ಸರಸ್ವತಿ ವಿ.ಎಸ್. ಅಯೋನಿಜೆ ಅವರು ಬರೆದ ಕವಿತೆ ‘ಕಾಡಿದ ಕಂಗಳು’

ತನ್ನವಳ ನಯನ ಕವಿತಾ ದುಂದುಬಿಗೆ,
ಮುಖಾರವಿಂದದೆ ಕಮಲದೆಸಳಂಥಾ
ಅಕ್ಷಿಗಳೆಂಬ ಬಿಂಬ ಬಾವಿಯಲಿ,
ಸನ್ಮೋಹನದಿಳಿದ ಅವಳ ಸೌಂದರ್ಯಕೆ
ಶರಣಾದ ದಾಸ ಪದಪುಂಜಾಸ್ತ್ರದೆ,
ಪ್ರಕೃತಿಯ ಮೇಲೆ ಸಮರ ಸಾರಿದ್ದ
ತನ್ನವಳ ನಯನದ ಅಂದ ಪುರಾಣಕೆ…

ಜೋಡಿ ಹುಬ್ಬುಗಳ ಹೋಲಿಕೆ ದಾರಿಗೆ
ಕಾಮನಬಿಲ್ಲ ಕರಗಿಸಿ ಎರಕ ಹೊಯ್ದಾ,
ಬಣ್ಣ ತ್ಯಜಿಸಿದ ಬಿಲ್ಲು ಕಪ್ಪಾಯ್ತು
ಆ ಹುಬ್ಬಿಗೆ ಮುಚ್ಚಿತೆರೆವ ರೆಪ್ಪೆಗಳು ಭ್ರಮರದಂತೆ,
ಭ್ರಮೆತರಿಸುತಿರೆ ಆ ಭ್ರಮೆಯಲಿ
ಭ್ರಮರನಾದ ಪುರುಷ ಭ್ರಮರ
ತಾ ಸೋಲುತಾ ಸೋತು ಶರಣಾಗುತಾ…

ಇಣುಕಿನೋಡಿದ್ದು ಕಣ್ಣಾಳದಲಿ
ಪವನಾಸ್ತ್ರದ ಶರ ಹೊರಟಿದ್ದು ಅವನೆದೆಗೆ,
ರುದಿರದೆ ಬೆರೆತ ಮಂದ ಮಾರುತದ
ಹೊನಲ ಆಗರದಂತೆ ಮೇಘ ಮಂದಾಕಿನಿ
ಮೆಲ್ಲನೆ ಕೂತಳು ತಪಸ್ಸಿಗೆ ಕುಡಿ ನೋಟದ
ಬಾಣದೆ ಹಸನಾದ ಅವನ
ಹೃದಯವೆಂಬ ಹಿಮಪರ್ವತದಲಿ…

ಅದೆಷ್ಟು ಸೂಜಿಗಲ್ಲ ಸೇರಿಸಿ ಮಾಡಿದ,
ಚಂದಿರ ತಾವರೆ ಮೀನುಗಳೆಲ್ಲಾ
ಇವಳ ಕಣ್ಣ ನೋಡಿ ತಾವೇ ಸೋತು ನಾಚಿ,
ಮತ್ಸ್ಯನು ಸಾಗರನ ಸೇರುತಿರೆ ಸಾಗರನ
ಭೋರ್ಗರೆತ ಚಂದ್ರನೆಡೆಗೆ ತಲುಪಿದೆ,
ಕಮಲವಂತೂ ಸೋತು ತಲೆಬಾಗಿರಲು,
ಸಾಗರನು ಸಂತೈಸುತಿರುವ ಸಂಜೆಯಲಿ…

ಅವಳು ನಿನ್ನ ತಂಗಿ ಬಿಡೆಂದು ಸಾಂತ್ವಾನಿಸುತಾ,
ಚಂದ್ರನಂತೂ ನಿನ್ನ ಕಂಡರೆಲ್ಲಿ ಸೋಲುವೆನೆಂಬ
ಕಾರಣಕೆ ಹಠವಾದಿಯಂತೆ ಅಚಲದಿ ನಿಂತರೂ
ಹಾಗೊಮ್ಮೆ ಹೀಗೊಮ್ಮೆ ಆಕಾಶದಿಂದ ಭುವಿ ಎಡೆಗೆಗೊಮ್ಮೆ ನೋಡೆ,
ಆ ನಯನ ಸೌಂದರ್ಯವ ಕಂಡು
ನೊಂದು ಕೊರಗುತಾ ಕ್ಷೀಣನಾಗುತಿರುವ.

ತಾರಾಮಂಡಲದ ಪಟ್ಟದರಸಿಯರೆಲ್ಲಾ
ಚಂದ್ರನ ಕ್ಷೇಮಕುರಿತು ಯೋಚಿಸಿ
ಶಿವನ ಮುಡಿಗೆ ಬಿಟ್ಟುಕೊಟ್ಟು
ನಿನ್ನ ಕಂಡು ಹುಸಿ ಕೋಪ ತೋರುತಿರಲು,
ಚೆಂದದಿ ನಕ್ಕು ತನಗೇನೂ ಅರಿಯದಂತೆ
ಬೆಳ್ಳಿ ಕಾಲ್ಗೆಜ್ಜೆಯಲಿ ಕಲರವ ಮಾಡುತಾ
ಮನದ ಬರಡು ನೆಲದಿ ಪ್ರೇಮಗಂಗೆಯಾದವಳೆ.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
0
    0
    Your Cart
    Your cart is emptyReturn to Shop