ಸಂದರ್ಶನ: ಸೂರ್ಯಕೀರ್ತಿ
ಜ.ನಾ. ತೇಜಶ್ರೀ ಅವರ ಬದುಕು-ಬರೆಹ:
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿಯವರೊಂದಿಗೆ..
ಜ.ನಾ.ತೇಜಶ್ರೀಯವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಮತ್ತು ಭಾಷಾಂತರದಲ್ಲಿ ಡಿಪ್ಲೊಮೊ ಪದವಿ ಪಡೆದಿದ್ದಾರೆ. ಯು.ಆರ್.ಅನಂತಮೂರ್ತಿಯವರ ‘ಸುರಗಿ’ ಆತ್ಮಕತೆಯ ಸಂಯೋಜನೆ ಮತ್ತು ನಿರೂಪಣೆ ಮಾಡಿದ್ದಾರೆ. ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯು ಸಂಶೋಧನೆಗಾಗಿ ನೀಡುವ ಜೂನಿಯರ್ ಫೆಲೋಶಿಪ್ ಪಡೆದಿದ್ದಾರೆ. ಹಾಸನದ ಸಂತಫಿಲೋಮಿನಾ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂದಿರಾಗಾಂದಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ʼಟ್ಯಾಗೋರ್ ಪೀಠʼದಲ್ಲಿ ಸಂಶೋಧನಾ ಸಹಾಯಕಿಯಾಗಿ ಸೇವೆ ಸಲ್ಲಿಸಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಟಿ.ಎಸ್.ರಂಗರಾವ್ ದತ್ತಿ ಬಹುಮಾನ, ಪುತಿನ ಕಾವ್ಯ ನಾಟಕ ಪುರಸ್ಕಾರ, ವಸುದೇವಭೂಪಾಲಂ ದತ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ದತ್ತಿ, ಡಿ.ಸಿ.ಅನಂತಸ್ವಾಮಿ ದತ್ತಿ ಪ್ರಶಸ್ತಿ, ಮುಂಬೈನ ಸುಶೀಲ ಎಸ್.ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಅಮ್ಮ ಪ್ರಶಸ್ತಿ, ಜಿ.ಎಸ್.ಎಸ್.ಕಾವ್ಯ ಪ್ರಶಸ್ತಿ, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ ಮತ್ತು ‘ಶ್ರೀವಿಜಯ ಸಾಹಿತ್ಯ ಪ್ರಶಸ್ತಿ’ಗಳು ಅವರಿಗೆ ಸಂದಿವೆ.
ಬಾಲ್ಯದಲ್ಲಿ ಜ.ನಾ.ತೇಜಶ್ರೀಯವರು…
ಪ್ರಕಟಿತ ಕವನ ಸಂಕಲನಗಳು
1. ಲಯ
2. ತಿಳಿಗೋಳ
3. ಅವನರಿವಲ್ಲಿ
4. ಕತ್ತಲೆಯ ಬೆಳಗು
5. ಉಸ್ರುಬಂಡೆ
6. ಕ್ಯಾಪ್ಟನ್ ಕವಿತೆಗಳು
7. ಯಕ್ಷಿಣಿ ಕನ್ನಡಿ
8. ಮಾಗಿಕಾಲದ ಸಾಲುಗಳು
ಅನುವಾದಿತ ಕೃತಿಗಳು
1. ಭಾರತ ರಾಷ್ಟ್ರೀಯ ಚಳುವಳಿ
2. ಚೀನಿ ತತ್ವಶಾಸ್ತ್ರದ ಕತೆ
3. ಕಡಲ ತಡಿಯ ಗುಡಾರ
4. ಬೆತ್ತಲೆ ಫಕೀರ
5. ಇರುವೆ ಮತ್ತು ಪಾರಿವಾಳ
6. ರೆಕ್ಕೆಯೊಡೆದ ಮುಗಿಲು
7. ‘ವೋಲೆ ಸೋಯಿಂಕಾನ ಸಾವು ಮತ್ತು ರಾಜನ ಕುದುರೆ ಸವಾರ’ ನಾಟಕದ ಅನುವಾದ.
8. ಚಕ್ರವರ್ತಿ ಬಾಬರನ ಪ್ರಾರ್ಥನೆ ಮತ್ತು ಇತರ ಕವಿತೆಗಳು
ಕಥಾಸಂಕಲನ
1. ಬೆಳ್ಳಿ ಮೈ ಹುಳ
ಸಂಪಾದಿತ ಕೃತಿಗಳು
1. ಕವಿ ರವೀಂದ್ರ
2. ಬೆಟ್ಟದ ಮೇಲಿನ ಬೆಳಕು
1. ನಿಮ್ಮ ಬಾಲ್ಯದ ಜೀವನದ ಬಗ್ಗೆ ಹೇಳುವುದಾದರೆ?
ನನ್ನ ಬಾಲ್ಯಕಾಲದ ಕೆಲವು ವರ್ಷಗಳು ಒಟ್ಟುಕುಟುಂಬದಲ್ಲಿ ಕಳೆದವು. ತುಂಬಿದ ಮನೆ, ಹತ್ತಾರು ಸಂಬಂಧಗಳಿಂದ ಏಕಕಾಲಕ್ಕೆ ದೊರೆಯುತ್ತಿದ್ದ ನೂರಾರು ಅನುಭವಗಳು, ಹಸುಕರುಗಳು, ಮನೆಮನೆಯಿಂದ ಮುಸುರೆ ತರುವುದು, ಕೃಷಿ ಕೆಲಸಗಳು ಇತ್ಯಾದಿಇತ್ಯಾದಿ ತುಂಬಿ ಬರುವ ನೆನಪುಗಳು.
2. ನಿಮ್ಮ ಪ್ರಕಾರ ಕನ್ನಡ ಅಂದ್ರೆ ?
‘ಕನ್ನಡ’ವು ನನ್ನ ಅಂತರಂಗದ ಇಂದ್ರಿಯ. ತನ್ನನ್ನು ತಾನು ಅಭಿವ್ಯಕ್ತಿಗೊಳಿಸಿಕೊಳ್ಳುವ ತಹತಹವು ಪ್ರತಿಯೊಂದು ಭಾಷೆಗೂ ಸದಾಕಾಲ ಇರುತ್ತದೆ ಎನ್ನುವುದು ನನಗೆ ವೇದ್ಯವಾಗುವುದು ಹಲವಾರು ಸಣ್ಣಪುಟ್ಟ ಘಟನೆಗಳಿಂದ: ಇರುವೆಯನ್ನು ನೋಡುತ್ತ ತನ್ನಷ್ಟಕ್ಕೇ ಮಾತನಾಡುವ ಮಗು; ಹರವಿರುವ ಅಕ್ಕಿಯನ್ನು ತಿನ್ನಲು ಬರುವ ಕೋಳಿಯನ್ನು ಓಡಿಸುತ್ತ ಮಾತನಾಡಿಕೊಳ್ಳುವ ಅಜ್ಜಿ; ನಾಯಿಯ ಜೊತೆ ಮಾತಿಗಿಳಿಯುವ ಗೆಳತಿ ಇತ್ಯಾದಿ. ಭಾಷೆಯ ಭಾವಕೋಶ ಹಿಗ್ಗುವುದೇ ಇಂತಹ ಬಿಡುವಿನ, ಸಾವಕಾಶದ ಮಾತುಕತೆಯಲ್ಲಿ. ನನಗನ್ನಿಸಿದ್ದನ್ನು ಹೇಳಿ ಬಿಡಬೇಕು ಎನ್ನುವ ತವಕ ನನ್ನದೆಷ್ಟಿರುತ್ತದೆಯೋ, ಹಾಗನ್ನಿಸಿದ್ದನ್ನು ತಾನು ತನ್ನ ಬಗೆಯಲ್ಲಿ ಹೇಳಬೇಕೆನ್ನುವ ತವಕದೊಳಗೆ ಭಾಷೆಯ ಜೀವಕೋಶವೂ ಹಿಗ್ಗುತ್ತಿರುತ್ತದೆ. ಹಾಗಾಗಿಯೇ ಭಾಷೆಯು ನನಗೆ ಅಂತರಂಗದ ಇಂದ್ರಿಯ; ನನ್ನೊಳಗು ತೋರ್ಪಡುವುದೇ ನಾನು ಬಳಸುವ ಭಾಷೆಯ ಮೂಲಕ.
ಹಿರಿಯ ಕವಿಗಳಾದ ಸಿದ್ಧಲಿಂಗಯ್ಯನವರೊಂದಿಗೆ..
3. ನಿಮಗೆ ಸಾಹಿತ್ಯದ ಬಗ್ಗೆ ಒಲವು ಬರಲು ಸ್ಪೂರ್ತಿ ಯಾರು ?
ನನ್ನ ತಂದೆ ಜ.ಹೊ.ನಾರಾಯಣಸ್ವಾಮಿ ಅವರು.
4. ಇವತ್ತಿನ ಸಂದರ್ಭದಲ್ಲಿ ಕನ್ನಡವನ್ನು ಉಳಿಸುವ ಬಗೆ?
ಕನ್ನಡವಾದರೂ ಅಷ್ಟೆ, ಮತ್ತೊಂದಾದರೂ ಅಷ್ಟೆ ಬಳಸುವುದರಿಂದ ಬದುಕುತ್ತದೆ, ಇಲ್ಲವಾದರೆ ಸಾಯುತ್ತದೆ. ಬಳಸುವುದೇ ಉಳಿಸುವ ಬಗೆ.
5. ಸಾಹಿತ್ಯ ಮತ್ತು ಜೀವನ ವಿಭಿನ್ನವೇ ?
ಬದುಕಿದ್ದನ್ನೇ ಬರೆಯುವುದು, ಬರೆದದ್ದನ್ನು ಬದುಕುವುದು- ಇದು ನನ್ನ ಬದುಕು ಮತ್ತು ಸಾಹಿತ್ಯದ ಮೂಲಸೆಲೆ.
6. ನಿಮಗೆ ಇಷ್ಟವಾದ ಕೃತಿ?
ನನಗೆ ಇಷ್ಟವಾದ ಕೃತಿ: ನೂರಾರಿವೆ… ಮಲೆಗಳಲ್ಲಿ ಮದುಮಗಳು, ಸಖೀಗೀತ, ಮಲೆದೇಗುಲ, ಗುಣಮುಖ, ಘಟಶ್ರಾದ್ಧ, ಕರ್ವಾಲೋ, ಕುಸುಮಬಾಲೆ, ಟಾಲ್‌ಸ್ಟಾಯ್‌ನ ‘ಅನ್ನಾ ಕರೆನಿನಾ’, ರ‍್ಹಾನ್ ಪಾಮುಕ್‌ನ ‘ದ ಮ್ಯೂಸಿಯಮ್ ಆಫ್ ಇನೊಸೆನ್ಸ್’… ಇನ್ನೂ ಎಷ್ಟೊಂದು…
7. ಪ್ರಸ್ತುತ ಕನ್ನಡ ಸಾಹಿತ್ಯ ಬೆಳವಣಿಗೆಯ ಬಗ್ಗೆ ನಿಮ್ಮ ಅನಿಸಿಕೆ?
ಕನ್ನಡದಲ್ಲಿ, ಪ್ರವಾಹದೋಪಾದಿಯಲ್ಲಿ ಪುಸ್ತಕಗಳು ಪ್ರಕಟಗೊಳ್ಳುತ್ತಿವೆ, ಎಲ್ಲ ಹಿನ್ನೆಲೆಗಳಿಂದ ಬಂದ ಜನರು ಬರೆಯುತ್ತಿದ್ದಾರೆ ಎಂಬುದು ಖುಷಿಯ ಸಂಗತಿ. ಆದರೆ ಎಷ್ಟು ‘ಪ್ರಮಾಣ’ದಲ್ಲಿ ಪುಸ್ತಕಗಳು ಹುಟ್ಟುತ್ತಿವೆಯೋ ಅಷ್ಟು ಪ್ರಮಾಣದಲ್ಲಿ ಭಾಷೆಯ ಲಯಗಳು, ರೂಪಕಗಳು ಸೃಷ್ಟಿಯಾಗುತ್ತಿಲ್ಲ ಅನ್ನಿಸುತ್ತದೆ. ಭಾಷಾಪ್ರೀತಿಯ ಪೂರ್ಣದೃಷ್ಟಿಯ ಕೊರತೆಯು ಸದ್ಯದ ಕಾಲವನ್ನು ಕಾಡುತ್ತಿದೆ.
ಹಿರಿಯ ಸಾಹಿತಿಗಳಾದ ದೇವನೂರು ಮಹಾದೇವ ಅವರೊಂದಿಗೆ..
8. ನಿಮ್ಮ ಮುಂದಿನ ಸಾಹಿತ್ಯ ಕೃತಿ ?
ಪು.ತಿ.ನ. ಅವರ ‘ಮಲೆದೇಗುಲ’ವನ್ನು ಕುರಿತಾದ್ದು.
9. ನಿಮ್ಮ ಕುಟುಂಬದ ಬಗ್ಗೆ ಹೇಳುವುದಾದರೆ?
ಸಾಹಿತ್ಯದ ಕಿಡಿಯನ್ನು ಹೊತ್ತಿಸಿದ ತಂದೆ, ನನ್ನ ಬೆಳವಣಿಗೆಯನ್ನು ಸಂಭ್ರಮಿಸುವ ತಾಯಿ, ನನ್ನ ಆರೋಗ್ಯ ಮತ್ತು ನನ್ನನ್ನು ಕಾಪಾಡಿಕೊಂಡಿರುವ ಗಂಡ, ಬದುಕಿನ ಕಡುದುಃಖಕ್ಕೆ ಹೊತ್ತಿಸಿದ ಆಸೆಯ ಹಣತೆಗಳಂತಿರುವ ಮಗ-ಮಗಳು ಮತ್ತು ನನ್ನ ಆತ್ಮಸಂಗಾತಿಗಳಾದ ನೂರಾರು ಪುಸ್ತಕಗಳು…
10. ನಿಮ್ಮ ಸಾಹಿತ್ಯ ಕೃಷಿ ನಡೆದು ಬಂದ ದಾರಿ.
ನನ್ನ ಸಾಹಿತ್ಯ ಯಾನ ಬದುಕಿನ ಯಾನವೂ ಹೌದು. ಒಂದೊಂದು ಹೆಜ್ಜೆಯೂ ಒಂದೊಂದು ಅನುಭವ ಲೋಕ, ಎಲ್ಲವೂ ಭಿನ್ನ, ವಿಶಿಷ್ಟ.
11. ನಿಮ್ಮ ಪ್ರಕಾರ ಅನುವಾದ ಅಂದ್ರೆ:
ನಾನು ನನ್ನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಭಾಷಿಕ ಸಂದರ್ಭದ ಫಲವಾದ ಸಂವೇದನೆಯ ಮೂಲಕವೇ ಮತ್ತೊಂದು ಬರಹ, ಕೃತಿಯನ್ನು ಓದುವುದು. ಆದರೆ ಅನುವಾದವು ನಾನು ಬರಿದೇ ಕನ್ನಡಿಗಳು ಅಥವಾ ಭಾರತೀಯಳು ಎನ್ನುವ ಪರಿಧಿಯ ಆಚೆ ನಿಂತು ಅನ್ಯಭಾಷಿಕ, ಅನ್ಯಸಾಂಸ್ಕೃತಿಕ ಸನ್ನಿವೇಶದ ಎದುರಿನಲ್ಲಿ ನಿರಪೇಕ್ಷ ಸ್ಥಿತಿಯಿಂದ ನನ್ನನ್ನು ನಾನು ನೋಡುವಂತೆ ಒತ್ತಾಯಿಸುವ ಕೆಲಸ. ಭಾಷೆಯ ಅಂತರದಿಂದ ಆರಂಭವಾಗುವ ಈ ಪ್ರಕ್ರಿಯೆಯು ಕ್ರಮೇಣ ಭಾವ, ವಿಚಾರ, ನಾಗರಿಕತೆ, ಸಂಸ್ಕೃತಿ ಮತ್ತು ಪ್ರಜ್ಞೆಯ ವಲಯಗಳಿಗೆ ವಿಸ್ತರಿಸಿಕೊಳ್ಳುವುದನ್ನು ಗಮನಿಸುವುದು ಸಾಹಿತ್ಯದ ವಿದ್ಯಾರ್ಥಿಯಾದ ನನಗೆ ಕುತೂಹಲಕರ. ಒಂದರ ಮುಖಾಂತರ ಮತ್ತೊಂದು ತೆರೆದುಕೊಳ್ಳುವ, ಒಂದಕ್ಕೆ ಮತ್ತೊಂದು ಅನುವಾಗುವ ಕ್ರಿಯೆ ಇದು. ಮೂಲದ ಸೃಷ್ಟಿಯನ್ನು ‘ಅನುಸರಿಸಿ’ ನಡೆಯುವ ಈ ಪ್ರಕ್ರಿಯೆಯು ‘ಅನುಸೃಷ್ಟಿ’ ಆಗಿದ್ದರೂ, ಮೂಲ ಪಠ್ಯವನ್ನು ‘ಅನುಸರಿಸಿ’ ಹೇಳುವುದರ ಜೊತೆಗೆ ಒಂದು ‘ಪಠ್ಯ’ದ ಒಳಗಿರುವ ಹಲವು ಪದರಗಳ ಅರ್ಥವಿನ್ಯಾಸಗಳನ್ನು ಹುಡುಕುವುದಕ್ಕೆ ಭಾಷಾಂತರಕಾರ ‘ಅನು’ವಾಗುವ ಕ್ರಿಯೆಯೂ ಹೌದು. ಎಂದರೆ ಭಾಷಾಂತರಕಾರನು ಮೂಲದ ನೆರವಿನಿಂದ ಹೊಸದೊಂದು ‘ಪಠ್ಯ’ವನ್ನು ನಿರ್ಮಿಸುತ್ತಿರುತ್ತಾನೆ; ಅದು ಮೂಲದ ಸಾಧ್ಯತೆಗಳನ್ನು ವಿಸ್ತರಿಸುತ್ತದೆ, ಕೆಲವೊಮ್ಮೆ ಬದಲಿಸುತ್ತದೆ.
12. ಅನುವಾದ ಸಾಹಿತ್ಯಕ್ಕೆ ಕೈ ಹಾಕಲು ಪ್ರೇರಣೆ:
ಮೊದಲಮೊದಲ ದಿನಗಳಲ್ಲಿ ಕುತೂಹಲಕ್ಕೆ ಶುರುಮಾಡಿದ್ದು… ಆನಂತರ, ಹೊಸ ಸಂವೇದನೆಗಳು, ಹೊಸ ಭಾಷಿಕ ಲಯಗಳು ಕನ್ನಡಕ್ಕೆ ಸೇರಿಕೊಳ್ಳಬೇಕು ಅನ್ನುವ ಆಸೆಯಿಂದ ಅನುವಾದ ಮಾಡಿದೆ.
13. ನೆರೂಡ ಕನ್ನಡಕ್ಕೆ ಬಂದ ಅನುಭವ:
ನೆರೂಡನನ್ನು ಓದುತ್ತ ಹೊಸ ಕಾವ್ಯಲೋಕ ನನ್ನೆದುರು ತೆರೆದುಕೊಂಡಿತು. ಅವನ ಪ್ರತಿಮೆ, ರೂಪಕ ಲೋಕವೇ ಬಹಳ ಭಿನ್ನವಾದದ್ದು. ನನ್ನ ಖುಷಿಗೆ ಅನುವಾದಿಸುತ್ತ ಹೋದೆ. ಮೊದಲು ನಾನು ಅನುವಾದಿಸಿದ್ದು ಅವನ ಕ್ರಾಂತಿಕಾರಿ ಕವಿತೆಗಳನ್ನು. ಆನಂತರ ಪ್ರೇಮಪದ್ಯಗಳನ್ನು ಓದತೊಡಗಿದಾಗ ಹೊಸ ನೆರೂಡ ಕಾಣತೊಡಗಿದ. ಅವನು ಸೃಷ್ಟಿಸುವ ಪ್ರತಿಮೆಗಳ ಲೋಕವನ್ನು ನನ್ನ ಭಾಷೆ ಒಳಗೊಳ್ಳುವುದು ಹೇಗೆ ಅನ್ನಿಸಿ ಅನುವಾದಿಸಿದೆ.
14. ನಿಮ್ಮ ಜೀವನದಲ್ಲಿ ಮರೆಯಲಾಗದ ನೆನಪು ?
ಹಲವಾರಿವೆ… ಕಾಡುವ ಒಂದು ಆಪ್ತ ನೆನಪು: ೧೯೮೭ನೇ ಇಸವಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರನ್ನು ಭೇಟಿಯಾದದ್ದು, ಅವರಿಂದ ಆಶೀರ್ವಾದ ಪಡೆದದ್ದು.
15. ನಿಮ್ಮ ಕಥೆ ಕವಿತೆಗಳಲ್ಲಿ ಮಹಿಳಾ ಧೋರಣೆಯನ್ನು ತೋರಲು ಮುಖ್ಯವಾದ ಕಾರಣ?
ನನ್ನ ಕತೆಯಲ್ಲಾಗಲಿ, ಕವಿತೆಯಲ್ಲಾಗಲೀ ‘ಮಹಿಳಾ ಧೋರಣೆ’ಯನ್ನು ಪ್ರಜ್ಞಾಪೂರ್ವಕವಾಗಿ ‘ತೋರಲು’ ನಾನು ಪ್ರಯತ್ನಿಸುವುದಿಲ್ಲ. ಹೊರಗಿನಿಂದ ಹಾಗೆ ‘ಬುದ್ಧಿಪೂರ್ವಕ’ವಾಗಿ ಏನನ್ನಾದರೂ ಮಾಡುವುದು ನನಗೆ ಸಾಧ್ಯವಿಲ್ಲ. ಸಹಜವಾಗಿ ಆದರೆ ಉಂಟು, ಇಲ್ಲವಾದರೆ ಇಲ್ಲ. ಮನುಷ್ಯತ್ವ ಇದ್ದಲ್ಲಿ ಮನುಷ್ಯತನ ಸಹಜವಾಗಿ ಇರುತ್ತೆ ಎಂದು ನಂಬಿದ್ದೇನೆ. ಇಂತಹ ಮನುಷ್ಯತನದಲ್ಲಿ ಪುರುಷನೂ ಇದ್ದಾನೆ, ಮಹಿಳೆಯೂ ಇದ್ದಾಳೆ.
16. ಕಾವ್ಯ ಹುಟ್ಟುವ ಅನುಭವದ ಬಗ್ಗೆ ನಿಮ್ಮ ಅಭಿಪ್ರಾಯ?
ಬರೆಯಲು ತೊಡಗುವ ಮೊದಲೇ ತಾನು ಬರೆಯುತ್ತಿರುವುದು ಕವಿತೆ ಎಂದು ಖಚಿತವಾಗಿ ತಿಳಿದಿರುವ ಬರವಣಿಗೆಯಿಂದ ಬರೆಯುವವನಿಗಾಗಲಿ, ಅದನ್ನು ಓದುವವನಿಗಾಗಲೀ, ಭಾಷೆ ಮತ್ತು ಸಾಹಿತ್ಯಕ್ಕಾಗಲೀ ಪ್ರಯೋಜನವೇನು? ಅಂತಹ ಬರಹವು ನಾಳೆ ಚಕ್ಕುಲಿ ಮಾಡಲು ಇಂದು ತಯಾರಿಸಿಕೊಂಡ ಹಿಟ್ಟಿನ ಹಾಗೆ. ಆ ಹಿಟ್ಟನ್ನು ಯಾರು ನಾದಿ, ಒರಳಿಗೆ ಹಾಕಿ ತಿರುವಿದರೂ ಒಂದೇ ಬಣ್ಣದ, ಸಮಾನ ರುಚಿಯ ಚಕ್ಕುಲಿಗಳು ಸಿದ್ಧಗೊಳ್ಳುತ್ತವೆ. ಎಲ್ಲೋ, ಎಂದೋ ಕಿವಿಯನ್ನು ಹಾದುಹೋದ ಧ್ವನಿ; ಬಾಲ್ಯದಲ್ಲಿ ಕೇಳಿದ ಒಂದು ಪದ; ಯಾವುದೋ ಕವಿತೆಯ ಭಾವ; ಪ್ರತಿಬಾರಿ ಹಾದುಹೋಗುವಾಗಲೂ ತಳಮಳ ಹುಟ್ಟಿಸುವ ಊರಿನ ಯಾವುದೋ ಬೀದಿ; ಬದುಕು ಒಡ್ಡುವ ಅನಿರೀಕ್ಷಿತ ತಿರುವುಗಳು…ಇತ್ಯಾದಿ ಯಾವುದೇ ಅನುಭವವು ಹೇಗೆ ನಮ್ಮ ಬರವಣಿಗೆಯ ಒಳಗೆ ಬಂದು ಸೇರಿಕೊಳ್ಳುತ್ತವೆ ಎಂಬುದು ನಿಜವಾದ ಬರಹಗಾರನ ಆಲೋಚನೆಗೆ ನಿಲುಕದ ಸಂಗತಿ. ಯಾವುದೋ ಪ್ರತಿಮೆಯು ಬಿಳಿಹಾಳೆಯ ಮೇಲೆ ಚಿಟ್ಟೆಯಂತೆ ಹಾರಿ ಬಂದು ಕುಳಿತು, ತನ್ನ ಸಾರ್ಥಕತೆಗೆ ಅದು ಮತ್ತೊಂದು ಚಿಟ್ಟೆಯನ್ನು ಪಕ್ಕಕ್ಕೆ ಕರೆದು ಕೂರಿಸಿಕೊಂಡ ಹಾಗೆ ಇನ್ನೊಂದು ಪದವು ಸೃಷ್ಟಿಯಾಗುವ ಬೆಡಗು! ಅದು ಬೆಳೆದು ಮತ್ತೊಂದು, ಮಗದೊಂದು ಪದ ಸೇರಿ…ಇಡೀ ಕವಿತೆ/ಬರಹವೇ ಪತರಗುಟ್ಟುವ ಚಿಟ್ಟೆಗಳ ಸಮೂಹವಲ್ಲವೆ?