ಬಾಲ್ಯವೆಂಬುದು ಒಂದು ಮಧುರವಾದ ಸವಿನೆನಪು. ಪ್ರತಿಯೊಬ್ಬ ವ್ಯಕ್ತಿಗೂ ಬಾಲ್ಯವೆಂಬುದು ತಮ್ಮ ಜೀವನದ ಮೊದಲ ಹಂತ. ಬಾಲ್ಯಾವಸ್ಥೆಯಲ್ಲಿ ನಮಗೆ ಯಾವುದೇ ತೆರನಾದ ಚಿಂತೆಯಾಗಲಿ ಒತ್ತಡವಾಗಲಿ ಇರುವುದಿಲ್ಲ. ಮನಸ್ಸು ಕೂಡ ಪರಿಶುದ್ಧವಾಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ತಾನು ಕಳೆದ ಬಾಲ್ಯದ ನೆನಪುಗಳು ಅವಿಸ್ಮರಣೀಯ.
ಬೇಸಿಗೆ ರಜೆ ಬಂತು ಅಂದರೆ ಸಾಕು ನಮ್ಮ ಆಟಗಳೆಲ್ಲ ಶುರುವಾಗುತ್ತಿತ್ತು. ಸಹ್ಯಾದ್ರಿಯ ತಪ್ಪಲಿನಲ್ಲಿ ನನ್ನ ಹುಟ್ಟೂರು. ಅಲ್ಲಿ ನಾನು ನನ್ನ ಬಾಲ್ಯದ ದಿನ ಕಳೆದಿದ್ದು ,ಅದರ ಮಜವೇ ಬೇರೆ. ನಾವು ಕಳೆದ ಬಾಲ್ಯ ನನ್ನ ಮಕ್ಕಳಿಗೆ ಇಂದಿನ ಪರಿಸ್ಥಿಯಲ್ಲಿ ಸಿಗುವುದಿಲ್ಲವಲ್ಲ ಅನ್ನುವುದೇ ನನಗೆ ಬೇಸರ
ನಮ್ಮದು ಅವಿಭಕ್ತ ಕುಟುಂಬ. ಬೇಸಿಗೆ ರಜೆಗೆ ಚಿಕ್ಕಪನವರ , ಅತ್ತೆಯ ಮಕ್ಕಳೆಲ್ಲಾ ಮನೆಗೆ ಬರುತ್ತಿದ್ದರು. ನಮ್ಮ ಅಡಿಕೆ ತೋಟದ ಮಧ್ಯೆ ಪೇರಳೆ, ಪನ್ನೇರಳೆ, ಕಾಕಿಹಣ್ಣು , ಹೀಗೆ ಸಣ್ಣ ಪುಟ್ಟ ಹಣ್ಣಿನ ಮರಗಳಿದ್ದವು. ನಾವು ಮಕ್ಕಳೆಲ್ಲಾ ಸೇರಿ ತೋಟಕ್ಕೆ ಹೋಗಿ ಹಿಂಬದಿಯಯಲ್ಲಿ ಹರಿಯುತ್ತಿದ್ದ ತೊರೆಯಲ್ಲಿ ಆಟವಾಡುತ್ತಿದ್ದೆವು.
ಹುಡುಗರು ಮರವನ್ನು ಹತ್ತಿ ಹಣ್ಣನ್ನು ಕಿತ್ತುಕೊಡುತ್ತಿದ್ದರು. ನಾವು ಹುಡುಗಿಯರು ಲಂಗದಲ್ಲಿ ಹಣ್ಣನ್ನು ಕಟ್ಟಿಕೊಂಡು ತೋಟದ ಹಿಂದೆ ಇದ್ದ ಧರೆಯ ಮೇಲೆ ಹತ್ತಿ ಹರಟೆ ಹೊಡೆಯುತ್ತಾ ಹಣ್ಣಾನ್ನೆಲ್ಲಾ ತಿಂದು ಖಾಲಿ ಮಾಡುತ್ತಿದ್ದೆವು. ಬೆಳಗ್ಗೆ ಎದ್ದು ಹೊರಟರೆ ಮಧ್ಯಾಹ್ನದ ಊಟದ ಹೊತ್ತಿಗೆ ಮನೆಗೆ ಬಂದು ಸೇರುತ್ತಿದ್ದೆವು.
ನಮ್ಮ ತೋಟದಲ್ಲಿ ಬೇಸಿಗೆ ದಿನಗಳಲ್ಲಿ ತೋಟ ತಂಪಾಗಿರಲು ತೋಟದ ಮಧ್ಯೆ ಹರಿಯುತ್ತಿದ್ದ ಹಳ್ಳಕ್ಕೆ ಸಣ್ಣದಾದ ಅಣೆಕಟ್ಟನ್ನು ಹಾಕುತ್ತಿದ್ದರು. ನಾವು ಮಕ್ಕಳೆಲ್ಲಾ ಮಧ್ಯಾಹ್ನ ಮನೆಯವರೆಲ್ಲಾ ಮಲಗಿರುವ ಸಂದರ್ಭ ನೋಡಿಕೊಂಡು ಯಾರಿಗೂ ಗೊತ್ತಾಗದಂತೆ ಒಂದು ಪಾಣಿ ಪಂಚೆಯನ್ನು ತೆಗೆದುಕೊಂಡು ಹೋಗಿ ಸಣ್ಣ ಸಣ್ಣ ಮೀನುಗಳನ್ನು ಹಿಡಿದು ಬಾಟಲಿಗೆ ಹಾಕಿ ಅದನ್ನು ತಂದು ಬಾವಿಗೆ ಬಿಟ್ಟು ಸಂಭ್ರಮಿಸುತ್ತಿದ್ದೆವು. ನಮ್ಮದು ಸಂಪ್ರದಾಯಸ್ಥ ಕುಟುಂಬವಾದ್ದರಿಂದ ಮೀನುಗಳನ್ನೆಲ್ಲಾ ಮುಟ್ಟಿದ್ದೇವೆ ಎಂದು ದೊಡ್ಡವರಿಗೆ ಗೊತ್ತಾದಾಗ ಬೈಸಿಕೊಂಡು ಸ್ನಾನ ಮಾಡಿ ಮನೆ ಒಳಗೆ ಪ್ರವೇಶಿಸಿದ್ದೂ ಇದೆ.
ನಮ್ಮ ಕಾಲದಲ್ಲಿ ಲಗೋರಿ, ಕಂಬದ ಆಟ , ಚನ್ನೇಮಣೆ, ಕರವೀರ ಹೂವಿನ ಬೀಜದಲ್ಲಿ ಕಲ್ಲಾಟ, ಕಣ್ಣುಮುಚ್ಚಾಲೆ, ಚಿನ್ನಿದಾಂಡು, ಕುಂಟೆಪಿಲ್ಲೆ, ಗರಟದಲ್ಲಿ ಮಣ್ಣನ್ನು ತುಂಬಿ ಇಡ್ಲಿ ಮಾಡುವ ಆಟ ಹೀಗೆ ಹಲವು ಮಕ್ಕಳು ಕೂಡಿ ಆಡುವಂತಹ ಆಟವನ್ನೇ ಆಡುತ್ತಿದ್ದೆವು. ನಮಗೆ ಯಾರೂ ಮೇಲ್ವಿಚಾರಣೆಗೆ ಇರಬೇಕೆಂದಿರಲಿಲ್ಲ. ಮಕ್ಕಳದ್ದೇ ಪ್ರಪಂಚ. ಮಾವಿನ ಹಣ್ಣಿನ ಕಾಲ ಶುರುವಾದೊಡನೆ ಮಾವಿನ ಮರದಿಂದ ಮಾವಿನ ಹಣ್ಣನ್ನು ಕಿತ್ತು ಸಂಭ್ರಮಿಸುತ್ತಾ ತಿನ್ನುತ್ತಿದ್ದೆವು.
ಆದರೆ ಈಗಿನ ಮಕ್ಕಳಿಗೆ ಈ ರೀತಿಯ ಬಾಲ್ಯ ಸಿಗುವುದು ಕಷ್ಟ. ಮಕ್ಕಳು ಮಕ್ಕಳೊಡನೆ ಬೆರೆತು ಆಡಬೇಕು. ಇಂದಿನ ಮಕ್ಕಳು ಗ್ಯಾಜೆಟ್ ದಾಸರಾಗಿದ್ದಾರೆ. ಮೊಬೈಲ್ನ ಗೀಳು ವಿಪರೀತವೆನ್ನುವಷ್ಟು ಹೆಚ್ಚಾಗಿದೆ.
ನಾವು ಮಕ್ಕಳ ಜೊತೆ ಆಡುತ್ತಿದ್ದರಿಂದ ನಮಗೆ ಸೋಲು, ಗೆಲುವಿನ ಪರಿಚಯವಾಗುತ್ತಿತ್ತು. ಗೆದ್ದರೆ ಎಷ್ಟು ಸಂಭ್ರಮಿಸುತ್ತಿದ್ದೆವೋ ಸೋತರೂ ಕೂಡ ಮತ್ತೆ ಗೆಲ್ಲಬಹುದು ಖುಷಿಯಿಂದಲೇ ಆಡುತ್ತಿದ್ದೆವು. ಈಗಿನ ಮಕ್ಕಳು ಗೆಲುವಿನ ಬೆನ್ನ ಹಿಂದೆ ಓಡುತ್ತಾರೆ. ಸೋತರೆ ಬೇಗ ಹತಾಶರಾಗುತ್ತಾರೆ.
ನನ್ನ ಬಾಲ್ಯ, ಓರಗೆಯವರೊಂದಿಗಿದ್ದ ಒಡನಾಟ ನಮಗೆ ಕಷ್ಟವನ್ನು ಎದುರಿಸುವ, ಸ್ವಯಂ ನಿರ್ಧಾರಗಳನ್ನು ತೆಗೆದುಕೊಳ್ಳುವ, ಸೋಲುಗಳನ್ನು ಸಹನೆಯಿಂದಲೇ ಭರಿಸುವ , ವೈಮನಸ್ಸನ್ನು ಮರೆತುಬಿಡುವ , ಗುಂಪಿನಲ್ಲಿದ್ದರೂ ತನ್ನ ತನವನ್ನು ಕಾಪಾಡಿಕೊಳ್ಳುವ ಗುಣಗಳನ್ನು ಕಳಿಸಿಕೊಟ್ಟಿದೆ. ನನ್ನ ಬಾಲ್ಯ ಬೀಗುವುದರ ಜೊತೆ ಬಾಗುವುದನ್ನೂ ಕಳಿಸಿದೆ.