‘
ಮನವಿದು ರೌದ್ರವಾದಂತೆಲ್ಲ,
ಮೊಗವದು ನಿಂದನೆಯಲಿ ಕಣ್ಣೀರಾಗುತ್ತಿದೆ.
ಮುಡಿದ ಸಿಂಧೂರ ಅವನಿಂದ ನೊಂದು
ರುಧಿರದಂತೆ ಗೋಚರಿಸುತ್ತಿದೆ.
ಮೂರುಗಂಟಿನ ನಂಟಿನಾಚೆಗೆ
ಅಂಟದಿಹ ಭಾವ ನೂರು,
ಮೌನದ ಮೊರೆಹೋಗಿ ಆಡದೇ
ಉಳಿದ ಮಾತು ಸಾವಿರಾರು,
ನನ್ನ ಕನಸುಗಳಿಗೆ ಜಾಗ ಕೊಡದೆ ಕೊಂದಿಹರು,
ಅಸಹಾಯಕತೆ ನೋಡಿ ಗಹಗಹಿಸುತಿಹರು.
ಪ್ರಕೃತಿಯ ಅಣು ಅಣುವಲೂ ನನ್ನ ಆರಾಧಿಸುವವರು,
ಮಾತಿನಲ್ಲೇ ಮನೆಯ ಮಾಡಿ ತುಳಿದು ಹತ್ತುತಿಹರು,
ಬೆಲೆಯಿಲ್ಲದ ಬದುಕಿನಿಂದ ಹೊರಬಂದು,
ಕಟ್ಟುಪಾಡುಗಳ ಕಟ್ಟೆಯೊಡೆದು,
ಜಗದೆಲ್ಲ ಜಂಜಡಗಳ ತೊರೆದು,
ನಡೆಯಬೇಕಿದೆ ನಾನು.
ಹಾರಬೇಕಿದೆ ನಾನು ದಿಗ್ ದಿಗಂತದಾಚೆಗೆ,
ತಲುಪಬೇಕಾಗಿದೆ ನಾನು ಕನಸುಗಳ ಊರಿಗೆ,
ಸೇರಬೇಕಿದೆ ನಾನು ಸಾಂತ್ವನದ ಸೂರಿಗೆ,
ಸಂಭ್ರಮಿಸುತ ಮರಳಬೇಕಿದೆ ನಾನು,
ನನ್ನ ಅಸ್ತಿತ್ವದ ತವರಿಗೆ.