ತಿದ್ದ ಮಜವನ್ನು ವರ್ಣಿಸಲು ಸಾಧ್ಯವಿಲ್ಲ. ಈಗಿನ ಮಕ್ಕಳಿಗೆ ಅಂತಹ ಸುಖ ಸಿಗೋದು ಇಲ್ಲವೆಂದೇ ಹೇಳಬಹುದು.
ಮಲೆನಾಡಿನಲ್ಲಿ ಮುಂಗಾರಿನ ಸಮಯದಲ್ಲಿ ನಡೆಯುತ್ತಿದ್ದ ಎಲ್ಲಾ ಘಟನೆಗಳು ಈಗ ಮಾಯವಾದ ಮುಂಗಾರಿನಲ್ಲಿ ಇದನ್ನೆಲ್ಲಾ ನೆನಪು ಮಾಡಿಕೊಂಡು ಯೋಚಿಸುತ್ತಾ ಕೂರುವುದು ನಮ್ಮ ಕಾಯಕವಾಗಿದೆ, ಬಿಳಿ ಮುಗಿಲು ಸರಿದು, ಕರಿಮುಗಿಲಾಗಿ ಬಂದು, ನಮ್ಮೂರಲ್ಲಿ ಸ್ವಲ್ಪ ಮಳೆ ಸುರಿಸು ಬಾ ಎಂದು ಕರೆಯುವಂತಾಗಿದೆ. ಚಿಕ್ಕವರಿದ್ದಾಗ ಹುಯ್ಯೋ ಹುಯ್ಯೊ ಮಳೆರಾಯ ಬಾಳೆ ತೋಟಕೆ ನೀರಿಲ್ಲ, ಹುಯ್ಯೊ ಹುಯ್ಯೊ ಮಳೆರಾಯ ಹೂವಿನ ತೋಟಕೆ ನೀರಿಲ್ಲ ಎಂದು ರಾಗವಾಗಿ ಹಾಡುತ್ತಾ, ರಸ್ತೆಯ ನೀರಿನಲ್ಲಿ ಆಟ ಆಡುತ್ತಾ ಸಾಗುತ್ತಿದ್ದ ಆಗಿನ ದಿನಗಳ ಮೆಲುಕು ಹಾಕುತ್ತಿದೆ. ಆದರೆ ಈ ವರ್ಷವನ್ನು ಮುಂಗಾರಿನ ಸುಳಿವಿಲ್ಲ ಬೆಳ್ಳಿ ಮೋಡಗಳಿಗೆ ಅಳಿವಿಲ್ಲ ಎಂಬಂತಾಗಿದೆ. ಮಳೆರಾಯ ಬೇಗ ಬಂದು ಇಳೆಯ ಬಾಯಾರಿಕೆ ನೀಗಿಸು, ಹಸಿರು ಬೆಳೆಸು, ಉಸಿರು ಉಳಿಸು ಎಂದು ನನ್ನ ಮನಸ್ಸು ಮೊರೆ ಇಡುತ್ತಿದೆ.