ಭಾವದ ಹಂಗಿನಲ್ಲಿ
ಸಿಕ್ಕಿಕೊಂಡ ನನಗೆ
ನಿನ್ನ ನೆನಪುಗಳು
ಉಸಿರುಕಟ್ಟಿಸುತ್ತಿತ್ತು.
ಕಾದ ಕಾವಲಿಯ ಮೇಲೆ
ಕುಳಿತ ಅನುಭವ.
ಹುಚ್ಚೆದ್ದು ಕುಣಿವ ಕಾಮನೆಗಳು
ಮನದ ಗೋಡೆಯ ಮೇಲೆ
ಚಿತ್ರ ಬರೆಯುತ್ತಿದ್ದವು.
ಅಸ್ತವ್ಯಸ್ತಗೊಂಡ ಚಿತ್ತ,
ಭಾವದ ಬೇಲಿ ಮುರಿದು
ಪದಪುಂಜಗಳ ಹೆಕ್ಕಿ
ಅಭಿವ್ಯಕ್ತಿಸಲು ವೇದಿಕೆಯ ಹುಡುಕುತ್ತಿತ್ತು.
ಅಂದುಕೊಂಡ ಆಕಾಶದಲ್ಲಿ
ಮಿರಮಿರನೆ ಮಿಂಚುವ
ನಕ್ಷತ್ರಗಳನ್ನುಎಣಿಸಲಾಗಲಿಲ್ಲ.
ಹಸಿರು ಹುಲ್ಲಿನ ಮೈ
ಅಪ್ಪಿದ ಇಬ್ಬನಿ
ಕರಗುವಾಗ ಮರುಗಿದೆ.
ಬೇರು ಕಿತ್ತ ಬಳ್ಳಿಯಂತೆ ಸೊರಗಿದೆ,
ಕೆಸರಿನಲ್ಲಿ ಮೂಡಿದ
ನಿನ್ನ ಹೆಜ್ಜೆಯ ಗುರುತುಗಳು
ಕದಡಿದ ನೀರಿನಲ್ಲಿ ಮುಚ್ಚಿಹೋಯಿತು.
ವಿಷಾದವಿದೆ ನನಗೆ
ನಿನ್ನ ಭೇಟಿಗೆ ಅವಕಾಶವಾಗಲಿಲ್ಲವೆಂದು.
ಕ್ಷಮಿಸಿಬಿಡು ಸಾದ್ಯವಾದರೆ..!