ಬರಗೂರು ರಾಮಚಂದ್ರಪ್ಪ ಎಂದೊಡನೆ ಬಂಡಾಯದ ಸಾಹಿತಿಯಾಗಿ,ಬಂಡಾಯದ ಮಾತುಗಾರರಾಗಿ, ಕನ್ನಡ ಪರ ಚಳುವಳಿ ಹೋರಾಟಗಾರರಾಗಿ, ಶೋಷಣೆಯ ವಿರುದ್ಧದ ದನಿಯಾಗಿ ನಮ್ಮ ಮುಂದೆ ನಿಲ್ಲುತ್ತಾರೆ. ಸಾಹಿತ್ಯ ಕ್ಷೇತ್ರವಷ್ಟೆ ಅಲ್ಲದೆ ಸಿನಿಮಾ, ಉಪನ್ಯಾಸ, ಮತ್ತು ಸಾಂಸ್ಕೃತಿಕ ಲೋಕದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡವರು. ಬರಗೂರರ ಕನ್ನಡ ಪರ ಕಾಳಜಿ, ಕನ್ನಡಕ್ಕಾಗಿ ಅವರ ಅವಿರತ ಶ್ರಮ ಅವಿಸ್ಮರಣೀಯವಾದದ್ದು. ಹಣಬಲ ಜಾತಿ ಬಲದಿಂದಲ್ಲದೆ , ಕೇವಲ ಬೆವರ ಬಲದಿಂದಲೇ ಸಾಹಿತ್ಯಲೋಕದಲ್ಲಿ ಹೆಮ್ಮರವಾಗಿ ಕವಲೊಡೆದು ಬೆಳೆದು ನಿಂತ ಸೌಮ್ಯ ಸ್ವಭಾವದ ಸ್ವಾಭಿಮಾನಿ ಸಾಹಿತಿ ಎಂದರೆ ಅದು ಬರಗೂರರು.
ಬಂಡಾಯದ ಗಟ್ಟಿ ದನಿಯಾಗಿ ನಿಲ್ಲುವ ಬರಗೂರರು ‘ದಲಿತ ಬಂಡಾಯ’ ಸಾಹಿತ್ಯಕ್ಕೆ ಒಂದು ಸೈದ್ಧಾಂತಿಕ ನೆಲೆಗಟ್ಟನ್ನು ಒದಗಿಸಿಕೊಟ್ಟವರು. ಹಾಗೆ ಬದ್ಧತೆಯ ಬರಹಗಾರರಾಗಿ ಕೊನೆಯವರೆಗು ಬದ್ಧತೆಗೆ ಅಂಟಿಕೊಂಡವರು. ತಮ್ಮ ಬರಹದ ಮೂಲಕವೇ ಸರ್ವಾಧಿಕಾರಿ ಧೋರಣೆ ವಿರುದ್ಧ ಚಾಟಿ ಬೀಸಿದವರು. ಬರಗೂರರು ಯಾವುದನ್ನೇ ಬರೆಯಲಿ, ಏನನ್ನೇ ಬರೆಯಲಿ , ಅದು ನೊಂದವರ ಪರವೇ ಆಗಿರುತ್ತೆ. ದಲಿತ ಬಂಡಾಯ, ಪ್ರಗತಿಪರ ಸಾಹಿತ್ಯವೇ ಆಗಿರುತ್ತದೆ. ಸಾಹಿತ್ಯದ ತುಂಬೆಲ್ಲ ಶ್ರಮ ಸಂಸ್ಕೃತಿಯೇ ಮೊದಲ ಪಂಕ್ತಿಗೆ ಬಂದು ನಿಲ್ಲುತ್ತದೆ….
ಇಲ್ಲಿ ಬರಗೂರರ ಎರಡು ವಿಭಿನ್ನ ಕವಿತೆಗಳಿವೆ ‘ಬುದ್ಧ’ ಮತ್ತು ‘ತವರಿನ ಜನ’ ಒಂದು ಶಾಂತಿ ಮಂತ್ರವನ್ನ ಸಾರಿದರೆ, ಮತ್ತೊಂದು ನೆಲ ಮೂಲದವರು ಶೋಷಣೆಗೊಳಗಾಗುತ್ತಲೇ ಬಂದಿರುವುದನ್ನು ಶಾಂತವಾಗಿಯೇ ಹೊರಹಾಕುತ್ತದೆ. ಬರಗೂರರ ಬರಹವೇ ಹಾಗೆ “ಶಾಂತ ಸ್ವರೂಪಿಯಾಗಿ ಹರಿವ ನದಿಯಂತೆ”. ಅಲ್ಲಿ ರೊಚ್ಚು, ಆಕ್ರೋಶ, ನೋವು, ಪ್ರತಿರೋಧ ಎಲ್ಲವೂ ಇವೆ. ಅವು ಶಾಂತವಾಗಿಯೇ ಇವೆ.
ಇಲ್ಲಿ ಬುದ್ಧನಾಗುವುದೆಂದರೆ ‘ಸಿದ್ಧ ಅರ್ಥಗಳನ್ನು ಮೀರಿ ಬದ್ಧನಾಗುವುದೆಂದೇ ಅರ್ಥ’. ಈ ನೆಲದಲ್ಲಿ ಅಸಾಧ್ಯವಾದ ಅಂಧಕಾರವಿದೆ. ವರ್ಗ- ವರ್ಣ, ಜಾತಿ-ಧರ್ಮ, ಮುಪ್ಪು ,ಸಾವು -ನೋವು, ಹಿಂಸೆಗಳೇ ಆವರಿಸಿರುವ ಈ ನಶ್ವರ ನೆಲದಲ್ಲಿ, ಉಳ್ಳವರು ಇಲ್ಲದವರ ನಡುವೆ ಬಹು ದೊಡ್ಡ ಹೋರಾಟವೇ ಇದೆ. ಇವುಗಳ ನಡುವಣ ಅಂತರ ,ಅಸಮಾನತೆ ಕಂಡ ಬುದ್ಧ ಬೆಳಕ ಹುಡುಕಿ ಸಾಮ್ರಾಜ್ಯದ ಹಂಗು ತೊರೆದು ಹೊರಟ. ಭೂಮಿಯ ಮೇಲಿನ ಕೆಡಕು, ಕೊಳಕುಗಳನ್ನು ಶೋಧಿಸಿ ಪರಿಹಾರ ಹುಡುಕಲು ‘ಜಗವೆಲ್ಲ ಮಲಗಿರಲು ಇನೊಬ್ಬನೆದ್ದ’ ಎಂಬಂತೆ ಹೊರಟು ಅನಂತವಾದ.. ಅವನಿಗೆ ಸಾಮ್ರಾಜ್ಯವೇನೂ ಅನಿವಾರ್ಯವಾಗಿರಲಿಲ್ಲ.
ಹಾಗೆ ಸಾಮ್ರಾಜ್ಯ ತೊರೆದು ಹೊರಟಿದ್ದರಿಂದಲೇ ಭೂಮಿಗೆ ಬೆಳಕಾಯಿತು. ಬುದ್ಧನಂತೆ ತೊರೆದು ಹೊರಟವರೆಲ್ಲರೂ ಮಹಾಮಹಿಮರಾದರು, ಪೂಜ್ಯನೀಯವಾದರು. ಇಂದಿನವರು ಭೋಗಮುಖಿಯಾದ ಕನಸುಗಳ ಬೆನ್ನು ಹತ್ತಿ ಮೇಲ್ನೋಟದ ಬದಲಾವಣೆಗೆ ಒಳಗಾದರು. ಬದಲಾವಣೆ ಎಂದರೆ ಆಂತರಿಕ ಬದಲಾವಣೆಯಾಗಬೇಕು, ಅದಾಗಲಿಲ್ಲ. ಬುದ್ಧ ಅಂಗುಲಿಮಾಲನಂಥ ಕಲ್ಲೆದೆಯವನನ್ನೂ ಪರಿವರ್ತಿಸಿ ‘ಕಲ್ಲು ಕರಗುವ ಕಾವ್ಯವಾದನು’ ಇಲ್ಲಿ ಕ್ರೌರ್ಯವಿದೆ, ನೆತ್ತರಿನ ಚರಿತೆ ಇದೆ. ‘ಜಗತ್ತೇ ಯುದ್ಧ ಮಂತ್ರವ ಜಪಿಸುತ್ತಿರುವಾಗ ಶಾಂತಿ ಮಂತ್ರವ ಸಾರಿದ ಬುದ್ಧ’ ‘ನೆತ್ತರ ನಾಡು ಬೇಡವೆಂದ’ ರಕ್ತ ಪಾತದಿಂದ ಪಡೆದ ಗೆಲುವು , ಕಟ್ಟಿದ ಸಾಮ್ರಾಜ್ಯ ನಶ್ವರ. ಪ್ರೀತಿ, ಶಾಂತಿ, ತಾಳ್ಮೆಯಿಂದ ಜಗವ ಗೆಲ್ಲಬೇಕೆಂದ.. ಭೂಮಿಯ ಎಲ್ಲೆಡೆ ಯುದ್ಧ, ಅಶಾಂತಿ, ರಕ್ತಪಾತವೇ ಮಡುಗಟ್ಟಿ ನಿಂತಿದೆ. ಶಾಂತಿ ಮಂತ್ರಗಳೆಲ್ಲವೂ ಸದ್ದಿಲ್ಲದೆ ಗೋರಿ ಸೇರಿವೆ. ಈ ಯುದ್ಧದಿಂದುಂಟಾಗುವ ಸಾವು, ನೋವು, ಹಿಂಸೆಗಳೇ ಬುದ್ಧನಿಗೆ ಅಧಿಕಾರ ನಿರಸನಗೊಳಿಸಿದವು.
ಮತ್ತೊಂದೆಡೆ ಈ ಭೂಮಿಯ ಒಳಿತಿಗಾಗಿ ದುಡಿವ ಮೂಲ ನಿವಾಸಿಗಳಿಗೆ ಸಮಾನತೆ ಇಲ್ಲ, ಬೆವರ ಬಸಿದು ದುಡಿದ ಸಂಪತ್ತನ್ನೆಲ್ಲ ಅನ್ಯರ ಪಾಲಾಗಿಸಿ , ಹಾಡ ಹಗಲೇ ಬೆತ್ತಲಾದ ಶ್ರಮಿಕರ ಗೋಳು ಬಲವಂತರು ಎನಿಸಿಕೊಂಡವರ ಮನಸ್ಸನ್ನಾಗಲಿ, ಕಿವಿಯನ್ನಾಗಲೀ ತಲುಪಲಿಲ್ಲ. ಎಲ್ಲರೂ ಜಾಣ ಕಿವುಡರಾದರು. ಈ ಮಣ್ಣಲ್ಲಿ ಶ್ರೇಷ-್ಠ ಕನಿಷ್ಠ, ಮೇಲು – ಕೀಳು, ಬಡವ ಬಲ್ಲಿದ, ಎಂಬ ಅಸಮಾನತೆಯ ರುದ್ರ ನರ್ತನವಿದೆ . ಇಂದು ಬಂಡವಾಳಶಾಹಿ, ಅಧಿಕಾರಶಾಹಿಗಳು ರಕ್ತ ಹೀರುವ ಜಿಗಣೆಯಂತಾಗಿದ್ದು, ಇವರ ಸುಳಿಗೆ ಸಿಲುಕಿದ ನಮ್ಮ ‘ನೆಲದ ಜನರ ನಡೆ ದುರಂತದ ಕಡೆಗೆ’ ಹೊರಟಿತೇನೋ ಎಂಬ ಭೀತಿ ಹುಟ್ಟಿದೆ.
ಈ ನೆಲದ ದುಡಿವ ವರ್ಗ ಕನಸು ಕಾಣುವ ಹಕ್ಕಿನಿಂದಲೇ ವಂಚಿತರಾದವರಂತೆ , ‘ಕನಸಿಗೆ ಕಿವಿ ಕಣ್ಣು ಕೊಟ್ಟು ಬರಿ ಬೆತ್ತಲೆಯ ಉಡುವಂತಾಗಿದೆ’ ಕನಸು ಯಾರಪ್ಪನ ಸ್ವತ್ತಲ್ಲ , ಆದರೂ ಕನಸು ಕಾಣುವ ಕಣ್ಣು, ಮತ್ತು ಮನಸುಗಳಿಗೆ ಕೊಳ್ಳಿ ಇಡುವ ಕ್ರೌರ್ಯ ನಮ್ಮ ನಡುವಿದೆ. ಕೊಳಗೇರಿ ವಾಸಿಗಳು, ನಿರ್ಗತಿಕರೂ, ಶ್ರಮಿಕರು ಕಂಡ ಕನಸುಗಳಿಗೆ ಕೊಳ್ಳಿ ಇಟ್ಟು , ಹೂವಂಥ ಮನಸುಗಳನ್ನು ಹೊಸಕಿ ಹಾಕುವಂಥ ಕ್ರೂರ ಮನಸುಗಳಿವೆ ಇಲ್ಲಿ. ಬಡವನೆದೆಯ ಬಗಿದು ರಕ್ತ ಹೀರುವ ಉಗ್ರ ನರಸಿಂಹನಂತಿದ್ದಾರೆ ಸರ್ವಾಧಿಕಾರಿಗಳು.
ನಾವು ಶ್ರಮಿಕರು ಮತ್ತೆಂದೂ ಕನಸು ಕಾಣದಂತೆ, ತಲೆ ಎತ್ತಿ ನಿಲ್ಲದಂತೆ, ಚಿಗುರೊಡೆದು , ಬೆಳೆದು ಹೆಮ್ಮರವಾಗದಂತೆ , ಇನ್ನಿಲ್ಲದಂತೆ ನಾಶಪಡಿಸಲು ನಮ್ಮ ವ್ಯವಸ್ಥೆಯಲ್ಲಿ ಕೂಡಿಟ್ಟ ಹರಿತವಾದ ಹತಾರಗಳಿವೆ. ಈ ನೆಲಕೆ ಬೇಕಾಗಿರೋದು ರಕ್ತ ಹರಿಸುವ ಕತ್ತಿ, ಗುರಾಣಿಗಳಲ್ಲ . ಶಾಂತಿ, ಪ್ರೀತಿ, ಸಮಾನತೆ, ಸಹಬಾಳ್ವೆಗಳಂತ ಅಮೃತತ್ವ.
ಮುಂದೆ “ಗುಡಿ ಗುಡ್ಡಗಳಲ್ಲಿ ಬರೆಸಿಕೊಂಡರು ಹೆಸರು, ತುಳಿವ ನೆಲದಲ್ಲಿ ನಮ್ಮ ನಿಟ್ಟುಸಿರು” ಎಂಬ ಬರಗೂರರ ಮಾತಲ್ಲಿ ಅಸಮಾನತೆ, ಶೋಷಣೆ ಮುಗಿಲು ಮುಟ್ಟುತ್ತದೆ. ಈ ನಾಡಿನ ಏಳಿಗೆಗೆ, ಶ್ರೀಮಂತಿಕೆಗೆ ಶ್ರಮಿಸಿ, ಬೆವರ ಬಸಿದು ಭವ್ಯ ಬಂಗಲೆ, ಪವಿತ್ರ ಗುಡಿ ಗುಂಡಾರ ನಿರ್ಮಿಸಿದವರನ್ನ ಹೊಲೆಯನೆಂದು ಜರಿದು, ಜಡಿದು ಊರ ಹೊರ ಇಟ್ಟು, ಶಾಸನಗಳಲ್ಲಿ ತಮ್ಮ ಹೆಸರು ಕೆತ್ತಿಸಿಕೊಳ್ಳುವ ಉಳ್ಳವರ ದರ್ಪ ಕಂಡರೆ ‘ ಇಕ್ರಲಾ ವದೀರ್ಲಾ ಈ ನನ್ ಮಕ್ಳು ಚರ್ಮ ಎಬ್ರಲಾ’ ಎಂಬಷ್ಟು ರೋಷ ಉಕ್ಕುತ್ತದೆ. ಇಲ್ಲಿ ಸಿದ್ಧಲಿಂಗ್ಯನವರ ‘ನನ್ನ ಜನಗಳು’ ಕವಿತೆಗೂ ಬರಗೂರರ ‘ತವರಿನ ಜನ’ ಕವಿತೆಗೂ ಅದೆಷ್ಟು ಸಾಮ್ಯತೆ ಇದೆ ಎಂದರೆ , ಕೊನೆಗೂ ಈ ಮಣ್ಣಿನ ಕಣ ಕಣದಲ್ಲೂ ಬೆವರಿನ ಜನರ, ತವರಿನ ಜನರ , ಹನಿ ಹನಿ ರಕುತ ಬೆರೆತ ಚರಿತ್ರೆ ಇದೆ.
ಈ ನೆಲದಲ್ಲಿ ಯಾವ ಮಟ್ಟದ ಶೋಷಣೆ, ಅಸಮಾನತೆಗಳಿವೆ ಎಂದರೆ “ಪಂಚ ಭೂತಗಳಿಗಿಲ್ಲದ ಮಡಿ ಮೈಲಿಗೆ, ಜಾತಿ – ಧರ್ಮ, ವರ್ಗ – ವರ್ಣ, ಮನುಷ್ಯ ಮಾತ್ರದವರಲ್ಲಿ ಬೆರೆತು , ಬಹು ದೊಡ್ಡ ಕಂದಕವನ್ನೇ ನಿರ್ಮಿಸಿವೆ. “ಇವೆಲ್ಲವೂ ಮಹಾ ಪ್ರವಾಹದಲಿ ಕೊಚ್ಚಿ ಹೋಗಬಾರದೇ… ? ಅಲ್ಲಿ ಶಾಂತಿ, ಸಮಾನತೆಯ ಸಾಮ್ರಾಜ್ಯ ನಿರ್ಮಾಣವಾಗಬಾರದೇ…?” ಈ ಅಸಮಾನತೆಯ ಕಂಡು ಭೂಪಟವೇ ಬೆಚ್ಚಿ ಬೆವರಿದೆ ಇಲ್ಲಿನ ಬಡವರು, ಶ್ರಮಿಕರು , ಬೆವರನೇ ಬುತ್ತಿಯಾಗಿಸಿ ಉಂಡು ಮೃತ್ಯುವಿಗೆ ಮನೆ ಮಾಡಿಕೊಂಡ ಅಸಹಾಯಕರು.
ಇದು ಕೇವಲ ಉಳ್ಳವರ ನಾಡಲ್ಲ. ಭೂದೇವಿಯ ಮಡಿಲಲ್ಲಿ ಸರ್ವರೂ ಸಮಾನರೆ. ಬರಗೂರರ ಮಾತಲ್ಲೇ ಹೇಳುವುದಾದರೆ ‘ಬ್ರಹ್ಮಪುತ್ರಾ ಗಂಗಾ ನದಿಗಳಷ್ಟೆ ಶ್ರೇಷ್ಠವಲ್ಲ, ನಮ್ಮೂರಿನ ಹಳ್ಳಕೊಳ್ಳಗಳೂ ಶ್ರೇಷ್ಠ, ಶ್ರೀಗಂಧ ಮಾತ್ರವಲ್ಲ ನಮ್ಮೂರಿನ ಜಾಲಿ ಮರವೂ ಶ್ರೇಷ್ಠ. ಕೋಗಿಲೆ ಅಷ್ಟೇ ಅಲ್ಲ, ನಮ್ಮೂರಿನ ಕಾಗೆಯೂ ನನಗೆ ಶ್ರೇಷ್ಠವೇ” ಎನ್ನುವಲ್ಲಿ ಸರ್ವ ಸಮಾನತೆಯ ದೃಷ್ಟಿ ಇದೆ. ಕುವೆಂಪು ಅವರ ಮಾತಲ್ಲಿ ಹೇಳುವುದಾದರೆ “ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವೂ ಅಲ್ಲ!” ಕೊನೆಯದಾಗಿ ಇಲ್ಲಿ ಸಮಾಜದ ಮುತ್ಸದ್ಧಿಗಳು, ಬುದ್ಧಿಜೀವಿಗಳು, ಬಂಡವಾಳಶಾಹಿಗಳು, ದಮನಿತರ, ಶೋಷಿತರ ನೋವಿಗೆ ಮಿಡಿವಂಥ ಸಮಾನತೆ ತರುವ ನಿಟ್ಟಿನಲ್ಲಿ ನಿಜವಾದ “ಮನ್ ಕಿ ಬಾತ್ ” ನಡೆಯಬೇಕಿದೆ.