ಮಣ್ಣಸೇರುವ ಮುನ್ನ ಸೇರಬೇಕು ನನ್ನೂರ
ಸಾಕಾಗಿ ಹೋಗಿದೆ ಪರದೇಸಿ ಬದುಕಿನ ಭಾರ
ದುಡಿಮೆಗಾಗಿ ತೊರೆದೆ ನಾ ಅಂದು ನನ್ನೋರ ನನ್ನೂರ!
ನಗರ ಸುಖದ ಮುಂದೆ ನಾ ಮರೆತಿದ್ದೆ ನನ್ನೂರ ನನ್ನೋರ!
ಒಂದೆರಡು ದಿನದ ಅತಿಥಿಯಾಗಿದ್ದೆ ನಾ ನನ್ನೂರಿಗೆ
ಜಾತ್ರೆ ಆಯನ, ದೇವ ಪೂಜೆ , ಮದುವೆ ಗೌಜಿಗೆ
ಆರೈಕೆ ಹಾರೈಕೆ ಜೊತೆಗೆ ತಿಂಡಿ ತಿನಿಸು ಪೊಟ್ಟಣ!
ಮರಳಿ ಸೇರುತ್ತಿದ್ದೆ ಭಾವರಹಿತ ಪಟ್ಟಣ!
ಹಳೆಯ ನೆನಪು ಹಿಂದೆ ಸರಿಯಿತು ಹೊಸ ಬದುಕಿನ ನೆಪದಲಿ
ಮನದ ತುಂಬಾ ಮರೆವು ತುಂಬಿತು ರಂಗು ರಂಗಿನ ಗುಂಗಲಿ
ಸಾಗಿದೆ ಬದುಕಿನ ಪಯಣ ಬಿಡುವಿಲ್ಲದೇ..ಹುಟ್ಟೂರ ಕಾಣದೆ!
ಹೆಸರು ಧನವಗಳಿಸೋ ಭರದಿ ಕಾಲ ಕಾಲವಾಗಿದೆ!
ಮಕ್ಕಳಿಬ್ಬರು ಬೆಳೆದರಿಲ್ಲೇ ನನ್ನೂರಿಗೆ ಬರಿಯ ನೆಂಟರಾಗಿ
ಬದುಕ ಕಟ್ಟಿಕೊಂಡರಿಲ್ಲೇ ಸಂಬಂಧಗಳರಿವಿಲ್ಲದೆ
ಪ್ರೀತಿ ಮಡದಿ ಮಡಿದು ನಾನಿಗ ಏಕಾಂತ ವಿರಾಗಿ!
ಇಳಿಸಂಜೆ ಬದುಕೀಗಾ ಹುಟ್ಟೂರ ಬಯಸುತಿದೆ!
ಮರಳಿ ಅರಳ ಬಯಸಿದೆ ಮನ ಹುಟ್ಟೂರ ನೆಲದಲಿ
ಕಾಣಬಯಸಿದೆ ಉದಯಾಸ್ತ ರವಿಯ ಮೇಘಮಾಲೆ ನಡುವಲಿ
ಮೊದಲ ಮಳೆಯ ಇಳೆಯ ಕಂಪು ತಂಪು ತಂಗಾಳಿ ಜೊತೆಯಲಿ!
ಬದುಕ ಬೇಕು ಚಿರನಿದಿರೆವರೆಗೂ ನನ್ನೂರ ಮಡಿಲಲಿ!