ಊರ ದಾರಿಯು ನೇರವಿಲ್ಲ, ಇಟ್ಟ ಗುರಿಯು ನೆಟ್ಟಗಿರಲಿ, ಕೊನೆಗೆ
ಕೊಟ್ಟ ಮಾತಿಗೆ ತೊಟ್ಟ ಬಟ್ಟೆಗೆ, ಕಪ್ಪು ಕಲೆಯು ತಟ್ಟದಿರಲಿ, ಕೊನೆಗೆ. ||
ಜಗದ ಸುತ್ತ ಹುತ್ತ ಚಾಚಿದೆ, ಬಿತ್ತಿ ಬೆಳೆಯಲು ಬಿಟ್ಟರದು ಬರಡು
ನೆರೆದ ಮಂದಿಯ ನೂರು ಮಾತಿಗೆ ಕೆರೆಯು ಬತ್ತದಿರಲಿ, ಕೊನೆಗೆ. ||
ಹೊತ್ತು ಗೊತ್ತಿನ ಹುರುಳು ಇಲ್ಲದ ಕೊರಳೊಂದು ಕೆರಳಿದೆ ಬಿಡದೇ
ಸೋತು ಸವಿದು ಒಣಗಿರುವ ಬದುಕಿಗೆ ಬೆಂಕಿ ಹಚ್ಚದಿರಲಿ, ಕೊನೆಗೆ. ||
ಬೆಡಗು ಬೆಂಗುಡಿಗೆ ನಡುಗಿದೆ ಮನ, ಕಡೆಗೂ ತಡೆವವರು ಯಾರು ?
ಚುಚ್ಹುದುಲ ಹೊಳೆಯಲಿ, ದೋಣಿ ದಾರಿಯು ಮುಚ್ಚದಿರಲಿ, ಕೊನೆಗೆ. ||
ಮಬ್ಬಿನಲಿ ಹಬ್ಬಿದ ಹೊಗೆಯು, ಇಬ್ಬನಿಯು ತರದು, ಹುಬ್ಬೇರಿಸದಿರು
ಕಡಿಯುವುದೆ ಕತ್ತಲಿನ ನಾಯಿ ನೆರಳು, ಹುಸಿಯು ಹಬ್ಬದಿರಲಿ, ಕೊನೆಗೆ. ||
ಅಷ್ಟೂ ದಿಕ್ಕಿಗೂ ಎಷ್ಟು ತೂರಿದರೇನು ಕಸವು, ಗಾಳಿ ಬೀಸದೆ “ಬೋಧಿ”
ಸೊಕ್ಕಿದ ಸುಳಿಗಾಳಿಯ ದಿಕ್ಕಿಗೆ, ಮಿಕ್ಕಿ ತೆಕ್ಕೆಯು ಚಾಚದಿರಲಿ, ಕೊನೆಗೆ. ||