ಕಥೆಗಾರ ನಾಗರಾಜ ಕೋರಿ
ಅದು ಇಳಿಸಂಜೆ. ವಿಶ್ವವಿದ್ಯಾಲಯದ ಕ್ಯಾಂಪಸ್ಸು ಗಿಡಮರಗಳಿಂದ ಕಂಗೊಳಿಸುತಿತ್ತು. ಎಲ್ಲೆಲ್ಲೋ ಅಡವಿಅರಣ್ಯ ಸೇರಿದ ಹಕ್ಕಿಪಕ್ಕಿಗಳು ಬಂದು ಜಾತ್ರಿ ನಡೆಸಿದ್ದವು. ಒಣ ಗುಡ್ಡ ಗವ್ವಾರಿನಲ್ಲಿ ಬದುಕುಳಿದ ಕರಡಿ, ಹುಳಹುಪ್ಪಟೆ ನೆಲೆಯೂರಿ ಈ ಕ್ಯಾಂಪಸ್ಸಿಗೆ ಕಾಟ ಕೊಟ್ಟಿದ್ವು. ಕ್ಯಾಂಪಸ್ಸಿನ ತುಂಬ ಪೊದೆ ಜಾಸ್ತಿ ಇರುವುರಿಂದ ಹುಡುಗ ಹುಡುಗಿ ಹೊತ್ತುಗೊತ್ತಿಲ್ಲದೆ ಮರೆಯಾಗಿ ಕೂಡುತಿದ್ದರು. ಹಾಗೆ ಪಡ್ಡೆ ಹುಡುಗರಿಗೆ ಮರೆಯಾಗಿ ಧೂಮಪಾನ ಮಾಡಲಿಕ್ಕೆ ಅನುಕೂಲವಾಗಿತ್ತು. ವಿಶ್ವವಿದ್ಯಾಲಯವು ಇದನ್ನೆಲ್ಲಾ ಕಂಡು ‘ಸಂಜೆಹೊತ್ತು ಹೊರಗಡೆ ತಿರುಗಾಡಬೇಡಿ..’ ಎಂದು ಪ್ರತಿ ವಿಭಾಗಗಳಿಗೆ ಎಚ್ಚರಿಕೆಯ ನೋಟಿಸ್ ಹೊರಡಿಸಿತ್ತು. ಇದ್ಯಾವುದರ ಲೆಕ್ಕಕ್ಕಿಲ್ಲದೆ ಕ್ಯಾಂಪಸ್ಸಿನ ಹುಡುಗಹುಡಿಗಿಯರಂತು ಸಿಕ್ಕಾಪಟ್ಟೆ ಲಂಗುಲಗಾಮಿಲ್ಲದೆ ತಿರುಗಾಡತೊಡಗಿದ್ದರು.
ಕಮ್ಲಿ ಇನ್ಹತ್ತು ತಿಂಗಳು ಉಳಿದ ಪಿಹೆಚ್.ಡಿ ಅವಾರ್ಡಿಗಾಗಿ ಕೊನೆ ರಿಪೋಟ್‌ನ್ನು ಚೆನ್ನಾಗಿಯೇ ಮಾಡಿದ್ದಳು. ಆದ್ರೆ ತನ್ನ ಮಾರ್ಗದರ್ಶಕರು ಇವತ್ತೋ ನಾಳೆ ನಿವೃತ್ತಿ ತಗಳ್ಳುವ ಕಾಲ. ಚೆಂದನ ಮೈಕಟ್ಟಿನ, ಇಪ್ಪತ್ತೈದರ ಕಮ್ಲಿಯನ್ನು ಖಬರಗೆಟ್ಟವರಂತೆ ನೋಡಿ ಇನ್ನೊಂದು ವರ್ಷ ಕಮ್ಲಿಯ ಮುಖವಾದರೂ ನೋಡಿ ಕಾಲ ಕಳಿಯಬೇಕೆಂದು ನಾಳೆಯಾಗುವ ರಿಪೋಟ್‌ನ್ನು ಒಂದಿಷ್ಟು ಸುಧಾರಿಸಬೇಕೆಂದು ತಪ್ಪುತಡಿ ತಿದ್ದಿ ಕಮಿಟಿಯಲ್ಲಿ ಮುಂದೂಡಿಸಿದ್ದ. ಇದರಿಂದ ಕಮ್ಲಿಗೆ ‘ಈ ಗೈಡಿಗಿಷ್ಟು ಬೆಂಕಿಯಾಕ..’ ಅಂತ ತಥ್ಥೆನಿಸಿತ್ತು. ಹೇಗಾದರುಮಾಡಿ ಪಿಹೆಚ್.ಡಿ ಮುಗಿಸಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ ಯಾವುದಾದರು ಉದ್ಯೋಗದಲ್ಲಿರಬೇಕೆಂದು ರೂಮಲ್ಲ್ಲಿ ಕೂತು ಮುಂದೆ ಬರುವ ಕೊನೆ ರಿಪೋಟ್‌ನ್ನು ಅವಸರವಸರವಾಗಿ ಬರೆಯತೊಡಗಿ ಪಿಹೆಚ್.ಡಿ ವಿಷಯದ ಕುರಿತು ಪುಸ್ತಕ ಹುಡಕಾಡತೊಡಗಿದಳು. ತನ್ನ ರೂಮಲ್ಲಿ ಬರೀ ಸಿ.ಇ.ಟಿ ಪುಸ್ತಕಗಳೇ ಎದುರಾಗತೊಡಗಿದವು. ತಲೆ ಗರ‍್ರೆನ್ನತೊಡಗಿತು. ಅಪ್ಪ ಚೆಂದಪ್ಪ ಸಾಲಮಾಡಿ ಕೊಡಿಸಿದ ಕುರಾನ್‌ನಂಥ ಸಿ.ಇ.ಟಿ ಪುಸ್ತಕಗಳನ್ನು ಸಿಕ್ಕಾಪಟ್ಟೆ ತಗಂದು ರಾಶಿ ಹಾಕಿದ್ದಳು. ಇವುಗಳನ್ನು ನೋಡುತ್ತ ಮನಸ್ಸು ಯತ್ತಗೋ ಚಲಿಸಿದಂತಾಗಿ ರಿಪೋಟ್ ಬರೆಯಲು ಕೂತಾಕಿ ಒಂದು ಪುಟನೂ ನೆಟ್ಟಗ ಬರಿಯಲು ಆಗಲಿಲ್ಲ. ಸುಮ್ನೆ ಗರ ಬಡಿದವಳಂತೆ ಕೂತಳು. ಹಾಸ್ಟೇಲಿನ ತೆರಾಸಿನ ಮೇಲೆ ವಾರಿಗೆಯವರು ತಮ್ಮ ರಿಪೋಟ್ ನೀಟಾಗಿ ಮುಗಿಸಿದವರಂತೆ ನಾಳೆಯಾಗುವ ಅವಾರ್ಡಿಗಾಗಿ ತಮ್ಮ ಗೆಳ್ಯಾಗೆಳತಿಯರಿಗೆ ಬರಬೇಕೆಂದು ಮೊಬೈಲಿನಲ್ಲಿ ಒತ್ತಾಯಮಾಡಿ ನುಲಿನುಲಿದು ಕರೆಯುತ್ತಿರುವುದರಿಂದ ಕಮ್ಲಿಯ ಕಿವಿಗೆ ಗೂಟಬಡಿದಂತೆ ಕೇಳಿಸತೊಡಗಿತು. ಹೋಗಿ ಒಮ್ಮೆಲೆ ಎದಿಗೆ ಒದಿಯಬೇಕೆನಿಸಿತು. ಈ ದರಿದ್ರ ಹಾಸ್ಟೇಲಿನಿಂದ ತಾನೇ ತಣ್ಣೀರಾಗಿ, ಹೇಗೋ ಅತ್ತಿತ್ತ ಹೊರಳಾಡಿ ಒಂದೆರಡು ಪುಟ ಬರೆದಳು. ಬರವಣಿಗೆ ಅಪೂಟ ಸಾಗಲಿಲ್ಲ. ಮನಸ್ಸು ಎತ್ತಗೋ ಜಿಗಿಯತೊಡಗಿತು. ಮೈ ಭಾರವಾದಂತಾಗಿ ದಣಿವಾಗತೊಡಗಿತು. ತಟು ನೀರು ಕುಡಿದು, ಇನ್ನೆರಡು ದಿನದಲ್ಲಿ ರಿಪೋಟ್ ಮುಗಿಸೇ ತೀರಬೇಕೆಂದು ಹತ್ತಾರು ಸೀನಿಯರ್ ಹುಡುಗಿಯರು ಒದ್ದಾಡಿಹೋದ ಹರಕು ಬಣ್ಣದ ಗಾದಿಮ್ಯಾಲ ಪಿಹೆಚ್.ಡಿ ಆಧಾರಿತ ಪುಸ್ತಕವನ್ನು ಹಿಡಿದು ಒರಗಿದಳು. ಅಕ್ಷರಗಳ ಮೇಲೆ ಕಣ್ಣು ನೆಟ್ಟಂತೆ ಕಿಟಕಿಯಿಂದ ಒಳಸೂಸುವ ತಣ್ಣನೆಯ ಗಾಳಿಗೆ ಪೂರ ನಿದ್ದೆಗಿಳಿದಿರುವುದು ಗೊತ್ತಾಗಿರಲಿಲ್ಲ.
ಪಕ್ಕದ ರೂಮಿನಲ್ಲಿದ್ದ ಶಮಿತಾ ಎಂಬುವವಳು. ಸೂರಿ ರೂಪದಲ್ಲಿ ಅರ್ಧಮರ್ಧ ಕಂಡಂತೆ, ಕೊಕಾಸಿ ನಕ್ಕಂತೆ ರೂಮಿಗೆ ಬಂದವಳೇ ಕಮ್ಲಿಯ ಮೆತ್ತನೆ ತೊಡೆತುಂಬ ತುಟಿಗಲ್ಲ ಕುತ್ತಿಗೆಯನ್ನು ಮುದ್ದಾಡಿ ನಡುವಿಡಿದು ಅಮುಕಿದಳು. ಮೈಯೆಲ್ಲಾ ಉಗುರಾಡಿದಂತೆ ಚುಳಿಕಿಡಿದು ತಳಕಿ ಹಾವಿನಂತೆ ಒದ್ದಾಡಿ ಅರೆಗಣ್ಣು ತೇಲಿಸಿದಳು. ಆ ಕಾಡುಗತ್ತಲೆಯ ಗುಸುಗುಸು ಮಾತಾಡುವ ತೆರಾಸಿನ ಮೇಲೆ ಚಕ್ಕನೆ ಒಂಟಿಕಾಲಿನ ಒಂಟಿರೆಕ್ಕೆಯ ಕಾಡಹಕ್ಕಿಯೊಂದು ಆಕಾಶಕ್ಕೆ ತಟ್ಟನೆ ಜಿಗಿದಂತೆಯೇ ಆಯ್ತು. ಕಮ್ಲಿ ತನ್ನ ಪಾದಗಳಿಂದ ಶಮಿತಾಳಿಗೆ ಜಾಡಿಸಿ ಒದ್ದು, ತನ್ನ ಸರತಿಯಂತೆ ಶಮಿತಾಳನ್ನು ಅಂಗಾತ ಕೆಡವಿ, ತಾನು ನಡುವಿಡಿದು ಅಮುಕಿದಳು. ಒಂಟಿರೆಕ್ಕೆಯ ಕಾಡಹಕ್ಕಿಯೊಂದು ಆಕಾಶದಿಂದ ಸರಕ್ಕನೆ ಕೆಳಗಿಳಿದಾಗಲೇ, ಕಮ್ಲಿ ಹೌವ್ವಾರಿ ಕೆಟ್ಟ ಕನಸಿನಿಂದ ಎಚ್ಚರಗೊಂಡಳು. ತೊಡಿ ತಣ್ಣಗಾಗಿತ್ತು. ಈ ಕೆಟ್ಟ ಕನಸಿನಿಂದ ಅಸಹ್ಯವಾಗಿ ನಿದ್ದೆಬಾರದೆ ರೂಮಿನಿಂದ ಹೊರಬಂದಳು. ಆಗಲೇ ಬೆಳಕರಿದು ಹೂಬಿಸಿಲು ಮೂಡತೊಡಗಿತ್ತು. ಹಕ್ಕಿಗಳು ಚಿಂವ್‌ಗುಟ್ಟಿದ್ವು. ಅಲ್ಲಲ್ಲಿ ಪೊದೆಗಟ್ಟಿದ ಕಾಡುಮಲ್ಲಿಗೆ ವಾಸನೆಯು ಹೂಬಿಸಿಲಿಗೆ ಹರಿದಾಡತೊಡಗಿತ್ತು. ತೆರಾಸಿನ ಮೇಲೆ ಹೋದಳು. ಒಳಚಡ್ಡಿ, ಧೌನಿ, ಪ್ಯಾಂಟು, ಬ್ರಾ, ರ‍್ಚಿಪ್ ಹೂ ಆಕಾರವಾಗಿ ತಣ್ಣನೆಯ ಚುಮುಚುಮು ಗಾಳಿಗೆ ಹಸಿಬಿಸಿಯಾಗಿ ಹಾರಾಡತೊಡಗಿದ್ವು. ಇವುಗಳ ಜತೆಗೆ ಎಂದಿನಂತೆ ಬೆಳ್ಳಂಬೆಳಿಗ್ಗೆ ವಾರಿಗೆಯವರು ಪಿಸುಪಿಸು ಮಾತಾಡುವುದು, ಚಾಟ್ ಮಾಡುವುದು, ಇನ್ಸ್ಟಾಗ್ರಾಮಲ್ಲಿ ವಿಡಿಯೋ ತುಣುಕು ಕಳಿಸಲು ಸೋಗು ನಡೆದಿದ್ವು. ಹಾಗೆ ಶೌಚಾಲಯದಲ್ಲಿ ನೀರಿನ ಬಕೇಟ್, ಚೆಂಬಿನ ಸೌಂಡ್ ಶುರುವಾಗಿ ಸರಬರ ಕೇಳಿಸತೊಡಗಿತ್ತು. ಒಂದೀಟು ಸಿಡಿಮಿಡಿಗೊಂಡು ಎಲ್ಲಾ ಮುಗಿಸಿ, ರಾತ್ರಿಯೆಲ್ಲಾ ಗಪ್ಪ ಬಿದ್ದ ಮೊಬೈಲನ್ನು ಆನ್‌ಮಾಡಿದಳು. ಆನ್‌ಮಾಡಿದ್ದೇ ತಡ. ಟಿಂವ್‌ಟಿಸ್ಸಂತ ಮೊಬೈಲು ಬೆಂಕಿ ತಗಲಿದಂತೆ ಕುಣಿಯತೊಡಗಿತು. ಬೆಳ್ಳಂಬೆಳಿಗ್ಗೆ ಮೊನ್ನೆ ಮದ್ವೆಯಾದ ಶಮಿತಾ, ಹೊಸ ಹುರುಪಿನಲ್ಲಿ ಸೂರಿಯ ಪಟವನ್ನು ಡಿಪಿ ಮತ್ತು ವ್ಯಾಟ್ಸಪ್ ಸ್ಟೇಟಸ್‌ನಲ್ಲಿ ಇಟ್ಟು ಒಂದೆರಡು ಕೆಂಪನೆಯ ಲವ್ ಸಿಂಬಲ್ಲುಗಳನ್ನು, ಒಂದೆರಡು ಹೂಬೊಕ್ಕೆಗಳನ್ನು ಕುಟುಕಿದ್ದಳು. ಕಮ್ಲಿ ಇದನ್ನು ಏಕಚಿತ್ತವಾಗಿ ನೋಡಿ ಮೈಯ್ಯಾಗ ಚಳಮಳ ಕಡ್ಲಿ ಹುರದಂಗಾತು. ‘ರಾತ್ರಿ ಕಾಟ ಕೊಡದಲ್ಲದೆ ಇಲ್ಲಿಕೂಡ ಗಂಟುಬಿದ್ಲಲ ಈ ಚಿನಾಲಿ.. ನನ್ ಸೂರಿನ ತಲಿಕೆಡಿಸಿ ಮದ್ವೆಯಾದ ಈ ಬೋಗ್‌ಬಡಿಗೀಟು ಮಣ್ಣಾಕ..’ ಅಂತ ಮೊಬೈಲ್‌ನ್ನು ಪಟಾರನೆ ಎಸಿಯುವಷ್ಟು ಸಿಟ್ಟು ಒತ್ತರಿಸಿ ಬಂತು. ಸೂರಿ ಕೊಡಿಸಿದ ಮೊಬೈಲ್ ಆಗಿದ್ದರಿಂದ ಅಲ್ಲೆಲ್ಲೋ ಸಿಟ್ಟಿಲೆ ಕುಕ್ಕಿ ವಿಭಾಗಕ್ಕೆ ಬಂದಳು. ಅಲ್ಲಿಯೂ ಶಮಿತಾಳನ್ನು ಹೊಸ ಡ್ರೆಸ್ಸು, ಮಿಂಚಿನ ವ್ಯಾನಿಟಿಬ್ಯಾಗು, ಒಣಹುಲ್ಲಿನಂಥ ಕುದ್ರಿ ಜಡೆಯೊಂದಿಗೆ ಮಿರಮಿರ ಕಂಡಕೂಡಲೆ ಮತ್ತಷ್ಟು ತಲೆ ಗಿಮಿಗಿಮಿ ತಿರುಗತೊಡಗಿ ಅವಳ ಕಾಟ ತಡಿಲಾರದೆ ನುಣುಪಾದ ಕೂದ್ಲಿಡಿದು ಜಾಡಿಸಬೇಕೆನಿಸಿತು. ಯಾಕೋ ಬೇಡವೆನಿಸಿ ತನ್ನ ರೂಮಿಗೆ ರೆವ್ವನೆ ಬಂದಳು.
ರೂಮಿನಲ್ಲಿ ಮೊಬೈಲ್ ಬಿಟ್ಟಿದ್ದರಿಂದ ಅಪ್ಪ ಚೆಂದ್ರಣ್ಣ ಇಪ್ಪತ್ತು ಸಲ ಪೋನ್‌ಮಾಡಿದ್ದ. ಕಾಲ್‌ಲೀಸ್ಟ್ ಸರಪಳಿಯಂಗಿತ್ತು. ನೋಡಿದವಳೇ ಯಾಕೋ ‘ಅಪ್ಪನ ಜತಿಗೆ ಹಿಗ್ಗಿಲೆ ಮಾತನಾಡಬೇಕೆನಿಸಿತು. ಸ್ವಲ್ಪ ಮಾತಾಡಿದಳು. ಚೆಂದ್ರಣ್ಣ ಮೊದಲಿಗೆ ಕುಶಲೋಪಚಾರಿ ಮಾತಾಡಿ, ಕೊನಿಗೆ ಸಿರಿಯಸ್ಸಾಗಿ ‘ಆ ಊರೋರು ಮುಂದಲವಾರ ನೋಡಾಕ ರ‍್ತಾರಂತ.. ಈ ವರ್ಸ ನೀನು ಮದ್ವೆ ಮಾಡಿಕೊಳ್ಳಲಂದ್ರ ನಾನ್ ಎಣ್ಣಿಕುಡ್ದು ಸಾಯ್ತಿನಿ..’ ಅಂತ ಒಮ್ಮಿಗೆ ಅದೇ ಪುರಾಣ ಹೇಳತೊಡಗಿದ. ಕಮ್ಲಿ ಸಿಟ್ಟಿಲೆ ತನ್ನ ಬಲಗಾಲನ್ನು ಟಪ್ಪಂತಾ ನೆಲ ನಡುಗುವಂತೆ ಕುಟ್ಟಿ ‘ಅಪ್ಪಾ.. ನನಗ ಈಗ್ಲೆ ತಲಿ ಕೆಟ್ಟೋಗೈತಿ.. ನನ್ ಕಾಲಿನಮ್ಯಾಲ ನಾನ್ ನಿಲ್ಲವರಿಗೂ ಮದ್ವಿಗಿದ್ವಿಯಂತ ತಲಿ ಕೆಡ್ಸಬ್ಯಾಡ ಸುಮ್ನೆ ಪೋನಿಡು..’ ಅಂತೇಳಿ ಮೊಬೈಲ್ ಮಂಚಕ ಬೀಸಿದಳು. ಮಂಚದಮ್ಯಾಲ ಗಾದಿ ಇದ್ದಿದ್ದರಿಂದ ಮೊಬೈಲ್ ಕುಣಕಂತ ಮೂಲೆ ಸೀಳಿಕೊಂಡು ಜೋಡಿಸಿಟ್ಟ ಪುಸ್ತಕದ ಸಂದಿಗೆ ಪುಸಕ್ಕನ ಜಾರಿತ್ತು. ಕಮ್ಲಿ ಗಮನಿಸಲಿಲ್ಲ. ಚೆಂದ್ರಣ್ಣ ತಿರುಗ ಪೋನ್ ಮಾಡೋದು ಬಿಡಲಿಲ್ಲ. ಮೊಬೈಲ್ ರಿಂಗು ಬೆಕ್ಕಿನಂಗ ಗುರ್‌ಗುರ್ ಅನ್ನತೊಡಗಿತು. ಇದ್ರ ಸಹವಾಸ ಸಾಕೆಂದು ಮೊಬೈಲು ಸ್ವಿಚ್ಛಾಪಿಟ್ಟಳು.
ಕಮ್ಲಿ ಈ ರೀತಿ ಮಾಡುವುದರಿಂದ, ಮಂದಿ ಆಡೋ ಗುಸುಗುಸು ಮಾತಿನಿಂದ ಚೆಂದ್ರಣ್ಣ ಪೂರ ಬೇಸತ್ತಿದ್ದ. ಕಮ್ಲಿಗೆ ನೌಕರಿ ಸಿಗಲಿಲ್ಲಂದ್ರ ಪರವಾಯಿಲ್ಲ. ಮನೆಲಿದ್ದ ಚೂರುಪಾರು ಆಸ್ತಿಯಿಂದ ಒಳ್ಳೆ ಮನೆತನಕ್ಕೆ ಕೊಟ್ಟು ಕೈ ತೊಳೆದುಕೊಳ್ಳಬೇಕೆಂದು ‘ಕನ್ಯೆ ನೋಡಾಕ ರ‍್ರೆಂದು..’ ಅಲ್ಲಿಲ್ಲಿಯೂ ತಿಳಿಸಿದ್ದ. ಒಳ್ಳೊಳ್ಳೆಯ ಮನೆತನದವರು ಬರಲು ಸೂಚನೆ ನೀಡಿದ್ದರು. ಚೆಂದ್ರಣ್ಣ ಉಮೇದಿಯಿಂದ ಪ್ರತಿದಿನ ಕಮ್ಲಿಗೆ ಪೋನಾಯಿಸುತಿದ್ದ. ಕಮ್ಲಿಗೆ ಮದ್ವೆ ಎಂದರೆ ಸಾಕು. ಚಪ್ಪಡಿಕಲ್ಲು ತಲೆಮೇಲೆ ಬಿದ್ದವರಂತೆ ಗೋಗರಿಯತೊಡಗಿದಳು. ಆದ್ರೂ ಚೆಂದ್ರಣ್ಣ ‘ನಿನ್ ಬಿಟ್ಟು ನನಗ ಯಾರ್ ಐದಾರ.. ನಿಮ್ಮವ್ವ ಇದ್ದಿದ್ರ ಇಷ್ಟು ಕಾಟ ಕೊಡ್ತಿದ್ದಿಲ್ಲ.. ನಿಮ್ಮವ್ವ ನೀ ಸಣ್ಣಕಿದ್ದಾಗಲೇ ಸುಡುಗಾಡು ರೋಗಬಂದು ಸತ್ತೋತು.. ಮಂದಿ ಇನ್ನಾ ಸಣ್ಣ ವಯಸ್ಸು ಐತೆ ಇನ್ನೊಂದು ಮದ್ವಿ ಮಾಡಿಕೊಂಡು ಬಿಡು ಅಂದ್ರು, ನಾನೇ ಮಗಳಿಗೆ ತೊಂದ್ರೆ ಆಗುತ್ತಂತ ನಿನ್ನ ಇಲ್ಲಿವರೆಗೆ ಓದಿಸಿಕೊಂಡು, ಅಡಿಗಿ ಮನ್ಯಾಗ, ಕೈಬಾಯಿ ಸುಟಕಂದು ಬಂದಿನಿ, ನನಗ ಈಗೀಗ ಅರಾಮಿಲ್ಲ.. ಇವತ್ತು ನಾಳೆ ಅನ್ನುವಂಗಿದಿನಿ.. ನೀನು ಈವರ್ಸ ಮದ್ವೆಯಾಗು.. ನಾನು ಪೂರ ಹಗುರಾಗ್ತಿನಿ.. ಆಗಲ್ಲಂದ್ರ ನಾನೇ ಎಣ್ಣಿಕುಡ್ದು ಸಾಯ್ತಿನಿ..’ ಅಂತ ಕಣ್ಣೀರು ಹಾಕುವುದು ರೂಢಿ ಮಾಡಿಕೊಂಡಿದ್ದ.
ಕಮ್ಲಿ ಕೊನಿಗೆ ಮೊಬೈಲ್ ಆನೇ ಮಾಡಲಿಲ್ಲ. ಹೊರಗಡೆ ಹೊರಟಳು. ಅಲ್ಲಿನೂ ಶಮಿತಾ ರಾಹುಗಾಲ ಒಕ್ಕರಿಸಿದಂತೆ ಧುತ್ತನೆ ಎದುರಾದಳು. ‘ಇಲ್ಲಿನೂ ಗಂಟುಬಿದ್ಲಲ ಈ ದರಿದ್ರದೋಳು.. ಗಂಡುಬೀರಿ ಮಾಡಿದಂಗ ಮಾಡತಾಳ..’ ಅಂತ ಕಮ್ಲಿ ಧಗಧಗ ಹೊರಟಳು. ಶಮಿತಾ ಸಹಜವಾಗಿ ‘ಕಮ್ಲಕ್ಕಾ.. ಟೀ ಆಯ್ತೆ..’ ಅಂತ ನುಣುಪಾಗಿ ಕೇಳಿದಳು. ಕಮ್ಲಿ ಹಾಂ..ಹೂಂ.. ಅನ್ನದೆ, ದುರುಗುಟ್ಟಿ ಏಕಾ ಸಾಗಿದಳು. ಶಮಿತಾ ಗಾಬರಿಯಾಗಿ ‘ಅಂತದ್ದೇನಾಯ್ತಕ್ಕ ನನ್ನಿಂದ..? ಅಂತ ಕರುವಿನಂತೆ ಹಿಂದಿಂದೆ ತುಸುದೂರ ಬೆನ್ನತ್ತಿದಳು. ಕಮ್ಲಿ ತಿರುಗ ನೋಡದೆ ಹಾಸ್ಟೇಲಿನ ಎದುರಿಗಿದ್ದ ಸಣ್ಣಸೇತುವೆ ಮೇಲೆ ಕೂತಳು. ಎದಿರುಬಿದಿರು ವಾಯು ಸಂಚಾರಕ್ಕೆಂದು ಲೀಲಾಜಾಲವಾಗಿ ಅಡ್ಡಾಡುತಿದ್ದ ಹರೆ ಹುಡುಗರು ಕಮ್ಲಿನ ನೋಡಿ ‘ಈಗ ನೋಡ್ ಕಮ್ಲಿ ಒಣ ಕಟಿಗಾಗ್ಯಾಳ.. ಆಗ ಸೂರಿ ಎಲ್ಲೆಬೇಕರ ರ‍್ಕಂಡೋಗಿ ಬೇಸು ಗುಮ್ಮತಿದ್ದ.. ಬೇಕಾದ್ದು ತಿನ್ಸಿ ಡುಮ್ಮಿನ ಮಾಡಿದ್ದ ಈಗೇನೈತಿ ಒಣ ಹೇಲಂತ..! ಗುಸುಗುಸು ಮಾತನಾಡುವುನ್ನು ಕೇಳಿಸಿಕೊಂಡು ಬೆಂಕ್ಯಾಕಿ ಸುಮ್ಮನಾದ್ಲು. ಆದ್ರ ಸಿಟ್ಟು ತಂಪಾಗಿರಲಿಲ್ಲ. ಕಮ್ಲಿಗೆ ಈ ಹುಡುಗ್ರು ತುಡುಗು ಮಾತುಗಳನ್ನ, ಸೂರಿನ ಮದ್ವಿ ಮಾಡಿಕೊಂಡ ಶಮಿತಾಳನ್ನು ನೋಡಿದಾಗಿನಿಂದ ಸೂರಿ ಎಂಬೋನು ಮತ್ತೆಮತ್ತೆ ನೆನಪಾಗಿ ಮೈಗೆ ದೆವ್ವ ಒಕ್ಕರಿಸಿದಂತಾಗಿ ಅಳತೊಡಗಿದಳು. ಸಮಾಧಾನಿಸಲು ಅಲ್ಲಿ ಒಂದು ನರಪಿಳ್ಳೆನೂ ಸುಳಿಲಿಲ್ಲ. ಸಣ್ಣಸೇತುವೆ ಕೆಳಗೆ ತಿಳಿನೀರು ಮಾತ್ರ ತೆಳ್ಳಗೆ ಜುಳುಜುಳು ಓಡುತಿತ್ತು. ಕಾಲುವೆ ದಂಡೆ ಮೇಲಿದ್ದ ಹಸಿಪೊದೆಗಳಲ್ಲಿ ಗುಬ್ಬಿಗಳ ಕಿವುಚಾಟ ಸರಾಗವಾಗಿ ನಡೆದಿತ್ತು. ತಾನೇ ಹತೋಟಿಗೆಬಂದು ಸುತ್ತಲು ಕಣ್ಣಾಡಿಸಿದಳು. ಮೈಮನಸ್ಸು ತುಸು ಹಗುರವೆನಿಸಿ ಸೂರಿಯನ್ನು ನೆನಪಿಸಿಕೊಂಡಳು. ತನ್ನನ್ನು ಇಲ್ಲೇ ಬಿಗಿಯಾಗಿ ಅಪ್ಪಿ, ಮೆಲುವಾಗಿ ಮುತ್ತುಕೊಟ್ಟ ಕ್ಷಣ. ಬೇಡಬೇಡವೆಂದರೂ ಮತ್ತೆ ನೆನಪಾಗಿ ಒತ್ತರಿಸಿ ಬರತೊಡಗಿತು. ಸೂರಿ ತನ್ನ ಪಿಹೆಚ್.ಡಿಯ ಕೊನೆ ಹಂತದಲ್ಲಿದ್ದಾಗ ಕಮ್ಲಿ ಎಂ.ಎ ಮುಗಿಸಿ, ಪಿಹೆಚ್.ಡಿ ಪ್ರವೇಶ ಪರೀಕ್ಷೆಯನ್ನು ಪಾಸಾಗಿ ಸೀಟು ಗಿಟ್ಟಿಸಿಕೊಂಡಿದ್ದಳು. ಅದೇ ವಿಭಾಗದಲ್ಲಿದ್ದ ಸೂರಿ ಕಮ್ಲಿಯನ್ನು ಹೇಗೋ ಪರಿಚಯ ಮಾಡಿಕೊಂಡು ಪಿಹೆಚ್.ಡಿಯ ಅಡ್ಮಿಶನ್ ಕಾಗದ ಪತ್ರಗಳನ್ನು ಮಾಡಿಸಿಕೊಡಲು ಬೈಕಿನ ಮೇಲೆ ಕೂರಿಸಿಕೊಂಡು ಒಂಚೂರು ಸಹಾಯ ಮಾಡಿದ್ದ. ಇದರ ಮುಲಾಜಿಗೆ ಸೂರಿ ಜತೆ ನಾಲ್ಕೈದು ದಿನ ಅನೋನ್ಯವಾಗಿದ್ದಳು. ಚೊಚ್ಚಲ ಪ್ರೀತಿಯೂ ಅಂಕುರಿಸತೊಡಗಿತ್ತು. ಮೊದಮೊದಲು ಸೂರಿ ‘ನಾನಿನ್ನ ಆಕಾಶ, ಭೂಮಿಯಗಲದಷ್ಟು ಪ್ರೀತಿಸ್ತಿನಿ, ಜೀವ್ನಪೂರ್ತಿ ಸಾಕ್ತಿನಿ..’ ಹಾಗೆ ಹೀಗೆ ಗೋಪುರಕಟ್ಟಿ ಪಿಹೆಚ್.ಡಿಯ ಮೂರುವರ್ಷಗಳ ಕಾಲ ಅಲ್ಲಿಲ್ಲಿಗೆ ಕರಕೊಂಡು ಹೋಗಿ ಹಸಿಹಸಿಯಾಗಿ ಎಲ್ಲನೂ ಮುಗಿಸಿಕೊಂಡಿದ್ದ. ಹೀಗಾಗಿ ಕಮ್ಲಿ ‘ನಿನ್ನೇ ಮದ್ವೆ ಆಗ್ತಿನಿ’ ಅಂತ ಪೂರ ಒಪ್ಪಿಕೊಂಡಿದ್ದಳು. ಈ ಸುದ್ದಿ ಹಾಸ್ಟೇಲಿನಿಂದ ವಿಭಾಗದವರೆಗೆ ಹರಡಿ ಮನಿಗೆ ಬಿರುಗಾಳಿಯಂತೆ ಅಪ್ಪಳಿಸಿತು. ಇದನೆಲ್ಲಾ ನೋಡಿ ಕ್ಯಾಂಪಸ್ಸಿನಲ್ಲಿದ್ದ ಕಮ್ಲಿಯ ಬ್ಲಡ್ ರಿಲೇಶನ್ ಗೆಳೆಯರೇ ತಮಗೆ ಸಿಗಲಾರದ ಹೊಟ್ಟೆಕಿಚ್ಚಿಗೆ ಕಡ್ಡಿ ಗುಡ್ಡಮಾಡದಲ್ಲದೆ ಸೂರಿ ಮುಂದ ‘ನಿನ್ನ ಒದ್ದಾಕ್ತಿವಿ, ಕೊಂದಾಕ್ತಿವಿ, ಇನ್ನೊಂದು ಸಲ ಕಮ್ಲಿ ಜತೆ ಕಂಡ್ರೆ..’ ಅಂತ ಖಾರವಾಗಿ ಎಚ್ಚರಿಸಿದ್ರು. ಸೂರಿ ಇದರಿಂದ ಹೆದರಿ ‘ಈ ಕಮ್ಲಿ ಸಹವಾಸನೇ ಸಾಕೆಂದು ಗುಡ್‌ಬಾಯ್ ಹೇಳಿ, ಮೊದಲೇ ನೆಲೆಯೂರಿದ್ದ ತಮ್ಮ ಜಾತಿಯ ಶಮಿತಾಳನ್ನು ಮದ್ವೆಯಾಗಿ ಪಿಹೆಚ್.ಡಿ ಅವಾರ್ಡ್ ತಗಂದು ಶಮಿತಾಳನ್ನು ಪಿಹೆಚ್.ಡಿ ಮಾಡಲಿಕ್ಕೆ ವಿಶ್ವವಿದ್ಯಾಲಯದಲ್ಲಿಯೇ ಬಿಟ್ಟು ತಾನು ಊರಲ್ಲಿ ಉಳಿದಿದ್ದ. ಆಗಾಗ ವಿಶ್ವವಿದ್ಯಾಲಯಕ್ಕೆ ಬಂದ್ರೂ ಕಮ್ಲಿಗೆ ಬೇಟಿ ಆಗ್ತಿರಲಿಲ್ಲ. ಹೆಂಗ ಬಂದವನು ಹಂಗೇ ಹೋಗಿಬಿಡುತಿದ್ದ. ಆದ್ರ ಸೂರಿ ಬಂದುಹೋಗಿದ್ದು ಕಮ್ಲಿಗೆ ಗೊತ್ತಾಗುತಿತ್ತು. ಆಗ ಸಂಕ್ಟ ಅಷ್ಟಿಷ್ಟಾಗುತ್ತಿರಲಿಲ್ಲ..! ಈ ನೆನಪು ಕಮ್ಲಿಗೆ ಕಹಿಯಾಗಿ.. ‘ಬೇವರ್ಸಿ ಮಗನ್‌ತಂದು ಈ ಗಂಡುಜಾತಿನೇ ಇಷ್ಟು, ನಂಬಲೇಬರ‍್ದು..’ ಅಂತ ಸಣ್ಣಸೇತುವೆ ಮೇಲೆ ಕೂತು ಬಾಳಹೊತ್ತು ಕಣ್ಣೀರಾಕಿದಳು. ಅಲ್ಲಿ ಕತ್ತಲು ಆವರಿಸಿದ್ದೇ ಗೊತ್ತಾಗಿರಲಿಲ್ಲ. ಹಾಸ್ಟೇಲ್‌ಗೆ ಬಂದು ಹಸಿಬಿಸಿ ಚಪಾತಿ, ಅನ್ನಸಾರು ಬೇಕಿಲ್ಲದೆ ಉಂಡಳು. ದಿನಲೂ ಇದೇ ಉಂಡುಉಂಡು ನಾಲಿಗೆ ರುಚಿಗೆಟ್ಟು, ಹೊಟ್ಟೆಂಬುದು ಖಾಲಿನೇ ಉಬ್ಬಿ ಸಂಕಟವಾಗುತಿತ್ತು. ಅಲ್ಲಿದ್ದ ಇನ್ನುಳಿದ ಹುಡುಗಿಯರು ಊಟಮಾಡದೆ ನಾಳಿನ ಕೊನೆ ರಿಪೋಟ್ ರಡಿ ಮಾಡಲು ಕೂತಿದ್ದರು. ಇನ್ನುಳಿದವ್ರು ಬೋರಲು ಬಿದ್ದು ಕಾಲನ್ನು ಹರೆ ಹಾವಿನಂಗ ತಳಿಕಿ ಹಾಕಿಕೊಂಡು ಏಕಾಸುಮ್ಮನೆ ಚಾಟ್ ಮಾಡುತಿದ್ದರು. ಇದನ್ನು ನೋಡಿದ ಕಮ್ಲಿಗೆ ಒಮ್ಮೆಲೆ ಮಾರ್ಗದರ್ಶಕರ ಮೇಲೆ ಸಿಟ್ಟು ಒತ್ತರಿಸಿ ಬಂತು. ದಡದಡ ಹೋಗಿ ರಿಪೋಟ್ ಬರಿಯಲು ಕೂತಳು. ರಿಪೋಟಿನ ಪ್ರತಿ ಅಕ್ಷರದಲಿ ಸೂರಿ ಮತ್ತು ಮಾರ್ಗದರ್ಶಕರು ಮೋಸ ಮಾಡಿದಂತೆ ಅಕ್ಷರಗಳು ಎಡಬಲಕ್ಕೆ ತಕ್ಕುಟಿ ಕುಣಿದಂತಾಯಿತು. ಜತಿಗೆ ಅಪ್ಪನೂ ಎದರುಬಂದು ರಿಪೋಟನ್ನು ಹರಿದು ತಿಪ್ಪೆಗೆ ಎಸೆದು ಕೂತಂಗಾತು. ಕೊಕಾಸಿ ನಕ್ಕಂಗಾತು. ಒಂದಕ್ಷರಕ್ಕೂ ಬೆರಳಾಡಲಿಲ್ಲ. ಕಣ್ಣೀರು ದಳದಳ ಸುರಿಸಿದಳು. ರಿಪೋಟ್ ನೆಂದಿತು. ರಿಪೋಟ್‌ನ್ನು ಎತ್ತಗೋ ಬೀಸಿ ಎಸೆದು ಅದೇ ಹರಕು ಗಾದಿಮೇಲೆ ಹೆಣದಂತೆ ದುಪ್ಪನೆ ಬಿದ್ದು ಅಳುತ್ತಾ ಒದ್ದಾಡಿದಳು. ಮಂಚ ಕರಕ್‌ಕಿರಕ್ ಅಂತ ತಾನು ಅತ್ತಂತೆ ಅಳತೊಡಗಿತು. ರೂಮಿನ ಕಿಟಕಿಗಳು ಸ್ವಲ್ಪ ತೆರಕೊಂಡು ಹಳೆ ಮುದಿಕಿಯರಂತೆ ಗಾಳಿಗೆ ಮುನುಗಾಡುತಿದ್ದವು ಎದುರಿಗೆ ನೇತಾಕಿದ್ದ ಗಡಿಯಾರ ಸವತ್ತಾಗಿದೆ ಎಂದು ಟಿಕ್‌ಟಿಕ್ ಮಾಡತೊಡಗಿತ್ತು.
ಅತ್ತತ್ತು ಸಾಕಾಗಿ ಅಲ್ಲೆಲ್ಲೋ ಬಿದ್ದ ಮೊಬೈಲ್‌ನ್ನು ಆನ್‌ಮಾಡಿದಳು. ಚೆಂದ್ರಣ್ಣ ಮತ್ತೆ ಇಪ್ಪತ್ತುಸಲ ಕಾಲ್ ಮಾಡಿದ್ದ ಮೆಸೇಜುಗಳು ಪಿಹೆಚ್.ಡಿಯ ಪುಟಗಳಂತೆ ಒಂದರಮೇಲೊಂದು ತೂರಿ ಬರತೊಡಗಿದ್ವು. ಅದರಗೊಂದು ಬಣ್ಣದ ಪುಟದಂತೆ ಯಾರದೋ ಹೊಸ ನಂಬರಿನಿಂದ ಕಾಲ್ ಪಸಕ್ಕನ ಬಂತು. ಸರಕ್ಕನ ಎತ್ತಿ ಹಲೋ.. ಎಂದಳು. ಯಾರೋ.. ತಡವರಿಸುತ್ತ ‘ನಿಮ್ಮಪ್ಪ ಈಗಾಗ ಅನ್ನುವಂಗ ಆಸ್ಪತ್ರೆಲಿದಾನೆ, ಬೇಗ ಬಂದು ಮುಖವಾದ್ರು ನೋಡಿ..’ ಎಂದು ಹೊಸ ದನಿಯೊಂದು ಗದರಿಸಿದಂತೆ ಕೇಳಿಸಿತು. ಇನ್ಯಾರೋ ಮುಸುಮುಸು ಅತ್ತಂತೆ ಕೇಳಿಸಿತು. ಕಮ್ಲಿಯ ಕಣ್ಣು ಒಮ್ಮೆಲೆ ಮಸುಮಸುಕಾಗಿ ದಿಗ್ಗನ ಕೂತಳು…! ಸುತ್ತಲು ಚಪ್ಪಾಳೆ ದರಗುಟ್ಟಿ ಕೇಳಿಸಿದಂತೆ ಆಯ್ತು. ‘ಘನವೆತ್ತ ರಾಜ್ಯಪಾಲರಿಂದ ಪಿಹೆಚ್.ಡಿ ಅವಾರ್ಡ್ ಕಮ್ಲಿಯೂ ಸ್ವೀಕರಿಸಬೇಕೆಂದು ಯಾರೋ ಆಸ್ಯಾಡಿದಂತೆ ಕೇಳಿಸಿತು. ಕಮ್ಲಿ ಸರಕ್ಕನ ಎದ್ದಳು. ಎದ್ದವಳೆ ಹಾಸ್ಟೇಲ್ ದಾಟಿಕೊಂಡು ಬೀದಿಗಿಳಿದು ಓಡತೊಡಗಿದಳು. ದಮ್ಮು ಹತ್ತಿತು. ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಕಾಲುಗಳು ಅಮೂರ್ತ ಚಿತ್ರ ಬಿಡಿಸುತ್ತ ಮತ್ತಷ್ಟು ಓಡತೊಡಗಿದವು. ದಣಿವು ತನ್ನ ಕರ್ತವ್ಯ ಮರೆತಿತ್ತು. ಒಲ್ಲದ ಪಿಹೆಚ್.ಡಿ, ಸೂರಿ, ಮಾರ್ಗದರ್ಶಕರು, ಮದ್ವೆ, ಹಾಸ್ಟೇಲು, ವಾರಿಗೆಯವರನ್ನು ಹಿಂದಿಕ್ಕುತ್ತ ಸುತ್ತಲೂ ಕತ್ತಲು ಮುಚ್ಚಿದ ಕಾಲುದಾರಿಗಳಲಿ ಎತ್ತಗೋ ತಲುಪಬೇಕೆನ್ನುವ ಉಮೇದಿಯಲ್ಲಿ ಚಿಗರಿಯಂತೆ ಓಡತೊಡಗಿದಳು. ಹಿಂದಿAದ ಬಾಲ ಉಂಗುರದ ಚಂದಿರ ಬೆನ್ನಟ್ಟಿದ್ದ.
ನಾಗರಾಜ ಕೋರಿ
ರಾಯಚೂರು ಜಿಲ್ಲೆ, ಸಿಂಧನೂರು ತಾಲೂಕಿನ ಬನ್ನಿಗನೂರು ಗ್ರಾಮ. ಸದ್ಯ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿ. ‘ತನುಬಿಂದಿಗೆ’ ಕಥಾಸಂಕಲನ, ‘ಬುದ್ಧಗಿತ್ತಿಯ ನೆನಪು’ ಕವನಸಂಕಲನ ಪ್ರಕಟಿತ ಕೃತಿಗಳು. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕತೆ, ಕವಿತೆ ಪ್ರಕಟಗೊಂಡಿವೆ.