ಕುವೆಂಪು ಸಾಹಿತ್ಯ ಓದಿದರೆ ಕನ್ನಡ ಸಾಹಿತ್ಯ ಓದಿದಂತೆ: ನಿಡಸಾಲೆ ಪುಟ್ಟಸ್ವಾಮಯ್ಯ

ಬೆಂಗಳೂರು ಗಿರಿನಗರದಲ್ಲಿ ಮೆದುಳು ಸಂಸ್ಥೆ ಪ್ರತಿಷ್ಠಾನದಿಂದ ರಾಷ್ಟ್ರಕವಿ ಕುವೆಂಪುರವರ 120ನೇ ಜನ್ಮದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರುಗಳ ಸಂಘದ ಅಧ್ಯಕ್ಷರಾದ ನಿಡಸಾಲೆ ಪುಟ್ಟಸ್ವಾಮಯ್ಯನವರು ಮಾತನಾಡುತ್ತಾ ಕುವೆಂಪು ಸಾಹಿತ್ಯವನ್ನು ಓದಿದರೆ ಕನ್ನಡ ಸಾಹಿತ್ಯವನ್ನು ಓದಿದಂತೆ ಎಂದು ಹೇಳಿದರು. ವೇದಶಾಸ್ತ್ರ, ಪುರಾಣ, ಮೀಮಾಂಸೆ, ಕಾವ್ಯ, ಗದ್ಯ, ವಿಚಾರ ಮುಂತಾದ ಪ್ರಕಾರಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಕುವೆಂಪು ಅವರ ಸಾಹಿತ್ಯ ನಮಗೆ ಇಂದಿಗೂ ಮಾದರಿಯಾಗಿದೆ. ಮನುಷ್ಯನಲ್ಲಿ ದೈವತ್ವವನ್ನು ಯಾವ ರೂಪದಲ್ಲಿ ಆದರೂ ನಾವು ಕಾಣಬಹುದು, ಹೀಗಾಗಿ ಪ್ರಕೃತಿ-ಮನುಷ್ಯ-ದೈವ ಕುವೆಂಪು ಪಾಲಿಗೆ ಬೇರೆ ಬೇರೆಯಲ್ಲ ಎಂದು ಹೇಳಿದರು.
 ಮೆದುಳು ಸಂಸ್ಥೆಯ ಅಧ್ಯಕ್ಷರಾದ ಡಾ. ಸಿ ಎಸ್ ಹನುಮಂತಪ್ಪನವರು ಮಾತನಾಡುತ್ತಾ ಕುವೆಂಪು ಅವರು ಮೈಸೂರಿನ ಗ್ರಂಥಾಲಯದಲ್ಲಿ ರಾಬಿನ್ ಕ್ರೋಸ್ ಪುಸ್ತಕ ಹುಡುಕಲು ಬಂದ ಸಂದರ್ಭವನ್ನು ಮತ್ತು ಅದನ್ನು ತಮ್ಮ ಆತ್ಮಕಥನ ನೆನಪಿನ ದೋಣಿಯಲ್ಲಿ ಕುವೆಂಪುರವರು ದಾಖಲಿಸಿರುವ ಸನ್ನಿವೇಶವನ್ನು ತುಂಬಾ ಚೆನ್ನಾಗಿ ವಿವರಿಸಿದರು. ಸಂಪ್ರದಾಯದ ಪರಂಪರೆಗಳ ನಡುವಿನ ವ್ಯತ್ಯಾಸವನ್ನು ಕಾಲಕಾಲಕ್ಕೆ ಅನುಗುಣವಾಗಿ ಅವುಗಳನ್ನು ರೂಪಾಂತರಿಸುವ ಪ್ರಕ್ರಿಯೆಗೆ ಒತ್ತುಕೊಟ್ಟವರು ಕುವೆಂಪು ಅವರು ಎಂದು ಹೇಳಿದರು.
ಕವಿ ತಾ.ಸಿ. ತಿಮ್ಮಯ್ಯನವರು ಮಾತನಾಡುತ್ತಾ ಚರಿತ್ರೆಯ ದೀರ್ಘ ನಡೆಯಲ್ಲಿ ಕುವೆಂಪು ಅವರ ಸಾಹಿತ್ಯ ಒಂದು ದಾರಿ ಸೂಚಿಯಾಗಿದೆ. ಅಸಮಾನತೆಯನ್ನು ನೈತಿಕವಾಗಿ ಪ್ರಶ್ನಿಸಿದ ಕುವೆಂಪು ಅವರು, ಎಂದಿಗೂ ವ್ಯವಸ್ಥೆಯ ಸ್ಥಾಪಿತ ಶಕ್ತಿಗಳೊಂದಿಗೆ ರಾಜಿಯಾದವರಲ್ಲ ಇದನ್ನ ಕೊನೆಯವರೆಗೂ ವಿರೋಧಿಸುತ್ತಲೇ ಬಂದವರು. ಮನುಷ್ಯ ಪ್ರಜ್ಞೆಯನ್ನು ವಿಸ್ತರಿಸುವಲ್ಲಿ ಕುವೆಂಪು ಸಾಹಿತ್ಯ ಶ್ರೇಷ್ಠವಾಗಿದೆ ಎಂದು ಹೇಳಿದರು.
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರು ಮತ್ತು ಕವಿಗಳಾದ ಉದಂತ ಶಿವಕುಮಾರ್ ಅವರು ಮಾತನಾಡುತ್ತಾ ಕುವೆಂಪು ಅವರು ದೈತ್ಯ ಪ್ರತಿಭೆ. ಇದು ಗದ್ಯ, ಪದ್ಯ , ನಾಟಕವೆಂಬ ಪ್ರಕಾರ, ಉಪ ಪ್ರಕಾರಗಳಲ್ಲಿ ಹರಡಿಕೊಂಡಿದ್ದರು ಕುವೆಂಪು ಎಂದ ಕ್ಷಣ ಪದ್ಯ ಪ್ರಪಂಚವೇ ನಮ್ಮ ನೆನಪಿಗೆ ಬರುತ್ತದೆ. ಶಿಶುಗೀತೆ, ವಚನ, ಕಾವ್ಯ, ಚುಟುಕು, ಮಹಾಪ್ರಗಾತ, ಅಷ್ಟಷಟ್ಪದಿ, ಭಾವಗೀತೆ, ಖಂಡಕಾವ್ಯ, ಮಹಾಕಾವ್ಯ ಹೀಗೆ ಹಲವು ಪ್ರಯೋಗಗಳಲ್ಲಿ ಕವಲೊಡೆದು, ಸಹ್ಯಾದ್ರಿಮುಖಿಯಾಗಿರುವ ನಿಸರ್ಗ ಪ್ರೀತಿ, ವ್ಯಕ್ತಿ ನೆಲೆಯಿಂದ ವಿಶ್ವಮಾನವ ನೆಲೆಗೆ ವಿಸ್ತರಿಸಿಕೊಳ್ಳುವ ಜೀವನದೃಷ್ಟಿಗಳು ಅನನ್ಯ ಎಂದು ಹೇಳಿದರು.
ಘಟಕದ ಸದಸ್ಯರಾದ ಗೋವಿಂದರಾಜ್ ಪಟೇಲ್ ರವರು ನಿಸರ್ಗಪ್ರೀತಿ ಇರಲಿ, ಜೀವನನೀತಿ ಇರಲಿ, ಎರಡು ನೆಲೆಗಳಿಗೆ ಸಂಬಂಧಿಸಿದ ಇವರ ಕಾವ್ಯಕರ್ಮ ಮನೋಪಾತಳಿಗಿಂತ ಆತ್ಮಪಾತಳಿಯಲ್ಲಿಯೇ ದಳ ಬಿಚ್ಚುವುದು ಒಂದು ವಿಶೇಷತೆಯಾಗಿದೆ. ಸೂರ್ಯೋದಯ, ಚಂದ್ರೋದಯ ದೇವರ ದಯ ಕಾಣೋ, ಎಂದು ನಿಸರ್ಗವನ್ನು ವರ್ಣಿಸುವಲ್ಲಿ “ನಾ ನಿನಗೆ ನೀ ನನಗೆ ಜೇನಾಗುವ ಎನ್ನುತಲೇ ರಸರೂಪಿ ಭಗವತಿಗೆ ಮುಡುಪಾಗುವ ಎಂದು ದಾಂಪತ್ಯ ಜೀವನವನ್ನು ಹಾರೈಸುವಲ್ಲಿ ಕುವೆಂಪು ಕಾವ್ಯ ಭೌತಿಕ ಸ್ತರಕ್ಕೆ ನಿಲ್ಲದೆ ಮುಂದೆ ಸಾಗಿ ದೈವಿಕ ಸ್ತರದಲ್ಲಿ ವಿರಮಿಸುತ್ತದೆ. ಹೀಗಾಗಿ ಇವರ ಒಂದೊಂದು ಪದ್ಯ ಧ್ಯಾನ ಸ್ಥಿತಿಯ ಸೃಷ್ಟಿ ಎನಿಸುತ್ತದೆ. ಅಲ್ಲಿ ದೈವೀಕರಣ ಕ್ರಿಯೆ ಜರುಗುತಲಿರುವುದು ಎದ್ದು ಕಾಣುತ್ತದೆ ಎಂದು ಹೇಳಿದರು.
ಕವಿ ಉದಂತ ಶಿವಕುಮಾರ್ ಅವರು ಕುವೆಂಪು ರವರ ಪಾಂಚಜನ್ಯ ಕವನ ಸಂಕಲದಲ್ಲಿರುವ ಕಲ್ಕಿ ಕವಿತೆಯನ್ನು ವಾಚನ ಮಾಡಿದರು. ಸದಸ್ಯರಾದ ನಾಗರಾಜುರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop