ಒಲೆ ಹಚ್ಚಿ
ಚೆಂದದ ರಂಗೋಲಿ ಹಾಕಿ,
ಬದುಕು ಹಸನುಗೊಳಿಸುತಾ
ಸಾಗಿದರೂ
ಅನುಮತಿ ಪಡೆಯಲೇ ಬೇಕು!
ಕೂರಲು ಮಾತಾಡಲು
ನೆರೆಮನೆಯ ಗೆಳತಿಯರೊಡನೆ
ಹರಟೆಯೊಡೆಯಲು
ಅನುಮತಿ ಪಡೆಯಲೇ ಬೇಕು!
ಮನೆಯೆಲ್ಲಾ ಕಾರ‌್ಯಗಳ ಮುಗಿಸಿ
ದಣಿದೂ ಅವನ ತಣಿಸಬೇಕು
ನೆಪಗಳ ಹೇಳುವಂತಿಲ್ಲ
ನೆಪಗಳೇನಿದ್ದರೂ ಅವನ ಸ್ವತ್ತು!
ಒಂದು ಮಾತನಾಡಿದರೆ ಹೆಚ್ಚು
ಒಂದು ಮಾತನಾಡಿದರೆ ಕಡಿಮೆ
ಮೌನವಾಗಿದ್ದರೂ ಬೈಗುಳ!
ಒಟ್ಟಿನಲ್ಲಿ ಬೈಗುಳ ತಪ್ಪಿದಲ್ಲ;
ಜೋರು ಮಾತನಾಡುತ್ತಾ
ನಗುತ್ತಿದ್ದರೆ ಗಂಡುಬೀರಿ!
ಮೌನವಾಗಿ ದುಃಖದ
ಮಡುವಿನಲ್ಲಿದ್ದರೆ ಅಳುಮುಂಜಿ!
ನಗುವುದಕ್ಕೂ ಅಳುವುದಕ್ಕೂ
ಮಾತಾನಾಡವುದಕ್ಕೂ
ಅನುಮತಿ ಪಡೆಯಲೇ ಬೇಕು!
ಹಾಕುವ ಅರಿವೆಯಿಂದ
ನಡಿಗೆ, ನೋಟದವರೆಗೆ
ಸಾವಿರಾರು ಲೆಕ್ಕಾಚಾರ!
ಕನಸು ಕಾಣಲು
ಬದುಕಿ ಬಾಳಲು
ಅಲಿಖಿತ ನಿಯಮಗಳ
ಸರಮಾಲೆ
ಅವಳಿಗೆ ಮಾತ್ರ!
ದೇಹ ಕಲ್ಲಾದರೂ
ಬದುಕಬಹುದು
ಮನವೇ ಕಲ್ಲಾದರೆ…?
ಅವಳು ಕಲ್ಲಾಗಬೇಕು,
ಅಗ್ನಿ ಪ್ರವೇಶಿಸಬೇಕು!
ಮೊದಲಿನಿಂದಲೂ ಹೀಗೆ
ನಿಯಮಗಳ ಸರಮಾಲೆ
ಅವಳಿಗೆ ಮಾತ್ರ!
ಫಲಿತಾಂಶದ ನಿರ್ಧಾರ
ಗಂಡಸಿನದ್ದು;
ಪರೀಕ್ಷೆಗಳೆಲ್ಲಾ ಅವಳಿಗೆ ಮಾತ್ರ!