ಮನು ಗುರುಸ್ವಾಮಿ ಅವರು ಬರೆದ ಕವಿತೆ ‘ದ್ರೌಪದಿಯ ಸ್ವಗತ’

ಗಂಡರೈವರಿಗೂ ಗಂಡೆದೆ ಇತ್ತು!
ಜಗತ್ತೇ ಬಲ್ಲದದನು.
ಬಿಟ್ಟರೆ ಎದೆಯನು ಸೀಳುವ ಕಲಿಗಳು
ಚಿತ್ತವನರಿಯದೆ ತೆಪ್ಪಗೆ ಕೂತರು
ದುರಾಳನೊಬ್ಬ ಮುಂದಲೆಗೆ
ಕೈಯಿಟ್ಟು ಸೆಳೆದಾಗ
ಅದೇ ಕೈಗಳು ಸೆರಗಿಗೆ ಜಾರಿದಾಗ!

ಭೀಮ ಹಲ್ಲು ಕಚ್ಚುತ್ತಿದ್ದ; ಆತನಿಗೋ ?
ಎಲ್ಲರಿಗಿಂತ ಕೊಂಚ ಅನುರಾಗ
ನನ್ನ ಮೇಲೆ.. ಆದರೂ…
ಪಾಪ ! ಅಣ್ಣನಾಜ್ಞೆಯನು ಮೀರದಾದ !

ಆಜ್ಞೆ…?! ಯಮನ ಮಗನ ಕಟ್ಟಾಜ್ಞೆ !
“ಅವನೊಬ್ಬ ತಿಳಿಗೇಡಿ!”
ತಪ್ಪೇನುವಿರಾ ಇದನು ?
ಬಾಯಿ ಜಾರಿದ ಮಾತಲ್ಲ !
ಬೇಕಂತಲೇ ನುಡಿದ ತಿರುಳು.

ಅರ್ಜುನ.. ಅಬ್ಬಾ ! ಬಿಲ್ವಿದ್ಯೆ ಪ್ರಮೀಣ !
ಶಿವನಿಂದ ಪಾಶುಪತಾಸ್ತ್ರ ಪಡೆದವನು.
ಸಕಾಲಕ್ಕೆ ಸಲ್ಲದ ಶಸ್ತ್ರಗಳ
ಒಡೆಯನಿಗೆ ಏನೆನ್ನಬೇಕೋ?

ಭೂತ ಭವಿಷ್ಯಗಳ ಬಲ್ಲವನಂತೆ
ಸಹದೇವ ? ದಿವ್ಯಜ್ಞಾನಿ !
ಬಾಯ್ತೆರೆದರೆ ಸಾವಿತ್ತೆ ?
ಸಾವೇ ಹೆಚ್ಚಾಯ್ತೆ ?
ಸಮರ್ಥಿಸಲು ಸಮಯವಿಲ್ಲ
ಅವನಿಗಾ ಅಸಹಾಯಕ;
ನಕುಲ ? ಪಾಪ ಅಮಾಯಕ!

ಮತ್ಸ್ಯದೇಶದೊಳ್ ಕೀಚಕ ಬೆನ್ನತ್ತಿದಾಗ
ಎಲ್ಲಾ ಎಲ್ಲೆಗಳ ಮೀರಿದವನು
ಕಂಬನಿಯೊಡನೆ ಮಿಡಿದವನು
ಕಲಿಭೀಮ ! ನನ್ನ ಬಲಭೀಮ !

ಉಳಿದವರಿಗೇನು ಹಕ್ಕುಂಟು;
ನನ್ನ ಪಕ್ಕದಲ್ಲಿರಲು ?
ಗಂಡನೋರ್ವನೆ ನನಗೆ !
ಭೀಮನಷ್ಟೆ; ನಾ ಭೀಮನಿಗಷ್ಟೇ !

ಜಗಕೆ ನಾನು ಪಾಂಚಲಿಯಾದರೂ
ಪಾಂಡವೈವರ ಅರ್ಧಾಂಗಿಯಾಗಲಾರೆ,
ನನ್ನನ್ನೇ ನಾನು ಚೂರುಗೊಳಿಸಲಾರೆ
ಏಕೆಂದರೆ
ನನ್ನ ಹೃದಯ ಸದಾ ನಿಷ್ಕಲ್ಮಶ !
ಅನುರಾಗವೂ ಕೂಡ.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop