ಶ್ವೇತಾ ಎಂ ಯು ಮಂಡ್ಯ ಅವರು ಬರೆದ ಕವಿತೆ ‘ದ್ವೇಷ’

ದ್ವೇಷವಿಲ್ಲ ಸುಡಲು
ಬೆಂಕಿ ಮಾತ್ರ ಇದೆ
ನಿಮ್ಮ ಊರಿನ ಉಲ್ಕಾಪಾತಗಳ ಉಸಿರುಗಟ್ಟಿಸೋಣವೆಂದರೆ
ಪ್ರಾಣವಾಯು ಹೊರತು
ಮತ್ತೇನು ಉಳಿದಿಲ್ಲ

ಆಸೆಗಣ್ಣುಗಳಲ್ಲಿ ನೀವೆನ್ನ ತುಂಬಿ ಕೊಂಡರೆ ನಗಬೇಕು ಎನಿಸುತ್ತದೆ
ರಂಜಕ ಹಾಕಿ ಸುಡುವ ಮನಸ್ಸಾದರೂ ಸುಮ್ಮನಾಗುತ್ತೇನೆ
ಕಣ್ಣುಗಳು ನೋಡಿಕೊಳ್ಳಲಿ
ಒಮ್ಮೆ ನಿಮ್ಮನ್ನೇ ಎಂಬ ಆಸೆಯಿಂದ

ಬಾಯಾರಿದರೆ ಕುಡಿಯಬೇಕು ನೀರು,
ದಕ್ಕದ ನೀರ ಕೊಳಕೆಂದರೆ ಹೇಗೆ?
ಇಲ್ಲದಿರಬಹುದು ನಾಲಿಗೆಗೆ ಏಲುಬು ಹೃದಯಕ್ಕೆ ದಾರಿಗಳಿವೆ
ಸಂಯಮವೇ ಸಂಬಂಧ
ಗುಣಗಳೇ ಬೇಕು
ನಗುವಿಗೆ ಹಲವು ಮುಖ
ಬದಲಿ ಇಲ್ಲ ಜೀವಕ್ಕೆ

ಕತ್ತರಿಸಿದರೆ ಕರುಳ ಬಳ್ಳಿ,
ಬಳ್ಳಿಯೊಳಗಣ ಬಳ್ಳಿ
ನಿನ್ನ ಹೂ ಬಳ್ಳಿ
ನಿನ್ನ ಹಾಗೆ ನಾನು
ಎಲ್ಲರೊಳಗೊಂದು ಜೀವ
ಅದಕ್ಕೆ ಹೆಸರು ಬೇರೆ ಬೇರೆ
ಒಂದೇ ಅರ್ಥ ಅದು ಹೆಣ್ಣು

0
    0
    Your Cart
    Your cart is emptyReturn to Shop