ದೇವೇಂದ್ರ ಕಟ್ಟಿಮನಿ ಅವರು ಬರೆದ ಗಜಲ್

ಇತಿಹಾಸದ ಪ್ರತಿಪುಟಗಳು ಸಾರಿ ಹೇಳಲು, ನಡೆಯುತ್ತಿದೆ ಪಿತೂರಿ
ಸೂರ್ಯ ಚಂದ್ರರ ಸುಳ್ಳು ಕಥೆಗಳು ಹೇಳಲು, ನಡೆಯುತ್ತಿದೆ ಪಿತೂರಿ. ||

ಹರಿದ ಬೆವರಲ್ಲಿ ಸುರಿದ ನೆತ್ತರು ನೋಡಿ ಮೌನ ಮಸಣ ಸೇರಿದೆ
ಸರಿದ ಯವ್ವನದ ಸಾಲು ಕಥೆಗಳು ಸಾರಿ ಹೇಳಲು, ನಡೆಯುತ್ತಿದೆ ಪಿತೂರಿ. ||

ಕಲ್ಲು ದೇವರಿಗೂ ಜೊಲ್ಲು ಸುರಿಸುವ ಭಾವ ತುಂಬಿದವರಾರು
ಗಲ್ಲಿಗಲ್ಲಿಯ ಬೆಲ್ಲದಾಸೆಗೆ ಚಾಡಿ ಹೇಳುಲು, ನಡೆಯುತ್ತಿದೆ ಪಿತೂರಿ. ||

ಕುರುಹುಗಳ ಸಾಲಿನಲ್ಲಿ ತೆರೆಮರೆಯ ತೇರು ಮೇಲೇರುತ್ತಿದೆ.
ಕುರುಡಕಾಲು ಮತ್ತೆ ಗರುಡಗಂಬವೇರಲು, ನಡೆಯುತ್ತಿದೆ ಪಿತೂರಿ. ||

ಶತಮಾನಗಳೆ ಕಳೆದರು ಸ್ವತ್ತಿನ ಸುತ್ತ ಸತ್ತವರು ಎಲ್ಲಿ ಹೋದರು
ಶವದ ಮೇಲಿನ ಹಾರ ಶಿರವ ಏರಲು, ನಡೆಯುತ್ತಿದೆ ಪಿತೂರಿ. ||

ನೋಡುವ ಕಣ್ಣಿಗೆ ನಾಚಿಕೆ ಇಲ್ಲದ ನೀತಿಪಾಠ ಹೇಳಿಕೊಟ್ಟವರಾರು
ಬಣ್ಣಬಣ್ಣಕ್ಕು ಭೇದವನಿಟ್ಟು ಪ್ರಾಣ ಹೀರಲು, ನಡೆಯುತ್ತಿದೆ ಪಿತೂರಿ. ||

ಮೋಸದ ಮಂಜಿನ ಕರಿನೆರಳ ಗೋಳು ಹಸಿರಬಾಳ ತುಂಬ ಹಾಸಿದೆ
ಇಬ್ಬನಿಯ ಹೊತ್ತ ಧರೆಯ ಹೆಸರ ಮೇಲು, ನಡೆಯುತ್ತಿದೆ ಪಿತೂರಿ. ||

ಬೆತ್ತಲೆ ಜಗತ್ತಿಗೆ ಬೆಳದಿಂಗಳೇಕೆ? ಬೇಸತ್ತ ಬರಡು ಮನವಿದು “ಬೋಧಿ”
ಕಿತ್ತು ತಿನ್ನುವ ಖದೀಮರೆಲ್ಲ ಕುರ್ಚಿ ಹಿಡಿಯಲು, ನಡೆಯುತ್ತಿದೆ ಪಿತ್ತೂರಿ. ||

ಚಂದಾದಾರರಾಗಿ
ವಿಭಾಗ
1 ಪ್ರತಿಕ್ರಿಯೆ
Inline Feedbacks
View all comments
Sandeep
20 August 2023 17:01

ತುಂಬಾ ಚೆನ್ನಾಗಿದೆ

0
    0
    Your Cart
    Your cart is emptyReturn to Shop