ಸಂತೋಷ್ ಹೆಚ್ ಜಿ ಹಿರೇಗೋಣಿಗೆರೆ ಅವರು ಬರೆದ ಕವಿತೆ ‘ಅನ್ನದಾತ’

ಹರಿದ ಬಟ್ಟೆ ಹಸಿದ ಹೊಟ್ಟೆ
ತಿಂಗಳಾದರೂ ತಂಗಳೇ ಮೃಷ್ಟಾನ್ನ
ಜಗಕೆಲ್ಲ ಅನ್ನ ನೀಡುವವನಿತ
ಹಿಡಿ ಅನ್ನಕ್ಕೆ ಪರದಾಡುವನೀತ
ಇವ ನಮ್ಮ ರೈತ.

ಭರವಸೆಯಲ್ಲಿ ಹೊಲ ಹಸನವ ಮಾಡಿ
ಉಳ್ಳವರ ಪಾದವನ್ನು ಕಾಡಿ-ಬೇಡಿ
ಸಾಲ ಸೋಲವನು ಮಾಡಿ
ಕಾಳು ಗೊಬ್ಬರವನ್ನು ತಂದಿಹನು
ಇವ ನಮ್ಮ ರೈತ.

ಕಣ್ಣಗಲಿಸಿ ಮುಗಿಲ ನೋಡುವನು
ಸುರಿಯುವುದು ಮಳೆಯೆಂದು
ನಮಿಸಿ ಬಿತ್ತುವುನು ಭೂ ತಾಯಿ ಮಡಿಲಿಗೆ
ನೂರಾರು ಕನಸು ಚಿಗುರುವ ಪೈರಿನ ಬಗೆಗೆ
ಇವ ನಮ್ಮ ರೈತ.

ಕಣಜ ತುಂಬುವ ಕನಸೇಕೊ ಕಮರುತಿದೆ
ಬಿಳಿ ಮೋಡ ತೇಲುತಿದೆ ಹನಿ ಮಳೆಯಿಲ್ಲದೆ
ಮಡದಿ ಮಕ್ಕಳೆಲ್ಲ ಉಪವಾಸ;
ಕರುಣಿಸು ಮಳೆ ದೇವ ನಿನ್ನಡಿಗೆ ನಾ ದಾಸ
ಇವ ನಮ್ಮ ರೈತ.

ಜಾನುವಾರಕೆ ಜಗದಲ್ಲಿ ಮೇವಿಲ್ಲದಾಗಿದೆ
ಬಡ ರೈತನ ದೇಹ ಬಡಕಲಾಗಿದೆ
ಅಂಚೆಯಲಿ ಬ್ಯಾಂಕಿನ ನೋಟಿಸು ಬಂದಾಯ್ತು
ಬದುಕಿಗೆ ಬರ ಸಿಡಿಲು ಮತ್ತೆ ಬಡಿದಾಯ್ತು
ಇವ ನಮ್ಮ ರೈತ.

ದಿಕ್ಕು ಕಾಣದೆ ದಿಕ್ಕೆಟ್ಟು ಓಡುತಿಹ
ತುಸು ಹಸಿರಾದ ಹುಣಸೆ ಮರದ ಕಡೆಗೆ
ಹಗ್ಗದ ಕುಣಿಕೆ..ಪಾಷಣದ ಜೊತೆಗೆ
ಬೇಡ-ಬೇಡ ನೀ ನಮ್ಮ ಅನ್ನದಾತ
ನೀನೆಂದು ಅಮರ,ನೀನೆಂದು ಅಮರ
ನೀ ನಮ್ಮ ರೈತ ಅನ್ನದಾತ..

ಚಂದಾದಾರರಾಗಿ
ವಿಭಾಗ
0 ಪ್ರತಿಕ್ರಿಯೆಗಳು
Inline Feedbacks
View all comments
0
    0
    Your Cart
    Your cart is emptyReturn to Shop