ರಕ್ಷಿತ್. ಬಿ. ಕರ್ಕೆರ ಅವರು ಬರೆದ ಕವಿತೆ ‘ರಾಧೆಗೊಂದು ಪ್ರಶ್ನೆ!’

ಇಂದೇಕೋ..
ನನ್ನಲ್ಲಿ ನೀನು, ನಿನ್ನಲ್ಲಿ ನಾನು
ಬೆರೆತಿದ್ದರೂ ಬೇರೆಯಾಗಲು
ಜೀವ ತಲ್ಲಣಿಸಿದೆ.

ದೂರಮಾಡದೆ ನಿನ್ನ ಹಾಗೆಯೇ
ತಬ್ಬಿರಲು ಈ ಸಂಜೆಯ ಮಬ್ಬು ಬೆಂಬಿದ್ದಿದೆ
ಮುಡಿಯಲ್ಲಿರೋ ಹೂವು ನನ್ನ ಕೈಯ
ಕಾದಾಟಕೆ ಕಾದಂತಿದೆ
ಕಣ್ಣಲ್ಲಿರುವ ಆ ಮಾದಕತೆ
ತಪ್ಪೆಸಗಲು ಆಹ್ವಾನ ಕೊಟ್ಟಿದೆ
ಕಂಗೊಳಿಸುವ ತುಟಿಗಳ ತಟದಲ್ಲಿ
ದೃಷ್ಟಿ ಬೊಟ್ಟಾಗಲು ಇಷ್ಟಾಗಿದೆ
ಆ ಕೆಂಪು ಗಲ್ಲ ಈ ಗೊಲ್ಲನ ಹೃದಯದ
ಗಲ್ಲಾಪೆಟ್ಟಿಗೆಯನ್ನೇ ದೋಚಿದೆ
ಸೂತ್ರವಿಲ್ಲದೆ ತೂರಾಡುವ ಆ ಮುಂಗುರುಳು
ಈ ಎದೆಯಲ್ಲಿ ಪ್ರೇಮಗೀತೆಯ ಗೀಚಿದೆ
ನನ್ನೀ ಬಾಹುಗಳು ನಿನ್ನ ಬೇಹುಗಾರಿಕೆಗೆಂದೆ
ಇನ್ನು ಮುಡಿಪಾಗಿದೆ

ಆದರೂ ಇಂದೇಕೆ
ಈ ಮೋಹನನ ಮೋಹಿಸುವ
ಇರಾದೆ ನಿನಗೆ?
ಈ ವಿರಹವು ಆರದೆ ಮಿತಿಮೀರಿದೆ
ಹೇಳೆಯಾ…. ರಾಧೆ?
ಈ ಭಾದೆಗೆ ಕೊನೆಯಾದರೂ ಹೇಗೆ?

ರಕ್ಷಿತ್. ಬಿ. ಕರ್ಕೆರ
ಮಂಗಳೂರು

0
    0
    Your Cart
    Your cart is emptyReturn to Shop