ಗೃಹಿಣಿಗೆ ಆದಾಯವೆಂದರೆ ಬರೀ ಹಣವೊಂದೆಯೇ…?! – ಅಚಲ ಬಿ ಹೆನ್ಲಿ

ಹೌದು, ಇಂತಹದ್ದೊಂದು ಪ್ರಶ್ನೆ ಪ್ರತಿಯೊಂದು ಮನೆಯಲ್ಲಿಯೂ, ಪ್ರತಿಯೊಬ್ಬ ಗೃಹಿಣಿಯೂ ಕೇಳಿಕೊಂಡು ಅದಕ್ಕೆ ಸಮರ್ಪಕವಾದ ಉತ್ತರವನ್ನು ಕಂಡುಕೊಂಡರೆ, ಪ್ರಾಯಶಃ ಮದುವೆಯಾದ ನಂತರ ಅಥವಾ ಮಕ್ಕಳಾದ ನಂತರ ಮನೆಯ ಪರಿಸ್ಥಿತಿಗೋಸ್ಕರ ತಾವು ಮಾಡುತ್ತಿರುವ ಕೆಲಸವನ್ನು ಬಿಟ್ಟು ಅಥವಾ ಮೊದಲಿನಿಂದಲೂ ಹೌಸ್ ವೈಫ್ ಆಗಿಯೇ ಇರುವಂತಹ ಹೆಣ್ಣು ಮಕ್ಕಳನ್ನು ಅಕ್ಕ ಪಕ್ಕದವರು “ವರ್ಕಿಂಗ್ ಅಥವಾ ಹೌಸ್ ವೈಫ್..?” ಎಂಬ ಪ್ರಶ್ನೆ ಕೇಳಿದಾಗ, ಗೃಹಿಣಿಯರು ಸಂಕೋಚ ಪಟ್ಟುಕೊಳ್ಳುವುದಿಲ್ಲ ಅನಿಸುತ್ತೆ..!

ಮೊದಲೆಲ್ಲ ಹೀಗಿರಲಿಲ್ಲ. ಹೆಣ್ಣೆಂದರೆ ನಾಲ್ಕು ಗೋಡೆಗಳ ಮಧ್ಯಕ್ಕಷ್ಟೇ ಸೀಮಿತಳಾಗಿದ್ದಳು. ತಾನು, ತನ್ನ ಸಂಸಾರ ಮತ್ತು ಅಡುಗೆ ಮನೆ ಇವಿಷ್ಟೇ ಅವಳ ಪ್ರಪಂಚವಾಗಿತ್ತು. ಆದರೆ ಬರುಬರುತ್ತಾ ಹೆಣ್ಣು ಸುಶಿಕ್ಷಿತಳಾದಳು. ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಇರುವಿಕೆಯನ್ನು ಯಶಸ್ವಿಯಾಗಿ ತೋರ್ಪಡಿಸಿದಳು. ಇದರಿಂದ ಹೆಣ್ಣೆಂದರೆ ಮನೆ ಕೆಲಸ, ಅಡುಗೆ, ಸಂಸಾರ ಇವಿಷ್ಟೇ ಅಲ್ಲ, ಅವಳು ಹೊರಗೆ ಹೋಗಿ ದುಡಿಯುವ ತಾಕತ್ತು ಇರುವವಳು ಎಂದು ಸಾಧಿಸಿ ತೋರಿಸಿದಳು.

ಆದರೆ ಈ ಒಂದು ಅಭಿಪ್ರಾಯ ಒಂದು ವರ್ಗದ ಹೆಣ್ಣು ಮಕ್ಕಳಿಗೆ ವರದಾನವಾದರೆ, ಇನ್ನೊಂದು ವರ್ಗದ ಹೆಣ್ಣು ಮಕ್ಕಳಿಗೆ ಚಿಪ್ಪಿನೊಳಗೆ ಬಚ್ಚಿಟ್ಟುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಹೆಣ್ಣಿಗೆ ಮದುವೆ ಗೊತ್ತಾದ ಸಂದರ್ಭದಲ್ಲಿ ಲಗ್ನಪತ್ರಿಕೆ ಕೊಡಲು ಹೋದಾಗ ಹುಡುಗ ಹುಡುಗಿ ಇಬ್ಬರ ಮನೆಯವರಿಗೂ ಸಂಬಂಧಿಕರು, ಸ್ನೇಹಿತರು, ಪರಿಚಯದವರು ಕೇಳುವ ಪ್ರಶ್ನೆಯೊಂದೇ. “ಹುಡುಗಿ ವರ್ಕ್ ಮಾಡುತ್ತಿದ್ದಾಳಾ…?” ಎಂದು..! ಅಲ್ಲಿಂದ ಪ್ರಾರಂಭವಾಗುವ ಈ ಪ್ರಶ್ನೆ ಬಹುಶಃ ಆ ಹೆಣ್ಣು ಅತ್ತೆಯಾಗುವವರೆಗೂ ಮುಂದುವರೆಯುತ್ತದೆ ಎನಿಸುತ್ತೆ.

ಇತ್ತೀಚಿನ ದಿನಗಳಲ್ಲಿ ಹೆಣ್ಣಿಗೆ ಆರ್ಥಿಕ ಸ್ವಾವಲಂಬನೆ ಬಹಳವೇ ಮುಖ್ಯವಾಗಿದೆ. ಪರೋಕ್ಷವಾಗಿ ಅದಕ್ಕೆ ಕಾರಣವೂ ಪುರುಷನೆಂದೇ ಹೇಳಬಹುದು. ಮದುವೆಯಾದ ನಂತರ ಕೆಲಸಕ್ಕೆ ಹೋಗದೆ “ಫುಲ್ ಟೈಮ್ ಹೌಸ್ ವೈಫ್” ಆದವಳಿಗೆ ಖರ್ಚು ವೆಚ್ಚದ ವಿಷಯ ಬಂದಾಗ ಬಲು ಕಷ್ಟವಾಗುತ್ತದೆ. ಸೂಕ್ಷ್ಮವನ್ನು ಅರ್ಥಮಾಡಿಕೊಳ್ಳುವ ಗಂಡ ಮತ್ತು ಗಂಡನ ಮನೆಯವರು ಸಿಕ್ಕಿದರೆ ಅವಳು ನಿಜಕ್ಕೂ ಅದೃಷ್ಟವಂತಳೆ. ಆದರೆ ಎಷ್ಟೋ ಮನೆಯಲ್ಲಿ ಆಗುವುದೇ ಬೇರೆ. ಚಿಕ್ಕ ಚಿಕ್ಕ ಖರ್ಚಿಗೂ ಅವಳು ಗಂಡನ ಮುಂದೆ ವರದಿ ಒಪ್ಪಿಸಿ ಹಣ ಕೇಳಬೇಕೆಂದರೆ ನಿಜಕ್ಕೂ ಅದು ಮುಜುಗರದ ಸಂಗತಿಯೇ ಸರಿ.

ಅರ್ಜೆಂಟಾಗಿ ಹಣ್ಣು ತರಕಾರಿ ಕೊಳ್ಳುವುದಕ್ಕೋ, ಮಗುವಿಗೆ ಆಟ ಸಾಮಾನು ಕೊಡಿಸುವುದಕ್ಕೋ, ತನ್ನ ಮಕ್ಕಳಿಗೆ ತಿಂಡಿ ತೆಗೆದುಕೊಡುವುದಕ್ಕೋ, ಅವಳಿಗೆಯೇ ಇಷ್ಟವಾದ ವಸ್ತುಗಳನ್ನು ಖರೀದಿಸುವುದಕ್ಕೋ, ಅಥವಾ ತೀರಾ ಅವಶ್ಯವಿರುವ ಸಾಮಾನುಗಳನ್ನು ತೆಗೆದುಕೊಳ್ಳುವುದಕ್ಕೋ ಪದೇ ಪದೇ ಗಂಡನ ಮುಂದೆ ಕೈ ಚಾಚುವುದು ಬಹಳ ಅಸಹನೀಯ. ಆದರೆ ಅಂತಹ ಪರಿಸ್ಥಿತಿಯನ್ನು ಈಗಲೂ ಎಷ್ಟೋ ಹೆಣ್ಣು ಮಕ್ಕಳು ಅನುಭವಿಸುತ್ತಿದ್ದಾರೆ. ತಮ್ಮ ಈಡೇರದ ಆಸೆ ಕನಸುಗಳ ಬಗ್ಗೆ ಕನವರಿಸುತ್ತಾ, ತಮ್ಮಲ್ಲಿ ಇರದಿರುವ ಹಣದ ಬಗ್ಗೆ ದುಃಖಿಸುತ್ತಾ ದಿನವೂ ಕಾಲ ದೂಡುತ್ತಿದ್ದಾರೆ.

ಆದರೆ ಗಂಡಾದವನ ಅಹಂ ಕಡಿಮೆಯಾಗುವಂತೇನೂ ಕಾಣುತ್ತಿಲ್ಲ. ಇಡೀ ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡು, ಮನೆಯಲ್ಲಿರುವವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾ, ಇಡೀ ದಿನ ಎಲ್ಲರ ಸೌಖ್ಯಕ್ಕಾಗಿ ಕಾಲ ಕಳೆಯುವವಳು ಈ ಒಂದು ವಿಷಯಕ್ಕಾದರೂ ತನ್ನ ಮುಂದೆ ಬಗ್ಗಲಿ ಎಂಬ ಭಾವವಿರಬಹುದೇನೋ..! ತಾನು ಹೊರಗೆ ದುಡಿಯುತ್ತಿರುವವನು, ತಾನು ಗಳಿಸಿದ ಹಣದಿಂದಲೇ ಇಡೀ ಮನೆ ನಡೆಯುತ್ತಿರುವುದು, ಹೆಂಡತಿಯಾದವಳು ಕಸ ಮುಸುರೆ ತಿಕ್ಕಿಕೊಂಡು ಇರುತ್ತಾಳೆ, ಹಾಗಾಗಿ ಹಣದ ಬಗ್ಗೆ ಅವಳಿಗೆ ಅರಿವಿಲ್ಲ, ಏನೇ ವಿಷಯವಿದ್ದರೂ ಅಥವಾ ಖರ್ಚಿದ್ದಿರೂ ತನ್ನ ಬಳಿ ಕೇಳಿ ತೆಗೆದುಕೊಳ್ಳಲಿ ಎಂಬ ಮನೋಭಾವ ಅನೇಕ ಗಂಡಸರಲ್ಲಿ ಇದೆ.

ಈ ಒಂದು ವಿಷಯದಿಂದಲೇ ಅನೇಕ ಮನೆಗಳಲ್ಲಿ ಪತಿ-ಪತ್ನಿಯರ ನಡುವೆ ಜಗಳ ಮನಸ್ತಾಪ ತಲೆದೂರಬಹುದು. ತಾನು ಹಣಗಳಿಸದೇ ಇರುವ ಸಾಮಾನ್ಯ ಹೌಸ್ ವೈಫ್. ಬೇರೆ ಹೆಣ್ಣು ಮಕ್ಕಳಂತೆ ಆಚೆ ಹೋಗಿ ವರ್ಕ್ ಮಾಡುತ್ತಿಲ್ಲ ಎಂಬ ಹಿಂಜರಿಕೆ ಅನೇಕ ಗೃಹಿಣಿಯರಲ್ಲಿ ಇದೆ. ಪದೇ ಪದೇ “ವರ್ಕ್ ಮಾಡುತ್ತಿದ್ದೀರಾ” ಎಂಬ ಸಮಾಜ ಕೇಳುವ ಪ್ರಶ್ನೆ ಅವಳಿಗೆ ತನ್ನ ಬಗ್ಗೆ ತನಗೇ ಬೇಸರ ಮೂಡುವಂತೆ ಮಾಡುತ್ತದೆ.

ಆದರೆ ಕೊನೆಯಲ್ಲಿ ಬೃಹದಾಕಾರವಾಗಿ ಯಕ್ಷಪ್ರಶ್ನೆ ಒಂದು ಮೂಡುತ್ತದೆ. ಗೃಹಿಣಿಗೆ ಆದಾಯವೆಂದರೆ ಅದು ಬರೀ ಹಣದ ರೂಪದಿಂದಲೇ ಬರಬೇಕೆ..? ಅಥವಾ ಬೇರೆ ರೀತಿಯಲ್ಲಿ ಅವಳಿಗೆ ದಕ್ಕಿದರೆ ಅದನ್ನು ಆದಾಯ ಎನ್ನಬಾರದೆ ಎಂದು..! ಮಡದಿಯಾಗಿ ಮನೆ ಸೇರಿದವಳು, ನಂತರ ಸಂಪೂರ್ಣ ಮನೆಯ ಜವಾಬ್ದಾರಿಯನ್ನು ತೆಗೆದುಕೊಂಡು, ಗಂಡನ ಏಳಿಗೆಗೆ ಕಾರಣವಾಗುವುದು, ಕುಟುಂಬಸ್ಥರನ್ನು ತನ್ನವರೆಂದು ಜೋಪಾನ ಮಾಡುವುದು, ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವುದು, ಇವೆಲ್ಲದರಿಂದ ಆಗುವ ಒಳ್ಳೆಯ ಉಪಯೋಗಗಳು ಅವಳಿಗೆ ಸಂದಿದ ಆದಾಯವೆಂದು ಏಕೆ ಪರಿಗಣಿಸಬಾರದು..?

ತನ್ನ ಕುಟುಂಬಕ್ಕೋಸ್ಕರ, ಮಕ್ಕಳು ಗಂಡನಿಗೋಸ್ಕರ, ಹಗಲು ರಾತ್ರಿ ಯೋಚಿಸುವ ಗೃಹಿಣಿ, ತನ್ನ ಬಗ್ಗೆ, ತನ್ನ ಆಸೆ ಆಕಾಂಕ್ಷೆಗಳ ಬಗ್ಗೆ ಯೋಚಿಸುವುದು ಕಡಿಮೆಯೆಂದೇ ಹೇಳಬಹುದು. ಗಂಡನಾದವನಿಗೆ ನೆಮ್ಮದಿಯನ್ನು ತಂದುಕೊಟ್ಟು, ಅವನ ಬಡ್ತಿಗೆ ಕಾರಣವಾಗುವ ಆಕೆ, ಮಗ ಅಥವಾ ಮಗಳನ್ನು ಚಿಕ್ಕಂದಿನಿಂದ ಪಾಲನೆ ಪೋಷಣೆ ಮಾಡಿ ಎದೆ ಎತ್ತರಕ್ಕೆ ಜೋಪಾನವಾಗಿ ಏರಿಸಿ, ನಂತರ ಅವರು ಒಳ್ಳೆಯ ಕೆಲಸವನ್ನು ಹಿಡಿದು ಜೀವನದಲ್ಲಿ ಸೆಟಲ್ ಆದಾಗ ಪಡುತ್ತಾಳಲ್ಲ ಆ ಖುಷಿ, ನಂತರ ಮಗ- ಮಗಳಿಗೆ ಒಳ್ಳೆಯ ಕಡೆ ಸಂಬಂಧ ನೋಡಿ, ಮದುವೆ ಮಾಡಿ ಮುಗಿಸಿದಾಗ ಅವಳ ಕಣ್ಣಲ್ಲಿ ಕಾಣುತ್ತದೆಯಲ್ಲ ಆ ಸಂತೋಷ ಮತ್ತು ನೆಮ್ಮದಿ, ಇವೆಲ್ಲವೂ ಅವಳಿಗೆ ಸಂದ ಕಣ್ಣಿಗೆ ಕಾಣದ ಅಮೂಲ್ಯವಾದ ಆದಾಯವೇ ಅಲ್ಲವೇ..?

ಆದಾಯವೆಂದರೆ ಬರಿ ಹಣ ಗಳಿಕೆ ಎಂದು ಪ್ರಾಕ್ಟಿಕಲ್ ವರ್ಲ್ಡ್ ಹೇಳುತ್ತದೆ ನಿಜ. ನಾವು ಸಂತೋಷದಿಂದ ಬಾಳುವುದಕ್ಕೂ ಹಣ ಬೇಕು. ಆದರೆ ಬರಿ ಹಣದಿಂದಲೇ ಪ್ರೀತಿ, ನೆಮ್ಮದಿ, ಸುಖ, ಶಾಂತಿಯನ್ನು ಕಂಡುಕೊಳ್ಳುವುದಕ್ಕೆ ಆಗುವುದಿಲ್ಲ. ಎಲ್ಲವನ್ನು ತಂದು ಕೊಡುವುದು ಒಬ್ಬಳು ಗೃಹಿಣಿ ಮಾತ್ರ..! ಇಂತಹ ಗೃಹಿಣಿಗೆ “ಹಣದ ರೂಪದ ನಿನ್ನ ಆದಾಯವೇನು…?” ಎಂದು ಪದೇ ಪದೇ ಕೇಳಿ ಮಾನಸಿಕವಾಗಿ ಹಿಂಸಿಸುವುದು ಸರಿಯಲ್ಲ. ಈ ಸಮಾಜದಲ್ಲಿ ಒಂದರ್ಧದಷ್ಟು ದುಡಿಯುವ ಮಹಿಳೆಯರಿದ್ದರೆ ಇನ್ನರ್ಧ ಗೃಹಿಣಿಯರು. ಇವರಿಬ್ಬರ ಮಧ್ಯೆ ಹೋಲಿಕೆ ಮಾಡುವುದು ಬಹಳ ತಪ್ಪು. ಇಬ್ಬರೂ ಅವರವರ ರೀತಿಯಲ್ಲಿ ಅವರು ನಿಜಕ್ಕೂ ಶ್ರೇಷ್ಠರೇ. ದುಡಿಮೆ ಎಂಬ ಪದವನ್ನು ಮಾನದಂಡವಾಗಿಸಿ, ಅವಳನ್ನು ಅಳೆಯುವುದು ಖೇದನೀಯ.

ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪತ್ನಿ ಅಂಜಲಿ ತೆಂಡೂಲ್ಕರ್ ಅವರು ಡಾಕ್ಟರ್ ಆಗಿದ್ದರೂ ಸಹ ಮದುವೆಯಾದ ನಂತರ ಗಂಡನ ಬೆನ್ನೆಲುಬಾಗಿ ನಿಲ್ಲಲು ಮತ್ತು ಮನೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಕೆಲಸಕ್ಕೆ ರಾಜೀನಾಮೆ ನೀಡಿ, ಪೂರ್ಣ ಪ್ರಮಾಣದ ಹೌಸ್ ವೈಫ್ ಆದರು. “ನನ್ನ ಪತ್ನಿ ಮಕ್ಕಳನ್ನು ನೋಡಿಕೊಂಡು, ಚೆನ್ನಾಗಿ ಮನೆ ನಿಭಾಯಿಸಿದರಿಂದಲೇ ನಾನು ಕ್ರಿಕೆಟ್ ನಲ್ಲಿ ಈ ಮಟ್ಟಿಗೆ ಬೆಳೆಯಲು ಸಾಧ್ಯವಾಯಿತು” ಎಂದು ಸಚಿನ್ ಸಂದರ್ಶನಗಳಲ್ಲಿ ಹೇಳಿದ್ದಾರೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ, ಒಬ್ಬಳು ಹೆಣ್ಣು ಇರುತ್ತಾಳೆ ಎಂಬುದಕ್ಕೆ ಈ ಉದಾಹರಣೆಯೇ ಸಾಕ್ಷಿ..!

ಮೇಲಿನ ಉದಾಹರಣೆಯನ್ನು ಗಮನಿಸಿದಾಗ ಈಗಲೂ ಎಷ್ಟೋ ಅಭಿಮಾನಿಗಳು ಅವರ ಪತ್ನಿಯನ್ನು ಹಾಡಿ ಹೊಗಳುತ್ತಾರೆ. ಇಡೀ ಕುಟುಂಬದವರು ಆರ್ಥಿಕವಾಗಿ ಅನುಕೂಲಸ್ಥರು. ಹಾಗಾಗಿ ಅವರ ಪತ್ನಿ ಕೆಲಸ ಬಿಟ್ಟರೂ ಅವರಿಗೇನೂ ಆರ್ಥಿಕವಾಗಿ ತೊಂದರೆಯಾಗಲಿಲ್ಲ. ಇಡೀ ಕುಟುಂಬವನ್ನ, ಡಾಕ್ಟರ್ ಕೆಲಸವನ್ನು ತ್ಯಜಿಸಿ ಚೆನ್ನಾಗಿ ನೋಡಿಕೊಂಡರಲ್ಲ ಎಂಬ ಹೊಗಳಿಕೆ ಪ್ರಶಂಸೆಯೇ ಅವರಿಗೆ ಸಿಕ್ಕಿತು..! ಆದರೆ ಅಂತಹುದೇ ಪತ್ನಿ, ಅಂತಹುದೇ ಗೃಹಿಣಿ ಇಡೀ ದೇಶದಲ್ಲಿ ಮೂಲೆ ಮೂಲೆಯಲ್ಲಿಯೂ ಇದ್ದಾರೆ..! ತಮ್ಮ ಮನೆಯವರ ಏಳಿಗೆಯೇ ತನ್ನ ಏಳಿಗೆ, ತಮ್ಮ ಕುಟುಂಬದವರ ಸಂತೋಷವೇ ತನ್ನ ಸಂತೋಷ ಎಂದು ಮನೆಯೊಳಗೆಯೇ ಜೀವನ ಸವೆಸುತ್ತಿರುವ ಅನೇಕ ಹೆಣ್ಣು ಮಕ್ಕಳಿದ್ದಾರೆ.

ಆದರೆ ಇಂತಹ ಹೆಣ್ಣು ಮಕ್ಕಳನ್ನು ನಮ್ಮ ಸಮಾಜ ನೋಡುವ ದೃಷ್ಟಿಯೇ ಬೇರೆ. ಕೆಲವೊಮ್ಮೆ ಗಂಡ, ಅತ್ತೆಮಾವ, ಸಂಬಂಧಿಕರೇ “ಮನೆಯಲ್ಲಿ ಇರುವವಳು ಅವಳಿಗೇನೂ ಗೊತ್ತಾಗುವುದಿಲ್ಲ” ಎಂಬ ಹಣೆಪಟ್ಟಿ ಅಂಟಿಸಿ ಅವಳಿಗೆ ಮರ್ಯಾದೆ ಕೊಡುವುದಿಲ್ಲ. ಎಂತಹ ವಿಪರ್ಯಾಸವಲ್ಲವೇ..?
ಮನೆಯಲ್ಲಿ ಫುಲ್ ಟೈಮ್ ಗೃಹಿಣಿಯಾಗಿ ದುಡಿಯುತ್ತಿರುವವರೆಲ್ಲರೂ ಆರ್ಥಿಕವಾಗಿ ಸ್ವಾವಲಂಬಿಗಳಾಗುವುದು ಕನಸಿನ ಮಾತೇ ಸರಿ. ಅದೆಲ್ಲವೂ ಅವರವರ ಮನೆಯ ಪರಿಸ್ಥಿತಿಯ ಮೇಲೆ, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಆಸಕ್ತಿಯ ಮೇಲೆ ಅವಲಂಬಿತವಾಗಿದೆ. ಗೃಹಿಣಿಯಾದಾಕೆ ಯಾವುದೇ ಕಾರಣಕ್ಕೂ ತಾನು ಹಣಗಳಿಸುವಂತಹ ಕೆಲಸ ಮಾಡುತ್ತಿಲ್ಲ ಎಂದು ಬೇಸರಿಸಿಕೊಳ್ಳಬಾರದು.

ಹೇಳಬೇಕೆಂದರೆ ದಿನಪೂರ್ತಿ ಬಿಡುವಿಲ್ಲದೆ ಆಕೆ ಮಾಡುವ ಲೆಕ್ಕಕ್ಕೆ ಸಿಗದಷ್ಟು ಕೆಲಸಗಳಿಗೆ, ಜವಾಬ್ದಾರಿಯುತವಾದ ನಡೆಗೆ, ಗಂಡನಾದವನೇ ಅಲ್ಪಸ್ವಲ್ಪವಾದರೂ ಹಣವನ್ನು ಅವಳ ಖಾತೆಗೆ ವರ್ಗಾಯಿಸಬೇಕು..! ಆದರೆ ಅಂತಹ ಆರೋಗ್ಯಯುತವಾದ ಮನಸ್ಥಿತಿ ಗಂಡಂದಿರಲ್ಲಿ ಕಾಣುವುದು ಬಲು ಅಪರೂಪ. ಹಾಗೇನಾದರೂ ಕಂಡರೆ ಅಂತಹ ಗಂಡಂದಿರು ಆದರ್ಶಪ್ರಾಯರೇ ಸರಿ..! ತೀರಾ ತಾನು ಎಲ್ಲರ ಮುಂದೆ ಆರ್ಥಿಕವಾಗಿ ದುಡಿಯದೇ ಕುಬ್ಜಳಾಗುತ್ತಿದ್ದೇನೆ ಎಂದೆನಿಸಿದರೆ ಹಣ ಗಳಿಸಲು ಹಲವು ದಾರಿಗಳಿವೆ. ಅದನ್ನು ಸರಿಯಾಗಿ ಗುರುತಿಸಿ, ತಾಳ್ಮೆಯಿಂದ ಮತ್ತು ಜಾಣ್ಮೆಯಿಂದ ಹೆಜ್ಜೆಯನ್ನು ಗೃಹಿಣಿಯಾದವಳು ಇರಿಸಬೇಕಿದೆ.

“ಇಟ್ಟರೆ ಎರಡು ಹೆಜ್ಜೆ ಮುಂದೆ, ಅವಳು ಎಂದೆಂದೂ ಸಕಾರಾತ್ಮಕವಾಗಿ ಬೆಳೆಯುವ ಛಲವುಳ್ಳವಳೇ…!”
ಎಂದು ಈ ಸಮಯದಲ್ಲಿ ಎಲ್ಲರೂ ಯೋಚಿಸಬೇಕಿದೆ.

ಚಪ್ಪಾಳೆ ತಟ್ಟದಿದ್ದರೂ ಸರಿಯೇ,
ತಳ್ಳದಿದ್ದರೆ ಸಾಕು..!
ಪ್ರೋತ್ಸಾಹಿಸದಿದ್ದರೂ ಸರಿಯೇ,
ವ್ಯಂಗ್ಯವಾಡದಿದ್ದರೆ ಸಾಕು..!
ಎಂಬ ಎರಡು ಸಾಲನ್ನು ಅವಳ ಸುತ್ತವಿರುವ ಸಮಾಜ ಅರ್ಥಮಾಡಿಕೊಳ್ಳಬೇಕಿದೆ.

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop