ರಂಗನಾಥ ಕ ನಾ ದೇವರಹಳ್ಳಿ ಅವರು ಬರೆದ ಕವಿತೆ ‘ಬೆಳಕು ನಿಮ್ಮದೇ’

ಆಗಸವೇ ಮೋಡಗಳ ಬಾಡಿಗೆಗೆ ಪಡೆವಾಗ
ನಾವಿರುವ ನೆಲವು ನಮ್ಮದೇನು,
ಕಂತು ಕಂತಲಿ ಮಳೆಯ ಗಾಳಿ ಸುರಿಸುತಲಿರಲು
ನಾನೊಬ್ಬ ನಿಜಬಾಡಿಗೆಯವನು

ಆಸೆಗಳ ಆಮಿಷಕೆ ಬದುಕು ಮಾರಿರುವಾಗ
ಹಾಸಿಗೆಯೇ ಹರಿದು ಚೂರಾಗದೇನು
ಹರುಷದ ಖೂಳಿಗೆ ವರುಷವೇ ಬರಗಾಲ
ಬಡವನೆದೆ ಹೊಲದಲ್ಲಿ ಬೆಳೆಬರುವುದೇನು

ನಿನ್ನೆ ಸುಟ್ಟ ರೊಟ್ಟಿ ಇಂದು ಹಳಸಿರುವಾಗ
ನಂಬಿಕೆಯ ಹಸಿವು ನೀಗುವೆಯ ನೀನು
ಸುಟ್ಟ ಗಾಯದ ಮೇಲೆ ಉಪ್ಪು ಸುರಿದಿರುವಾಗ
ಕಾದ ಎಣ್ಣೆಗೆ ಇಂದು ನಾಳೆಯಾದರೇನು

ಹರಿದ ಅಪ್ಪನ ಅಂಗಿ ದುಡಿಮೆಯ ಸಂಕೇತ
ವ್ಯಾಧಿಯಿರದ ಕಾಯ ಮರೆವನೇನು
ತೇಪೆಹಾಕಿದ ರವಿಕೆ ತಾಯ್ತನವ ರಕ್ಷಿಸಲು
ನೋವುಗಳು ಬೆತ್ತಲಾಗಿ ನಿಂತವೇನು

ಹದವ ಮಾಡದ ನೆಲಕ್ಕೆ ಬೀಜ ಬಿತ್ತುತಲಿರಲು
ಯಾವ ಫಸಲನು ಬಯಸಿರುವೆ ನೀನು
ಬೇರೇ ಕೊಳೆತಿರುವಾಗ ಎಷ್ಟು ಮಳೆ ಸುರಿದರೂ
ಹದವುಂಡು ಪ್ರೀತಿಯ ನೀಡ್ವುದೇನು

ಮಾವು ಕಂಡು ಜಾಲಿ ಕರುಬುವುದ ನೋಡಿ
ಕಾಲಡಿಯ ಹುಲ್ಲು ಹುಟ್ಟದೇನು
ಅವರವರ ಬತ್ತಿಗೆ ಅವರೇ ಎಣ್ಣೆಯ ಶಕ್ತಿ
ನಿಸ್ವಾರ್ಥ ಸೇವೆಯ ಜಗದೀಪ ತಾನು

ಚಂದಾದಾರರಾಗಿ
ವಿಭಾಗ
2 ಪ್ರತಿಕ್ರಿಯೆಗಳು
Inline Feedbacks
View all comments
ಚಿದಾನಂದ ಮಾಯಾಚಾರಿ
1 July 2023 12:16

Nice

ಸುರೇಶ ಕಲಾಪ್ರಿಯಾ
1 July 2023 12:10

ತುಂಬಾ ಚೆನ್ನಾಗಿದೆ ಕವಿತೆ… 👆👌

0
    0
    Your Cart
    Your cart is emptyReturn to Shop