ಮಳೆಯೇ ಆಸರೆ ಪೈರಿಗೆ
ಭುವಿಯ ಆಸರೆ ನದಿಗಳಿಗೆ
ಬಳ್ಳಿಯ ಆಸರೆ ಹಣ್ಣಿಗೆ
ಒಲವಿನ ಆಸರೆ ಹೆಣ್ಣಿಗೆ
ಸುತ್ತಲೂ ಕವಚದಂತೆ ಕಾಯಲು
ರಕ್ತ ಸಂಬಂಧಿಗಳ ಆಸರೆ
ಹುಟ್ಟಿನಿಂದ ಜೋಪಾನ ಮಾಡಲು
ಹೆತ್ತವಳ ಆಸರೆ
ಕುಡಿ ಮೀಸೆ ಚಿಗುರಿದ ಹದಿಹರೆಯಕೆ
ಗೆಳತಿಯ ಆಸರೆ
ಪ್ರೀತಿಯಲಿ ಬಂಧಿಯಾದ ಹೃದಯಕೆ
ನೆನಪುಗಳೇ ಆಸರೆ
ಎಲ್ಲರ ನಡುವೆಯೂ ಕಾಡುವ ಒಂಟಿತನಕೆ
ಬೇಕಿದೆ ಸಂಗಾತಿಯ ಆಸರೆ
ಮದುವೆಯೆಂಬ ಬಂಧಕೆ ನಂಬಿಕೆಯೇ ಆಸರೆ
ಜೀವಗಳ ಬೆಸೆವ ಬಂಧಕೆ ಜನುಮಾಂತರದ ನಂಟಿನ ಆಸರೆ
ಅಪರಿಚಿತನಾಗಿ ಬಂದು
ಅಪರಿಮಿತ ಪ್ರೀತಿಗೆ ಸಾಕ್ಷಿಯಾದ ಸಂಗಾತಿಯೇ ಬದುಕಿಗೆ ಆಸರೆ
ನೋವುಗಳೆಷ್ಟೇ ಬರಲಿ
ಸಾಂತ್ವನವಾಗಿ ಸಾಗಬೇಕಿದೆ ಜೊತೆ ಜೊತೆಗೆಯೇ…
ಅಲ್ಪನಿಗೆ ಅಹಂಕಾರವೇ ಆಸರೆ
ಜ್ಞಾನಿಯ ಬುದ್ದಿಯವನ ಕೈಸೆರೆ .
ಎಂದೋ ನಶಿಸಿ ಹೋಗುವ ದೇಹದ ವ್ಯಾಮೋಹಕ್ಕೆ ಸಿಲುಕಿ,
ಓ ಮನುಜ ಮರೆತೆಯೇ ಮೇಲಿನವನೇ ಎಲ್ಲರಿಗೂ ಆಸರೆ
ಸಕಲ ಸೃಷ್ಟಿಯೂ ಭಗವಂತನ ನಾಟಕದ ಪಾತ್ರಧಾರಿಗಳೇ