ಆ ದಿನ ನಾಗರ ಪಂಚಮಿಯ ಸಂಭ್ರಮ. ಪುಟ್ಟನ ಮನೆಯಲ್ಲಿ ಸಡಗರ ಮನೆಮಾಡಿತ್ತು. ಪುಟ್ಟನ ಅಮ್ಮ ಬೇಗ ಎದ್ದು ಪೂಜೆಗೆ ಎಲ್ಲವನ್ನು ಸಜ್ಜು ಮಾಡುತ್ತಿದ್ದರು. ಪುಟ್ಟ ಚೂರು ನಿಧಾನವಾಗೇ ಎದ್ದನು. ಅವನನ್ನು ಎದ್ದ ಕೂಡಲೇ ಸೆಳೆದಿದ್ದು ಅಡುಗೆ ಮನೆಯಿಂದ ಬರುತ್ತಿದ್ದ ಘಮಘಮ ಪರಿಮಳ. ಪುಟ್ಟ ಅಡುಗೆ ಮನೆಯತ್ತ ಹೆಜ್ಜೆಯಿಟ್ಟಾಗ ಅವನ ಕಣ್ಣಿಗೆ ಕಂಡಿದ್ದು ಹಲವು ಬಗೆಯ ಲಡ್ಡುಗಳು. ಅವನು ತಿನ್ನಲು ಕೈ ಚಾಚಿದನಾದರೂ ಅವರಮ್ಮ ದೇವರಿಗೆ ಸಮರ್ಪಿಸಿದ ನಂತರ ತಿನ್ನುವಂತೆ ತಿಳಿಸಿದರು. ಪುಟ್ಟನಿಗೆ ತನ್ನ ಬಯಕೆಯನ್ನು ಅದುಮಿಡಲಾಗಲಿಲ್ಲ. ಅಮ್ಮ ಸ್ನಾನಕ್ಕೆ ತೆರಳಿದಾಗ ಮೆಲ್ಲನೆ ಎರಡು ಲಾಡು ಎತ್ತಿಕೊಂಡನು. ಅಮ್ಮ ಹಿಂದಿರುಗಿ ಬಂದಾಗ ಏನೂ ಆಗದಂತೆ ನಟಿಸಿದನು.
ಪೂಜೆ ಯಾವುದೇ ತೊಡಕಿಲ್ಲದೇ ನೆರವೇರಿತು. ಅಮ್ಮನಿಗೆ ಹಲವು ಲಾಡುಗಳ ನಡುವೆ ಎರಡು ಮಾಯವಾಗಿದ್ದು ಅರಿವಿಗೆ ಬರಲಿಲ್ಲವಾದರೂ ಪುಟ್ಟನ ಮನಸ್ಸಿನಲ್ಲಿ ಏನೋ ಕಳವಳ. ಹಬ್ಬದ ಸಂತಸವನ್ನೆಲ್ಲಾ ಈ ಒಂದು ತಪ್ಪು ಹಾಳುಮಾಡಿತೆಂದು ಆತ ಆಲೋಚಿಸತೊಡಗಿದ. ಗೆಳೆಯರೊಂದಿಗೆ ಆಡಲು ಕೂಡ ಮನಸ್ಸಾಗಲಿಲ್ಲ. ಪುಸ್ತಕ ತೆರೆದು ಕುಳಿತಾಗ ಕದ್ದ ಎರಡು ಲಡ್ಡುಗಳೇ ಆತನಿಗೆ ಕಂಡವು.
“ಬಲಗೈಯಲ್ಲಿ ಗೀತೆ
ಎಡಗೈಯಲ್ಲಿ ರಾಟೆ
ಹಿಡಿದವರ್ಯಾರು ಗೊತ್ತೆ
ಅವರೇ ನಮ್ಮ ಗಾಂಧಿ
ಶ್ರೀ ಮಹಾತ್ಮ ಗಾಂಧಿ”
ಶೀಲ ಟೀಚರ್ ಆ ದಿನ ತರಗತಿಯಲ್ಲಿ ಹೇಳಿಕೊಟ್ಟ ಹಾಡು ಪುಟ್ಟನಿಗೆ ನೆನಪಾಯಿತು. ಅದು ಪುಟ್ಟನ ಮೆಚ್ಚಿನ ಗೀತೆಯಾಗಿತ್ತು. ಬಂದ ಅತಿಥಿಗಳ ಎದುರು ಹಲವು ಬಾರಿ ಈ ಗೀತೆ ಹಾಡಿ ಪುಟ್ಟ ಮೆಚ್ಚುಗೆ ಗಳಿಸಿದ್ದನು. ಗಾಂಧಿಯ ಕುರಿತು ತಿಳಿದುಕೊಳ್ಳುವ ಇನ್ನಿಲ್ಲದ ಕುತೂಹಲವನ್ನು ಈ ಗೀತೆ ಹುಟ್ಟಿಸಿತ್ತು. ತನ್ನ ಅಜ್ಜನಿಂದ ‘ಮೋಹನದಾಸ’ನು ‘ಮಹಾತ್ಮ’ನಾಗಿ ಬದಲಾದ ಕಥೆಯನ್ನು ಕೇಳಿ ತಿಳಿದುಕೊಂಡಿದ್ದನು. ಗಾಂಧಿಯ ಸತ್ಯ ಮತ್ತು ಸನ್ನಡತೆಯ ಗುಣಗಳನ್ನು ಪುಟ್ಟನ ಅಜ್ಜ ಹಾಡಿ ಹೊಗಳಿದ್ದರು. ನೀನು ಅವರಂತೇ ಬಾಳಬೇಕೆಂದು ತಿಳಿಹೇಳಿದ್ದರು.
ಆ ದಿನ ರಾತ್ರಿ ಮಲಗುವಾಗ ಭಯದಲ್ಲೇ ಪುಟ್ಟ ಚಿಕ್ಕ ಚೀಟಿಯೊಂದನ್ನು ಅಮ್ಮನ ಕೈಗಿತ್ತು ತಲೆ ಬಗ್ಗಿಸಿದ. ಅಮ್ಮನಿಗೆ ಪುಟ್ಟನ ನಡವಳಿಕೆ ಅರ್ಥವಾಗಲಿಲ್ಲ. ಚೀಟಿ ತೆರೆದು ನೋಡಿದಾಗ “ಎರಡು ಲಾಡು ಕದ್ದೆ” ಎಂದಿತ್ತು. ಅಮ್ಮನ ಕಣ್ಣುಗಳು ಪುಟ್ಟನ ಪ್ರಾಮಾಣಿಕತೆ ಮೆಚ್ಚಿ ತೇವವಾದವು. ಅಮ್ಮನ ಅಕ್ಕರೆಯ ತೋಳುಗಳಲ್ಲಿ ಪುಟ್ಟ ಬಂಧಿಯಾದ. “ಇನ್ನೊಮ್ಮೆ ಈ ತಪ್ಪು ಮಾಡಲಾರೆ ಅಮ್ಮ” ಪುಟ್ಟ ಅಳುತ್ತಾ ನುಡಿದನು.
ನಿರಂಜನ ಕೇಶವ ನಾಯಕ
ಆಂಗ್ಲ ಶಿಕ್ಷಕ
ಮಾದರಿ ಹಿರಿಯ ಪ್ರಾಥಮಿಕ ಶಾಲೆ, ವಿಟ್ಲ
ಬಂಟ್ವಾಳ, ದಕ್ಷಿಣ ಕನ್ನಡ