ಅರೆ ಕ್ಷಣ ಇವಳ ಮೇಲೆ
ಕುಳಿತರೂ ಸಾಕು ಅರಿವೆ ತುಂಬ
ಅರಳುವ ಚಿತ್ತಾರ
ಮೊದಲ ಪ್ರೇಮಿ ಎದೆಯಲ್ಲಿ
ಕೊರೆದಿಟ್ಟು ಹೋದ ಗಾಯದ ಹಾಗೆ
ಎಷ್ಟು ಝಾಡಿಸಿದರೂ ಅದೆಲ್ಲೋ
ಚೂರು ಉಳಿಯುವ ಕಲೆ
ಒಂದು ಹನಿ ಜೀವ ಜಲ
ಸೋಕಿದರೂ ಸಾಕು
ಒಡಲ ತುಂಬ ಮೊಳಕೆ
ಮೊದಲ ಸ್ರಾವಕೇ ಪುಟ್ಟಿದೆದ್ದ
ಅಣುಗಳ ಸಂಯೋಗ ಸಾಫಲ್ಯ
ಬೆಳೆದೇ ಬೆಳೆಯುವ ನಿಶ್ಚಯ
ಒಂದು ಬೆರಳಲಿ ಮುಟ್ಟಿದರೂ ಸಾಕು
ಮೆತ್ತಿಕೊಂಡೇಬಿಡುವ ಅಂಟು
ಸಂಜೆಯ ಸಂದಿಯಲ್ಲಿ ಬರಸೆಳೆದು
ತನ್ನವನಾಗಿಸಿಕೊಂಡ ಪ್ರೇಮಿಯ
ಹಠ
ಒಂದೇ ಬಾರಿ ಮೈಮರೆತರೂ ಸಾಕು
ಆಕಾಶಮುಖಿ ಮೂಗ ಕೆಳಗೆ
ಬೀಳಿಸಿ ಮಾಡಿಕೊಳುವಾಗ ತನ್ನ ಪಾಲು
ಅಂದುಕೊಳ್ಳುತ್ತೇನೆ,
ಅಬ್ಬಾ!
ಅವಳ ಸೊಕ್ಕಿಗೆ ಸಾಟಿಯಿಲ್ಲ
ಈ ಸಾತ್ವಿಕ ಗರ್ವವ ನೀವು ದೂರುವ
ಹಾಗೂ ಇಲ್ಲ.