“ಚಿನ್ನದ್ ತಟ್ಟೆ ಮಾಡೋ ಅಕ್ಕಸಾಲಿಗೆ ಅದ್ರಲ್ ಉಣ್ಣೋ ಭಾಗ್ಯ ದಕ್ಕೋದುಂಟೇನು ಗೋವಿಂದಣ್ಣಾ?” ಲಚ್ಚನ ಈ ಮಾತಿನಲ್ಲಿ ದಶಮಾನಗಳಿಂದ ಹುದುಗಿದ್ದ ನೋವಿನ ಗುರುತು ಎದ್ದು ಕಾಣುತ್ತಿತ್ತು. ಎಂದಿನಂತೆ ಅಂದೂ ಕೂಡಾ ಲಚ್ಚನ ಬಳಿ ನಾಲ್ಕು ಸಮಾಧಾನದ ಮಾತುಗಳನ್ನಾಡಿದ ಕರ್ಣಿಕರು, ತನ್ನ ಲೋಟದಲ್ಲಿದ್ದ ಕಾಫಿಯು ಕಾಲಿಯಾದ ತಕ್ಷಣ ತಮ್ಮ ಸ್ಕೂಟರ್ ಹತ್ತಿ ಹೊರಟಿದ್ದರು. “ಓಯ್ ಕರ್ಣಿಕರೇ ಕಂಡ್ ಕಂಡವ್ರಿಗೆಲ್ಲಾ ಕಾಫಿ, ಟೀ, ತಿಂಡಿ ಕೊಡ್ಸೋಕೆ ನಂಗೂ ಇಷ್ಟಾನೆ… ಆದ್ರೆ ಅಪ್ಪನ ಎದ್ರಿಗೆ ಪೈಸೆ ಪೈಸೆ ಲೆಕ್ಕ ಕೊಡ್ಬೇಕಾದ್ರೆ ಹೆಂಗಾಗತ್ತೆ ಗೊತ್ತಾ…” ಎಂದು ಲಚ್ಚ ಹೇಳಿದ್ದು ಕರ್ಣಿಕರ ಕಿವಿಗೆ ಬಿದ್ದಿರಲಿಕ್ಕಿಲ್ಲ.
ಹೌದು… ಅರವತ್ತರ ಆಸುಪಾಸಿನಲ್ಲಿರುವ ಲಚ್ಚನು ಇನ್ನೂ ಅವರ ಅಪ್ಪ, ಶೇಷಪ್ಪ ಹೆಗ್ಡೆಯವರ ಯಜಮಾನಿಕೆಯಲ್ಲಿಯೇ ಇದ್ದನು. ಮೂರೂವರೆ ಎಕರೆ ಅಡಿಕೆ ತೋಟ, ಆರು ಎಕರೆ ಗದ್ದೆ, ಒಂದು ಎಕರೆ ಗೇರು ಪ್ಲಾಂಟೇಶನ್ ಮತ್ತು ಗೇಣಿಗೆ ಕೊಟ್ಟ ಎರೆಡು ಎಕರೆ ಗದ್ದೆಯ ಜೊತೆಗೆ ವಿಶಾಲವಾದ ಆರಂಕಣದ ಮನೆ, ಸದ್ಗುಣವಂತೆ ಹೆಂಡತಿ ಲತಾ ಮತ್ತು ವಿದೇಶದಲ್ಲಿ ಓದಿ ಸದ್ಯಕ್ಕೆ ದೆಹಲಿಯಲ್ಲಿ ಉದ್ಯೋಗ ಮಾಡುತ್ತಿರುವ ಒಬ್ಬನೇ ಮಗ ಗೌತಮ, ಈ ಎಲ್ಲವೂ ಯಾವತ್ತಿಗಾದರೂ ಲಚ್ಚನ ಆಸ್ತಿಯೇ ಆಗಿತ್ತಾದರೂ ಈಗ ಅಪ್ಪನ ಕಣ್ಣಳತೆ ಮೀರಿ ಏನನ್ನೂ ಮಾಡಲಾಗದ ಅಸಹಾಯಕತೆಯು ಲಚ್ಚನನ್ನು ಬಿಟ್ಟಿರಲಿಲ್ಲ. “ನಮ್ ಲಚ್ಚಣ್ಣಯ್ಯನ ಜನ್ಮಾನೇ ಇಷ್ಟ್ ಆಗೋತ್ ಕಾಣಿ ಗೋವಿಂದಣ್ಣಾ….ನಾಯಿ ಮೊಲೆ ಹಾಲಿನಾಂಗೆ… ಎಷ್ಟ್ ಬುದ್ವಂತ ಮತ್ತೆ ವಿನಯ್ವಂತ… ಆದ್ರೂ ಜುಟ್ಟು ಜನಿವಾರ ಎರೆಡೂ ಅಪ್ಪನ್ ಕೈಲಿ ಸಿಕ್ಕಿ…. ಪಾಪ ಮಾರ್ರೆ” ಎಂಬ ಹೋಟೆಲ್ ಮಾಲಿಕ ಮಣಿ ಶೆಟ್ಟರ ಮಾತನ್ನು ಅಷ್ಟಾಗಿ ಕಿವಿಗೆ ಹಾಕಿಕೊಳ್ಳುವ ಗೋಜಿಗೆ ಹೋಗದ ಲಚ್ಚ, ಎದುರಿನ ಸೊಸೈಟಿಯನ್ನು ಹೊಕ್ಕಿದ್ದ.
ದಿನ ಕಳೆದಂತೆ ತನ್ನ ಮುಷ್ಠಿಯಲ್ಲಿದ್ದ ಯಜಮಾನಿಕೆ ಎಂಬ ವಜ್ರವನ್ನು ಭದ್ರಪಡಿಸುತ್ತಲೇ ಇರುವ ಅಪ್ಪ, ತನ್ನ ಸಣ್ಣ ಪುಟ್ಟ ನಿರ್ಧಾರಗಳಲ್ಲೂ ಸಲಹೆ ಕೊಡಲು ಪ್ರಾರಂಭಿಸಿದ ಮಗ, ಇವರುಗಳ ಮಧ್ಯೆ ಸಿಕ್ಕಿದ ಲಚ್ಚನ ಯಜಮಾನಿಕೆಯ ಕನಸು ಮಾತ್ರಾ ದಿನೇ ದಿನೇ ಮರೀಚಿಕೆಯಾಗುತ್ತಲೇ ಸಾಗಿತ್ತು. ಲಚ್ಚನಿಗೆ ಇದ್ದ ವ್ಯವಹಾರದ ಮೇಲಿನ ಪ್ರೀತಿ ಮತ್ತು ಚಾಕಚಕ್ಯತೆಯ ಅರಿವಿದ್ದ ಲತಾಳು ಕೂಡಾ ಗಂಡನ ಅಸಹಾಯಕತೆಯನ್ನು ನೋಡಿ ಬೇಸತ್ತುಕೊಂಡವಳೇ. ಹೆಗ್ಡೆಯವರು ತಮ್ಮ ಸೊಸೆಯನ್ನು ಯಾವತ್ತಿಗೂ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದುದರಿಂದ ಮತ್ತು ಲತಾಳದ್ದು ಮೃದು ಸ್ವಭಾವವಾದ್ದರಿಂದ ಅವಳು ಯಾವತ್ತೂ ಮಾವನ ವಿರುದ್ದವಾಗಿ ಎದುರು ನಿಂತು ಮಾತನಾಡುವ ಧೈರ್ಯವನ್ನು ತೋರಿಸುತ್ತಿರಲಿಲ್ಲ. ಲಚ್ಚ ಅಪ್ಪನಿಗೆ ಹೆದರುತ್ತಾನೆ ಎಂದು ಊರವರು ಅಂದುಕೊಂಡಿದ್ದರೆ, ತೀರಾ ಆಪ್ತರ ದೃಷ್ಠಿಯಲ್ಲಿ, ಲಚ್ಚ ಅಪ್ಪನಿಗೆ ಅಪಾರವಾದ ಗೌರವವನ್ನು ಕೊಡುತ್ತಾರೆ ಎಂಬುದಾಗಿತ್ತು ಆದರೆ ಎಷ್ಟು ಹೇಳಿದರೂ ವಯಸ್ಸಾದವರು ಅವರ ಹಠವನ್ನೇ ಸಾಧಿಸುತ್ತಾರೆ, ಅವರೊಂದಿಗೆ ವಾದ ಮಾಡುತ್ತಾ ದಿನಾ ಮಾನಸಿಕ ನೆಮ್ಮದಿಯನ್ನು ಹಾಳುಮಾಡಿಕೊಳ್ಳುವುದು ಸರಿ ಅಲ್ಲ ಎಂಬ ಪಾಠವನ್ನು ಲಚ್ಚ ತನ್ನ ಮನಕ್ಕೆ ಕಲಿಸಿಕೊಟ್ಟಿದ್ದ. ಹೆಗ್ಡೆಯವರು ಮಾತಿನಲ್ಲಿ ಸ್ವಲ್ಪ ಜೋರು, ಯಜಮಾನಿಕೆ ನಿಭಾಯಿಸುವ ವ್ಯಕ್ತಿತ್ವದವರು ಮತ್ತು ತಮ್ಮ ಅನುಭವಗಳ ಆಧಾರದ ಮೇಲೆ ತಾವು ತೆಗೆದುಕೊಳ್ಳುವ ನಿರ್ಧಾರಗಳು ಸರಿ ಎಂಬ ಭಾವನೆ ಹೊಂದಿದ್ದವರು. ಅವರ ನಿರ್ಧಾರಗಳಿಂದ ಲಚ್ಚನನ್ನು ಹೊರತುಪಡಿಸಿದರೆ ಇನ್ನೊಬ್ಬರಿಗೆ ತೊಂದರೆ ಆಗಿರಲಿಲ್ಲ.
ಲಚ್ಚ ಸೊಸೈಟಿಯಲ್ಲಿ ಕೊಡುತ್ತಿದ್ದ ಖಾಲೀ ಗೋಣೀಚೀಲ ತೆಗೆದುಕೊಳ್ಳಲು ಬಂದವನಾಗಿದ್ದ ಆದರೆ ಅಲ್ಲಿ ನೆರೆದವರದೆಲ್ಲಾ ” ಏನ್ ಲಚ್ಚಣ್ಣಾ ಇವತ್ ಅಪ್ಪ ಬಂದಿಲ್ವಾ?”, “ಏನ್ ಲಚ್ಚೂ ಒಬ್ನೇ ಬಂದ್ಬಿಟಿದೀಯ… ಹೆಗ್ಡೇರು ಎಲ್ಲಿ?” ಲಕ್ಷ್ಮೀನಾರಾಯಣ ಹೆಗ್ಡೇರೆ… ಇವತ್ ಯಾವ್ದೂ ರುಜು ಹಾಕ್ಸಾ ಕೆಲ್ಸ ಇಲ್ವೇನ್ರೀ?” ಹೀಗೆ ಒಂದೇ ತರನಾದ ಪ್ರಶ್ನೆಗಳ ಮಹಾ ಪೂರವೇ ಅಲ್ಲಿ ಹರಿದುಬರುತ್ತಿತ್ತು. ಅಪ್ಪನ ಹೊರತಾಗಿ ಜನ ನನ್ನ ಅಸ್ತಿತ್ವವನ್ನೇ ಗುರಿತಿಸುತ್ತಿಲ್ಲ ಎಂಬ ಬೇಸರ ಲಚ್ಚನನ್ನು ಇರಿಯುತ್ತಿದ್ದದ್ದು ಸುಳ್ಳಲ್ಲವಾದರೂ ಅದಕ್ಕಿಂತಾ ಹೆಚ್ಚು ಅವರ ಮನಸ್ಸನ್ನು ಇರಿದಿದ್ದು ವಿಲಿಯಮ್ ಫರ್ನಾಂಡೀಸ್ ಮಗ ಆಂಥೋಣಿ!. ಫರ್ನಾಂಡೀಸ್ ಸತ್ತು ಎರೆಡು ತಿಂಗಳೊಳಗೇ ಅವರ ಹದಿನೆಂಟರ ಹರೆಯದ ಮಗ ಆಂಥೋಣಿಯು ಮನೆಯ ಯಜಮಾನಿಕೆಯನ್ನು ವಹಿಸಿಕೊಂಡಿದ್ದ. ಅಪ್ಪ ಇದ್ದಾಗ ಇಲಿ ಮರಿಯಂತಿದ್ದವನು ಈಗ ಹುಲಿಯಂತಾಗಿದ್ದ. ಇಷ್ಟು ಚಿಕ್ಕ ವಯಸ್ಸಿಗೇ ಒಬ್ಬನೇ ಬಂದು ತನಗೆ ಇಷ್ಟವಾಗುವ ರೀತಿಯಲ್ಲಿ ಬಹಳಾ ಬುದ್ದಿವಂತಿಕೆಯಿಂದ ವ್ಯವಹಾರ ಮಾಡುತ್ತಿರುವ ಆಂಥೋಣಿಯನ್ನು ನೋಡಿದಾಗಲೆಲ್ಲಾ ಲಚ್ಚನ ಎದೆಯಲ್ಲಿ ಕಾಳುಮೆಣಸು ಕುಟ್ಟಿದ ಅನುಭವವಾಗುತ್ತಿತ್ತು. “ಗೋಣೀಚೀಲ ತಗಳೋಕೂ ಖಾತೇದಾರರ ರುಜು ಬೇಕು ಅಂತ ಸರ್ಕಾರ ಫರ್ಮಾನು ಹೊರಡಿಸಿದೆ ಲಚ್ಚು ಸರ್…” ಎಂದು ಕಿಚಾಯಿಸಿದ ಸೆಕರೇಟರಿಗೆ ಗುರಾಯಿಸಿದ ಲಚ್ಚ ” ಹೆಗ್ಡೇರನ್ನ ಇಲ್ಲೇ ಬಿಟ್ ಹೋಕ್ತೀನಿ… ಸೊಸೈಟಿ ಕಾದಂಗೂ ಆಗ್ತದೆ… ಮತ್ತೆ ನಿಮ್ಗೆ ಬೇಕ್ ಬೇಕಾಗಿದ್ದಕ್ಕೆಲ್ಲಾ ಹೆಬ್ಬೆಟ್ ಒತ್ತಿಸ್ಕೊಬೋದ್ ಬಿಡು ಮಾಲ್ತೇಶ” ಎನ್ನುತ್ತಾ ಗೋಣೀಚೀಲ ಹೊತ್ತು ಮನೆಯತ್ತ ಮುಖ ಮಾಡಿದ್ದ.
ಜಮೀನಿನ ಪಹಣಿಗೆ ಸಂಬಂಧಿಸಿದ ಕೆಲಸಕ್ಕಾಗಿ ಲಚ್ಚ ಹೆಗ್ಡೆಯವರನ್ನು ಕರೆದುಕೊಂಡು ದಿನಾ ತಾಲ್ಲೂಕು ಕಛೇರಿಗೆ, ಬ್ಯಾಂಕಿಗೆ, ಗ್ರಾಮ ಪಂಚಾಯ್ತಿಗೆ ಪದೇ ಪದೇ ಅಲೆಯಬೇಕಾಗಿ ಬಂದಿತ್ತು. ಆಗ ಒಂದು ದಿನ ಬಿಸಿಲಿನ ಬೇಗೆ ತಾಳಲಾರದೇ ಎಚ್ಚರ ತಪ್ಪಿ ಬಿದ್ದ ಹೆಗ್ಡೆಯವರನ್ನು ಸರ್ಕಾರೀ ಆಸ್ಪತ್ರೆಗೆ ಸೇರಿಸಲಾಗಿತ್ತು. ವಯೋಸಹಜ ಅನಾರೋಗ್ಯದಿಂದ ಹೆಗ್ಡೆಯವರನ್ನು ಎರೆಡು ತಿಂಗಳು ಆಸ್ಪತ್ರೆಯಲ್ಲಿಯೇ ಬಿಟ್ಟುಕೊಂಡು ಶುಶ್ರೂಷೆ ಮಾಡಿದ್ದರು. ಈ ಸಂಧರ್ಭದಲ್ಲಿ ಲಚ್ಚ ಮತ್ತು ಅವನ ಹೆಂಡತಿ ತಾವು ಬಹಳ ಕಾಲದಿಂದ ಕೂಡಿಟ್ಟ ಹಣದಿಂದ ಒಂದು ಸೆಕೆಂಡ್ ಓಮಿನೀ ಕಾರ್ ತೆಗೆದುಕೊಂಡಿದ್ದರು.”ಅಜ್ಜನಿಗೆ ಹುಷಾರಿಲ್ಲದಿದ್ದಾಗ ಹೊರಗೆ ಹೋಗೋಕೆ ಬೈಕೆಲ್ಲಾ ಸರಿ ಆಗೊಲ್ಲಾ ಅಂತ ಕಾರ್ ತಗೊಂಡ್ವಿ’ ಅಂತ ಗೌತಮನ ಬಳಿ ಹೇಳಿದ್ದರು. ಮತ್ತು ಲತಾಳ ಆಸೆಯಂತೆ ಮಗನಿಂದ ಸ್ವಲ್ಪ ಹಣ ತೆಗೆದುಕೊಂಡು ಮನೆಯ ಎದುರಿನ ಅಂಗಳಕ್ಕೆ ಕಡಪಾ ಕಲ್ಲು ಹಾಕಿಸಿದ್ದರು. ಅಪ್ಪ ಇದ್ದರೆ ಇದಕ್ಕ್ಯಾವುದಕ್ಕೂ ಬಿಡುವುದಿಲ್ಲವೆಂಬುದು ಸತ್ಯವೇ ಆಗಿತ್ತು.
ಹೆಗ್ಡೆಯವರು ಆಸ್ಪತ್ರೆಯಿಂದ ಮನೆಗೆ ಬಂದು ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿ ತಾಲ್ಲೂಕು ಪಂಚಾಯ್ತಿಯ ಅಧಿಕಾರಿಗಳು, ಬ್ಯಾಂಕ್ ಮ್ಯಾನೇಜರ್, ಸೊಸೈಟಿಯವರು, ಆಸ್ಪತ್ರೆಯ ಡಾಕ್ಟರ್ ನಿಂದ ಹಿಡಿದು, ಎಳನೀರು ಮಾರುವ ಹಾಲೇಶಿಯವರೆಗೂ ಎಲ್ಲರೂ ಹೆಗ್ಡೆಯವರಿಗೆ ಹೇಳಿದ್ದು ಒಂದೇ ಮಾತು ಅದು, “ಹೆಗ್ಡೇರೆ… ನಿಮ್ಗೆ ಒಯಸ್ಸಾತಲ್ರಿ… ಇನ್ ನಿಮ್ ಜಮೀನು ಮನೆ ಜವಾಬ್ದಾರೀನೆಲ್ಲ ಲಚ್ಚಣ್ಣಂಗೆ ವಹಿಸ್ಬಹುದಿತ್ತು… ಅದಿಲ್ಲ ಅಂದ್ರೆ ಪವರ್ ಆಫ್ ಅಟಾರ್ನಿ ಆದ್ರೂ ಅವ್ರಿಗ್ ಮಾಡ್ಸ್ಕೊಡಿ… ನೀವೂ ಎಷ್ಟೂ ಅಂತ ಈ ವಯಸ್ಸಲ್ಲಿ, ಈ ಬಿಸ್ಲಲ್ಲಿ ಸುತುತೀರ…” ಈ ಮಾತು ಕೇಳಿದಾಗಲೆಲ್ಲಾ ಹೆಗ್ಡೆಯವರ ಮುಖ ಬಾಡುತ್ತಿತ್ತಾದರೂ ಪಕ್ಕದಲ್ಲಿಯೇ ಇರುತ್ತಿದ್ದ ಲಚ್ಚನ ಮುಖ ಮಾತ್ರಾ ಹೂವಿನಂತೆ ಅರಳುತ್ತಿತ್ತು.
ಅಂದೊಂದು ಬೆಳಿಗ್ಗೆ ಮಗ ಮತ್ತು ಸೊಸೆಯನ್ನು ಜಗುಲಿಯಲ್ಲಿ ಕೂರಿಸಿಕೊಂಡು ಜೊತೆಗೆ ಹೆಸರಾಂತ ವಕೀಲರೂ ಮತ್ತು ತಮ್ಮ ಹೆಂಡತಿಯ ತಮ್ಮನೂ ಆಗಿದ್ದ ಹೇರಂಭ ಹೆಗ್ಡೆಯವರನ್ನೂ ಕರೆಸಿಕೊಂಡ ಹೆಗ್ಡೆಯವರು ವಿಷಯಕ್ಕೆ ಬಂದಿದ್ದರು. “ನನಗೂ ಎಲ್ಲಾ ಹೇಳೋ ತರ ವಯಸ್ಸಾಗಿದೆ. ಈ ಯಜಮಾನಿಕೆ ಎಲ್ಲಾ ಬಿಡಕ್ಕೆ ನಂಗೇನ್ ಇಷ್ಟ ಇಲ್ಲ… ಆದ್ರೂ…” ಹೀಗೆ ಹೆಗ್ಡೆಯವರ ಮಾತು ಆರಂಭವಾಗುತ್ತಲೇ ಲಚಣ್ಣನ ಮನದಲ್ಲಿ ಹಬ್ಬದ ತೋರಣ ಕಟ್ಟುವ ಕೆಲಸ ಪ್ರಾರಂಭಗೊಂಡಿತ್ತು. ಲತಾಳೂ ಸಂತಸ ಗೊಂಡಿದ್ದಳು. ಎಲೆಯ ತಬಕಿನಿಂದ ಒಂದು ಅಡಿಕೆ ಮತ್ತು ಕತ್ತರಿಯನ್ನು ತೆಗೆದುಕೊಂಡ ಹೆಗ್ಡೆಯವರು, ಅದನ್ನು ಹೋಳು ಮಾಡುತ್ತಾ “ಆದ್ರೂ ಊರವ್ರ ಸಮಾದಾನಕ್ಕಾಗಿ ನಾನು ಇವತ್ ಈ ನಿರ್ಧಾರ ತಗಳದ್ ಅನಿವಾರ್ಯ ಆಗಿದೆ. ಪಾಪ ಲಚ್ಚೂನು ನನ್ ಕರ್ಕಂಡ್ ತಿರುಗ್ ತಿರುಗಿ ಹಣ್ಣಾಗಿ ಹೋಗಿದಾನೆ… ನಮ್ಗೆಲ್ಲಾ ಇನ್ನು ಈ ಬ್ಯಾಂಕು, ಪಂಚಾಯ್ತಿ ಅಂತ ಅಲ್ಯೋದು ಕಷ್ಟಾನೇ… ಅದ್ಕಾಗೇ ನಾನೊಂದ್ ತೀರ್ಮಾನಕ್ ಬಂದಿದೀನಿ…” ಮತ್ತೆ ಮಾತು ನಿಲ್ಲಿಸಿದ ಹೆಗ್ಡೆಯವರು ಪುಡಿಯಾದ ಅಡಿಕೆಯನ್ನು ಬದಿಗೆ ಇಟ್ಟು ಎಳೆಯ ವೀಳ್ಯದ ಎಲೆಯ ಮೇಲೆ ಸುಣ್ಣ ಹಚ್ಚಲು ಶುರುಮಾಡಿದ್ದರು. ಈಗ ಲಚ್ಚನ ತಲೆಯಲ್ಲಿ ಏನೋ ಅನುಮಾನದ ವಾಸನೆ ಎದ್ದಿತ್ತು. ಮತ್ತೆ ಮಾತು ಪ್ರಾರಂಭಿಸಿದ ಹೆಗ್ಡೆಯವರು ” ಏ… ಹೇರಂಭ, ನೀನು ನನ್ ಮಾತಿಗ್ ಸಾಕ್ಷಿ ಮತೆ… ನನ್ ತೀರ್ಮಾನ ಏನು ಅಂತಂದ್ರೆ… ನಮ್ ಮೊಮ್ಮಗ ಗೌತಮ ಇದಾನಲ… ಅವ ದೆಹಲೀಲಿ ಯಾರದ್ದೋ ನೌಕ್ರಿ ಮಾಡೋ ದರ್ದೇನು… ಅದೂ ಎಷ್ಟ್ ವರ್ಷ ಅಂತ ಮನೇ ಮಗ ಹೊರಗ್ ದುಡೀಬೇಕು ಹೇಳು? ನಮ್ಗಿಂತ ಬುದ್ವಂತ ಬೇರೆ ಅವ…. ಅದ್ಕಾಗಿ ಅವನ್ನೇ ಇಲ್ಲಿಗ್ ಕರ್ಸಿ ಪವರ್ ಎಲ್ಲ ಅವಂಗೇ ನೋಡ್ಕೋ ಅಂತ ಕೊಟ್ಬಿಡನ ಅಂತಿದೀನಿ… ಏನಂತೀಯೋ…” ಹೆಗ್ಡೆಯವರು ಸೌಜನ್ಯಕ್ಕಾದರೂ ಮಗನ ಒಪ್ಪಿಗೆ ಕೇಳಬೇಕೆಂಬ ಚಿಂತೆಯನ್ನೂ ಮಾಡಿರಲಿಲ್ಲ.
ಹೇರಂಭ ಹೆಗಡೆಯವರು ತಮ್ಮ ಬಾವನವರ ತೀರ್ಮಾನದ ಬಗೆಗೇ ತುಸು ಯೋಚಿಸುತ್ತಾ “ಬಾವಾ ಲಚ್ಚು ಇಷ್ಟ್ ದಿನ ಎಲ್ಲಾ ವ್ಯವಹಾರನೂ ನೋಡ್ಕೊಳ್ತಾ ಬಂದಿದಾನೆ, ಅನುಭವಸ್ಥ ಬೇರೆ, ಅದ್ಕಾಗಿ ನೀನು ಅವನ್ನ ಒಂದ್ ಮಾತ್ ಕೇಳ್ದೇ ಈ ನಿರ್ಧಾರ ತಗೊಳ್ಳೋದು ನಂಗ್ಯಾಕೋ ಅಷ್ಟು ಸರಿ ಅನ್ನಿಸ್ತಿಲ್ಲ…” ಎಂದರು. ಮತ್ತೆ ಮಾತು ಮುಂದುವರೆಸಿದ ಹೆಗ್ಡೆಯವರು “ಲಚ್ಚು ಮನೇ ಯಜ್ಮಾನ್ಕೆ ವಹಿಸ್ಕೋಡ್ರೆ ಈ ಮನೆ ಎಲ್ಲಿ ದಿವಾಳೀ ಆಗತ್ತೋ ಅನ್ನೋ ಚಿಂತೆ ನನಗೆ…. ಮೊನ್ನೆ ನಾನ್ ಒಂದ್ ಎರೆಡ್ ತಿಂಗ್ಳು ಮನೇಲ್ ಇಲ್ದಿದ್ದೇ ನೋಡು, ಆ ಸುಟ್ ಕಾರ್ ತಗಂಡಿದಾರೆ… ಅಲ್ಲಾ ಯಾಕ್ ಬೇಕಿತ್ತಪ್ಪ ಅದು? ದೊಡ್ಡಸ್ತಿಕೇ ತೋರ್ಸೋಕಾ? ಅಲ್ದೇ ಮನೇ ಎದ್ರಿನ್ ಅಂಗ್ಳಕ್ಕೆ ಕಲ್ಲು ಹಾಸೆಲ್ಲಾ ಯಾಕೆ ಬೇಕಿತ್ತು ಹೇಳು… ಸುಮ್ನೇ ದುಂಧು ವೆಚ್ಚ ಅಲ್ವಾ? ಅಪ್ಪಯ್ಯನ್ ಕಾಲ್ದಿಂದ ಇದ್ದ ಮಣ್ಣು ಅಂಗ್ಳ ಇವ್ನಿಗ್ ಅದೇನ್ ಮಾಡಿತ್ತು ಅಂತ?… ಎಜ್ಮಾನ್ಕೆ ನನ್ ಕೈಲಿದ್ದೇ ಹಿಂಗೆ… ಇನ್ನು ಇವ್ನ ಕೈಲಿ ದುಡ್ ಇದ್ದಿದ್ರೆ ಇಡೀ ಊರಿಗೇ ಕಲ್ ಹಾಸ್ ಹಾಕ್ಸಿದ್ರೂ ಹಾಕ್ಸಿದ್ನೇ… ಅದ್ಕಾಗೀನೇ ನಾನ್ ಯೋಚ್ನೆ ಮಾಡಿ ನಿರ್ಧಾರ ಮಾಡಿದೀನಿ. ಗೌತಮನ್ನ ನಾನ್ ನೋಡಿದೀನಲ್ಲಾ ಹೇರಂಭ… ಅವ್ನು ನನ್ ತರ… ಏನೇ ಮಾಡದಾದ್ರೂ ನೂರ್ ಸಲ ಯೋಚ್ನೇ ಮಾಡ್ತಾನೆ… ಹಾಗಾಗೇ ಅವ್ನೇ ಮನೆ ಯಜಮಾನಾದ್ರೆ ಒಳ್ಳೇದು ಅಂತ ನಂಗೆ ಅನ್ಸ್ತಿದೆ ನೋಡು” ಎಂದು ಹೇಳಿ ಹೆಗ್ಡೆಯವರು ಬಾಯಲ್ಲಿನ ರಸಗವಳವನ್ನು ಉಗಿದು ಬರಲು ಅಂಗಳದ ಮೂಲೆಗೆ ಹೊರಟರು. ಇತ್ತ ಹೇರಂಭ ಹೆಗ್ಡೆಯವರು ಬೇಸರದ ಮುಖ ಹೊತ್ತು ಲಚ್ಚ ಮತ್ತು ಲತಾಳತ್ತ ನೋಡಿದರು. ಲಚ್ಚ ಒಂದೂ ಮಾತನಾಡದೇ ತೋಟದ ಕಡೆ ನಡೆದಿದ್ದ. ಅಲ್ಲಿಗೆ ಅಂದಿನ ಮಾತುಕತೆ ಮುಕ್ತಾಯಗೊಂಡಿತ್ತು. ಲಚ್ಚನ ಮನಸ್ಸಿನ ಹಬ್ಬದ ಮನೆಗೆ ಸೂತಕದ ಛಾಯೆ ಆವರಿಸಿತ್ತು.
ಅದೊಂದು ದಿನ ಲತಾ ಪಕ್ಕದೂರಿನ ಮದುವೆಯ ಮನೆಗೆ ಹೋಗಿದ್ದಳಾದ್ದರಿಂದ ಲಚ್ಚ ಹೆಗಡೆಯವರಿಗೆ ಊಟ ಬಡಿಸುತ್ತಾ, “ಹೋದ್ ವರ್ಷದ್ ಅಡಿಕೇನ ಮಾರ್ಬೋದಿತ್ತು… ರೇಟ್ ಏರತ್ತೆ ಏರತ್ತೆ ಅಂತ ಹಳೇ ಅಡ್ಕೇನ ಮನೇಲೇ ಇಟ್ಕಂಡು ಆಮೇಲೆ ಹುಳ ಹಿಡ್ದಿದ್ ಅಡ್ಕೇನ ಅರ್ಧ ರೇಟಿಗ್ ಮಾರಿ ಲುಕ್ಸಾನ್ ಮಾಡ್ಕೊಳ್ತಾ ಇರದ್ ಸಾಕು… ಇನ್ಮೇಲಾದ್ರೂ ಅಡ್ಕೇನ ಬೇಗ ಬೇಗ ಮಾರ್ಬಿಡೋಣ ಅಪ್ಪಯ್ಯ…..” ಅದಕ್ಕೆ ಪ್ರತಿಕ್ರಿಯಿಸಿದ ಹೆಗ್ಡೆಯವರು, “ನಾನ್ ಸತ್ಮೇಲ್ ನಿನ್ ಮನ್ಸಿಗ್ ಅನ್ಸಿದ್ನ ಮಾಡು… ನೀನುಂಟು ನಿನ್ ಮಗ ಉಂಟು… ಆದ್ರೆ ಈಗ ನನ್ ತೀರ್ಮಾನದಲ್ಲಿ ಮೂಗ್ ತೂರ್ಸೋಕೆ ಬರ್ಬೇಡ…” ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಲಚ್ಚ” ನಮ್ ಶ್ರಮದ್ ಫಲ ನಾವ್ ಉಣ್ಣೋದೇ ಬೇಡ್ವಾ ಅಪ್ಪಯ್ಯಾ? ಈ ಮನೇಲ್ ನನ್ ಮಾತಿಗ್ ಬೆಲೇನೆ ಇಲ್ಲ ಅಲ್ವ? ಬರೀ ಕತ್ತೆ ದುಡಿದ ಹಾಗೆ ದುಡ್ಯೋದು, ನಿನ್ನ ಸೊಸೈಟಿ, ಬ್ಯಾಂಕು, ಮಂಡಿಗೆ ಕರ್ಕೊಂಡ್ ಹೋಗಿ ಸಹಿ ಹಾಕ್ಸೋದು, ಇಷ್ಟೇ ಅಲ್ವಾ ನನ್ ಜೀವ್ನ… ನನ್ ಆಸೆ ಹಾಗೆ ಒಂದೂ ಆಗ್ಬಾರ್ದು… ಡಿಗ್ರಿ ಓದ್ಬೇಕಾದ್ರೆ ಹಾಕಿದ್ದೇ ಕೊನೇ ಸಹಿ, ಅದಾದ್ಮೇಲೆ ವ್ಯವಹಾರಿಕ್ಕಾಗಿ ಒಂದೇ ಒಂದ್ ಸಹೀನ ಮಾಡೋ ಸಂದರ್ಭ ಬರಕ್ ನೀ ಬಿಟ್ಟಿಲ್ಲ… ಅಷ್ಟೇ ಏಕೆ? ಒಂದ್ ಓಮಿನ್ ಕಾರ್ ತಗೊಳ್ಳೋಕೆ ನಾವ್ ಕೂಡಿಟ್ಟಿದ್ ಪುಡಿಗಾಸನ್ನೆಲ್ಲಾ ಸೇರ್ಸೋ ಹಾಗಾಯ್ತು ನನ್ ಹಣೇಬರಹಕ್ಕೆ…. ಮಗ ಯಾವ್ ಸ್ಕೂಲ್ಗೆ ಹೋಗ್ಬೇಕು, ಏನ್ ಓದ್ಬೇಕು, ಮುಂದೇನ್ ಮಾಡ್ಬೇಕು ಇದನ್ನೂ ನನ್ ತೀರ್ಮಾನಕ್ ಬಿಡ್ಲಿಲ್ಲ… ಈಗ ಅವನಿಗೇ ಎಲ್ಲಾ ಜವಾಬ್ದಾರಿ ಕೊಡೋ ಮೂಲ್ಕ ಮುಂದೂ ಅವನ್ಮೇಲೆ ನಮ್ಗೆ ಹಕ್ಕೇ ಇಲ್ದಿರೋ ಹಾಗೆ ಮಾಡೋಕೆ ಹೊರ್ಟಿದೀರಿ…. ಆವಾಗ್ಲೇ ನಾನು ನನ್ ಹೆಂಡ್ತಿ ಎಲ್ಲಾದ್ರೂ ಬೇರೆ ಕಡೆಗ್ ಹೋಗ್ ಇದ್ಬಿಡ್ತೀವಿ ಅಂದ್ರೆ ಅದಕ್ಕೂ ಬಿಡ್ಲಿಲ್ಲ… ನೀವ್ ನನ್ನ ಒಬ್ಬಂಟಿ ಮಾಡಿ ಹೋದ್ರೆ ನಾನು ಆತ್ಮಹತ್ಯ ಮಾಡ್ಕೊಂಡ್ಬಿಡ್ತೀನಿ ಅಂತ ಹೆದ್ರಿಸ್ತಿದ್ರಿ… ಸಣ್ ಪುಟ್ಟ್ ವಿಷ್ಯಕ್ಕೂ ನಿಮ್ ಒಪ್ಗೆ ಪಡ್ಯೋದು ಈ ವಯಸ್ಸಲ್ಲಿ ಎಷ್ಟ್ ಕಷ್ಟ ಅಂತ ನಿಂನ್ಗೆಲ್ಲಿ ಗೊತ್ತಾಗತ್ತೆ ಬಿಡು… ನನ ಅಜ್ಜ ನಿನ್ಗೆ ಸಣ್ ವಯಸ್ಸಲ್ಲೇ ಯಜ್ಮಾನ್ಕೇ ಬಿಟ್ ಹೋದ್ನಲ್ಲಾ…” ಲಚ್ಚ ವಿಚಿತ್ರವಾಗಿ ಏರು ದನಿಯಲ್ಲಿ ಕೂಗುತ್ತಿದ್ದ. ಕಣ್ಣು ತೇವವಾಗಿತ್ತು. ಶಾಂತ ಸ್ವಭಾವದ ಲಚ್ಚನ ಸಹನೆಯ ಕಟ್ಟೆ ಅಂದು ಒಡೆದಿತ್ತು… ಹೆಗ್ಡೆಯವರು ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಾ ಊಟ ಮುಗಿಸಿ ಕೈ ತೊಳೆದಿದ್ದರು.
“ಅವತ್ ಅದ್ಯಾವ ಬಾಯಲ್ಲಿ ಗೌತಮನ್ನ ಇಲ್ಲಿಗ್ ಕರ್ಸೋ ಸುದ್ದಿ ಎತ್ತಿದ್ಯೋ… ಅಷ್ಟ್ರ ಮೇಲೆ ಅವ ನನ್ ಮಗ ಅನ್ನೋದನ್ನೂ ಮರ್ತು ಅವ್ನ ಮೇಲೆ ಅಸೂಹೆ ಪಡೋ ಹಾಗಾಗೋಗಿದೆ. ನೀನು ನನ್ ಮಾತನ್ನ ಕೇಳಿದ್ರೆ ವರ್ಷಕ್ಕೆ ಎಂಟ್ ಹತ್ ಲಕ್ಷ ಜಾಸ್ತಿ ಬರೋಹಾಗೆ ಮಾಡ್ತಿದ್ದೆ. ನಾನ್ ಹಾಕೋ ಕಸೆ ಗಿಡ, ನಾನ್ ಮಾಡೋ ಹೊಸ ಹೊಸ ಕೃಷಿ ಪ್ರಯೋಗಗಳು ಎಲ್ಲೂ ಬೆಳ್ಕಿಗೆ ಬರ್ದೆ ಸಾಯ್ಲಿಕ್ಕೆ ನೀನೇ ನೇರ ಕಾರಣ ಅಪ್ಪಯ್ಯಾ” ಎನ್ನುತ್ತಾ ಅಲ್ಲೇ ಕಟ್ಟೆಯ ಮೇಲಿದ್ದ ಹುಲ್ಲು ಸವರುವ ಕತ್ತಿಯನ್ನು ತೆಗೆದುಕೊಂಡು ಹೋಗಿ ಹೆಗ್ಡೆಯವರ ಕತ್ತಿನ ಮೇಲೆ ಇಟ್ಟ ಲಚ್ಚ,”ನಾನ್ ಏನ್ ತಪ್ ಮಾಡಿದ್ದೆ? ನೀನ್ ಹೇಳಿದನ್ನೆಲ್ಲಾ ಕೇಳಿದ್ದೇ ನನ್ ತಪ್ಪಾ? ಊರವರ ಎದುರಿಗೆ ಮತ್ತು ನಿನ್ನ ಎದುರಿಗೆ ಗೌರವವಾಗಿ ನಡೆದುಕೊಂಡಿದ್ದು ನನ್ನ ತಪ್ಪ? ನೀ ಹಾಕಿದ ಗೆರೆಯನ್ನು ಮೀರದ್ದು? ಏನು ನನ್ನ ತಪ್ಪು?” ಎಂದಿದ್ದ. ಹೆಗ್ಡೆಯವರು ಆತಂಕದಿಂದಾ ನಡುಗುತ್ತಾ ಎಂಜಲು ನುಂಗುತ್ತಿದ್ದರು. ಮತ್ತು ಅವರ ಮುಖದಿಂದ ಬೆವರು ಸುರಿಯುತ್ತಿತ್ತು. ಲಚ್ಚ ಮತ್ತೆ ಮಾತು ಮುಂದುವರಿಸಿ, “ನಮ್ಮ ಮನೇಲಿ ಏನೇ ಕಾರ್ಯಕ್ರಮ ನಡೆದ್ರೂ ಪೂಜೆಗೆ ಕೂರೋದು ನೀನು ಆದ್ರೆ ತೆಯಾರಿ ಮಾಡೋದು ನಾವು, ಮನೆಯ ಕೀಲೀ ಕೈನ ಅಷ್ಟು ಭದ್ರ ಮಾಡೋ ನೀನು ನಿನ್ನ ಮಗನ ಭವಿಷ್ಯವನ್ನೇ ಯಾಕೆ ಗಾಳೀಲಿ ತೂರ್ಬಿಟ್ಟೆ? ನೀನು ಮನ್ಸು ಮಾಡಿದ್ರೆ ಅವತ್ತು ನನಗೆ ಮಿಲ್ಟ್ರೀಲಿ ಕೆಲ್ಸಾ ಸಿಗ್ತಿತ್ತು… ಅದಕ್ಕೂ ಕಲ್ಲು ಹಾಕಿದೆ? ಇದೆಲ್ಲಾದ್ರಿಂದ ನೀನು ಸಾದ್ಸಿದ್ದಾದ್ರೂ ಏನು? ಲಚ್ಚನ ಕತ್ತಿಯ ಅಲಗು ಈಗ ಹೆಗ್ಡೆಯವರ ಗಂಟಲಿಗೆ ಸೂಜಿ ಮೊನೆಯ ಅಂತರದಲ್ಲಿತ್ತು.
ಹಲವು ನಿಮಿಷಗಳ ಮೌನವನ್ನು ಮುರಿಯಲು ಹೆಗ್ಡೆಯವರಿಗೆ ಸಾಧ್ಯವೇ ಆಗಲಿಲ್ಲ. ಅಷ್ಟರಲ್ಲಿ ಮದುವೆಮನೆಯ ಊಟ ಮುಗಿಸಿ ಬಂದ ಲತಾ ಅಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಅರಿಯದೇ ಒಂದು ಕ್ಷಣ ಧಿಗ್ಭ್ರಾಂತಳಾಗಿದ್ದರೂ ಗಡಿಬಿಡಿಯಿಂದ ಅಲ್ಲಿಗೆ ಓಡಿಹೋಗಿ ಗಂಡನ ಕೈಯಲ್ಲಿದ್ದ ಕತ್ತಿಯನ್ನು ಕಿತ್ತುಕೊಂಡು ದೂರಕ್ಕೆ ಎಸೆದಳು. ಈಗ ದೊಡ್ಡ ನಿಟ್ಟುಸಿರು ಬಿಟ್ಟ ಹೆಗ್ಡೆಯವರು ಲತಾಳನ್ನು ನೋಡುತ್ತಾ”ಲತಾ… ಅವ್ನು ನನ್ನ ಕೊಲ್ಲೋಕೆ ನೀನು ಬಿಡ್ಬೇಕಿತ್ತು” ಎನ್ನುತ್ತಾ ಬೆವರಿದ್ದ ಮುಖವನ್ನು ಒರೆಸಿಕೊಳ್ಳುತ್ತಿದ್ದರೆ ಲಚ್ಚ ತನ್ನ ಅಪ್ಪನನ್ನು ಗುರಾಯಿಸುತ್ತಾ, ಕೃತಕ ನಗುವಿನೊಂದಿಗೆ ” ಹಹ್ಹಾ… ಯಜಮಾನನ ಪಟ್ಟ ನಿನಗೆ ಆದ್ರೆ ಕೊಲೆಗಾರನ ಪಟ್ಟ ಮಾತ್ರಾ ನಿನ್ನ ಮಗನಿಗೆ ಬರ್ಬೇಕು ಅಂತಲ್ವಾ?” ಎನ್ನುತ್ತಾ ಪಂಚೆಯನ್ನು ಎತ್ತಿ ಕಟ್ಟಿಕೊಳ್ಳುತ್ತಾ ಒಳನಡೆದ. ಅಲ್ಲಿ ಏನು ನಡೆಯಿತು ಎಂಬ ಪ್ರಶ್ನಾರ್ಥಕ ಚಿಹ್ನೆ ಲತಾಳ ಮನದಲ್ಲಿ ಮೂಡಿತ್ತು. ಇದಾದ ಬಳಿಕ ಹೆಗ್ಡೆಯವರು ಸಂಪೂರ್ಣ ಮೌನಕ್ಕೆ ಜಾರಿದರು.
ಲತಾಳಿಗೆ ಗೌತಮ ಫೋನು ಮಾಡಿ “ಅಮ್ಮಾ ಅಪ್ಪಂಗೆ ಫೋನ್ ಕೊಡು, ಮಾತಾಡದೇ ತುಂಬಾ ದಿನ ಆಯ್ತು” ಅಂದ. ಲತಾಳು “ಅವ್ರ್ ಇತ್ತೀಚೆಗ್ಯಾಕೋ ಮೊದ್ಲಿನ್ ತರ ಇಲ್ಲಾ ಕಣೋ… ಮೊನ್ನೆ ಆ ಜಗ್ಳ ಆದ್ಮೇಲೆ ನಿನ್ ಅಜ್ಜಾನೂ ಮಾತಾಡ್ತಿಲ್ಲ… ಇವ್ರೂ ಮಾತಾಡ್ತಿಲ್ಲ… ನನ್ಗೊಬ್ಳಿಗೇ ಇಲ್ಲಿ ಬೇಜಾರು ಬಂದೋಗಿದೆ. ನೀನ್ ಆದಷ್ಟ್ ಬೇಗ ಬಂದ್ಬಿಡೋ” ಅಂದಳು. ಅಮ್ಮನ ಈ ಮಾತನ್ನು ಕೇಳಿ ತುಸು ಸಿಟ್ಟಾದ ಗೌತಮ, “ಅಮ್ಮಾ ಅಜ್ಜಂಗೇನೋ ಬುದ್ದಿ ಇಲ್ದೇ ನನಗೇ ಯಜ್ಮಾನ್ಕೆ ಕೊಡ್ತೀನಿ ಅಂದ್ರೆ ನೀವೂ ನಂಬಿದೀರಾ… ಅಪ್ಪ ಗಟ್ಟಿ ಇರೋ ತನ್ಕ ನಾನ್ ಈ ಕೆಲ್ಸಾನೆಲ್ಲಾ ಬಿಟ್ ಅಲ್ಲಿಗೆ ಬರೊಲ್ಲಾ…” ಎಂದು ಹೇಳಿ ಫೋನ್ ಕಟ್ ಮಾಡಿದ. ಈ ವಿಷಯವನ್ನು ಗಂಡನಿಗೆ ತಿಳಿಸಲೆಂದು ಕೋಣೆಯ ಒಳಗೆ ಓಡಿದ ಲತಾಳು, ಕೋಣೆಯ ಟೇಬಲ್ಲಿನ ಮೇಲೆ ತಲೆಯೊರಗಿಸಿ ಮಲಗಿದ ಲಚ್ಚನನ್ನು ಮತ್ತು ಅಲ್ಲೇ ಪಕ್ಕದಲ್ಲೇ ಬಿದ್ದಿದ್ದ ಕಳೇನಾಶಕದ ಬಾಟೆಲನ್ನು ನೋಡಿ ನೆಲಕಚ್ಚಿದಳು! ಲಚ್ಚನ ಸಹಿ ಇದ್ದ ಡಿಗ್ರಿ ಮಾರ್ಕ್ಸ್ ಕಾರ್ಡ್ ಮೂಲೆಯಲ್ಲಿ ಬಿದ್ದಿತ್ತು.
ಕೌಂಡಿನ್ಯ ಕೊಡ್ಲುತೋಟ
ಊರು: ಬನಜಾಲಯ ಕೊಡ್ಲುತೋಟ, ವರದಾಮೂಲ ಅಂಚೆ,
ಸಾಗರ, ಶಿವಮೊಗ್ಗ. ೫೭೭೪೦೧