ಹರಿದ ಮಾಸಲು ಅಂಗಿ
ಮೊಣಕಾಲ್ಮೇಲಿನ ತುಂಡು ಚಡ್ಡಿ
ಹೆಗಲ ಮೇಲಿನ ಚೀಲದಿಂದ
ಇಣುಕುತ್ತಿದ್ದ ಹಳೆಯ ಪೇಪರ್,
ಪ್ಲಾಸ್ಟಿಕ್ಕಿನ ಬಾಟಲಿಗಳು.
ಹಗಲೆಲ್ಲಾ ಅಲೆದಲೆದು ತಂದದ್ದೆಲ್ಲಾ
ಸಂಜೆಗೆ ಗುಜರಿಯವನ ಹಿತ್ತಲಿಗೆ,
ಕೈಮೇಲೆ ಸಿಕ್ಕಿದ್ದು ಒಂದೆರಡೇ ಕಾಸು
ಹರಿದ ಬದುಕಿನ ಹೊಟ್ಟೆಗೆ,
ಕಂಡ ಕನಸಿನ ನನಸಿಗೆ.
ಅದೇ ಕಸದ ರಾಶಿಯ ಬದಿಯ
ಮರಕೆ ಬಿಗಿದ ಅವ್ವನ
ಹರಿದ ಸೀರೆಯ ಜೋಕಾಲಿಯ
ಜೀಕುವಾಗ…ಜೀವನವನ್ನೇ
ಜಯಿಸಿದ ಆನಂದ ಆ ಕಣ್ಗಳಲಿ.
ನಾಗರೀಕತೆಯ ನಾಟಕದ
ಈ ಮುಗ್ಧತೆಗೆ ಪಾತ್ರವಿಲ್ಲ…
ಅಕ್ಷರದ ರುಚಿ ಕಂಡಿಲ್ಲ…
ದೊರಕಿದ್ದು ಕೇವಲ ಅರೆಹೊಟ್ಟೆಯ ಗಂಜಿ
ಅರೆಬೆಳಕಿನ ಗುಡಿಸಲೊಳಗೆ…!!