ಓ ಮಳೆರಾಯ, ನೀನೆಲ್ಲಿ ಇರುವೆ…?
ದೂರದ ಆಕಾಶದಲ್ಲಿ ಮೇಘರಾಜನೊಳಗೆ
ಅವಿತು ಕುಳಿತಿರುವಿಯಾ…?
ದೇವಲೋಕದ ಅಪ್ಸರೆಯರ
ಚೆಲುವಿಗೆ ಮನಸೋತು ಅವರ
ಬೆನ್ನತ್ತಿ ಓಡುತ್ತಿರುವಿಯಾ…?
ಅಥವಾ ಅವರ ತೆಕ್ಕೆಯೊಳಗೆ
ಸೇರಿಕೊಂಡು ಚೆಲ್ಲಾಟವಾಡುತ್ತಿರುವೆಯಾ…?
ಇಲ್ಲಿ ಧರೆ ಹತ್ತಿ ಉರಿಯುತ್ತಿರುವುದು
ಕಂಡೂ ಕಾಣದಂತೆ
ಜಾಣ ಕುರುಡನಾಗಿರುವಿಯಾ…?
ಜಗದ್ರಕ್ಷಕ, ಜೀವರಾಶಿಗಳ ಸಂಜೀವಿನಿ
ಸೂರ್ಯದೇವನ ಆಟಾಟೋಪ, ಪ್ರತಾಪಕ್ಕೆ
ಭೂದೇವಿ ಕಾದ ಹಂಚಿನಂತಾಗಿದ್ದಾಳೆ,
ತಳಮಳಿಸುತ್ತಿದ್ದಾಳೆ, ತತ್ತರಿಸುತ್ತಿದ್ದಾಳೆ,
ಚಡಪಡಿಸುತ್ತಿದ್ದಾಳೆ, ನಲುಗಿ ಹೋಗಿದ್ದಾಳೆ…
ಕೆಂಡಾಮಂಡಲವಾಗಿದ್ದಾಳೆ…
ಮಳೆರಾಯ… ಭೂದೇವಿ ನಿನ್ನ ಬರುವಿಗೆ
ಕಾತರಿಸಿ ಕಾಯುತ್ತಿರುವುದು
ನಿನ್ನರಿವಿಗೆ ಬರದಿರುವುದು
ವಿಷಾದನೀಯ, ಖಂಡನೀಯ!
ಮಳೆರಾಯ… ಈ ನಿಸರ್ಗದ
ನಿನ್ನ ಸಹಪಾಠಿ ಸೂರ್ಯದೇವ
ಕೆಂಡದ ಮಳೆಯನ್ನೇ ಸುರಿಸುತ್ತಿರುವುದು
ನಿನಗೆ ಕಾಣುತ್ತಿಲ್ಲವೇ…?
ಭೂಮಂಡಲದ ಸಕಲ ಜೀವರಾಶಿ,
ಮನುಜ, ಪಶು, ಪಕ್ಷಿ, ಪ್ರಾಣಿಗಳು,
ಸಸ್ಯ ಸಂಕುಲಗಳು ಕೆಂಡದಂಥಹ
ಸೂರ್ಯನ ಉರಿ ಬಿಸಿಲಿಗೆ,
ಬಿಸಿಲ ತಾಪಕ್ಕೆ…
ಭೂದೇವಿಯ ಶಾಖದ ಸ್ಪರ್ಶಕ್ಕೆ…
ತತ್ತರಿಸುತ್ತಿವೆ, ಚಡಪಡಿಸುತ್ತಿವೆ…
ನೀರಿಲ್ಲದೇ ಸಸ್ಯ ಸಂಕುಲಗಳು
ಕಮರಿ ಹೋಗುತ್ತಿವೆ, ಮುದುಡುತ್ತಿವೆ…
ಮರಗಿಡಗಳು ಬಾಡುತ್ತಿವೆ… ಒಣಗುತ್ತಿವೆ
ಪಶು, ಪಕ್ಷಿ, ಪ್ರಾಣಿಗಳು ನೀರಿನ ದಾಹಕ್ಕೆ…
ಪರಿತಪಿಸುತ್ತಿವೆ, ತಳಮಳಿಸುತ್ತಿವೆ…
ಜೀವನ್ಮರಣಗಳ ನಡುವೆ ಹೋರಾಡುತ್ತಿವೆ…
ತನ್ನದೆಯ ಕುಡಿಗಳ ಅಳಿವು, ಉಳಿವುಗಾಗಿ…
ಭೂದೇವಿ ಮೊರೆ ಇಡುತ್ತಿರುವುದು
ನಿನಗೆ ಕೇಳಿಸುತ್ತಿಲ್ಲವೇ ಮಳೆರಾಯ…?
ಓ ಮಳೆರಾಯ, ಅಷ್ಟು ಕಠಿಣನಾಗಬೇಡ
ಬಾ ಬೇಗ ಧರೆಗಿಳಿದು ಬಾ…
ನಿನ್ನೊಲವಿನ ಪ್ರೇಯಸಿ, ಜೀವನಾಡಿ
ಭೂದೇವಿಯ ತನು ಮನಗಳ ತಣಿಸು…
ಮರೆತೆಯಾದರೆ ಭೂದೇವಿಯ
ಮಕ್ಕಳ ಶಾಪಕ್ಕೆ ಗುರಿಯಾಗುವಿ…
ಅದಕ್ಕೂ ಮುಂಚೆ ಬೇಗ ಬಂದುಬಿಡು
ನಿನ್ನ ಬರುವೆಮಗೆ ಖುಷಿಯ
ಹರ್ಷದಾಯಕ ಸಂಗತಿ…
ನಮ್ಮೆಲ್ಲ ತಪ್ಪು, ಒಪ್ಪುಗಳನು…
ಹೊಟ್ಟೆಗೆ ಹಾಕಿಕೊಂಡು
ಬೇಗ ಬಂದುಬಿಡು…
ಕರುಣೆ ಇರಲಿ,
ಕಾಯಿಸಬೇಡ ಮಳೆರಾಯ…
ಇಳಿದು ಬಿಡು ಇಳೆಗೆ ಬೇಗ…
ನೀನಲ್ಲದೇ ಬೇರೆ ಯಾರಿಗೆ ಸಾಧ್ಯ
ಭೂದೇವಿಯ ಬೇಗೆ ತಣಿಸಲು…?
ಕರುಣಾಳು ಬೇಗ ಬಂದುಬಿಡು
ದೊರೆಯೇ… ಭೂರಮೆಗೆ
ನವಚೈತನ್ಯ ತುಂಬಲು…
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ನೆಲ ಹತ್ತಿ ಉರಿದಡೆ ನಿಲಬಹುದೇ…?