ಬರವಣಿಗೆಗೂ ಬೇಲಿ
ಹಾಕಿರುವಾಗ
ಬರೆದಿದ್ದೆಲ್ಲ ನಿಜವಾಗಲು
ಹೇಗೆ ಸಾಧ್ಯ?
ಕಣ್ಣಿಗೆ ಹಳದಿ ಪೊರೆ
ಕವಿದಿರುವಾಗ
ನೋಡಿದ್ದೆಲ್ಲ ಸತ್ಯವಾಗಲು
ಹೇಗೆ ಸಾಧ್ಯ?
ಮನದಲ್ಲೊಂದು
ಬಿಂಬವಿರುವಾಗ
ಸಂಬಂಧ ನೈಜವಾಗಿರಲು
ಹೇಗೆ ಸಾಧ್ಯ?
ಸ್ವತಃ ಕಳ್ಳ
ನಾಗಿರುವಾಗ
ಹಂಸ ಕ್ಷೀರ ತೀರ್ಪು ನೀಡಲು
ಹೇಗೆ ಸಾಧ್ಯ?
ಕಪ್ಪು ಬಟ್ಟೆ ಕಣ್ಣಿಗೆ
ಬಿಗಿದಿರುವಾಗ
ನ್ಯಾಯ ಧಾನ ಮಾಡಲು
ಹೇಗೆ ಸಾಧ್ಯ?
ವ್ಯವಹಾರ
ಮಾಡುವಾಗ
ದ್ರೋಹ ಚಿಂತನೆ ಮಾಡದಿರಲು
ಹೇಗೆ ಸಾಧ್ಯ?
ಗಂಟಲಲ್ಲಿ ನೀರು
ಇಳಿಯದಿರುವಾಗ
ಅನ್ನವನ್ನು ತುರುಕಲು
ಹೇಗೆ ಸಾಧ್ಯ?
ಬೇವಿನ ಮರ
ಆಗಿರುವಾಗ
ಹಣ್ಣು ಸಿಹಿಯಾಗಿರಲು
ಹೇಗೆ ಸಾಧ್ಯ?
ಮನದಲ್ಲಿ ಶಾಂತಿ
ಇಲ್ಲದಿರುವಾಗ
ಮನೆ ನಂದನವಾಗಿರಲು
ಹೇಗೆ ಸಾಧ್ಯ?
ಮಾನವತ್ವವೆ
ಇಲ್ಲದಿರುವಾಗ
ವಿಶ್ವಮಾನವನಾಗಲು
ಹೇಗೆ ಸಾಧ್ಯ?