ಅವಳೆಂದರೆ ಭಾವನೆಗಳ ತೇರು
ಪದಗಳಂದವ ಮುಡಿಸೊ ಸೊಗಸು
ತಿಳಿವೆನೆಂದರೆ ಸಾಗರದಾಳದ ಮುತ್ತು
ಒಲವಿನಂಗಳದ ಮೊಗ್ಗಿನ ಮನಸ್ಸು
ಬೆರೆಯುವಳು ಮನದಾಳದಿ ಕುಳಿತು
ಕಣ್ಮುಚ್ಚಿದರೂ ಎದೆಯಪ್ಪುವ ಕೂಸಂತಿವಳು
ಶಬುದದೊಳಗೊಮ್ಮೆ ಹೀಗೆಯೇ ಅವಿತು
ಕಾಡಿಸುವ ಬಾಲೆ ಬರೆಸುತ್ತಾಳಿವಳು
ಅಂಬೆಗಾಲನ್ನಿಡುವ ಹಸುಳೆ ಇನ್ನೂ ಮುಗ್ಧೆ!..
ತೊದಲುವುದನ್ನಿವಳಿನ್ನೂ ಬಿಟ್ಟೇ ಇಲ್ಲ
ವರುಷಗಳುರುಳಿದಂತೆ ಹರುಷ ಪಡಬಹುದೇನೋ!?
ಮುದ್ದಿನ ಮಾತೆರಡು ನುಡಿಯಬಹುದೇನೋ?…
ಭವಿತವ್ಯದಲ್ಲಿ ಗಟ್ಟಿ ಹೆಜ್ಜೆ ಊರಿಯಾಳು,
ಅಚ್ಚಳಿಯದಂತೆ ಮನದಿ ನೆಲೆಗೊಂಡಾಳು
ಕಾಯುತ್ತೆನಲ್ಲಿಯವರೆಗೂ ಬೇಸರವಿಲ್ಲ ಮಗಳೆ
ಎಷ್ಟಾದರೂ ನೀ,ನಾ ಹೆತ್ತ ಪ್ರೀತಿಯ ಕವಿತೆಯಲ್ಲವೆ!