ನನ್ನಮ್ಮನಿಗೆ
ಅದೆಂಥದ್ದೂ…ಮರಳು
ನಾ ಅವಳ
ಬದುಕ ಬರಹವಾಗಿಸಬೇಕಂತೆ…
ಬಯಲಾದ ಪದಗಳಲಿ
ಅವಳು ಕುಣಿಯುತ್ತಾಳಂತೆ..
ಅವಳೆದುರಿಗೆ ನನ್ನದೊಂದೇ
ಪ್ರಶ್ನೆ..
ಅಕ್ಷರಗಳಿಗೆ ನಿಲುಕದಂತೆ
ಜೀವಿಸಿದ ನಿನ್ನ
ಅದ್ಯೇಗೆ ಬಂಧಿಸಲಿ..
ನೀ ತೊಡದ ಒಡವೆಯಲಿ
ಅದ್ಯೇಗೆ ನಿನ್ನ ಸಿಂಗರಿಸಲಿ..
ಏ ಅಮ್ಮಾ
ಅನಕ್ಷರಸ್ಥಳು…ನಾನು
ನಿನ್ನ ಅನಂತ
ಬದುಕಿನೆದುರಿಗೆ
ವರ್ಣಮಾಲೆಗಳೇ ಇಲ್ಲ
ಅಲ್ಲಿ ಪದವಿಲ್ಲಾ
ಕ್ಷಯವಾಗುವ ಅಕ್ಷರಗಳಿಲ್ಲಾ..
ಏ ಅಮ್ಮಾ
ಕತ್ತಲನ್ನೆ ಹಗಲಾಗಿಸಿ
ಕಾಯವನ್ನೆ ದೀವಿಗೆಯಾಗಿಸಿ
ಪೊರೆದವಳ..
ಬಾಳ…ಚಿತ್ರವ
ರಚಿಸಲಾದೀತೇ…
ಗಡಿಗಳೇ ಇಲ್ಲದ
ಈ ರೇಖಾ ಚಿತ್ರವ..
ಚಿತ್ರಿಸಲಾದೀತೆ..,
ಕ್ಷಮಿಸಿ ಬಿಡೇ ಅಮ್ಮಾ
ನಿನ್ನ ಕೂಸಿಗೆ
ಮಡಿಲ ಮರೆಯಲಿ
ಮಿಯ್ಯುವುದು ತಿಳಿದಷ್ಟು
ಬಯಲಾಗುವ ಪರಿ ತಿಳಿದಿಲ್ಲ ಕಣೇ..