ಮೇದಿನಿಯನಿನಿಯನೇ, ಮರೆತೆ ಏನು ನಿನ್ನ ನೀನು?
ತನ್ನತನವ ಮರೆತರೇನು?
ಭಿನ್ನ ಭಿನ್ನ ರೂಪ ತಾಳಿದರೇನು?
ಸುರಿಯಲೊಲ್ಲದೆ ಸಾಗಿದರೇನು?
ಕಿರಿದು ಹನಿಯ ಕಚಗುಳಿಯನಿಕ್ಕಿ,
ಇಳೆಯ ಮಲೆಗಳ ತಬ್ಬಿ , ಸವರಿ,
ಕೊಸರಿಕೊಳ್ವ ಅವಳ ಉಸಿರಲಿ ಉಸಿರು ಬೆರೆಸಿ
ಹನಿಸದೇ ಹೋದರೇನು ಫಲ!
ತಬ್ಬಿ ನಿನ್ನ ತಂಪುಗೊಳ್ಳಲಿ ಅವಳು,
ಬಿಸಿಲು ಬೇಗೆಗೆ ಬೆಂದ ಜೀವ,
ವಸುಧೆಯಾದರೇನು, ಕಸುವು ಕನಲಿದೆ,
ತೋಷಗೊಳಿಸದೆ ತೇಲಿ ಹೋದರೇನು ಫಲ!
ರೂಪದೊಡನೆ ಜನಿಸಿತು ಆಸೆ,
ಚಲುವಿನೊಳಗೆ ಒಲವು ಮೂಡಿ
ಒಲವನಲ್ಲಿ ಮೊಳಕೆ ಒಡೆದ
ಮೋಹ ದಾಹ ಮಿಲನ ಮೈಥುನಕ್ಕೆಳೆಯದೆ
ಬರಿದೆ ಸಾಗಿದರೇನು ಫಲ!
ಬೀಜ ಹೊರಳಿ ಕ್ರಮಿಸಲಿ ದಾರಿ,
ತರು, ಲತೆ,ಗಿಡ,ಮರ,ಬಳ್ಳಿಯಾಗಿ,
ಪತ್ರೆ, ಪುಷ್ಪ, ಫಲಂಗಳೆಂಬ ನಾಮ ರೂಪಗಳನು ದಾಟಿ
ಮತ್ತೆ ಬೀಜವಾಗಿ ಮೈವೆತ್ತಲಿ ಜಗದ ಹಸಿವು ಹಿಂಗಲಿ
ಓಡಿ ಓಡಿ ಹೋದರೇನು ಫಲ!