ಕತ್ತಲಾದರೆ ಯಾರಿಗ್ಯಾರು ಶಿವಾ
ಎಡ ಬಲ
ಬಲ ಎಡ
ಅವರವರ ಮನೆಬಾಗಿಲು ಅವರವರಿಗೇ ಚಂದ
ಎಲ್ಲಾ ಹಗಲುಗಳೂ ಹೀಗೇ
ದಿನಾ ಸಾವ ಬಯಸುತ್ತವೆ
ಹಗಲೆಂದರೆ ಅದು ಹಗಲಷ್ಟೇ
ಅದು ರಾತ್ರಿಯ ಆಸರೆಯಲಿ
ಇನ್ನು ರಾತ್ರಿ ರಾತ್ರಿಯೂ ಅಷ್ಟೇ
ಅದೂ ಹಗಲ ಆಸರೆಯಲ್ಲಿ
ಅದರ ನೆರಳಲ್ಲಿ ಇದು
ಇದರ ನೆರಳಲ್ಲಿ ಅದು
ನಮ್ಮ ನೆರಳುಗಳನ್ನು ನಾವೇ ಹಿಂಬಾಲಿಸಲಾಗುತ್ತಿಲ್ಲ
ನಮಗಿಂತ ಒಂದು ಹೆಜ್ಜೆ ಮುಂದೆ ಅದು ಚೂರೇ ಚೂರು
ಇಲ್ಲಿ ಯಾರು ತಾನೇ ಕತ್ತಲಿಗೆ ಹೆದರಲಾರರು
ಹಗಲಿಗೆ ಹೆದರದವರು ಕತ್ತಲಿಗೆ ಹೆದರೇ ಹೆದರುತ್ತಾರೆ
ಇಲ್ಲೊಂದೂರಿನಲ್ಲಿ ಹಗಲಿಗೂ ಹೆದರುವವರು
ಕೋಟಿಗಟ್ಟಲೇ ಇದ್ದಾರೆ
ಇಡಿಯ ಭೂಮಂಡಲವೇ ಒಂದು ಊರೀಗ
ರಾತ್ರಿಯು ನಿರುಮ್ಮಳ ಸಾಂತ್ವನ
ಸ್ವಯಂಭು ಸಂಯಮ ಸಮಚಿತ್ತ
ಎಲ್ಲವೂ ಈ ರಾತ್ರಿ
ಹೆದರಿಕೆ ಅಂಕಿ ಸಂಖ್ಯೆ ಅವಿಶ್ರಾಂತ ಅಂಕ ಶಂಕೆ
ಯಾರ ನೋವು ಯಾರು ಕದಿಯುವರು ಈ ರಾತ್ರಿಯಲಿ
ಇನ್ನು ಯಾರ ಸುಖಗಳು ಯಾರಿಗೆ ಈ ರಾತ್ರಿಯಲಿ
ನಮ್ಮ ನಮ್ಮ ಪ್ರಪಾತಗಳು ನಮ್ಮ ನಮ್ಮ ಹೆಗಲ ಮೇಲೆ
ಅವರವರ ಪ್ರಪಾತಗಳು ಅವರವರ ಹೆಗಲ ಮೇಲೆ
ಹಳೆಯ ನೋವುಗಳನ್ನೇ ನವೀಕರಿಸಿಕೊಂಡರಾಯ್ತು
ಇನ್ನು ಹೊಸ ನೋವುಗಳು ಬೇಡ
ರಾತ್ರಿ ಚಿರನೂತನ
ರಾತ್ರಿ ಕನಸುಗಳಾಗರ
ರಾತ್ರಿ ಅದು ಬುದ್ಧಿವಂತರಿಗೆ ಬೆರಗು
ಒಮ್ಮೊಮ್ಮೆ ಕಪಾಳಮೋಕ್ಷ ಕೆಂಪು ರಕ್ತ
ಕೆದರಿದ ಕೂದಲು ಒಂಟಿ ದೆವ್ವ ಕಪ್ಪು ಮೋಡ
ರಾತ್ರಿಯದು ಕಡುಗಪ್ಪು ಕಡುಗಪ್ಪು
ಒಮ್ಮೊಮ್ಮೆ ಆಕೆಯ ಸಾಂತ್ವನಾದಂತೆ ಪ್ರಶಾಂತ ಸಾಗರ
ರಾತ್ರಿಯಾರದು?
ಹಗಲಿನದಾ?
ಹಾಗಾದರೆ ಹಗಲು ಯಾರದು?
ರಾತ್ರಿಯದಾ?
ಕಾಲಚಕ್ರ
ಗಿರ ಗಿರ ಗಿರ ಗಿರ ಗಿರ ಗಿರ
ಭೂಮಿ ತಿರುಗುತ್ತದೆ ಅದಕ್ಕೇ ಹಗಲು ರಾತ್ರಿಗಳು
ಬೊಗಳೆ ವಿಜ್ಞಾನ ದೊಗಳೆ ಶರ್ಟಿನಂತೆ
ಅಪಾರ ಕುಶಲೋಪರಿ ಮನುಕುಲ ಸಾಂತ್ವನ
ಬೊಗಳೆ ವಿಜ್ಞಾನ
ಒಪ್ಪಿ?!….
ಭೂಮಿ ತಿರುಗುತ್ತದೆ ಸೂರ್ಯನನ್ನ
ಮೆದುಳೂ ಹರಿಯುತ್ತದೆ
ಹಗಲು ರಾತ್ರಿಯೆನ್ನದೇ
ಹಗಲಿಗೆ ಹತ್ತು ಕೈ
ರಾತ್ರಿಗೆ ಹನ್ನೆರಡು ಬಾಯಿ
ಪ್ರಿಯತಮೆಯ ಬೊಗಳೆ ರಾತ್ರಿಯ ಸಾಗರದಲೆಗಳು
ರಾತ್ರಿಯದು ಸದಾ ಎಚ್ಚರ
ಅದು ಕರ‍್ರಗೆ ಆಕೆ ಬಿಟ್ಟುಹೋದ ನೆನಪುಗಳಂತೆ
ಯಾರುತಾನೇ ತೊಗಲಬಾವಲಿಯಂತೆ
ರಾತ್ರಿಯಿಡೀ ಎಚ್ಚವಿರಬಲ್ಲರು?
ಸೋತ ಪ್ರೇಮಿಯ ಹೊರತು
ರಾತ್ರಿ ಅದು ಒಬ್ಬನ ಸೊತ್ತು ಎನ್ನುವುದಾದರೆ
ಅದು ಭಗ್ನ ಪ್ರೇಮಿಯದು
ಆಕೆಯ ನೆನಪುಗಳ ಆಗರ ರಾತ್ರಿ
ಅಪ್ರಯೋಜಕ ಒಮ್ಮೊಮ್ಮೆ ಸುಖದಾಯಕ
ಸಿಗರೇಟು ಸೇದಿ ಚುಟ್ಟು ಬಿಸಾಕಿದಂತೆ
ದಾರೂ ಕುಡಿದು ಬಾಟಲಿ ಎಸೆದಂತೆ
ಈತನೊಬ್ಬ ಏಕಾಂಗಿಮಿತ್ರ ರಾತ್ರಿಯ ಸಖ
ರಾತ್ರಿಯ ಧರ್ಮವದು
ಅದು ರಾತ್ರಿಯಿಡೀ ಮಲಗದೆಯೇ
ಇಡಿಯ ಲೋಕಕ್ಕೆ ಬೆಳಕು ಕೊಡುವುದು